Site icon Vistara News

Alzheimer’s disease | ಮಹಿಳೆಯರಲ್ಲೇ ಮರೆವಿನ ರೋಗ ಹೆಚ್ಚೇಕೆ? ತಜ್ಞರಲ್ಲಿದೆ ಸುಳಿವು

alzheimer's disease

ಇತ್ತೀಚಿನ ವರ್ಷಗಳಲ್ಲಿ ವಿಶ್ವದೆಲ್ಲೆಡೆ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವ, ಮರೆವಿನ ರೋಗ ಎಂದೇ ಕರೆಯಲ್ಪಡುವ ಅಲ್‌ಜೈಮರ್ಸ್‌, ಮಹಿಳೆಯರನ್ನೇ ಏಕೆ ಹೆಚ್ಚು ಗುರಿಯಾಗಿಸಿಕೊಳ್ಳುತ್ತದೆ ಎಂಬ ಬಗ್ಗೆ ಸಂಶೋಧಕರು ಕೆಲವು ಸುಳಿವುಗಳನ್ನು ಪತ್ತೆ ಹಚ್ಚಿದ್ದಾರೆ.

“ಈ ರೋಗ ಮಹಿಳೆಯರಲ್ಲಿ ಏಕೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂಬ ಬಗ್ಗೆ ಮೆದುಳಿನಲ್ಲಿನ ಕೆಲವು ರಾಸಾಯನಿಕ ಬದಲಾವಣೆಗಳು ನಮಗೆ ಭಾಗಶಃ ಸುಳಿವು ನೀಡಿವೆ” ಎಂದು ಈ ಅಧ್ಯಯನದಲ್ಲಿ ಭಾಗವಹಿಸಿದ್ದ, ಕ್ಯಾಲಿಫೋರ್ನಿಯಾದ ಲಾವೊಲ್ಲ ವಿಶ್ವವಿದ್ಯಾಲಯದ ಸಂಶೋಧಕ ಸ್ಟುವರ್ಟ್‌ ಲಿಪ್ಟನ್‌ ಹೇಳಿದ್ದಾರೆ. ಈ ರೋಗ ಆರಂಭವಾದ ಒಂದು ದಶಕದೊಳಗೆ ರೋಗಿಗಳು ಸಾವನ್ನಪ್ಪುತ್ತಾರೆ. ಇದೀಗ ಅಮೆರಿಕ ಒಂದರಲ್ಲೇ ೬೦ ಲಕ್ಷ ಮಂದಿ ಈ ರೋಗದಿಂದ ನರಳುತ್ತಿದ್ದಾರೆ. ಈ ರೋಗ ಗುಣಪಡಿಸುವಂಥ ಯಾವ ಮದ್ದೂ ಇಲ್ಲ. ಮಾತ್ರವಲ್ಲ, ಇದರ ಲಕ್ಷಣಗಳು ಮುಂದುವರಿಯದಂತೆ ತಡೆಯುವ ವಿಧಾನಗಳ ಬಗ್ಗೆಯೂ ವೈದ್ಯಲೋಕದಲ್ಲಿ ಒಮ್ಮತದ ನಿರ್ಣಯವಿಲ್ಲ. ಹಾಗಾಗಿಯೇ ೨/೩ರಷ್ಟು ರೋಗಿಗಳು ಮಹಿಳೆಯರೇ ಯಾಕಾಗಿರುತ್ತಾರೆ ಎಂಬ ಬಗ್ಗೆ ವಿಜ್ಞಾನಿಗಳಲ್ಲಿ ಸಮರ್ಪಕ ಉತ್ತರವಿಲ್ಲ.

ಪ್ರೊಟೀನ್‌- ಎಸ್‌- ನೈಟ್ರೋಸೈಲೇಷನ್‌ (ಸಿ-೩ ಕಾಂಪ್ಲಿಮೆಂಟ್) ಎಂಬ ರಾಸಾಯನಿಕ ಪ್ರಕ್ರಿಯೆಯ ಬಗ್ಗೆ ಸಂಶೋಧಕರು ಹೆಚ್ಚಿನ ಕುತೂಹಲ ತಾಳಿದ್ದರು. ನೈಟ್ರಿಕ್‌ ಆಕ್ಸೈಡ್ ಮತ್ತು ಸಲ್ಫರ್‌ ಕಣಗಳು ಒಂದಕ್ಕೊಂದು ಬಿಗಿಯಾಗಿ ಬೆಸೆದು ಉಂಟುಮಾಡುವ ಎಸ್‌ಎನ್‌ಒ ಪ್ರೊಟೀನ್‌ಗಳ ಬಗ್ಗೆ ಅವರ ಸಂಶೋಧನೆ ನಡೆದಿತ್ತು. ಈ ಎಸ್‌ಎನ್‌ಒ ಪ್ರೊಟೀನ್‌ಗಳೇ ಮೆದುಳಿನಲ್ಲಿ ಸರ್ವನಾಶ ಮಾಡುವಂಥ ರೋಗಗಳನ್ನು ಹುಟ್ಟುಹಾಕುತ್ತವೆ ಎಂಬುದು ಅವರ ಅನುಮಾನವಾಗಿತ್ತು. ಇದಕ್ಕಾಗಿ ಮರಣೋತ್ತರ ಪರೀಕ್ಷೆಯಾದ ೪೦ ಮಾನವ ಮೆದುಳುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಅರ್ಧದಷ್ಟು ಮಂದಿ ಅಲ್‌ಜೈಮರ್ಸ್‌ನಿಂದ ಮೃತಪಟ್ಟರೆ, ಉಳಿದರ್ಧ ಮಂದಿ ಅನ್ಯಕಾರಣಗಳಿಂದ ಅಸುನೀಗಿದ್ದರು. ಎರಡೂ ಬದಿಗಳಲ್ಲಿ ಮಹಿಳೆಯರ ಮತ್ತು ಪುರುಷರ ಮೆದುಳುಗಳಿದ್ದವು.

ಇದನ್ನೂ ಓದಿ | World Diabetes Day | ಮಧುಮೇಹ ನಿಯಂತ್ರಣಕ್ಕೆ ಇಲ್ಲಿವೆ ಸರಳ ಉಪಾಯಗಳು

ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುವ ಕಾಂಪ್ಲಿಮೆಂಟ್‌ ವ್ಯವಸ್ಥೆ ಲಾಗಾಯ್ತಿನಿಂದಲೂ ಮಾನವ ದೇಹದಲ್ಲಿ ಕೆಲಸ ಮಾಡುತ್ತಿದೆ. ಇಂಥ ಕಾಂಪ್ಲಿಮೆಂಟ್‌ ಪ್ರೊಟೀನ್‌ಗಳು ಅಲ್‌ಜೈಮರ್ಸ್‌ ಇರುವ ಮೆದುಳುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ಉರಿಯೂತವನ್ನು ಹೆಚ್ಚಿಸುತ್ತಿರುತ್ತವೆ ಎಂಬುದನ್ನು ವಿಜ್ಞಾನಿಗಳು ಈಗಾಗಲೇ ಪತ್ತೆಮಾಡಿದ್ದರು. ಇದೇ ಪ್ರೊಟೀನ್‌ಗಳು ಮೆದುಳಿನ ರೋಗನಿರೋಧಕ ಕೋಶಗಳನ್ನು ಪ್ರಚೋದಿಸಿ, ನ್ಯೂರಾನ್‌ಗಳು ಒಂದಕ್ಕೊಂದು ಸಂದೇಶ ಕಳುಹಿಸುವ ಲಿಂಕಿಂಗ್‌ ವ್ಯವಸ್ಥೆಯೇ ನಾಶವಾಗುವಂತೆ ಮಾಡುತ್ತವೆ. ಇದರಿಂದಾಗಿ ಮೆದುಳಿನ ಕಾರ್ಯಕ್ಷಮತೆ ಕ್ರಮೇಣ ನಶಿಸಿ, ವ್ಯಕ್ತಿ ಪರಾವಲಂಬಿಯಾಗಿ, ಕಡೆಗಂತೂ ಅಸುನೀಗುವಂತಾಗುತ್ತದೆ. ಇಂಥ ರಾಸಾಯನಿಕ ಚೋದಕಗಳು ಹೆಚ್ಚಿದ್ದಂತೆ ಮೆದುಳಿನ ಕ್ಷಮತೆ ಕ್ಷಿಪ್ರವಾಗಿ ಕುಸಿಯುತ್ತದೆ. ಹಾಗಾಗಿ ವಯಸ್ಸು ಹೆಚ್ಚುತ್ತಿದ್ದಂತೆ ಪುರುಷರಿಗಿಂತ ಮಹಿಳೆಯರೇ ಏಕೆ ಅಲ್‌ಜೈಮರ್ಸ್‌ ರೋಗಕ್ಕೆ ಹೆಚ್ಚು ತುತ್ತಾಗುತ್ತಿದ್ದಾರೆ ಎಂಬ ಬಗ್ಗೆ ಈ ಸಂಶೋಧನೆ ದಿಕ್ಸೂಚಿಯಾಗಬಹುದು ಎಂಬುದು ಸಂಶೋಧಕರ ಅಭಿಮತ

ಇದನ್ನೂ ಓದಿ | Health Tips For Diabetes | ಮಧುಮೇಹ ಬಾರದಿರಲು ಈ ಆರು ಆಹಾರಗಳನ್ನು ಬಿಟ್ಟುಬಿಡಿ!

Exit mobile version