ಮಹಿಳೆ ತನ್ನ ಜೀವನದ ಹಲವು ಹಂತಗಳಲ್ಲಿ ಆಗಾಗ ಹಾರ್ಮೋನಿನ ಏರುಪೇರಿನಂಥ ಸಮಸ್ಯೆಗೆ ಒಳಗಾಗುತ್ತಾಳೆ (Period Insomnia). ಮೆನೋಪಾಸ್ ಸಮಯದಲ್ಲಿ, ಮೂಡ್‌ನ ಏರುಪೇರು, ಇದ್ದಕ್ಕಿದ್ದಂತೆ ಮೈಬಿಸಿಯಾಗಿ ಬೆವರುವುದು, ರಾತ್ರಿ ಎಷ್ಟೇ ಹೊತ್ತಾದರೂ ನಿದ್ದೆ ಬರದೇ ಇರುವುದು ಇತ್ಯಾದಿ ಸಮಸ್ಯೆಗಳು ಸಾಮಾನ್ಯ. ನಲವತ್ತರ ಆಸುಪಾಸಿನಲ್ಲೇ ಕೆಲವರಿಗೆ ಈ ಸಮಸ್ಯೆಗಳು ಆರಂಭವಾಗುವುದುಂಟು. ಮೆನೋಪಾಸ್ ಹಲವು ಬಗೆಯ ಇಂತಹ ಸಮಸ್ಯೆಗಳನ್ನು ವರ್ಷಾನುಗಟ್ಟಲೆ ಹೊತ್ತು ತರುವುದುಂಟು. ಮುಖ್ಯವಾಗಿ ಮಹಿಳೆಯರು ಈ ಸಂದರ್ಭದಲ್ಲಿ ಎದುರಿಸುವ ಸಮಸ್ಯೆ ಎಂದರೆ, ನಿದ್ದೆಯದ್ದು. ಎಷ್ಟು ಹೊತ್ತಾದರೂ ರಾತ್ರಿ ನಿದ್ದೆ ಬರದೇ ಇರುವುದೇ ವ್ಯಾಪಕವಾಗಿ ಮಹಿಳೆಯರು ಅನುಭವಿಸುವ ಸಮಸ್ಯೆ. ಬನ್ನಿ, ಮೆನೋಪಾಸ್ ಸಮಯದಲ್ಲಿ ಮಹಿಳೆಯರು ಎದುರಿಸುವ ನಿದ್ದೆಯ ಸಮಸ್ಯೆಗಳಿಗೆ ಇಲ್ಲಿ ಕೆಲವು ಸರಳ ಉಪಾಯಗಳಿವೆ.
ಮೆನೋಪಾಸ್ ಸಮಯದಲ್ಲಿ ಉತ್ತಮ ನಿದ್ದೆ ಬಹಳ ಮುಖ್ಯ. ಈ ಸಂದರ್ಭ ತೂಕ ಇಳಿಸುವ ಬಗ್ಗೆ, ಸಪ್ಲಿಮೆಂಟ್‌ಗಳ ಬಗ್ಗೆ ಹೇಳಿದಷ್ಟು ನಿದ್ದೆಯ ಬಗ್ಗೆ ಯಾರೂ ಹೇಳುವುದಿಲ್ಲ. ಆದರೆ, ನಿದ್ದೆ ಇಲ್ಲಿ ಅತ್ಯಂತ ಮುಖ್ಯವಾದ ಅಗತ್ಯ. ಮೆನೋಪಾಸ್‌ನ ಹಂತದಲ್ಲಿರುವ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಏಳರಿಂದ ಒಂಭತ್ತು ಗಂಟೆಗಳಷ್ಟು ನಿದ್ದೆ ಬೇಕು. ಮಧ್ಯರಾತ್ರಿಯಾದ ಮೇಲೆ ಮಲಗಿದರೆ ಖಂಡಿತಾ ಸಾಲದು.
ಒಳ್ಳೆಯ ನಿದ್ದೆ ಬರಬೇಕಾದರೆ, ಈ ಹಂತದಲ್ಲಿ ಮಹಿಳೆ ರಾತ್ರಿ ಒಂಭತ್ತರಿಂದ 11 ಗಂಟೆಯೊಳಗೆ ನಿದ್ದೆಗೆ ಜಾರಬೇಕು. ಈ ಸಮಯದಲ್ಲಿ ಮಲಗಿಬಿಟ್ಟರೆ, ಬೆಳಗ್ಗೆ ತಾಜಾ ಆಗಿ ಸೂರ್ಯ ಹುಟ್ಟುವಾಗಲೇ ಏಳಬಹುದು. ನಿಮ್ಮ ಬಹಳಷ್ಟು ಸಮಸ್ಯೆಗಳೆಲ್ಲವೂ ಇದನ್ನು ಅಭ್ಯಾಸ ಮಾಡಿಕೊಂಡರೆ ಪರಿಹಾರ ಕಾಣುತ್ತದೆ.
ಅತ್ಯಂತ ಹೆಚ್ಚು ಅಥವಾ ಅತ್ಯಂತ ಕಡಿಮೆ ಋಥ್ರಿ ಉಣ್ಣುವುದು ಎರಡೂ ಒಳ್ಳೆಯದಲ್ಲ. ಹಿತಮಿತವಾಗಿ, ಹೊಟ್ಟೆ ಭಾರವೆನಿಸದಂತೆ ಊಟ ಮಾಡಿ. ರಾತ್ರಿ ಏಳರಿಂದ ಎಂಟು ಗಂಟೆಯೊಳಗೆ ಊಟ ಮುಗಿಸಿಬಿಡಿ. ಬೆಳಗ್ಗೆ ಎದ್ದ ಕೂಡಲೇ ಪೋಷಕಾಂಶಯುಕ್ತ ಉಪಹಾರ ಬಹಳ ಮುಖ್ಯ. ಇಡ್ಲಿ, ಪೋಹಾ, ದೋಸೆ, ಉಪ್ಪಿಟ್ಟು, ಪರಾಠಾ ಇತ್ಯಾದಿಗಳಿರುವ ಉಪಹಾರ ಒಳ್ಳೆಯದು. ಕಾರ್ಬೋಹೈಡ್ರೇಟ್ ಹೆಚ್ಚಿದೆ ಎಂದು ಇಂತಹ ದೇಸೀ ಆಹಾರಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಇವು ನಿಜಕ್ಕೂ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಹೊಂದಿವೆ.
ನೀವು ಮೆನೋಪಾಸ್ ಹಂತದಲ್ಲಿರುವಾಗ ಮನೆಯಲ್ಲೇ ಇದ್ದರೆ, ಮಧ್ಯಾಹ್ನ ಊಟವಾದ ಮೇಲೆ ಒಂದು ಸಣ್ಣ ನಿದ್ದೆ ಮಾಡಬಹುದು. ಆದರೆ ಆ ನಿದ್ದೆ ಅರ್ಧ ಗಂಟೆಯನ್ನು ಮೀರದಿರಲಿ. ಹೀಗೆ ಮಲಗುವುದರಿಂದ ಕೊಂಚ ಆರಾಮವೆನಿಸುತ್ತದೆ. ಥೈರಾಯ್ಡ್ ಸಮಸ್ಯೆ, ಋತುಚಕ್ರದಲ್ಲಿ ಏರಿಪೇರು ಹಾಗೂ ಕೈಕಾಲು ನೋವು, ಸೊಂಟ ನೋವಿನ ಸಮಸ್ಯೆ ಇರುವ ಮಂದಿಗೆ ಕೊಂಚ ಆರಾಮ ದೊರೆಯುತ್ತದೆ.
ಇದನ್ನೂ ಓದಿ: Foods For Hormone Balance: ಮಹಿಳೆಯರೇ, ಹಾರ್ಮೋನಿನ ಸಮತೋಲನಕ್ಕಾಗಿ ಈ ಆಹಾರಗಳನ್ನು ಮರೆಯದೇ ಸೇವಿಸಿ
ಆಲ್ಕೋಹಾಲ್, ತಂಬಾಕು ಇತ್ಯಾದಿಗಳಿಂದ ದೂರವಿರಿ. ಚಹಾ ಕಾಫಿ ಅಭ್ಯಾಸವಿದ್ದರೆ ದಿನಕ್ಕೆರಡು ಲೋಟಕ್ಕಿಂತ ಹೆಚ್ಚು ಸೇವಿಸಬೇಡಿ. ಚಾಕೋಲೇಟ್ ಕೂಡಾ ತಿನ್ನಬೇಡಿ.