Site icon Vistara News

Prevent Heart Attack: ಹೃದಯಾಘಾತದಿಂದ ಪಾರಾಗಲು ಈ 10 ಸರಳ ಟಿಪ್ಸ್ ಪಾಲಿಸಿ

Prevent Heart Attack

ಒಂದು ಕಾಲವಿತ್ತು, ಹೃದಯಾಘಾತ (heart attack) 60 ವರ್ಷ ಮೇಲ್ಪಟ್ಟವರಲ್ಲಿ ಮಾತ್ರ ಕಾಣಿಸುತ್ತಿತ್ತು. ಆದರೆ ಈಗ ಸಣ್ಣ ಮಕ್ಕಳಿಂದ ಹಿಡಿದು ಎಲ್ಲರೂ ಹೃದಯಾಘಾತಕ್ಕೆ ಒಳಗುತ್ತಿದ್ದಾರೆ. ಇದಕ್ಕೆ ನಮ್ಮ ಬದಲಾದ ಜೀವನ ಶೈಲಿ (life style), ಆಹಾರ (food) ಮುಖ್ಯ ಕಾರಣ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ನಾವು ನಮ್ಮ ಹೃದಯದ ಬಗ್ಗೆ ಹೆಚ್ಚಿನ ಕಾಳಜಿ (Prevent Heart Attack) ತೋರಿಸುವ ಅಗತ್ಯ ಇಂದು ಎಲ್ಲರಿಗೂ ಇದೆ.

ಚಿಕ್ಕ ವಯಸ್ಸಿನಲ್ಲೇ (young age) ಹೆಚ್ಚಿನವರು ಇತ್ತೀಚಿನ ದಿನಗಳಲ್ಲಿ ಹೃದ್ರೋಗಿಗಳಾಗುತ್ತಿದ್ದಾರೆ. ಅದರಲ್ಲೂ 30 ರಿಂದ 35 ವರ್ಷ ವಯಸ್ಸಿನ ಹೆಚ್ಚಿನ ಜನರಲ್ಲಿ ಹೃದಯಾಘಾತ ಅಥವಾ ಹೃದಯ ಸ್ತಂಭನಕ್ಕೆ ಒಳಗಾಗಿ ಸಾವನ್ನಪ್ಪುತ್ತಿದ್ದಾರೆ. ಸದೃಢ ಮತ್ತು ಆರೋಗ್ಯವಂತರಾಗಿ ಕಾಣುವ ವ್ಯಕ್ತಿಗಳೂ ಹೃದಯಾಘಾತಕ್ಕೆ ಒಳಗಾಗಿದ್ದಾರೆ.

ಹೆಚ್ಚಿನವರು ಹೃದಯ ತಪಾಸಣೆಯನ್ನು ನಿರ್ಲಕ್ಷಿಸುತ್ತಾರೆ. ಏನಾದರೂ ಸಮಸ್ಯೆಯಾದಾಗ ಮಾತ್ರ ವೈದ್ಯರ ಬಳಿಗೆ ಓಡುತ್ತಾರೆ. ಬೆಳಗ್ಗೆ ಮತ್ತು ಸಂಜೆ ವ್ಯಾಯಾಮ ಮಾಡುವವರು, ಜಿಮ್‌ಗೆ ಹೋಗಿ ಫಿಟ್‌ ಆಗಿ ಬೆವರು ಹರಿಸುವವರು ಕೂಡ ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಒಳಗಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದು ಯಾಕಾಗಿ ಇರಬಹುದು ಎಂಬುದನ್ನು ಎಲ್ಲರೂ ಯೋಚಿಸಬೇಕಿದೆ ಮಾತ್ರವಲ್ಲ ಪ್ರತಿ 6 ತಿಂಗಳಿಗೊಮ್ಮೆ ದೇಹ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎನ್ನುತ್ತಾರೆ ಅರೋಗ್ಯ ತಜ್ಞರು.

ಇದನ್ನೂ ಓದಿ: Body Weight: ಈ ತಪ್ಪುಗಳೇ ನಿಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು ಎಚ್ಚರ!

ತಪಾಸಣೆ ಯಾಕೆ?

ಹೃದಯದೊಳಗೆ ಏನೆಲ್ಲಾ ಸಮಸ್ಯೆ ಇದೆ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದೆಯೇ ಎಂಬುದನ್ನು ತಿಳಿಯಲು ಹೃದಯ ತಪಾಸಣೆ ನಡೆಸುವುದು ಅಗತ್ಯ. ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಯಾವುದೇ ಅಪಧಮನಿಗಳಲ್ಲಿ ಅಡಚಣೆ ಇದೆಯೇ ಎಂಬುದನ್ನು ಪರೀಕ್ಷಿಸಲು ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಇಂತಹ ಪರಿಸ್ಥಿತಿಯಲ್ಲಿ, ನಮ್ಮ ಹೃದಯವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿಡಲು ಮತ್ತು ಎಲ್ಲಾ ರೀತಿಯ ಹೃದ್ರೋಗಗಳನ್ನು ತಡೆಗಟ್ಟಲು ನಮ್ಮ ದಿನಚರಿಯಲ್ಲಿ ಕೆಲವೊಂದು ವಿಷಯಗಳನ್ನು ಪಾಲಿಸುವುದು ಉತ್ತಮ.


ಹೃದಯದ ಆರೋಗ್ಯಕ್ಕಾಗಿ ಹತ್ತು ಟಿಪ್ಸ್

1. ಹೃದಯವನ್ನು ಆರೋಗ್ಯವಾಗಿಡಲು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಬೆಳ್ಳುಳ್ಳಿ ಮತ್ತು ಅಗಸೆ ಬೀಜಗಳನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

2. 30 ವರ್ಷಗಳ ಬಳಿಕ ಜನರು ತಮ್ಮ ಲಿಪಿಡ್ ಪ್ರೊಫೈಲ್ ಮತ್ತು ಹೆಚ್ ಎಸ್ -ಸಿಆರ್ ಪಿ ಅನ್ನು ಪ್ರತಿ ವರ್ಷ ಪರೀಕ್ಷಿಸಬೇಕು.

3. ದಾಳಿಂಬೆ, ವಾಲ್‌ನಟ್ಸ್, ಬಾದಾಮಿ, ಕಿತ್ತಳೆ, ಬೆರ್ರಿ ಹಣ್ಣುಗಳು, ಹಸಿರು ಎಲೆಗಳ ತರಕಾರಿಗಳಂತಹ ಆಹಾರ ಪದಾರ್ಥಗಳನ್ನು ಊಟದಲ್ಲಿ ನಿಯಮಿತವಾಗಿ ಸೇರಿಸಬೇಕು.

4. ಆಹಾರದಲ್ಲಿ ದಾಲ್ಚಿನ್ನಿ, ಕರಿಮೆಣಸು, ಅರಿಶಿನ, ಶುಂಠಿ, ಮೆಂತೆಕಾಳು, ಏಲಕ್ಕಿ, ಕೊತ್ತಂಬರಿ ಮೊದಲಾದ ಮಸಾಲೆಗಳನ್ನು ಸೇರಿಸಿ.

5. 40 ವರ್ಷ ವಯಸ್ಸಿನ ನಂತರ, ಅರ್ಜುನ ಗಿಡಮೂಲಿಕೆಯಿಂದ ತಯಾರಿಸಿದ ಗಿಡಮೂಲಿಕೆ ಚಹಾವನ್ನು ಸೇವಿಸಲು ಪ್ರಾರಂಭಿಸಿ. ಇದು ಹೃದಯವನ್ನು ಆರೋಗ್ಯವಾಗಿರಿಸುತ್ತದೆ.


6. ನಡೆಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ದಿನವಿಡೀ ಕುಳಿತುಕೊಳ್ಳುವ ಅಭ್ಯಾಸವನ್ನು ತಪ್ಪಿಸಿ. ದೇಹದಲ್ಲಿ ರಕ್ತ ಪರಿಚಲನೆಯಾಗುವುದು ಮುಖ್ಯ. ಕುಳಿತುಕೊಳ್ಳುವುದು ಧೂಮಪಾನದಷ್ಟೇ ಹೃದಯಕ್ಕೆ ಹಾನಿಕರ. ಪ್ರತಿದಿನ ಕನಿಷ್ಠ 45 ನಿಮಿಷಗಳ ಕಾಲ ವ್ಯಾಯಾಮ ಮಾಡಿ.

7. ಒತ್ತಡವು ರಕ್ತದೊತ್ತಡ, ಟ್ರೈಗ್ಲಿಸರೈಡ್‌ಗಳು ಮತ್ತು ಎಲ್‌ಡಿಎಲ್/ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದರಿಂದ ಹೃದಯಾಘಾತಕ್ಕೆ ಪ್ರಮುಖವಾಗಿ ಕಾರಣವಾಗುತ್ತದೆ. ಹೀಗಾಗಿ ಒತ್ತಡವನ್ನು ನಿಯಂತ್ರಿಸಿ.

8. ಯಾವಾಗಲೂ ಕರಿದ ಮತ್ತು ಸಂಸ್ಕರಿಸಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಜಂಕ್ ಫುಡ್ ಅನ್ನು ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಮಿತಿಗೊಳಿಸಿ. ಧೂಮಪಾನ ನಿಲ್ಲಿಸಿ. ಇದರಿಂದ ಹೃದಯಕ್ಕೆ ಯಾವುದೇ ಹಾನಿಯಾಗುವುದಿಲ್ಲ.

9. ಮಧ್ಯಾಹ್ನ 2 ಗಂಟೆಯ ಅನಂತರ ಕೆಫೀನ್ ಅಂಶವುಳ್ಳ ಆಹಾರ, ಪಾನೀಯ ಸೇವಿಸುವುದನ್ನು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ಮಲಗುವ ಸಮಯದಿಂದ 10 ಗಂಟೆಗಳ ಒಳಗೆ ಕೆಫೀನ್ ಸೇವನೆಯು ನಿದ್ರೆಯ ಸಮಸ್ಯೆಗಳನ್ನು ಉಂಟುಮಾಡಬಹುದು.

10. ನಿಮ್ಮ ತೂಕ ಮತ್ತು ಸಕ್ಕರೆ ಮಟ್ಟವನ್ನು ಸಾಮಾನ್ಯ ಮಿತಿಯಲ್ಲಿ ಇರಿಸಿ. ಸ್ಥೂಲಕಾಯತೆ ಮತ್ತು ಹೆಚ್ಚಿನ ಸಕ್ಕರೆ ಮಟ್ಟ ಹೊಂದಿರುವವರಿಗೆ ಹೃದಯಾಘಾತದ ಅಪಾಯವಿರುತ್ತದೆ.

Exit mobile version