Site icon Vistara News

Post Festival Detox: ಹಬ್ಬ ಮುಗೀತಲ್ಲಾ… ತಿಂದಿದ್ದು ಕರಗಿಸೋಣವಾ?

Post Festival Detox

ಹಬ್ಬಗಳ ಸಾಲೆಲ್ಲ (Post Festival Detox) ಮುಗಿದಿದೆ. ರಸಕವಳ ಮಾಡಿದ್ದು, ತಿಂದಿದ್ದು, ಹಂಚಿದ್ದು ಎಲ್ಲವೂ ಒಂದು ಹಂತಕ್ಕೆ ಬಂದಂತಾಯ್ತು. ತೂಕ, ಫಿಟ್‌ನೆಸ್‌ ಮಂತ್ರಗಳನ್ನು ಜಪಿಸುತ್ತಿದ್ದವರು ಸಹ ಅವೆಲ್ಲವನ್ನೂ ಮರೆತು ಎಗ್ಗಿಲ್ಲದೆ ಸಿಹಿ ಮೆಲ್ಲುವ ದಿನಗಳನ್ನು ಈಗಷ್ಟೇ ದಾಟಿದ್ದಾಗಿದೆ. ಈಗ ಮೊದಲಿನ ಹಂತಕ್ಕೇ ಬರಬೇಕಲ್ಲ. ಸಿಕ್ಕಿದ್ದೆಲ್ಲಾ ತಿಂದಿದ್ದರಿಂದ ದಿಕ್ಕೆಟ್ಟಂತಾಗಿರುವ ನಮ್ಮ ಜೀರ್ಣಾಂಗಗಳನ್ನು ಸರಿ ಮಾಡಿಕೊಳ್ಳಬೇಕು. ಇನ್ನೀ ಆರೋಗ್ಯವನ್ನು ಮರಳಿ ಹಳಿಗೆ ತರುವುದಕ್ಕೆ ಏನೆಲ್ಲಾ ಮಾಡಬಹುದು ಮತ್ತು ಮಾಡಬಾರದು ಎಂಬ ಬಗ್ಗೆ ಒಂದಿಷ್ಟು ಸರಳ ಸಲಹೆಗಳಿವು.

ನೀರು-ನಾರು ಇರಲಿ

ದೇಹಕ್ಕೆ ಅಗತ್ಯವಾದಷ್ಟು, ಅಂದರೆ ದಿನಕ್ಕೆ ಸುಮಾರು 3 ಲೀ.ನಷ್ಟು ನೀರನ್ನು ಕುಡಿಯುವುದು ಅಗತ್ಯ. ಇದರಿಂದ ಜೀರ್ಣಾಂಗಗಳನ್ನು ಶುಚಿ ಮಾಡಲು ಮತ್ತು ಆಹಾರವನ್ನು ಸಾದ್ಯಂತವಾಗಿ ಪಚನ ಮಾಡಲು ಅನುಕೂಲವಾಗುತ್ತದೆ. ಜೊತೆಗೆ, ಕರುಳಿನ ಆರೋಗ್ಯ ರಕ್ಷಣೆಗೆ ಸಾಕಷ್ಟು ನೀರು ಕುಡಿಯುವುದು ಮಹತ್ವದ್ದು. ಅಜೀರ್ಣ, ಹೊಟ್ಟೆಯುಬ್ಬರದಂಥ ತೊಂದರೆಗಳ ನಿವಾರಣೆಗೂ ನೀರು ಕುಡಿಯುವುದು ಮುಖ್ಯ.

ನೀರಿನಷ್ಟೇ ಮುಖ್ಯವಾದ ಇನ್ನೊಂದು, ಆಹಾರದಲ್ಲಿ ಇರಬೇಕಾದ ನಾರಿನಂಶ. ಮಲಬದ್ಧತೆ ಎಡೆಮಾಡದೆ, ಜೀರ್ಣಾಂಗದ ದಕ್ಷತೆಯನ್ನು ಹೆಚ್ಚಿಸಬೇಕು ಎಂದಾದರೆ ಆಹಾರದಲ್ಲಿ ನಾರು ಅಗತ್ಯ. ದೇಹದಲ್ಲಿ ಕರಗಬಲ್ಲ ಮತ್ತು ಕರಗಲಾರದ- ಈ ಎರಡೂ ರೀತಿಯ ನಾರುಗಳು ನಮಗೆ ಬೇಕು. ಕಾಳುಗಳು, ಓಟ್ಸ್‌, ತರಕಾರಿಗಳು ಮುಂತಾದವುಗಳಲ್ಲಿ ಕರಗಬಲ್ಲ ನಾರು ಇದ್ದರೆ, ಇಡೀ ಧಾನ್ಯಗಳಲ್ಲಿ ಕರಗಲಾರದ ನಾರು ಹೆಚ್ಚಿರುತ್ತದೆ. ಇವು ಮಧುಮೇಹದ ನಿಯಂತ್ರಣಕ್ಕೆ ನೆರವಾಗಿ, ಮಾರಕ ರೋಗಗಳನ್ನೂ ದೂರ ಇರಿಸುತ್ತವೆ

ಡಿಟಾಕ್ಸ್‌ ಪೇಯಗಳು

ದೇಹದಲ್ಲಿ ಜಮೆಯಾಗಿರುವ ಬೇಡದ ಅಂಶಗಳನ್ನು ಹೊರಹಾಕಿ, ಜೀರ್ಣಕ್ರಿಯೆಯನ್ನು ಸರಿ ಮಾಡಿ, ಚಯಾಪಚಯವನ್ನು ಹೆಚ್ಚಿಸುವಂಥ ಪೇಯಗಳಿವು. ಇವುಗಳನ್ನು ಮೂರು ಹೊತ್ತಿನ ಆಹಾರಗಳಿಗೆ ಸರಿಯಾಗಿ ಹೊಂದಿಸಿಕೊಂಡರೆ, ತೂಕ ಇಳಿಸುವುದಕ್ಕೆ ಇನ್ನೂ ಅನುಕೂಲವಾಗುತ್ತದೆ. ಅಂದರೆ, ಬೆಳಗಿನ ತಿಂಡಿಯ ನಂತರ- ಕೆಲವು ಹನಿ ನಿಂಬೆ ರಸ ಹಾಕಿದ ಸೋಂಪು ನೆನೆಸಿದ ನೀರು. ಸೋಂಪು ಜೀರ್ಣಕ್ರಿಯೆಗೆ ನೆರವಾದರೆ, ನಿಂಬೆ ರಸ ಪೌಷ್ಟಿಕಾಂಶವನ್ನು ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುತ್ತದೆ

ಮಧ್ಯಾಹ್ನದ ಊಟದ ನಂತರ, ನಿಂಬೆ ರಸ ಬೆರೆಸಿದ ಅಜವಾನದ ನೀರನ್ನು ಸೇವಿಸಬಹುದು. ಅಜವಾನ ಅಥವಾ ಓಂಕಾಳು ಸಹ ಜೀರ್ಣಕ್ರಿಯೆಗೆ ಸಹಕಾರಿ. ರಾತ್ರಿಯೂಟದ ಬಳಿಕ, ಕ್ಯಾಮೊಮೈಲ್‌ ಚಹ ಅಥವಾ ಯಾವುದೇ ರೀತಿಯ ಗ್ರೀನ್‌ ಟೀ ಒಳ್ಳೆಯ ಆಯ್ಕೆ. ಹೀಗೆ ಡಿಟಾಕ್ಸ್‌ ಪೇಯಗಳು ತೂಕ ಇಳಿಸುವ ಮತ್ತು ಜಠರ ಶುಚಿ ಮಾಡುವ ಕೆಲಸದಲ್ಲಿ ನಮ್ಮ ಕೈಜೋಡಿಸಬಲ್ಲವು.

ಸಂಸ್ಕರಿತ ಆಹಾರಗಳಿಂದ ದೂರ

ಹಬ್ಬದ ಹೆಸರಿನಲ್ಲಿ ಹಲವು ರೀತಿಯ ಸಿಹಿ ತಿಂಡಿಗಳು ಮತ್ತು ಸಂಸ್ಕರಿತ ಆಹಾರಗಳು ನಮ್ಮ ಹೊಟ್ಟೆ ಸೇರಿರುತ್ತವೆ. ಘಮ್ಮೆನ್ನುವ ಕರಿದ ಕುರುಕಲುಗಳು, ತುಪ್ಪ, ಸಕ್ಕರೆಭರಿತ ಸಿಹಿಗಳು ತಿನ್ನುವಾಗ ನಾಲಿಗೆಗೆ ಸಂತೋಷವೇ ಹೌದಾದರೂ ಇದರಿಂದ ದೇಹ ತೂಕ ಏರುವುದಂತೂ ಸುಳ್ಳಲ್ಲವಲ್ಲ. ಇವೆಲ್ಲವುಗಳ ಪರಿಣಾಮವಾಗಿ ಜಠರ ಮತ್ತು ಕರುಳಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ನಶಿಸುತ್ತವೆ. ಹೊಟ್ಟೆಗೆ ನಾವೇನು ಕೊಡುತ್ತೇವೆಯೊ ಅಂಥದ್ದೇ ಬ್ಯಾಕ್ಟೀರಿಯಾಗಳು ಅಲ್ಲಿ ಬೆಳೆಯುತ್ತವೆ- ಒಳ್ಳೆಯದನ್ನು ನೀಡಿದರೆ ಒಳ್ಳೆಯ ಬ್ಯಾಕ್ಟೀರಿಯಗಳು, ಕೆಟ್ಟದ್ದನ್ನು ನೀಡಿದರೆ…! ಹಾಗಾಗಿ ಸಂಸ್ಕರಿತ ಆಹಾರಗಳಿಂದ ದೂರವಾಗುವುದು ಅಗತ್ಯ.

ಪ್ರೊಬಯಾಟಿಕ್

ಜೀರ್ಣಾಂಗಗಳಲ್ಲಿ ಇರಬೇಕಾದ ಒಳ್ಳೆಯ ಬ್ಯಾಕ್ಟೀರಿಯಗಳನ್ನು ದೇಹಕ್ಕೆ ಸೇರಿಸುವಂಥ ಆಹಾರಗಳೆಂದರೆ ಪ್ರೊಬಯಾಟಿಕ್‌ಗಳು. ಹುದುಗು ಬಂದಂಥ ಯಾವುದೇ ಉತ್ತಮ ತಿನಿಸುಗಳು ಇದಕ್ಕೆ ಉದಾಹರಣೆ. ಅಂದರೆ, ಮೊಸರು, ಮಜ್ಜಿಗೆ, ದೋಸೆ ಅಥವಾ ಇಡ್ಲಿ ಹಿಟ್ಟು (ಹಸಿಯಾಗಿ ತಿನ್ನದಿದ್ದರೂ ಬೇಯಿಸಬಹುದಲ್ಲ), ಮೊಳಕೆ ಕಾಳುಗಳು ಮುಂತಾದವು. ಇವುಗಳು ಸತ್ವಗಳನ್ನು ಹೀರಿಕೊಳ್ಳಲು ದೇಹಕ್ಕೆ ನೆರವು ನೀಡುವುದು ಮಾತ್ರವಲ್ಲ, ಪ್ರತಿರೋಧಕ ಶಕ್ತಿಯನ್ನೂ ಇವು ಹೆಚ್ಚಿಸುತ್ತವೆ.

ವ್ಯಾಯಾಮ

ಇದನ್ನಂತೂ ಬಿಡುವ ಹಾಗೆಯೇ ಇಲ್ಲ. ಇವು ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೆ ಅಗತ್ಯ. ಜೊತೆಗೆ, ಜೀರ್ಣಾಂಗದ ಮಾಂಸಖಂಡಗಳನ್ನು ಸಡಿಲಗೊಳಿಸಿ, ಪಚನಕ್ರಿಯೆಯನ್ನು ಚುರುಕಾಗಿಸುತ್ತವೆ ಮತ್ತು ಮಲಬದ್ಧತೆ ನಿವಾರಿಸುತ್ತವೆ. ಇದಲ್ಲದೆ, ಜಠರದಲ್ಲಿ ಇರುವಂಥ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆ ವೃದ್ಧಿಸುವಲ್ಲಿ ವ್ಯಾಯಾಮದ ಪಾತ್ರವೂ ಇದೆ ಎನ್ನುತ್ತವೆ ಅಧ್ಯಯನಗಳು. ಹಾಗಾಗಿ ದೇವರ ತಲೆಯ ಮೇಲೆ ಹೂವು ಹಾಕಿದಷ್ಟೇ ಶ್ರದ್ಧೆಯಿಂದ ವ್ಯಾಯಾಮ ಮಾಡಿದರೆ, ಬರಬಹುದಾದ ಒಂದಿಷ್ಟು ಸಮಸ್ಯೆಗಳು ಬಾರದಂತೆ ತಡೆಯಬಹುದು.

ಇದನ್ನೂ ಓದಿ: Health Tips: ತಡರಾತ್ರಿಯವರೆಗಿನ ಅಧ್ಯಯನ ಮಿದುಳಿನ ಆರೋಗ್ಯಕ್ಕೆ ಒಳ್ಳೆಯದೇ ಕೆಟ್ಟದ್ದೇ?

Exit mobile version