ದಿನನಿತ್ಯ ನಾವು ಸಕ್ಕರೆಯನ್ನು ಒಂದಿಲ್ಲೊಂದು ರೂಪದಲ್ಲಿ ಸೇವಿಸುತ್ತಲೇ ಇರುತ್ತೇವೆ. ಸಾಫ್ಟ್ ಡ್ರಿಂಕ್, ಕಾಫಿ, ಚಹಾ ಐಸ್‌ಕ್ರೀಂ, ಬಿಸ್ಕತ್ತುಗಳು, ಚಾಕೋಲೇಟ್ ಸೇರಿದಂತೆ ಒಂದಲ್ಲೊಂದು ನಾನಾ ಬಗೆಯ ತಿಂಡಿಗಳ ಮೂಲಕ ಸಕ್ಕರೆ ನಮ್ಮ ದೇಹ ಸೇರುತ್ತಲೇ ಇರುತ್ತದೆ. ಸಕ್ಕರೆ ಎಂಬ ಖಾಲಿ ಕ್ಯಾಲರಿಯುಕ್ತ ಆಹಾರ ನಮ್ಮ ದೇಹದಲ್ಲಿ, ಹಲವಾರು ತೊಂದರೆಗಳನ್ನು ಮಾಡುತ್ತದೆ ಎಂದು ತಿಳಿದರೂ ಸಕ್ಕರೆ ಸೇವಿಸುವುದನ್ನು ನಾವು ಬಿಡುವುದಿಲ್ಲ. ರಿಫೈನ್ಡ್ ಶುಗರ್/ ಅಥವಾ ಬಿಳಿಯಾದ ಸಕ್ಕರೆ ಎಂಬುದೊಂದು ವಸ್ತು ನಮ್ಮ ನಿತ್ಯಜೀವನದಲ್ಲಿ ನಾವು ಬಳಸುವ ಅತ್ಯಂತ ಕೆಟ್ಟ ಆಹಾರ ಎಂಬ ಸತ್ಯ ಒಂದು ದಿನ ನಮಗೆ ಅರಿವಾಗಿ ನಾವು ಈ ರಿಫೈನ್ಡ್ ಸಕ್ಕರೆಯ ಉಪಯೋಗವನ್ನು ಪೂರ್ತಿಯಾಗಿ ಬಿಡಬೇಕು ಎಂದು ಶತಾಯಗತಾಯ ಪ್ರಯತ್ನ ಪಟ್ಟರೂ ಬಿಡಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ, ಒಂದು ವಾರ ಈ ಸಕ್ಕರೆಯನ್ನು ಬಿಟ್ಟು ನೋಡಿ. ನಮ್ಮ ದೇಹಕ್ಕೆ ಏನಾಗುತ್ತದೆ ಎಂಬ ಕುತೂಹಲವಿದ್ದರೆ ನಮಗೆ ವಾರದಲ್ಲೇ ಉತ್ತರ ಸಿಗುತ್ತದೆ. ಸಕ್ಕರೆ ಬಿಟ್ಟರೆ ನಮ್ಮ ದೇಹ ಹೇಗೆ ಸ್ಪಂದಿಸುತ್ತದೆ ಎಂಬ ಪ್ರಶ್ನೆ ನಿಮ್ಮದಾಗಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.
೧. ಸಕ್ಕರೆಯ ಉಪಯೋಗ ಯಾವತ್ತಿಗೂ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಏರಿಸುತ್ತದೆ. ಹೀಗಾಗಿ ಸಕ್ಕರೆ ಬಿಟ್ಟರೆ ಖಂಡಿತವಾಗಿಯೂ ರಕ್ತದಲ್ಲಿ ಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ. ಮಧುಮೇಹಿಗಳಿಗೆ ಇದು ನಿಜಕ್ಕೂ ಒಂದು ಒಳ್ಳೆಯ ಬೆಳವಣಿಗೆ. ತೀರಾ ಸಕ್ಕರೆ ಅಗತ್ಯವೆನಿಸಿದರೆ ಸಿಹಿಯ ಇತರ ನೈಸರ್ಗಿಕ ಮೂಲಗಳಾದ ಸ್ಟೀವಿಯಾ ಅಥವಾ ಖರ್ಜೂರ, ಬೆಲ್ಲ ಅಥವಾ ಇನಿತರ ಪರ್ಯಾಯಗಳನ್ನು ಬಳಸಬಹುದು.
೨. ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ. ಸಕ್ಕರೆಯನ್ನು ಬಿಟ್ಟ ಕೂಡಲೇ ನಮಗೆ ಜೀರ್ಣಕ್ರಿಯೆಯಲ್ಲಿನ ಬದಲಾವಣೆ ಗೋಚರವಾಗುತ್ತದೆ. ಹೊಟ್ಟೆ ಸ್ವಲ್ಪ ದುರ್ಬಲವಾಗಿರುವ ಮಂದಿಗೆ ಅತಿಯಾದ ಸಕ್ಕರೆಯ ಸೇವನೆ ಜೀರ್ಣ ಸಂಬಂಧೀ ಸಮಸ್ಯೆಗಳನ್ನು ತರಬಹುದು. ಆದರೆ ಸಕ್ಕರೆಯನ್ನು ಬಿಟ್ಟು ನೋಡಿದರೆ, ಸಮಸ್ಯೆಗೆ ನಿಜವಾದ ಪರಿಹಾರ ಕಾಣಬಹುದು. ಸುಲಭ ಹಾಗೂ ವೇಗವಾದ ಪಚನಕ್ರಿಯೆಯನ್ನು ಈ ಮೂಲಕ ಸಾಧಿಸಬಹುದು.
೩. ಸಕ್ಕರೆಯನ್ನು ಬಿಟ್ಟರೆ ನಿದ್ದೆಯಲ್ಲಿ ಬದಲಾವಣೆಯನ್ನು ಖಂಡಿತಾಗಿಯೂ ಕಾಣಬಹುದು. ಸಕ್ಕರೆಯುಕ್ತವಾದ ಪೇಯಗಳು ಕೋಲಾ, ಕಾಫಿ, ಚಹಾ, ಇತ್ಯಾದಿಗಳ್ನು ದಿನವಿಡೀ ಅಧಿಕವಾಗಿ ಕುಡಿಯುವುದರಿಂದ ಮುಖ್ಯವಾಗಿ ಸಂಜೆಯ ಮೇಲೆ ಮಲಗುವ ಮುನ್ನ ಇಂತಹ ಪೇಯಗಳನ್ನು ಹೆಚ್ಚು ಕುಡಿಯುವ ಅಭ್ಯಾಸವಿದ್ದರೆ ಖಂಡಿತವಾಗಿಯೂ ನಿದ್ದೆ ಮಾಡುವುದಕ್ಕೆ ತೊಂದರೆಯಾಗುತ್ತದೆ. ಸಕ್ಕರೆಯನ್ನು ಪೂರ್ತಿಯಾಗಿ ಬಿಟ್ಟು ನೋಡಿದರೆ ಖಂಡಿತವಾಗಿಯೂ ನಿದ್ದೆಯಲ್ಲಿ ಗಮನಾರ್ಹ ಬದಲಾವಣೆಯಾಗುತ್ತದೆ. ಸೊಂಪಾದ ನಿದ್ದೆ ಬರುತ್ತದೆ.
ಇದನ್ನೂ ಓದಿ | Health care | ಬೆಲ್ಲವಾ, ಸಕ್ಕರೆಯಾ…ಯಾವುದು ಒಳ್ಳೆಯದು?
೪. ಎಲ್ಲರೂ ಬಯಸುವಂತೆ ಸಕ್ಕರೆ ಬಿಟ್ಟರೆ ತೂಕದಲ್ಲಿ ಇಳಿಕೆಯಾಗುತ್ತದೆ. ತೂಕ ಇಳಿಸಬೇಕೆಂದು ಬಯಸಿ ಇಳಿಸಲು ಸಾಧ್ಯವಾಗದ ಎಲ್ಲ ಜೀವಗಳೂ ಮಾಡಬಹುದಾದ ಆಹಾರಕ್ರಮದ ಬದಲಾವಣೆಯಿದು. ಸಕ್ಕರೆಯನ್ನು ಬಿಟ್ಟ ಕೂಡಲೇ ತೂಕದಲ್ಲೂ ಖಂಡಿತ ಬದಲಾವಣೆ ಕಾಣಬಹುದು. ಸಕ್ಕರೆಯಲ್ಲಿ ದೇಹಕ್ಕೆ ಅಗತ್ಯವಿಲ್ಲದ ಖಾಲಿ ಕ್ಯಾಲರಿಗಳಿದ್ದು, ಇವು ತೂಕ ಹೆಚ್ಚಿಸುತ್ತವೆ. ಹೀಗಾಗಿ ಸಕ್ಕರೆಯನ್ನು ಬಿಟ್ಟ ಕೂಡಲೇ ತೂಕದಲ್ಲಿ ಗಮನಾರ್ಹ ಬದಲಾವನೆಯನ್ನು ಸಾಧಿಸಬಹುದು. ಕೇವಲ ಸಕ್ಕರೆಯನ್ನಷ್ಟೇ ಬಿಡದೆ, ನಿತ್ಯ ತಿನ್ನುವ ಕೇಕ್, ಪೇಸ್ಟ್ರಿ, ಐಸ್‌ಕ್ರೀಂ, ಚಾಕೋಲೇಟ್, ಬಿಸ್ಕೆಟ್ ಮತ್ತಿತರ ಆಹಾರಗಳಿಗೂ ಗುಡ್‌ಬೈ ಹೇಳಿದರೆ ಫಲ ಸುಲಭವಾಗಿ ಕಾಣಬಹುದು.
೫. ಶಕ್ತಿ ವೃದ್ಧಿಸುತ್ತದೆ. ಇತ್ತೀಚಿನ ದಿನಗಳಲ್ಲಿ ನೀವು ಹೆಚ್ಚು ಆಲಸಿಗಳಾಗಿ, ಆಸಕ್ತಿಹೀನರಾಗಿ ವ್ಯವಹರಿಸುತ್ತಿದ್ದೀರಿ ಎಂದು ನಿಮಗನಿಸಿದರೆ ನೀವು ನಿಮ್ಮ ಸಕ್ಕರೆಯ ಮಟ್ಟವನ್ನು ಪರೀಕ್ಷಿಸಿಕೊಳ್ಳಬೇಕು. ಯಾಕೆಂದರೆ ಸಕ್ಕರೆ ರಕ್ತದಲ್ಲಿ ಹೆಚ್ಚಾದ ಕೂಡಲೇ ಆಲಸ್ಯ ಮನೆಮಾಡುತ್ತದೆ. ಸಕ್ಕರೆಯಂಶವನ್ನು ತಿಂದ ಕೂಡಲೇ ಒಮ್ಮೆ ಶಕ್ತಿ ಬಂದಂತಾಗುವುದು ನಿಜವಾದರೂ ದೇಹ ದಿನವಿಡೀ ಉಲ್ಲಾಸದಿಂದಿರಲು ಸಕ್ಕರೆರಹಿತ ಜೀವನ ಒಳ್ಳೆಯದು. ಸಕ್ಕರೆ ಬಿಟ್ಟರೆ ನಿಮ್ಮ ದಿನಚರಿಯಲ್ಲಿ ಉತ್ತಮ ಬದಲಾವಣೆ ಕಾಣಬಹುದು. ಸಕ್ಕರೆ ಬಿಟ್ಟರೆ, ನಿತ್ಯ ಆರೋಗ್ಯ ಹಾಗೂ ಶಕ್ತಿಯ ವಿಚಾರದಲ್ಲಿ ಏರಿಳಿತ ಕಾಣದೆ, ನಿಮಗೆ ಹೆಚ್ಚು ಉಲ್ಲಾಸದಿಂದಿರಲು ಸಾಧ್ಯವಾಗುತ್ತದೆ.
ಇದನ್ನೂ ಓದಿ | ಸಕ್ಕರೆ ಕಡಿಮೆ ತಿನ್ನಿ, ಪರಿಸರ ಉಳಿಸಿ ಎನ್ನುತ್ತಿದ್ದಾರೆ ಸ್ಪೇನ್ ವಿಜ್ಞಾನಿಗಳು !; ಅದು ಹೇಗೆ ಸಾಧ್ಯ?