ಈಗಂತೂ ಎಲ್ಲವೂ ರಾಮಮಯ! ರಾಮಭಕ್ತಿಯ ಘಮ ಎಲ್ಲೆಡೆ ಹರಡಿದಂಥ ಈ ಹೊತ್ತಲ್ಲಿ ನಮ್ಮ ಆರೋಗ್ಯದ ವಿಷಯದಲ್ಲಿ ಕೊಂಚ ರಾಮನಾಮ ಜಪಿಸೋಣ. ಅಂದರೆ, ರಾಮನಂತೆ ವನವಾಸ ಮಾಡುವುದೋ ಅಥವಾ ಸಮುದ್ರಕ್ಕೆ ಸೇತುವೆ ಕಟ್ಟುವ ಬಗ್ಗೆಯೋ ಮಾತಾಡುತ್ತಿಲ್ಲ ಇಲ್ಲಿ. ರಾಮಫಲದ ಉಪಯೋಗಗಳ ಬಗ್ಗೆ ತಿಳಿಯೋಣ. ಈ ಫಲಕ್ಕೂ ರಾಮನಿಗೂ ಸಂಬಂಧವೇನು ಎಂದರೆ, ಅದು ಹೆಸರಷ್ಟೆ. ಸೀತೆಯ ಹೆಸರನ್ನು ಹೊತ್ತ ಸೀತಾಫಲ ಸಾಮಾನ್ಯವಾಗಿ ತಿಂದಿರುತ್ತೇವೆ. ಆದರೆ ರಾಮಫಲ (Ramphal Health Benefits) ಅಷ್ಟಾಗಿ ದೊರೆಯುವುದಿಲ್ಲ. ಹಾಗಾಗಿ ಸಿಕ್ಕಿದರೆ ಬಿಡದೆ ತಿನ್ನಿ.
ಪೋಷಕಾಂಶಗಳು
ಒಂದು ದೊಡ್ಡ ಗಾತ್ರದ ರಾಮಫಲದಲ್ಲಿ, ಅಂದಾಜು 75 ಕ್ಯಾಲರಿ ಶಕ್ತಿ, 17.5 ಗ್ರಾಂ ಪಿಷ್ಟ, 1.5 ಗ್ರಾಂ ಪ್ರೊಟೀನ್ ದೊರೆಯುತ್ತದೆ. ಜೊತೆಗೆ, ನಾರು, ಕೊಬ್ಬು, ಹಲವು ಬಿ ಜೀವಸತ್ವಗಳು, ವಿಟಮಿನ್ ಸಿ, ಕ್ಯಾಲ್ಶಿಯಂ, ಕಬ್ಬಿಣ, ಪೊಟಾಶಿಯಂನಂಥ ಬಹಳಷ್ಟು ಬಗೆಯ ಸೂಕ್ಷ್ಮ ಪೋಷಕಾಂಶಗಳು ಇದರಲ್ಲಿವೆ. ಹಣ್ಣಿನ ಒಳ-ಹೊರಗಿನ ಹೋಲಿಕೆಯಲ್ಲಿ ಸೀತಾಫಲದ ಹತ್ತಿರದ ಸಂಬಂಧಿಯಂತೆ ಕಾಣುವ ಈ ಹಣ್ಣು, ಸೀತಾಫಲದ ಜಾತಿಗೇ ಸೇರಿದ್ದು. ರುಚಿ ಮತ್ತು ಘಮದಲ್ಲಿ ಎಲ್ಲರಿಗೂ ಇಷ್ಟವಾಗುವಂಥದ್ದು.
ಜೀರ್ಣಕಾರಿ
ಈ ಹಣ್ಣಿನಲ್ಲಿ ಸಮೃದ್ಧವಾಗಿರುವ ನಾರಿನಂಶವು ಹೊಟ್ಟೆಯ ಆರೋಗ್ಯವನ್ನು ಸುಧಾರಿಸುತ್ತದೆ. ಜೀರ್ಣಾಂಗಗಳಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಗಳನ್ನು ಹೆಚ್ಚಿಸಿ, ಸಮತೋಲನ ಕಾಪಾಡಲು ನೆರವಾಗುತ್ತದೆ. ಇದರಿಂದ ಅಜೀರ್ಣ, ಹೊಟ್ಟೆಯುಬ್ಬರದಂಥ ತೊಂದರೆಗಳು ದೂರಾಗಿ, ಮಲಬದ್ಧತೆ ನಿವಾರಣೆಯಾಗುತ್ತದೆ.
ಪ್ರತಿರೋಧಕತೆ ಹೆಚ್ಚಳ
ಈ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದರಿಂದ ಸೋಂಕುಗಳೊಂದಿಗೆ ಹೋರಾಡುವ ಸಾಮರ್ಥ್ಯ ಹೆಚ್ಚುತ್ತದೆ.ಈ ಫಲದಲ್ಲಿರುವ ಸಿ ಜೀವಸತ್ವದ ಸಾಂದ್ರತೆ ಉತೃಷ್ಟ ಮಟ್ಟದ್ದಾಗಿದ್ದು, ಮಾರಕ ರೋಗಗಳೊಂದಿಗೆ ಹೊರಾಡುವ ಶಕ್ತಿಯನ್ನೂ ಇದು ದೇಹಕ್ಕೆ ನೀಡುತ್ತದೆ. ಇದರಿಂದ ದೇಹದ ಸ್ವಾಸ್ಥ್ಯ ಸಾಧಿಸುವುದಕ್ಕೆ ಸಾಧ್ಯ.
ಉತ್ಕರ್ಷಣ ನಿರೋಧಕಗಳು
ದೇಹದಲ್ಲಿ ಉರಿಯೂತ ಮತ್ತು ಮುಕ್ತ ಕಣಗಳ ಹಾವಳಿ ಹೆಚ್ಚಾದರೆ ಆಗುವಂಥ ತೊಂದರೆಗಳು ಒಂದೆರಡೇ ಅಲ್ಲ. ಕೀಲುನೋವಿನಿಂದ ಹಿಡಿದು ಕ್ಯಾನ್ಸರ್‌ವರೆಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ಹಾಗಾಗಿ ಉರಿಯೂತ ಶಮನ ಮಾಡುವ ಮತ್ತು ಮುಕ್ತ ಕಣಗಳನ್ನು ನಿರ್ಬಂಧಿಸುವಂಥ ಉತ್ಕರ್ಷಣ ನಿರೋಧಕಗಳನ್ನು ನಮ್ಮ ದೇಹಕ್ಕೆ ಒದಗಿಸಬೇಕಾಗುತ್ತದೆ. ಇದು ಕ್ಯಾನ್ಸರ್ ಪೀಡಿತರಿಗೆ ಉತ್ತಮ ಆರೈಕೆ ಒದಗಿಸುತ್ತದೆ ಎನ್ನುತ್ತವೆ ಅಧ್ಯಯನಗಳು.
ಚರ್ಮ, ಕೂದಲು
ಇದರಲ್ಲಿರುವ ವಿಟಮಿನ್ ಬಿ ಮತ್ತು ಎ ಅಂಶಗಳು ಕೂದಲು ಮತ್ತು ತ್ವಚೆಯ ಆರೋಗ್ಯವರ್ಧನೆಗೆ ಪೂರಕವಾಗಿ ವರ್ತಿಸುತ್ತವೆ. ಮೊಡವೆ, ಸುಕ್ಕು ಚರ್ಮದ ತೊಂದರೆಗಳಿಂದ ಹೈರಾಣಾಗಿದ್ದರೆ ರಾಮಫಲ ಸೇವನೆ ಫಲ ನೀಡೀತು. ಹಾಗೆಯೆ, ಉದುರುತ್ತಿರುವ ಕೂದಲು, ಒಣ ಮತ್ತು ಒರಟಾದ ಕೂದಲುಗಳಿದ್ದರೆ ಅದಕ್ಕೂ ಈ ಫಲದ ಸೇವನೆ ಉತ್ತರವಾದೀತು.
ಮಧುಮೇಹಿಗಳಿಗೆ ಸೂಕ್ತ
ರಕ್ತದಲ್ಲಿ ಸಕ್ಕರೆಯಂಶ ಧಿಡೀರ್ ಏರದಂತೆ ನಿರ್ವಹಿಸುವ ಗುಣ ರಾಮಫಲಕ್ಕಿದೆ. ರುಚಿಯಲ್ಲಿ ಸೀತಾಫಲಕ್ಕಿಂತ ಕೊಂಚಕಡಿಮೆ ಸಿಹಿ ಇರುವ ಇದನ್ನು ಮಧುಮೇಹಿಗಳೂ ಸೇವಿಸಬಹುದು. ಇದರಲ್ಲಿರುವ ನಾರು ತೂಕ ಇಳಿಕೆಗೂ ನೆರವಾಗುತ್ತದೆ. ಉತ್ಕರ್ಷಣ ನಿರೋಧಕಗಳು ಮಧುಮೇಹ ಸಂಬಂಧಿ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ನೆರವಾಗುತ್ತವೆ.
ಖನಿಜಗಳು
ಇದರಲ್ಲಿರುವ ತರಹೇವಾರಿ ಖನಿಜಗಳು ದೇಹಾರೋಗ್ಯ ಹೆಚ್ಚಿಸಿಕೊಳ್ಳಲು ನೆರವಾಗುತ್ತವೆ. ಕಬ್ಬಿಣದಂಶವು ಹಿಮೋಗ್ಲೋಬಿನ್ ಉತ್ಲಾದಿಸಿ, ರಕ್ತಹೀನತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ವಿಟಮಿನ್ ಬಿ೬ ಸತ್ವವು ಮೂತ್ರಪಿಂಡದ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತದೆ. ಉತ್ತಮ ಕೊಬ್ಬು ಹೃದಯವನ್ನು ಸ್ವಸ್ಥವಾಗಿ ಇರಿಸುತ್ತದೆ.
ಇದನ್ನೂ ಓದಿ: Winter Health Tips: ಚಳಿಗಾಲದಲ್ಲಿ ದೇಹದಂತೆಯೇ ಮೆದುಳೂ ಬೆಚ್ಚಗಿರಲಿ