ಹಲವು ಮಂದಿಗೆ ಪೀರಿಯಡ್ ಅಥವಾ ಋತುಚಕ್ರದ ಸಂದರ್ಭ ಕೈಕಾಲುಗಳಲ್ಲಿ ಸೆಳೆತ, ನೋವು, ಮೈಗ್ರೇನ್, ತಲೆಸುತ್ತು, ವಾಂತಿ, ಹೊಟ್ಟೆನೋವು ಇತ್ಯಾದಿಗಳು ಸಾಮಾನ್ಯ. ಕೆಲವು ನಿತ್ಯಜೀವನದ ಹಾಗೂ ಆಹಾರದ ಬದಲಾವಣೆಗಳು ಇಂಥ ಸಮಸ್ಯೆಯನ್ನು ಹತೋಟಿಗೆ ತರುತ್ತವೆ. ನೀವು ಕೆಲಸ ಮಾಡುವ ಮಹಿಳೆಯರಾದರೆ, ಈ ಸಂದರ್ಭ ನಿಮ್ಮಲ್ಲಿ ಹಲವರು ಹೇಳಿಕೊಳ್ಳಲಾಗದ ಸಮಸ್ಯೆಯಿಂದ ಒದ್ದಾಡುತ್ತಾರೆ. ಈ ಸಂದರ್ಭ ನಮ್ಮ ಅರೋಗ್ಯವನ್ನು ಕಾಪಾಡುವ ಇಂತಹ ನೋವಿನಿಂದ ಆರಾಮ ನೀಡುವ ಕೆಲವು ಆಹಾರಗಳನ್ನು ಸೇವಿಸುವ ಮೂಲಕ ಸಮಸ್ಯೆಯನ್ನು ಕೊಂಚ ಹತೋಟಿಯಲ್ಲಿಡಬಹುದು ಎಂಬುದನ್ನು ನೆನಪಿಡಿ. ನೈಸರ್ಗಿಕವಾದ ಉಪಾಯಗಳು ಎಂದಿಗೂ ವ್ಯತಿರಿಕ್ತ ಸಮಸ್ಯೆಗಳನ್ನು ಆಹ್ವಾನಿಸದು. ಬನ್ನಿ, ಯಾವೆಲ್ಲ ಆಹಾರಗಳು (Period Pain Relief Food) ಪೀರಿಯಡ್ ನೋವಿನಿಂದ, ಕೆಟ್ಟ ಮೂಡ್‌ನಿಂದ ನಿಮ್ಮನ್ನು ಬಚಾವು ಮಾಡುತ್ತವೆ ಎಂಬುದನ್ನು ನೋಡೋಣ.
ಒಣದ್ರಾಕ್ಷಿ ಸೇವಿಸಿ
ನಿಮ್ಮ ಋತುಚಕ್ರಕ್ಕೆ ಇನ್ನೊಂದು ವಾರವಿದೆ ಎನ್ನುವಾಗಲೇ, ಪ್ರತಿದಿನ ಬೆಳಗ್ಗೆ ನೆನೆಸಿದ ಒಣದ್ರಾಕ್ಷಿಯೊಂದಿಗೆ ಕೇಸರಿಯನ್ನು ಸೇವಿಸಲು ಆರಂಭಿಸಿ. ನಿಮ್ಮ ಪೀರಿಯಡ್ ಮುಗಿಯುವವರೆಗೂ ಇದನ್ನು ತಿನ್ನಿ.
ಮೊಳಕೆ ಕಾಳು ಸೇವಿಸಿ
ನಿತ್ಯವೂ ಮೊಳಕೆ ಕಾಳುಗಳನ್ನು ಒಂದು ಹೊತ್ತು ತಿನ್ನಲು ಅಭ್ಯಾಸ ಮಾಡಿ. ನಿಮ್ಮ ಜೀರ್ಣಕ್ರಿಯೆ ಚೆನ್ನಾಗಿದ್ದರೆ ಹಸಿಯಾಗಿ ತಿನ್ನಬಹುದು. ಇಲ್ಲವಾದರೆ, ಕೊಂಚ ಬೇಯಿಸಿ ಮೊಳಕೆ ಕಾಳುಗಳನ್ನು ತಿನ್ನಿ. ಊಟದ ಜೊತೆಗೆ ಒಂದು ಭಾಗ ಮೊಳಕೆ ಕಾಳು ಇರಲಿ.
ಗಡ್ಡೆಗೆಣಸುಗಳು ಸೂಕ್ತ
ಗಡ್ಡೆಗೆಣಸುಗಳನ್ನು ನಿತ್ಯಾಹಾರದಲ್ಲಿ ಸೇರಿಸಿ. ಒಂದೇ ಬಗೆಯ ತರಕಾರಿಗಳನ್ನು ತಿನ್ನುವುದರ ಬದಲಾಗಿ ಬಗೆಬಗೆಯ ತರಕಾರಿಗಳನ್ನು ನಿತ್ಯವೂ ತಿನ್ನಿ. ಸಿಹಿಗೆಣಸು, ಸುವರ್ಣಗೆಡ್ಡೆ, ಕೆಸುವಿನ ಗೆಡ್ಡೆ ಇತ್ಯಾದಿಗಳು ಅತ್ಯಂತ ಒಳ್ಳೆಯದು. ಆಗಾಗ ಇವು ನಿಮ್ಮ ಹೊಟ್ಟೆಗೆ ಸೇರುವಂತೆ ನೋಡಿಕೊಳ್ಳಿ.
ಕ್ಯಾಲ್ಶಿಯಂ ಮಾತ್ರೆ
ರಾತ್ರಿ ಮಲಗುವ ಮುನ್ನ ಕ್ಯಾಲ್ಶಿಯಂ ಮಾತ್ರೆಯನ್ನು ಸೇವಿಸಿ. ಪೀರಿಯಡ್ ಸಮಸ್ಯೆಯಿರುವ ಮಂದಿಗೆ ಕ್ಯಾಲ್ಶಿಯಂ ಬೇಕು. ಇದರ ಸಂಬಂಧವಾಘಿ ನಿಮ್ಮ ವೈದ್ಯರಲ್ಲೊಮ್ಮೆ ಸಲಹೆ ಪಡೆದುಕೊಂಡು ಮುಂದುವರಿಯಿರಿ. ಕ್ಯಾಲ್ಶಿಯಂ ಅಧಿಕವಾಗಿರುವ ಆಹಾರವನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.
ತುಪ್ಪ ಸೇವಿಸಿ
ಪ್ರತಿ ದಿನ ಮಧ್ಯಾಹ್ನದೂಟದ ಸಂದರ್ಭ ಒಂದು ಚಮಚ ತುಪ್ಪವನ್ನು ಹಾಕಿ ಕಲಸಿಕೊಂಡು ಉಣ್ಣುವ ಅಭ್ಯಾಸ ಮಾಡಿಕೊಳ್ಳಿ. ಮಧ್ಯಾಹ್ನದೂಟ ಸಾಧ್ಯವಾಗದಿದ್ದರೆ, ಯಾವುದಾದರೊಂದು ಹೊತ್ತಿನಲ್ಲಿ ನಿತ್ಯವೂ ಒಂದು ಚಮಚ ತುಪ್ಪ ತಿನ್ನಿ. ತೂಕ ಹೆಚ್ಚಾಗುವ ಭಯ ಬೇಡ. ಒಂದು ಚಮಚ ತುಪ್ಪದಿಂದ ನಿಮ್ಮ ತೂಕ ಹೆಚ್ಚಾಗದು. ಬದಲಾಗಿ ಆರೋಗ್ಯ ವೃದ್ಧಿಸುತ್ತದೆ. ಪೀರಿಯಡ್‌ನ ಸಂದರ್ಭ ಆಗುವ ನೋವಿನಿಂದ ಆರಾಮವೂ ಸಿಗುತ್ತದೆ. ದೇಹಕ್ಕೆ ಬೇಕಾದ ಹಲವು ಪೋಷಕಾಂಶಗಳೂ, ಒಳ್ಳೆಯ ಕೊಬ್ಬೂ ಇದರಲ್ಲಿರುವುದರಿಂದ ತುಪ್ಪವನ್ನು ನಿಮ್ಮ ನಿತ್ಯಾಹಾರದಿಂದ ಯಾವತ್ತೂ ದೂರವಿರಿಸಬೇಡಿ. ಆದರೆ, ಅತಿಯಾಗದಿರಲಿ.
ಮಸಾಲೆಯುಕ್ತ ಆಹಾರ ಬೇಡ
ಪೀರಿಯಡ್ ಸಂದರ್ಭ ಹೆಚ್ಚು ಮಸಾಲೆಯುಕ್ತ ಆಹಾರಗಳ ಮೊರೆ ಹೋಗಬೇಡಿ. ದೇಹಕ್ಕೆ ಆದಷ್ಟೂ ಸರಳವಾದ ಪೋಷಕಾಂಶಯುಕ್ತ ಆಹಾರ ದೊರಕಲಿ. ಮೊಸರನ್ನದಂತಹ ಆಹಾರವಾದರೆ ಉತ್ತಮ. ಮೊಸರನ್ನು ಮಾಡುವಾಗ ಒಂದಿಷ್ಟು ಮೊಳಕೆ ಕಾಳುಗಳು, ಸೌತೆಕಾಯಿ, ಈರುಳ್ಳಿ, ಶುಂಠಿ, ದಾಳಿಂಬೆ ಇತ್ಯಾದಿಗಳನ್ನು ಸೇರಿಸಿ. ಒಗ್ಗರಣೆ ಹಾಕಿ. ರುಚಿಯಷ್ಟೇ ಅಲ್ಲ, ದೇಹ ತಂಪಾಗಿಯೂ ಇರುತ್ತದೆ. ಪೀರಿಯಡ್ ನೋವು ಹೆಚ್ಚಾಗಿ ಬಾಧಿಸುವುದಿಲ್ಲ. ಜೊತೆಗೆ ಯಾವ ಬಗೆಯ ಕೆಟ್ಟ ಪರಿಣಾಮವನ್ನೂ ಇದು ಉಂಟುಮಾಡದು.
ಇದನ್ನೂ ಓದಿ: Allergic Asthma: ಅಸ್ತಮಾ ಹೊಂದಿರುವ ವ್ಯಕ್ತಿಗಳು ಈ ಅಲರ್ಜಿಗಳಿಂದ ದೂರವಿರಬೇಕು
ಬೀಜಗಳು ಸೂಕ್ತ
ಪೀರಿಯಡ್ ಸಮಯದಲ್ಲಿ ನೋವು ಆರಂಭವಾದರೆ, ನೀವು ಒಂದಿಷ್ಟು ಬೀಜಗಳನ್ನು ಟ್ರೈ ಮಾಡಬಹುದು. ಆಫೀಸಿಗೆ ಹಗುವಾಗ ಅಥವಾ ಕೆಲಸ ಮಾಡುವ ಜಾಗದಲ್ಲಿ ನಿಮ್ಮ ಜೊತೆ ಒಂದು ಡಬ್ಬದಲ್ಲಿ ಒಂದಿಷ್ಟು ನೆಲಗಡಲೆ ಅಥವಾ ಗೋಡಂಬಿ ಇಟ್ಟುಕೊಳ್ಳಿ, ಸ್ನ್ಯಾಕ್ ಟೈಮ್ ಅಥವಾ ಊಟದ ಮಧ್ಯದ ಬ್ರೇಕ್‌ನಲ್ಲಿ, ಹಸಿವಾದಾಗ ಇವನ್ನು ತಿನ್ನಿ. ಇದರ ಜೊತೆಗೆ ಒಂದು ತುಂಡು ಬೆಲ್ಲವನ್ನೂ ತಿನ್ನಿ. ಇದು ನಿಮ್ಮ ಕೆಟ್ಟ ಮೂಡನ್ನೂ ಸರಿ ಮಾಡುತ್ತವೆ. ಸಿಹಿ ತಿನ್ನಬೇಕೆಂಬ ಆಸೆಯನ್ನೂ ಹತ್ತಿಕ್ಕುತ್ತದೆ.
ಖಿಚಡಿ ಅಥವಾ ರಾಗಿ
ಮೊಸರನ್ನ ಬಿಟ್ಟರೆ ಖಿಚಡಿ ಅಥವಾ ರಾಗಿಯೂ ಒಳ್ಳೆಯೂ ಒಳ್ಳೆಯದು. ರಾಗಿ ದೋಸೆ, ರಾಗಿ ರೊಟ್ಟಿ, ಹೆಸರು ಬೇಳೆ ದೋಸೆ ಇತ್ಯಾದಿಗಳನ್ನು ಮಾಡಬಹುದು. ಖಿಚಡಿಯನ್ನೂ ಮಾಡಿಕೊಂಡು ತಿನ್ನಬಹುದು.