ಬಹಳಷ್ಟು ಮಂದಿಗೆ ನಿತ್ಯವೂ ಪ್ರೊಟೀನ್ ಪುಡಿಗಳಿಂದ (Protein Powder) ಮಾಡಿದ ಶೇಕ್‌ಗಳನ್ನು ಕುಡಿಯುವ ಅಭ್ಯಾಸವಿರಬಹುದು. ಜಿಮ್‌ಗೆ ಹೋಗುವ, ವ್ಯಾಯಾಮ ಮಾಡುವ, ತೂಕ ಇಳಿಸುವ ಪ್ರಯತ್ನದಲ್ಲಿರುವ ಎಲ್ಲ ಮಂದಿಯೂ ಈಗ ಯಾವ ವೈದ್ಯರ ಸಲಹೆಯನ್ನೂ ಕೇಳದೆ ನೇರವಾಗಿ ಪ್ರೊಟೀನ್ ಪೌಡರ್‌ಗಳು ಸಿಗುವ ಔಟ್‌ಲೆಟ್‌ಗಳಿಂದ ಪೌಡರನ್ನು ಕೊಂಡು ತಂದು ಸೇವಿಸಲು ಆರಂಭಿಸುತ್ತಾರೆ. ಮಾಂಸಖಂಡಗಳ ಬಲವರ್ಧನೆಗೆ, ಪ್ರೊಟೀನ್ ಡಯಟ್‌ನಲ್ಲಿರುವ ಮಂದಿ, ಅಥ್ಲೀಟ್‌ಗಳು ಸೇರಿದಂತೆ ಎಲ್ಲರೂ ಇತ್ತೀಚೆಗೆ ಪ್ರೊಟೀನ್ ಪೌಡರ್ ಶೇಕ್ ಮಾಡಿ ಕುಡಿಯುವ ಟ್ರೆಂಡ್ ಹೆಚ್ಚಾಗುತ್ತಿದೆ. ಇದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆಯೋ ಅಥವಾ ಇದರಿಂದ ಅಡ್ಡ ಪರಿಣಾಮಗಳೇನಾದರೂ ಇವೆಯೇ ಎಂಬ ಯೋಚನೆಯನ್ನೂ ಮಾಡುವುದಿಲ್ಲ. ಇತ್ತೀಚೆಗೆ ಹೆಚ್ಚುತ್ತಿರುವ ಈ ಟ್ರೆಂಡ್‌ಗೆ ಉತ್ತರವಾಗಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್- ನ್ಯಾಷನಲ್ ಆಫ್ ನ್ಯೂಟ್ರಿಷನ್ ಇದೀಗ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದ್ದು ಪ್ರೊಟೀನ್ ಪೌಡರುಗಳ ಕುರಿತಾದ ಆಘಾತಕಾರಿ ಸತ್ಯವನ್ನು ವಿವರಿಸಿದ್ದು, ಇದರ ಅಧಿಕ ಸೇವನೆಯಿಂದ ಯಾವೆಲ್ಲ ಪರಿಣಾಮಗಳನ್ನು ಎದುರಿಸಬೇಕಾದೀತು ಎಂಬ ಎಚ್ಚರವನ್ನೂ ನೀಡಿದೆ. ಅಥ್ಲೀಟ್‌ಗಳೂ ಸೇರಿದಂತೆ, ಕ್ರೀಡಾಳುಗಳಿಗೆ ನಿತ್ಯವೂ ಆಹಾರ ಮೂಲಗಳಿಂದಲೇ ಪ್ರೊಟೀನ್ ನಮ್ಮ ದೇಹಕ್ಕೆ ಸೇರುವಂತೆ ಮಾಡಬೇಕು ಎಂಬ ನಿಯಮಾವಳಿ ಇದೆ. ಸಪ್ಲಿಮೆಂಟ್‌ಗಳ ಮೂಲಕ ಪ್ರೊಟೀನ್ ಅಥವಾ ಪೋಷಕಾಂಶಗಳು ದೇಹಕ್ಕೆ ಸೇರುವಂತೆ ಮಾಡುವುದು ಉತ್ತಮ ವಿಧಾನವಲ್ಲ ಎಂದು ಇದು ಹೇಳಿದೆ. ನಿತ್ಯವೂ ಹೀಗೆ ಪ್ರೊಟೀನ್ ಪುಡಿಗಳು ಹಾಗೂ ಇತರ ಸಪ್ಲಿಮೆಂಟ್‌ಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುತ್ತಲೇ ಇದ್ದರೆ, ಎಲುಬಿನಲ್ಲಿ ಖನಿಜಾಂಶಗಳ ನಷ್ಟ ಸೇರಿದಂತೆ ಕಿಡ್ನಿಯ ಸಮಸ್ಯೆಗಳು ಬರುವ ಸಾಧ್ಯತೆಗಳು ಹೆಚ್ಚು ಎಂದು ಇದು (Protein Powder) ಎಚ್ಚರಿಕೆ ನೀಡಿದೆ.
ಝೀರೋ ಫಿಗರ್ ಆಸೆ
ಇದೀಗ ಮುಖ್ಯವಾಗಿ ಸಣ್ಣ ವಯಸ್ಸಿನ ಯುವಕ ಯುವತಿಯರು ದೇಹವನ್ನು ಝೀರೋ ಫಿಗರ್ ಮಾಡುವ ಆಸೆಯಿಂದ, ಬಳುಕುವ ಬಳ್ಳಿಯಂತಾಗಲು, ಮಾಂಸಖಂಡಗಳ ಬಲವರ್ಧನೆಗೆ ಪ್ರೊಟೀನ್ ಪುಡಿಗಳ ಸೇವನೆ ನಿತ್ಯವೂ ಮಾಡುವುದು ಹೆಚ್ಚಾಗುತ್ತಿದೆ. ಸುಲಭವಾಗಿ ಸಿಗುವ, ಯಾವುದೇ ಕಷ್ಟವಿಲ್ಲದೆ ದುಡ್ಡು ಕೊಟ್ಟರೆ ಸಿಗುವ ಈ ದುಬಾರಿ ಪುಡಿಗಳ ಸೇವನೆಯಿಂದ ಬಹುಬೇಗನೆ ತಾವಂದುಕೊಂಡ ದೇಹವನ್ನು ಪಡೆಯುವುದು ಸಾಧ್ಯವಾಗುತ್ತದೆ ಎಂಬುದೇ ಇದರ ಹಿಂದಿನ ಈ ಮಟ್ಟಿನ ಆಕರ್ಷಣೆ. ಆದರೆ, ಇಂತಹ ಸಂಸ್ಕರಿಸಿ ಪ್ರೊಟೀನ್ ಪುಡಿಗಳು ಎಷ್ಟೇ ನೈಸರ್ಗಿಕ ಮೂಲಗಳಿಂದ ತಯಾರಿಸಿದ್ದು ಎಂಬ ಸ್ಪಷ್ಟಣೆ ನೀಡಿದರೂ ಅದರಿಂದ ಅಡ್ಡ ಪರಿಣಾಮಗಳಿದ್ದೇ ಇವೆ ಎಂದಿದೆ. ಭಾರತದಲ್ಲಿ ಈ ಟ್ರೆಂಡ್ ದಿನೇ ದಿನೇ ಹೆಚ್ಚಾಗುತ್ತಿದ್ದು, 2023ರಲ್ಲಿ ಪ್ರೊಟೀನ್ ಪೌಡರ್ ಮಾರುಕಟ್ಟೆ 33000 ಕೋಟಿ ವಹಿವಾಟು ನಡೆಸಿದ್ದು, ಪ್ರತೀ ವರ್ಷ ಇದು ಶೇ.15.8 ರಷ್ಟು ವೃದ್ಧಿ ಕಾಣುತ್ತಿದೆ. 2037ರ ವೇಳೆಗೆ ಇದು 1.28 ಕೋಟಿ ವಹಿವಾಟು ನಡೆಸುವ ಕ್ಷೇತ್ರವಾಗಿ ಇದು ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: World Thyroid Day: ಇಂದು ವಿಶ್ವ ಥೈರಾಯ್ಡ್ ದಿನ; ‘ಗಂಟಲ ಚಿಟ್ಟೆ’ಯ ಬಗ್ಗೆ ಈ ಸಂಗತಿ ನಿಮಗೆ ಗೊತ್ತೆ?
ವಿಷಕಾರಿ ಅಂಶಗಳು ಪತ್ತೆ
ಭಾರತದಲ್ಲಿರುವ ಪ್ರೊಟೀನ್ ಪೌಡರ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ರಾಂಡ್‌ಗಳ ಪೈಕಿ ಶೇ.70ರಷ್ಟು ಬ್ರ್ಯಾಂಡ್‌ಗಳು ತಪ್ಪಾಗಿ ತಮ್ಮನ್ನು ಲೇಬಲ್ ಮಾಡಿಕೊಂಡಿದ್ದು ಜನರನ್ನು ಹಾದಿ ತಪ್ಪಿಸುತ್ತಿವೆ. ಶೇ.14ರಷ್ಟು ಬ್ರ್ಯಾಂಡ್‌ಗಳಲ್ಲಿ ವಿಷಕಾರಿ ಅಂಶಗಳಿದ್ದು, ಶೇ.8ರಷ್ಟು ಬ್ರ್ಯಾಂಡ್‌ಗಳಲ್ಲಿ ಕ್ರಿಮಿನಾಶಕಗಳ ಅಂಶಗಳೂ ಇದ್ದಿರುವುದು ಪತ್ತೆಯಾಗಿವೆ. ಹರ್ಬಲ್ ಪ್ರೊಟೀನ್‌ಗಳೆಂಬ ಹೆಸರಿನಲ್ಲಿರುವ ಪುಡಿಗಳ ಪರೀಕ್ಷೆ ಸರಿಯಾಗಿ ನಡೆಯದೆ, ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಹೀಗಾಗಿ, ಇವೆಲ್ಲವುಗಳ ಸೇವನೆಯಿಂದ ಆರೋಗ್ಯ ವೃದ್ಧಿಯಾಗುವುದಕ್ಕಿಂತ ಹೆಚ್ಚು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವೇ ಬೀರುತ್ತಿದೆ ಎಂದು ಹೇಳಿದ್ದಾರೆ. ಇನ್ನೂ ಆಘಾತಕಾರಿ ಸುದ್ದಿ ಎಂದರೆ, ಆಕ್ಟಿವ್ ಆಗಿ ಚುರುಕಾಗಿರುವ ಆರೋಗ್ಯವಂತ ಮಂದಿಯೂ ಇಂದು ವೈದ್ಯರ ಸಲಹೆ ಪಡೆಯದೆ ನೇರವಾಗಿ ಪ್ರೊಟೀನ್ ಪುಡಿಗಳ ಸೇವನೆ ಮಾಡುವ ಮೂಲಕ ದೇಹದ ಆರೋಗ್ಯವನ್ನು ಕೈಯಾರೆ ಹಾಳು ಮಾಡುತ್ತಿದ್ದಾರೆ. ಇಂತಹ ಹಲವು ಪುಡಿಗಳಲ್ಲಿ ಸ್ಟೀರಾಯ್ಡ್ ಕೂಡಾ ಇರುವ ಸಂಭವಗಳಿರುವುದರಿಂದ ವೃಥಾ ದೇಹವನ್ನು ಕೆಟ್ಟ ಪರಿಸ್ಥಿತಿಗೆ ದೂಡುತ್ತಿರುವುದು ನಿಜಕ್ಕೂ ಆಘಾತಕಾರಿ ಎಂದು ವರದಿ ನೀಡಿರುವ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.