Site icon Vistara News

Pollen allergy | ಪರಿಮಳಭರಿತ ಹೂವೇ ಮುಳ್ಳಾದಾಗ!

pollen allergy

ಪರಾಗಗಳ ಅಲರ್ಜಿ ಅಥವಾ ಪೋಲನ್‌ ಅಲರ್ಜಿ ಬಹಳಷ್ಟು ಜನರನ್ನು ಕಾಡುವಂಥದ್ದು. ಯಾರಿಗೆ, ಎಲ್ಲಿ, ಯಾವಾಗ ಆರಂಭವಾಗುತ್ತದೆ ಈ ಅಲರ್ಜಿ ಎಂಬುದನ್ನು ಊಹಿಸುವುದು ಕಷ್ಟ. ಅದರಲ್ಲೂ ಹೂ ಬಿಡುವ ಕಾಲದಲ್ಲಿ, ಒಣ ಹವೆ ಇರುವಾಗ ಅಥವಾ ಮಾಗಿಯಂಥ ಗಾಳಿಯ ಋತುವಿನಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡಿಸಬಹುದು. ಕೆಲವು ಸ್ಥಳಗಳಲ್ಲಿ ಪರಾಗಗಳ ಸಾಂದ್ರತೆ ಹೆಚ್ಚಿರುವ ಸಾಧ್ಯತೆಯಿದ್ದು, ಅಂಥ ಜಾಗಗಳಿಗೆ ಭೇಟಿ ನೀಡುವಾಗ ಎಚ್ಚರ ವಹಿಸುವುದು ಅಗತ್ಯ. ಅದರಲ್ಲೂ ಉಸಿರಾಟದ ತೊಂದರೆ ಇರುವವರು ಈ ಬಗ್ಗೆ ಜಾಗ್ರತೆ ಮಾಡಲೇಬೇಕಾದ್ದು ಅನಿವಾರ್ಯ. ಮರ-ಗಿಡಗಳು, ಹೂವು, ಹುಲ್ಲು ಅಥವಾ ಕಳೆಗಳಿಂದ ವಾತಾವರಣಕ್ಕೆ ಬಿಡುಗಡೆಯಾಗುವ ಸೂಕ್ಷ್ಮ ಕಣಗಳು ಈ ಪರಾಗಗಳು. ಇವುಗಳ ಅಲರ್ಜಿಯನ್ನು ನಿಯಂತ್ರಣದಲ್ಲಿ ಇಡುವುದು ಸಾಧ್ಯವಿದೆ.

ಏನಾಗುತ್ತದೆ?: ನೆಗಡಿ, ಮೂಗು ಕಟ್ಟುವುದು, ಸೈನಸ್‌ ಭಾಗದಲ್ಲಿ ನೋವು, ತಲೆಯಿಂದ ಆರಂಭವಾದ ನೋವು ಮುಖವೆಲ್ಲಾ ವ್ಯಾಪಿಸಿದಂತಾಗುತ್ತದೆ. ಕಣ್ಣು ಕೆಂಪಾಗಿ, ತುರಿಕೆ ಆರಂಭವಾಗಿ, ಊದಿಕೊಂಡಂತಾಗಿ ನೀರು ಸುರಿಯಬಹುದು. ಗಂಟಲು ತುರಿಕೆ ಅಥವಾ ನೋವು ಮತ್ತು ಕೆಮ್ಮು, ಅಸ್ತಮಾ ರೀತಿಯಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು.

ಉಪಶಮನಗಳು: ಆ ಸಮಸ್ಯೆ ಆರಂಭದಲ್ಲಿರುವಾಗ ಅಥವಾ ಕಡಿಮೆ ತೀವ್ರತೆಯಲ್ಲಿದ್ದರೆ, ಮನೆಮದ್ದಿನಲ್ಲಿ ಕೆಲವು ಉಪಶಮನಗಳು ಸಾಧ್ಯವಿದೆ. ಸಮಸ್ಯೆ ಹೆಚ್ಚುವ ಸೂಚನೆ ಕಂಡರೆ ವೈದ್ಯರನ್ನು ಕಾಣಬೇಕಾಗುತ್ತದೆ.

ಕಟ್ಟಿದ ಮೂಗನ್ನು ಬಿಡಿಸಲು, ನೇಸಲ್‌ ಡ್ರಾಪ್‌ ಅಥವಾ ಸ್ಪ್ರೇಗಳು ಪ್ರಯೋಜನಕ್ಕೆ ಬರಬಹುದು. ನೇತಿ ಮಾಡುವ ಅಭ್ಯಾಸ ಇನ್ನೂ ಉತ್ತಮ. ಇದರಿಂದ ಮೂಗಿನಲ್ಲಿರುವ ಪರಾಗ ಕಣಗಳನ್ನು ಸ್ವಚ್ಛ ಮಾಡಲು ಸಾಧ್ಯ. ಸ್ಟೀಮರ್‌ ಬಳಕೆಯೂ ತೊಂದರೆಯನ್ನು ಕಡಿಮೆ ಮಾಡಬಲ್ಲದು. ಆದರೆ ಇವೆಲ್ಲವೂ ಅಲ್ಪ ಕಾಲದ ಉಪಶಮನಗಳು.

ರಾತ್ರಿ ಮಲಗುವ ಮುನ್ನ ಸ್ನಾನ ಮಾಡಿ, ಸ್ವಚ್ಛ ಬಟ್ಟೆಗಳನ್ನು ಧರಿಸಿ. ಬಟ್ಟೆಗಳನ್ನು ತೊಳೆದಾದ ಮೇಲೆ ಹೊರಗೆ ಒಣಗಿಸುವ ಬದಲು, ಬಟ್ಟೆಗಳ ಡ್ರೈಯರ್‌ ಉಪಯೋಗಿಸುವುದು ಕ್ಷೇಮ. ಇದರಿಂದ ವಾತಾವರಣದಲ್ಲಿರುವ ಪರಾಗಗಳು ಬಟ್ಟೆಗೆ ತಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಹಾಸಿಗೆಯ ರಜಾಯಿ, ಹೊದಿಕೆಗಳನ್ನು, ದಿಂಬಿನ ಬಟ್ಟೆಗಳನ್ನು ವಾರಕ್ಕೊಮ್ಮೆ ಬದಲಿಸುವುದು ಸೂಕ್ತ. ಪೋಲನ್‌ ಹೆಚ್ಚಿರುವ ಕಾಲದಲ್ಲಂತೂ ಇಂಥ ಕ್ರಮಗಳು ರಾತ್ರಿ ಸ್ವಲ್ಪ ನೆಮ್ಮದಿಯ ನಿದ್ದೆಯನ್ನು ಕೊಡುತ್ತದೆ. ಇಲ್ಲದಿದ್ದರೆ ಮೂಗು ಕಟ್ಟುವುದು, ಸೋರುವುದು ಮುಗಿಯುವುದೇ ಇಲ್ಲ.

ಇದನ್ನೂ ಓದಿ | Back Pain | ವರ್ಕ್‌ ಫ್ರಂ ಹೋಂ ತಂದಿಟ್ಟ ಬೆನ್ನುನೋವಿಗೆ ಪರಿಹಾರಗಳೇನು?

ಮನೆಯ ಧೂಳನ್ನು ಒಣಗಿದ ಬಟ್ಟೆಯಿಂದ ಎಂದೂ ತೆಗೆಯಬೇಡಿ. ಒದ್ದೆ ಬಟ್ಟೆಯನ್ನೇ ಉಪಯೋಗಿಸಿ ಅಥವಾ ವಾಕ್ಯೂಮ್‌ ಕ್ಲೀನರ್‌ ಸಹಕಾರಿ. ಸಾಧ್ಯವಾದರೆ ಉತ್ತಮ ಗುಣಮಟ್ಟದ ಏರ್‌ ಫಿಲ್ಟರನ್ನು ಮನೆಯಲ್ಲಿ ಉಪಯೋಗಿಸಿ. ಸ್ವಚ್ಛ ಮಾಡುವ ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳುವಾಗಲೂ ಮಾಸ್ಕ್‌ ಉಪಯೋಗವಿರಲಿ.

ಒಣ ಹವೆಯಿದ್ದರೆ ಮನೆಯ ತೇವಾಂಶ ವೃದ್ಧಿಸಲು ಹ್ಯುಮಿಡಿಫೈಯರ್‌ ಉಪಯೋಗಿಸಬಹುದು. ಅದಿಲ್ಲದಿದ್ದರೆ, ಒಂದು ಲೀಟರ್‌ನಷ್ಟು ಶುದ್ಧ ನೀರನ್ನು ಕುದಿಸಿದರೂ ಸಾಕು. ಇವುಗಳನ್ನು ಪ್ರತಿದಿನ ಮಾಡುವುದರಿಂದ ಮನೆಯೊಳಗಿರುವ ಪರಾಗ ಮತ್ತಿತರ ಅಲರ್ಜನ್‌ಗಳನ್ನು ನಿಯಂತ್ರಣಕ್ಕೆ ತರಬಹುದು.

ಪರಾಗದ ಸಾಂದ್ರತೆ ಅತಿ ಹೆಚ್ಚಿರುವ ದಿನಗಳಲ್ಲಿ ಮನೆಯಲ್ಲೇ ಉಳಿಯುವುದು ಒಂದು ಕ್ರಮ. ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಹೊರಗೆ ಹೋಗುವುದು ಅನಿವಾರ್ಯವಾದಲ್ಲಿ ಉತ್ತಮ ಗುಣಮಟ್ಟದ ಡಸ್ಟ್‌ ಮಾಸ್ಕ್‌ ಉಪಯೋಗಿಸಿ.

ಇದನ್ನೂ ಓದಿ | World heart day | ಕಾಪಾಡಿಕೊಳ್ಳಲು ಹೃದಯವನ್ನು, ಸೇವಿಸಿ ಪ್ರತಿದಿನ ಇವನ್ನು

Exit mobile version