Site icon Vistara News

Peanut benefits | ಬಡವರ ಬಾದಾಮಿ ನೆಲಗಡಲೆಯನ್ನು ಚಳಿಗಾಲದಲ್ಲೇ ಏಕೆ ತಿನ್ನಬೇಕು!?

peanut benefits

ಬಡವರ ಬಾದಾಮಿ ನೆಲಗಡಲೆ ಚಳಿಗಾಲಕ್ಕೆ ಕರೆಕ್ಟಾಗಿ ಹಾಜರಿ ಹಾಕುತ್ತದೆ. ಇನ್ನೇನು ಅಕ್ಟೋಬರ್‌ ತಿಂಗಳು ಬರುತ್ತಿದ್ದಂತೆ ಬೀದಿಬದಿಗಳೆಲ್ಲ ನೆಲಗಡಲೆಯ ರಾಶಿಯಿಂದ ತುಂಬಿಕೊಳ್ಳುತ್ತದೆ. ರಸ್ತೆ ಬದಿ ಮಾರಾಟ ಮಾಡುವ ಸಣ್ಣಪುಟ್ಟ ವ್ಯಾಪಾರಿಗಳು ತಮ್ಮ ಬೇರೆ ವ್ಯಾಪಾರಗಳಿಗೆ ಟಾಟಾ ಹೇಳಿ ನೆಲಗಡಲೆ ರಾಶಿ ಹಾಕುತ್ತಾರೆ.ನೆಲಗಡಲೆಯಿಂದ ಏನೇನು ಲಭ್ಯವಿದೆಯೋ ಅವೆಲ್ಲ ಈ ಸಮಯದಲ್ಲಿ ಸಿಗಲಾರಂಭಿಸುತ್ತದೆ. ಬೆಲ್ಲ ಹಾಗೂ ನೆಲಗಡಲೆ ಹಾಕಿದ ಚಿಕ್ಕಿ, ಹುರಿದು ಖಾರ ಮಸಾಲೆ ಹಾಕಿದ ಗರಮಾಗರಂ ನೆಲಗಡಲೆ, ಹೀಗೆ ಎಲ್ಲಿ ನೋಡಿದರಲ್ಲಿ ನೆಲಗಡಲೆಯದೇ ಸಾಮ್ರಾಜ್ಯ. ಕಡಲೇಕಾಯಿ ಪರಿಷೆ ಹೆಸರಿನಲ್ಲಿ ನೆಲಗಡಲೆಯ ಜಾತ್ರೆಯೇ ನಡೆಯುತ್ತದೆ. ಹಾಗಾದರೆ ಈ ನೆಲಗಡಲೆಗೂ ಚಳಿಗಾಲಕ್ಕೂ ಏನು ಸಂಬಂಧ, ನಾವು ಚಳಿಗಾಲ ಬಂದೊಡನೆ ನೆಲಗಡಲೆಯನ್ನು ಹೀಗೆ ತಿನ್ನಲು ಶುರುಮಾಡುವುದಾದರೂ ಯಾಕೆ ಎಂದು ಯೋಚಿಸಿದದ್ದೀರಾ?

ಪ್ರಕೃತಿ ತನ್ನಲ್ಲಿ ಏನೆಲ್ಲಾ ರಹಸ್ಯಗಳನ್ನು ಹುದುಗಿಸಿಟ್ಟುಕೊಂಡಿದೆ ಆಯಾ ಕಾಲಕ್ಕೆ ಏನೆಲ್ಲ ತಿನ್ನಬೇಕು ಎಂಬುದನ್ನು ಅದುವೇ ನಮಗೆ ಹೇಳಿಕೊಡುತ್ತದೆ. ಚಳಿಗಾಲಕ್ಕೆ ಕರೆಕ್ಟಾಗಿ ಭೂಮಿಯಡಿಯಿಂದ ಬರುವ ಇದು ಚಳಿಗಾಲಕ್ಕೆಂದೇ ಹೇಳಿ ಮಾಡಿಸಿದ ಆಹಾರ. ಇದು ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗಿಡುವುದಲ್ಲದೆ, ಈ ಕಾಲದಲ್ಲಿ ದೇಹಕ್ಕೆ ಅಗತ್ಯ ಬೇಕಾಗಿರುವ ಪ್ರೊಟೀನನ್ನು ಪೂರೈಕೆ ಮಾಡುತ್ತದೆ. ಅಷ್ಟೇ ಅಲ್ಲದೆ, ಇದು ಒಳ್ಳೆಯ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ, ಪಿತ್ತಕೋಶದ ಆರೋಗ್ಯಕ್ಕೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚು ಮಾಡುವಲ್ಲಿ ಸಹಾಯ ಮಾಡುತ್ತದೆ.

೧. ತೂಕ ಇಳಿಕೆಯಲ್ಲಿ ಸಹಾಯ ಮಾಡುತ್ತದೆ: ನೆಲಗಡಲೆ ತಿಂದರೆ ತೂಕ ಇಳಿಯುತ್ತದೆ ಎಂದರೆ ಯಾರೂ ನಂಬಲಾರರು. ಯಾಕೆಂದರೆ ಒಮ್ಮೆ ನೆಲಗಡಲೆ ಬಾಯಿಗಿಡಲು ಶುರು ಮಾಡಿದರೆ, ಮತ್ತೆ ಡಬ್ಬ ಖಾಲಿಯಾಗುವವರೆಗೂ ತಿನ್ನುತ್ತಲೇ ಇರಬೇಕೆನಿಸುವ ಚಟ ಹತ್ತಿಸುವ ನೆಲಗಡಲೆಯನ್ನು ತಿಂದು ತಿಂದು ಚಳಿಗಾಲದಲ್ಲಿ ಭರ್ಜರಿ ತೂಕ ಏರುವ ಸಂಭವವೇ ಹೆಚ್ಚಿರುತ್ತದೆ. ಹೀಗಾಗಿ ತೂಕ ಇಳಿಕೆ ಹೇಗೆ ಎಂದೆನಿಸುವುದು ಸಹಜ. ನೆಲಗಡಲೆಯಲ್ಲಿ ಪ್ರೊಟೀನ್‌ ಹಾಗೂ ನಾರಿನಂಶ ಅಧಿಕವಾಗಿರುವುದರಿಂದ ತೂಕ ಇಳಿಕೆಯಲ್ಲಿ ಇದು ಸಹಾಯ ಮಾಡುತ್ತದೆ ಎಂಬುದು ನಿಜವೇ ಆದರೂ, ಎಷ್ಟು ತಿನ್ನಬೇಕು ಎಂಬ ಬಗ್ಗೆ ನಿಗಾ ಇರಬೇಕು.

೨. ಮಧುಮೇಹಕ್ಕೆ ಒಳ್ಳೆಯದು: ಮಧುಮೇಹಿಗಳಿಗೆ ದೇಹಕ್ಕೆ ಮಗ್ನೀಶಿಯಂ ಬೇಕು. ನೆಲಗಡಲೆಯಲ್ಲಿ ಅದು ಹೇರಳವಾಗಿದೆ. ಕೊಬ್ಬು ಹಾಗೂ ಕಾರ್ಬೋಹೈಡ್ರೇಟನ್ನು ಕರಗಿಸುವಲ್ಲಿ ಮೆಗ್ನೀಶಿಯಂ ಪಾತ್ರವೂ ದೊಡ್ಡದು. ಹೀಗಾಗಿ ರಕ್ತದಲ್ಲಿ ಸಕ್ಕರೆಯ ಅಂಶ ಸಮತೋಲನ ಕಾಯ್ದುಕೊಳ್ಳುತ್ತದೆ.

೩. ಹೃದಯಕ್ಕೆ ಒಳ್ಳೆಯದು: ನೆಲಗಡಲೆಯಲ್ಲಿ ಕೊಬ್ಬಿನಂಶ ಹೇರಳವಾಗಿರುವುದರಿಂದ ಹೃದಯಕ್ಕೆ ಅದು ಒಳ್ಳೆಯದಲ್ಲ ಎಂದು ಜನರು ಯೋಚಿಸುತ್ತಾರೆ. ಆದರೆ ನೆಲಗಡಲೆಯಲ್ಲಿರುವ ಆರೋಗ್ಯಕರ ಕೊಬ್ಬು ಆರೋಗ್ಯವಂತ ದೇಹಕ್ಕೆ ಅಗತ್ಯವಾಗಿ ಬೇಕಿದೆ. ಆದರೆ, ಹೆಚ್ಚು ತಿನ್ನಬಾರದು. ನೆಲಗಡಲೆಯಲ್ಲಿರುವ ಒಲೆಯಿಕ್‌ ಆಸಿಡ್‌, ಮೋನೋ ಸ್ಯಾಚುರೇಟೆಡ್‌ ಫ್ಯಾಟ್‌ ಹಾಗೂ ಪಾಲಿ ಅನ್‌ಸ್ಯಾಚುರೇಟೆಡ್‌ ಫ್ಯಾಟ್‌ ದೇಹದ ರಕ್ತದಲ್ಲಿ ಕೆಟ್ಟ ಕೊಲೆಸ್ಟೆರಾಲನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟೆರಾಲ್‌ ಅಂಶವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ | Health Tips For Diabetes | ಮಧುಮೇಹ ಬಾರದಿರಲು ಈ ಆರು ಆಹಾರಗಳನ್ನು ಬಿಟ್ಟುಬಿಡಿ!

೪. ಒತ್ತಡವನ್ನು ನಿವಾರಿಸುತ್ತದೆ: ನೆಲಗಡಲೆಯಲ್ಲಿರುವ ಅಮೈನೋ ಆಸಿಡ್‌ ಮಿದುಳಿನ ಆರೋಗ್ಯಕ್ಕೆ ಪೂರಕವಾಗಿರುವ ರಸಾಯನಿಕಗಳನ್ನು ಬಿಡುಗಡೆ ಮಾಡುವುದರಿಂದ ಒತ್ತಡ, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ.

೫. ಚರ್ಮ ಹಾಗೂ ಕೂದಲ ಆರೋಗ್ಯಕ್ಕೆ ಒಳ್ಳೆಯದು: ನೆಲಗಡಲೆಯಲ್ಲಿರುವ ಆರೋಗ್ಯಕರ ಒಳ್ಳೆಯ ಕೊಬ್ಬು ಹೊಳೆಯುವ ಚರ್ಮಕ್ಕೆ ಒಳ್ಳೆಯದು. ಇದರಲ್ಲಿ ವಿಟಮಿನ್‌ ಸಿ, ವಿಟಮಿನ್‌ ಇ ಹಾಗೂ ರಿಸ್ವರೆಟ್ರಾಲ್‌ಗಳು ಚರ್ಮ ಅವಧಿಗೆ ಮುನ್ನವೇ ಸುಕ್ಕಾಗುತ್ತಿದ್ದರೆ ಅದಕ್ಕೆ ಪರಿಹಾರ ನೀಡುತ್ತದೆ. ಇದು ಬಯೋಟಿನ್‌ ಉತ್ಪಾದನೆಗೆ ಉದ್ದೀಪನ ನೀಡುವ ಮೂಲಕ ಕೂದಲ ಬೆಳವಣಿಗೆಗೂ ಪೂರಕ.

ಈ ಎಲ್ಲ ಕಾರಣಗಳಿಗಾದರೂ ನೆಲಗಡಲೆಯನ್ನು ನಿತ್ಯದ ಆಹಾರದಲ್ಲಿ ಸೇರಿಸಬೇಕು. ಚಳಿಗಾಲದಲ್ಲಿ ನೆಲಗಡಲೆಯೊಂದು ಸೂಪರ್‌ ಫುಡ್‌! ಆದರೆ, ಇದನ್ನು ತಿನ್ನುವುದು ಚಟವಾಗದಂತೆ ಕಂಟ್ರೋಲ್‌ ಮಾಡುವ ರಿಮೋಟ್‌ ನಿಮ್ಮ ಕೈಯಲ್ಲೇ ಇಟ್ಟುಕೊಂಡಿರುವುದು ಒಳ್ಳೆಯದು. 

ಇದನ್ನೂ ಓದಿ | Health Care | ತಾವರೆ ಬೀಜ ಅಥವಾ ಮಖನಾ ತಿನ್ನಲು ರುಚಿ ಮಾತ್ರವೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು

Exit mobile version