Site icon Vistara News

Protein Supplements: ಪ್ರೊಟಿನ್‌ ಸಪ್ಲಿಮೆಂಟ್‌ನ ಸೈಡ್‌ ಎಫೆಕ್ಟ್‌ ಏನೇನು? ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ಸೂಚನೆ ಇಲ್ಲಿದೆ

Protein Supplements

ದೇಹದ ಸ್ನಾಯುಗಳನ್ನು ಹೆಚ್ಚಿಸುವ ಉದ್ದೇಶದಿಂದ ದೀರ್ಘಕಾಲ ತೆಗೆದುಕೊಳ್ಳುವ ಎಲ್ಲ ಪೂರಕಗಳು ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಎಂಆರ್‌ಸಿ) ಎಚ್ಚರಿಸಿದೆ. ಬದಲಿಗೆ, ಸಮತೋಲಿತ ಆಹಾರದ ಮೂಲಕವೇ ಸತ್ವಗಳನ್ನು ದೇಹಕ್ಕೆ ಒದಗಿಸುವುದಕ್ಕೆ ಶಿಫಾರಸು ಮಾಡಿದೆ. ಪ್ರೊಟೀನ್‌ ಮತ್ತು ವಿಟಮಿನ್‌ಗಳ (Protein Supplements) ಪೂರಕಗಳನ್ನು ಸೇವಿಸುವ ಬಗ್ಗೆ ಕೆಲವು ಮಾರ್ಗದರ್ಶಿಸೂತ್ರಗಳನ್ನು ಈ ಸಂಸ್ಥೆ ಬಿಡುಗಡೆ ಮಾಡಿದ್ದು, ಉಪ್ಪು, ಸಕ್ಕರೆ ಮತ್ತು ಸಂಸ್ಕರಿತ ಆಹಾರಗಳ ಸೇವನೆಗೆ ಕಡಿವಾಣ ಹಾಕುವ ಅಗತ್ಯವನ್ನು ಒತ್ತಿಹೇಳಿದೆ. ಭಾರತೀಯರಿಗಾಗಿಯೇ ವಿಶೇಷವಾಗಿ ಈ ಮಾರ್ಗದರ್ಶನಗಳನ್ನು, ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ ಬಿಡುಗಡೆ ಮಾಡಿದೆ. ಐಎಂಆರ್‌ಸಿ ಅಡಿಯಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕಾಗಿ ನೇಮಿಸಲಾದ ತಜ್ಞರ ಸಮಿತಿ ಈ ಶಿಫಾರಸಿ ಜೀವನಶೈಲಿಯ ರೋಗಗಳನ್ನು ದೂರ ಇರಿಸಲು ಅಗತ್ಯವಾದ ಸೂಚನೆಗಳನ್ನು 13 ವರ್ಷಗಳ ನಂತರ ಇದಾಗಿದೆ. ಯಾವುದೇ ಉತ್ಪನ್ನವನ್ನು ಖರೀದಿಸುವಾಗ ಅದರ ಲೇಬಲ್‌ ಮೇಲೆ ನಮೂದಿಸಿರುವ ಮಾಹಿತಿಯನ್ನು ಪರಿಶೀಲಿಸಿ ಎಂದು ಗ್ರಾಹಕರಿಗೆ ತಿಳಿಸಿದೆ.

ಪೂರಕಗಳೇಕೆ ಬೇಡ?

ದೀರ್ಘ ಕಾಲದವರೆಗೆ ಪ್ರೊಟೀನ್‌ ಪೂರಕಗಳನ್ನು ಸೇವಿಸುವುದರಿಂದ ಕಿಡ್ನಿ ತೊಂದರೆಗಳು ಕಾಡಬಹುದು; ಮೂಳೆಗಳಲ್ಲಿನ ಖನಿಜಾಂಶ ಕ್ಷೀಣಿಸಬಹುದು. ಹಾಗಾಗಿ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನು ಆಹಾರದ ಮೂಲಕವೇ ತೆಗೆದುಕೊಳ್ಳುವುದು ಸುರಕ್ಷಿತವಾದ ಮಾರ್ಗ ಎಂದು ಸಂಸ್ಥೆ ಹೇಳಿದೆ. ಪ್ರೊಟೀನ್‌ ಪೂರಕಗಳನ್ನು ಮೊಟ್ಟೆ, ಹಾಲು, ಸೋಯ, ಬಟಾಣಿ ಮುಂತಾದ ವಸ್ತುಗಳಿಂದ ಮಾಡಲಾಗುತ್ತದೆ. ಆದರೆ ಕೆಲವು ಉತ್ಪನ್ನಗಳಲ್ಲಿ ರುಚಿ ಹೆಚ್ಚಿಸುವ ಉದ್ದೇಶದಿಂದ ಸಕ್ಕರೆ ಅಥವಾ ಯಾವುದಾದರೂ ಕೃತಕ ವಸ್ತುಗಳನ್ನು ಸೇರಿಸಲಾಗುತ್ತದೆ. ಇಂಥವುಗಳನ್ನು ದೀರ್ಘಕಾಲದವರೆಗೆ ಸೇವಿಸುವುದು ಆರೋಗ್ಯಕ್ಕೆ ಸೂಕ್ತವಲ್ಲ. ಶೇ. ೫೬ಕ್ಕೂ ಹೆಚ್ಚಿನ ಭಾರತೀಯರಿಗೆ ಹೆಚ್ಚಿನ ಸಾರಿ ಅನಾರೋಗ್ಯಗಳು ಕಾಡುವುದು ಅಸಮರ್ಪಕ ಆಹಾರ ಪದ್ಧತಿಯಿಂದ. ಹಾಗಾಗಿ ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸುವುದು ರೋಗಮುಕ್ತವಾಗುವಲ್ಲಿ ಮಹತ್ವದ್ದು ಎಂದು ಹೇಳಿದೆ.

ಆಹಾರ ಹೇಗಿರಬೇಕು?

ಸಮತೋಲಿತ ಆಹಾರ ಪದ್ಧತಿಯೆಂದರೆ ಹೇಗಿರಬೇಕು? ಆಹಾರದಲ್ಲಿ ಯಾವುದು ಎಷ್ಟು ಇದ್ದರೆ ಸರಿ ಅಥವಾ ತಪ್ಪು? ಸಂಸ್ಥೆಯ ಪ್ರಕಾರ, ದಿನದ ಒಟ್ಟು ಕ್ಯಾಲರಿಗಳಲ್ಲಿ ಶೇ ೫. ರಷ್ಟು ಮಾತ್ರವೇ ಸಕ್ಕರೆಯ ಕ್ಯಾಲರಿಯಿಂದ ಬರಬಹುದು. ಉಳಿದಂತೆ ಧಾನ್ಯ ಮತ್ತು ಸಿರಿಧಾನ್ಯಗಳಿಂದ ದೊರೆಯುವ ಶಕ್ತಿಯು ಶೇ. 45ನ್ನು ಮೀರುವಂತಿಲ್ಲ. ಕಾಳುಗಳು, ಮಾಂಸ ಮುಂತಾದವುಗಳ ಕ್ಯಾಲರಿ ಶೇ. 15 ಇದ್ದರೆ ಸಾಕಾಗುತ್ತದೆ. ಉಳಿದ ಶಕ್ತಿಗಳೆಲ್ಲ ಕಾಯಿ-ಬೀಜಗಳು, ತರಕಾರಿ-ಹಣ್ಣುಗಳು ಮತ್ತು ಡೇರಿ ಉತ್ಪನ್ನಗಳಿಂದ ಬರಬೇಕು. ಈ ಎಲ್ಲಾ ಕ್ಯಾಲರಿಗಳಲ್ಲೂ ಶೇ. 30ಕ್ಕಿಂತ ಕಡಿಮೆ ಶಕ್ತಿ ಕೊಬ್ಬಿನಿಂದ ಬಂದರೆ ಸಾಕಾಗುತ್ತದೆ. ಆದರೆ ಮಾಂಸ ಮತ್ತು ಕಾಳುಗಳ ಬೆಲೆ ದುಬಾರಿ ಎನ್ನುವ ಕಾರಣಕ್ಕಾಗಿ ಧಾನ್ಯಗಳನ್ನು ಭಾರತೀಯರು ಮಿತಿಮೀರಿ ಬಳಸುತ್ತಿದ್ದಾರೆ. ಇದು ಅತಿಯಾದ ಪಿಷ್ಟದ ಸೇವನೆಗೆ ಕಾರಣವಾಗುತ್ತಿದೆ. ಹಾಗಾಗಿ ಅಗತ್ಯ ಅಮೈನೊ ಆಮ್ಲಗಳು ಮತ್ತು ಕೊಬ್ಬಿನಾಮ್ಲಗಳು ಸರಿಯಾಗಿ ದೊರೆಯದಿದ್ದರೆ, ಸತ್ವಗಳ ಕೊರತೆ ಉಂಟಾಗುತ್ತದೆ. ಮಾತ್ರವಲ್ಲ, ರಕ್ತದೊತ್ತಡ ಮತ್ತು ಟೈಪ್‌ 2 ಮಧುಮೇಹಕ್ಕೂ ಕಾರಣವಾಗುತ್ತದೆ ಎಂದು ಸಂಸ್ಥೆ ಎಚ್ಚರಿಸಿದೆ.
ಅವಧಿಗೆ ಮುನ್ನವೇ, ಅಂದರೆ ಪೂರ್ಣಾಯಸ್ಸು ಬದುಕದೆಯೇ ಸಾವನ್ನಪ್ಪುವವರ ಸಂಖ್ಯೆ ಇದರಿಂದ ಹೆಚ್ಚಾಗುತ್ತಿದೆ. ತಪ್ಪಾದ ಆಹಾರ ಪದ್ಧತಿ ಮತ್ತು ಅದರಿಂದ ಬರುತ್ತಿರುವ ಜೀವನಶೈಲಿಯ ರೋಗಗಳನ್ನು ಸರಿಪಡಿಸಿಕೊಳ್ಳುವುದರಿಂದ ಇಂಥ ಸಾವನ್ನು ತಡೆಯಬಹುದು. ಇದಕ್ಕಾಗಿ ಪೋಷಕಾಂಶಗಳು ಸಮತೋಲನೆಯಲ್ಲಿ ದೊರೆಯುವಂತೆ ಆಹಾರ ಸೇವಿಸಬೇಕು. ವ್ಯಾಯಾಮವೆಂಬುದು ಬದುಕಿನ ಭಾಗ ಆಗಿರಬೇಕು. ಸಂಸ್ಕರಿತ ಆಹಾರಗಳು ಹಾಗೂ ಅದರಿಂದ ಬರುವ ಉಪ್ಪು ಮತ್ತು ಸಕ್ಕರೆಯಂಶಗಳನ್ನು ನಿಯಂತ್ರಿಸಬೇಕು. ಆಗ ಮಾತ್ರ ಸತ್ವಗಳ ಕೊರತೆ ಮತ್ತು ಬೊಜ್ಜಿನಂಥ ತೊಂದರೆಗಳಿಂದ ದೂರವಾಗುವುದಕ್ಕೆ ಸಾಧ್ಯ.

ಇದನ್ನೂ ಓದಿ: Vitamin Side Effects: ವಿಟಮಿನ್‌ ಮಾತ್ರೆಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ?

ಪ್ರೊಟೀನ್‌ ಮೂಲಗಳೇನು?

ಪ್ರೊಟೀನ್‌ ಪೂರಕಗಳು ಬೇಡವೆಂದರೆ, ಅಗತ್ಯ ಪ್ರಮಾಣದ ಸತ್ವ ಯಾವುದರಿಂದ ಬರಬೇಕು? ಎಂಥಾ ಆಹಾರವನ್ನು ಸೇವಿಸಬೇಕು? ಲೀನ್‌ ಮೀಟ್‌ ಅಥವಾ ಕಡಿಮೆ ಕೊಬ್ಬಿನ ಮಾಂಸಗಳು, ಮೀನುಗಳು, ಮೊಟ್ಟೆ, ಡೇರಿ ಉತ್ಪನ್ನಗಳು, ಕಾಳುಗಳು ಮತ್ತು ಕಾಯಿ-ಬೀಜಗಳಲ್ಲಿ ಉತ್ತಮ ಗುಣಮಟ್ಟದ ಪ್ರೊಟೀನ್‌ ನೈಸರ್ಗಿಕವಾಗಿ ದೊರೆಯುತ್ತದೆ.

Exit mobile version