ಹಾಸಿಗೆ ಬಿಟ್ಟೆದ್ದ ಕೂಡಲೇ ಒಂದು ಕಾಫಿಯೋ ಚಹಾವೋ ಬಹಳಷ್ಟು ಮಂದಿಗೆ ಅಭ್ಯಾಸ. ದಿನವಿಡೀ, ಚುರುಕಾಗಿರಲು ಕಾಫಿಯೋ ಚಹಾವೋ ಇಲ್ಲದಿದ್ದರೆ ಸಾಧ್ಯವೇ ಇಲ್ಲ ಎಂಬ ನಂಬಿಕೆ ಹಲವರದ್ದು. ಇದಕ್ಕಾಗಿ, ಎಷ್ಟೇ ಅಂದುಕೊಂಡರೂ ಕಾಫಿಯನ್ನೋ ಚಹಾದ ಅಭ್ಯಾಸವನ್ನೋ ಬಿಡಲು ಸಾಧ್ಯವೇ ಆಗುವುದಿಲ್ಲ. ಇನ್ನೂ ಕೆಲವರಿಗೆ ಕಲಸದ ಮಧ್ಯೆ ಚುರುಕಾಗಿರಲು ಆಗಾಗ, ನಿದ್ದೆ ಬರದಿರಲು ಹಲವರಿಗೆ ಕಾಫಿ, ಚಹಾದ ಸಹವಾಸವಿರುತ್ತದೆ. ಹಾಗೆ ನೋಡಿದರೆ, ಸರಿಯಾದ ಸಮತೋಲಿತ ಆಹಾರ ಸೇವನೆ ಮಾಡುತ್ತಿದ್ದರೆ, ನಮಗೆ ಪೋಷಕಾಂಶದ ಕೊರತೆ ಇರದಿದ್ದರೆ, ನಿತ್ಯವೂ ಬೆಳಗ್ಗೆ ಎದ್ದು ನಿಯಮಿತ ವ್ಯಾಯಾಮ ಮಾಡುತ್ತಿದ್ದರೆ, ದಿನವಿಡೀ ಚುರುಕಾಗಿ ಓಡಾಡಿಕೊಂಡಿರಬಹುದು ಎಂಬುದು ಸತ್ಯ. ಹಾಗಾದರೆ, ಕಾಫಿ, ಚಹಾದಂತಹ ಕೆಫಿನ್‌ಯುಕ್ತ ಪೇಯಗಳಲ್ಲಿ ದಿನವೂ ನಮ್ಮನ್ನು ಚುರುಕಾಗಿಸಿಡಬಲ್ಲ ಗುಣವಿದೆ. ಹಿತಮಿತವಾಗಿ ಇವುಗಳನ್ನು ಸೇವಿಸಿದರೆ ಇದರಿಂದ ಲಾಭಗಳೂ ಇವೆ. ಆದರೆ ಹೆಚ್ಚಾದರೆ, ಇವೆಲ್ಲವೂ ಒಂದು ಬಗೆಯ ಅಡಿಕ್ಷನ್ನೇ. ತ್ಯಜಿಸಿದರೆ, ದಿನವಿಡೀ, ಆಲಸ್ಯ ನಮ್ಮ ಬಳಿ ಸುಳಿಯದಂತೆ ಚುರುಕಾಗಿರಲು ಯಾವೆಲ್ಲ ಆಹಾರಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಬೇಕು (food tips) ಎಂಬುದನ್ನು ನೋಡೋಣ.
1. ಬೆಳಗಿನ ಉಪಹಾರಕ್ಕೆ ಪ್ರೊಟೀನ್‌ಯುಕ್ತ ಆಹಾರ ಸೇವಿಸಿ: ಆಹಾರದಲ್ಲಿ ಪ್ರೊಟೀನ್ ಇದ್ದರೆ, ಅದು ನಮ್ಮನ್ನು ಚುರುಕಾಗಿ ಇಡುತ್ತದೆ. ನಮಗೆ ಸಮತೋಲಿತ ಶಕ್ತಿ ದಿನವಿಡೀ ಲಭಿಸುತ್ತದೆ. ಮೊಟ್ಟೆಯಂತಹ ಆಯ್ಕೆಗಳು ಬೆಳಗಿನ ಉಪಹಾರಕ್ಕೆ ಒಳ್ಳೆಯದು. ಸಸ್ಯಾಹಾರಿಗಳು ಬೇಳೆಕಾಳುಗಳ ತಿನಿಸುಗಳು, ಹಾಲಿನ ಉತ್ಪನ್ನಗಳನ್ನು ಸೇವಿಸಬಹುದು. ಒಣ ಹಣ್ಣು ಬೀಜಗಳೂ ಬೆಳಗಿನ ಉಪಹಾರದ ಸಂದರ್ಭ ಯೋಗ್ಯ.
2. ನೀರು ಸರಿಯಾಗಿ ಕುಡಿಯಿರಿ: ಆಹಾರವನ್ನು ಹೊರತುಪಡಿಸಿ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರಿನ ಪೂರೈಕೆ ಅತ್ಯಗತ್ಯ. ಹೆಚ್ಚು ಕಾಫಿ ಚಹಾಗಳ ಸೇವನೆ ದೇಹಕ್ಕೆ ನೀರಿನ ಪೂರೈಕೆ ಮಾಡುವುದಿಲ್ಲ, ಬದಲಾಗಿ ಒಣಗಿಸುತ್ತದೆ. ನೈಸರ್ಗಿಕ ಶಕ್ತಿವರ್ಧಕ ಪೇಯಗಳಾದ ಎಳನೀರು, ಕೆಫಿನ್ ರಹಿತ ಹರ್ಬಲ್ ಚಹಾಗಳು, ಮನೆಯಲ್ಲೇ ಮಾಡಿದ ತಾಜಾ ಹಣ್ಣಿನ ರಸ ಇತ್ಯಾದಿಗಳ ಸೇವನೆ ಒಳ್ಳೆಯದು.
3. ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಸಮತೋಲನದಲ್ಲಿರಲಿ: ದೇಹದ ಅಂಗಾಂಶಗಳಿಗೆ ಕೆಲಸ ಮಾಡುವಂತೆ ಶಕ್ತಿ ನೀಡುವುದು ರಕ್ತದಲ್ಲಿರುವ ಸಮತೋಲಿತ ಸಕ್ಕರೆಯ ಪ್ರಮಾಣ. ಇದರ ಏರಿಳಿತ ದೇಹದಲ್ಲಿ ಶಕ್ತಿಯನ್ನು ಕುಂದಿಸುತ್ತದೆ. ಸಿಹಿ ಆಹಾರ ವಸ್ತುಗಳು ನಮಗೆ ದಿಢೀರ್ ಶಕ್ತಿ ನೀಡಬಹುದು, ಆದರೆ, ಇದು ತಾತ್ಕಾಲಿಕವಾಗಿ ದೇಹದ ರಕ್ತದಲ್ಲಿ ಸಕ್ಕರೆಯ ಮಟ್ಟ್ವನ್ನು ಏರಿಸಿ ಶಕ್ತಿ ಪಡೆಯುವಂತೆ ಮಾಡುತ್ತದೆ. ಆದರೆ, ಆರೋಗ್ಯಕರ ಮಟ್ಟದಲ್ಲಿ ಕಾರ್ಬೋಹೈಡ್ರೇಟ್ ಹಾಗೂ ನಾರಿನಂಶದ ಅಗತ್ಯವೂ ಇವೆ. ಇವೆಲ್ಲವುಗಳು ಇರುವಂಥ ಆಹಾರವೇ ನಿತ್ಯದ ಆಹಾರದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು.
ಇದನ್ನೂ ಓದಿ: Health Tips: ಒಗ್ಗರಣೆಗೆ ಹಾಕುವ ಕರಿಬೇವನ್ನು ನಾವು ನಿತ್ಯವೂ ಏಕೆ ತಿನ್ನಬೇಕು ಗೊತ್ತೇ?
4. ಬೆಳಗ್ಗೆ ವ್ಯಾಯಾಮದಿಂದ ದಿನವನ್ನು ಆರಂಭಿಸಿ: ವ್ಯಾಯಾಮ ನಮ್ಮ ಹೃದಯದ ಬಡಿತವನ್ನು ಚುರುಕಾಗಿಸುತ್ತದೆ. ಆಗ ಸಹಜವಾಗಿಯೇ ದೇಹದಲ್ಲಿ ರಕ್ತಪೂರಣವೂ ಚುರುಕಾಗುತ್ತದೆ. ಇದರ ಫಲವಾಗಿ ಏಂಡೋರ್ಫಿನ್ ಹಾಗೂ ಡೋಪಮೈನ್ ಹಾರ್ಮೋನುಗಳು ಬಿಡುಗಡೆಯಾಗಿ ಉಲ್ಲಾಸ ಚಿಮ್ಮಿ, ಸಂತೋಷ ಹೆಚ್ಚಾಗುತ್ತದೆ. ಇದು ಇಡೀ ದಿನವನ್ನು ಉಲ್ಲಾಸಮಯವನ್ನಾಗಿ ಮಾಡುತ್ತದೆ.
5. ಬೆಳಗಿನ ಹೊತ್ತಿನ ಸೂರ್ಯನ ಬಿಸಿಲು ಸಿಗಲಿ: ನಮ್ಮ ಮೂಡ್ ಸುಧಾರಿಸಲು, ನಿಸರ್ಗದ ಸಾಂಗತ್ಯ ಹೆಚ್ಚು ಸಹಾಯ ಮಾಡುತ್ತದೆ. ಮೂಡ್ ಹಾಳಾದರೆ, ಹೊರಗೆ ಓಡಾಡಿಕೊಂಡು ಬಂದಾಗ ಎಷ್ಟೋ ನೆಮ್ಮದಿಯೆನಿಸುತ್ತದೆ, ಮನಸ್ಸು ಪ್ರಫುಲ್ಲವಾಗುತ್ತದೆ. ಹಾಗೆಯೇ, ಬೆಳಗ್ಗೆ ಎದ್ದು, ಸೂರ್ಯನ ಬಿಸಿಲಿನಲ್ಲಿ ವಾಕಿಂಗ್ ಮಾಡಿ ಬಂದರೆ ದೇಹಕ್ಕೆ ವಿಟಮಿನ್ ಡಿ ದೊರೆತು ದೇಹ ಮನಸ್ಸು ಚುರುಕಾಗುತ್ತದೆ. ದಿನವಿಡೀ ಉಲ್ಲಾಸದಿಂದಿರಲು ಇದು ಟಾನಿಕ್‌ನಂತೆ ಕೆಲಸ ಮಾಡುತ್ತದೆ. ಯಾವ ಕೆಫಿನ್‌ಯುಕ್ತ ಪೇಯಗಳೂ ಬೇಕಾಗುವುದಿಲ್ಲ. ಅಷ್ಟೇ ಅಲ್ಲ, ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ವಿಟಮಿನ್ ಡಿ ಸಿಕ್ಕು ಇದು ಹಲವು ರೋಗಗಳು ಬರದಂತೆ ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
ಇದನ್ನೂ ಓದಿ: Health Tips: ಬೇಸಿಗೆಯಲ್ಲಿ ಕಾಡುವ ಎದೆಯುರಿಗೆ ಈ ಮಸಾಲೆ ಪದಾರ್ಥಗಳೇ ಕಾರಣ!