Site icon Vistara News

Rock Salt Or Powder Salt: ಬೆಳ್ಳನೆಯ ಪುಡಿ ಉಪ್ಪು ಆರೋಗ್ಯಕರವೇ ಅಥವಾ ಕಲ್ಲುಪ್ಪೇ?

Rock Salt Or Powder Salt

ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂಬ ಹಳೆಯ ಗಾದೆಯಿದೆ. ಉಪ್ಪನ್ನು ಹಾಗೆಯೇ ತಿನ್ನಲು ಸಾಧ್ಯವಿಲ್ಲವಾದರೂ, ಉಪ್ಪು ಹಾಕದ ಅಡುಗೆಗೆ ರುಚಿಯೇ ಇಲ್ಲ ಎಂಬುದು ಸತ್ಯವೇ. ನಮ್ಮ ನಿತ್ಯ ಜೀವನದಲ್ಲಿ ಉಪ್ಪು ನಿತ್ಯವೂ ಯಾವುದಾದರೊಂದು ಬಗೆಯಲ್ಲಿ ನಾವು ಬಳಸುತ್ತಲೇ ಇರುತ್ತೇವೆ. ಅಡುಗೆಯ ಹೊರತಾಗಿಯೂ ಉಪ್ಪಿನ ಉಪಯೋಗ ಬಹಳ. ಆದರೆ, ಉಪ್ಪಿನ ಬಳಕೆಯ ವಿಚಾರದಲ್ಲೂ ನಮಗೆ ಗೊಂದಲಗಳಾಗುವುದುಂಟು. ಮುಖ್ಯವಾಗಿ ಬಿಳಿಯಾದ ಸಂಸ್ಕರಿಸಿದ ಪುಡಿ ಉಪ್ಪನ್ನು ಸುಲಭವಾಗಿ ಕಡಿಮೆ ದರದಲ್ಲಿ ಸಿಗುವ ಕಾರಣ ತಂದು ಬಳಸುತ್ತೇವೆ ನಿಜವಾದರೂ, ಈ ಸಂಸ್ಕರಿಸಿದ ಪುಡಿ ಉಪ್ಪು ನಿಜವಾಗಿಯೂ ಒಳ್ಳೆಯದೇ ಎಂಬ ಬಗ್ಗೆ ಹಲವು ಸಮಯಗಳಿಂದ ಗೊಂದಲಗಳು ಇದ್ದೇ ಇವೆ. ಸೈಂದವ ಲವಣ ಅಥವಾ ಕಲ್ಲುಪ್ಪಿಗೆ ಹೋಲಿಸಿದರೆ ಪುಡಿ ಉಪ್ಪು ಆರೋಗ್ಯಕರವಲ್ಲ ಎಂಬ ವಾದಗಳೂ ಇವೆ. ಬನ್ನಿ, ಈ ಮಾತಿನ ಸತ್ಯಾಸತ್ಯತೆಯ (Rock Salt Or Powder Salt) ಪರಾಮರ್ಶೆ ನಡೆಸೋಣ. ಇಲ್ಲಿ ಎಲ್ಲಕ್ಕಿಂತ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ರಿಪೈನ್ಡ್‌ ಅಥವಾ ಸಂಸ್ಕರಿಸಿ ಬಿಳಿಯಾದ ಪುಡಿ ಉಪ್ಪು ಕೂಡಾ ನೈಸರ್ಗಿಕ ಮೂಲಗಳಿಂದಲೇ ತಯಾರಿಸುವ ಉಪ್ಪು. ಬೇರೆ ಉಪ್ಪುಗಳಿಗೆ ಹೋಲಿಸಿದರೆ, ಇದನ್ನು ಸಮುದ್ರದ ನೀರಿನಿಂದಲೇ ತಯಾರಿಸಿದ್ದರೂ ಇದನ್ನು ಸಂಸ್ಕರಿಸಿ, ಅದರಲ್ಲಿರಲ್ಲಿರುವ ಕೊಳೆಯನ್ನು ಬೇರ್ಪಡಿಸಿ ಅದಕ್ಕೆ ಅಯೋಡಿನ್‌ ಅನ್ನು ಸೇರಿಸಿದ ಮೇಲೆ ಪ್ಯಾಕೆಟ್ಟುಗಳಲ್ಲಿ ಪುಡಿಯಾದ ರೂಪದಲ್ಲಿ ಬಿಡಲಾಗುತ್ತದೆ. ಗಾಯಟೆರ್‌ ಹಾಗೂ ಹೈಪೋಥೈರಾಯ್ಡಿಸಮ್‌ಗಳು ಬರದಂತೆ ಉಪ್ಪಿಗೆ ಅಯೋಡಿನ್‌ ಅನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಲಾಗುತ್ತದೆ. ಹಾಗಾಗಿ ನೈಸರ್ಗಿಕ ಮೂಲದಿಂದಲೇ ತಯಾರಾಗುವ ಪುಡಿ ಉಪ್ಪು ಆರೋಗ್ಯಕರವಲ್ಲ ಎಂಬುದು ನಿಜವಲ್ಲ ಎಂಬುದನ್ನು ಮೊದಲು ತಿಳಿಯಬೇಕು. ಕಾರ್ಖಾನೆಗಳಲ್ಲಿ ಉಪ್ಪನ್ನು ಪ್ಯಾಕೆಟ್ಟುಗಳಲ್ಲಿ ತುಂಬಿಸಬೇಕಾದರೆ ಅದಕ್ಕೆ ಕೆಲವು ಆಂಟಿ ಕೇಕಿಂಗ್‌ ಏಜೆಂಟುಗಳನ್ನು ಸೇರಿಸಲಾಗುತ್ತದೆ. ಈ ಆಂಟಿ ಕೇಕಿಂಗ್‌ ಏಜೆಂಟುಗಳು ಉಪ್ಪು ಗಂಟಾಗುವುದನ್ನು ತಡೆದು ಉದುರುದುರಾಗಿ ಇರುವಂತೆ ಮಾಡುತ್ತದೆ.

ಸೋಡಿಯಂ ಇದೆಯೆ?

ಸಂಸ್ಕರಿಸಿದ ಉಪ್ಪಿನಲ್ಲಿಯೂ ಸೋಡಿಯಂ ಇದೆ. ಸೈಂದವ ಲವಣ ಅಥವಾ ಕಲ್ಲುಪ್ಪಿನಲ್ಲೂ ಸೋಡಿಯಂ ಇದೆ. ಹಾಗಾಗಿ ಸೋಡಿಯಂ ಬಗ್ಗೆ ಚಿಂತೆ ಮಾಡುವವರಿಗೆ ಚಿಂತೆಗೆ ಇಲ್ಲಿ ಅವಕಾಶವಿಲ್ಲ. ಎರಡರಲ್ಲೂ ಸೋಡಿಯಂ ಇರುವುದರಿಂದ ಇವೆರಡೂ ಅತಿಯಾದಲ್ಲಿ ಹೈಪರ್‌ಟೆನ್ಶನ್‌ನ ಅಪಾಯ ಇದ್ದೇ ಇದೆ. ಹಾಗಾಗಿ, ಉಪ್ಪು ಯಾವುದೇ ಆದರೂ ಅತಿಯಾಗಬಾರದು. ಕಡಿಮೆಯೇ ತಿನ್ನುವುದು ಒಳ್ಳೆಯದು.
ಹಾಗೆ ನೋಡಿದರೆ, ಪುಡಿ ಉಪ್ಪಿನಲ್ಲಿ ಸಂಸ್ಕರಿಸುವ ಸಂದರ್ಭದಲ್ಲಿ ಬೆರಕೆಯಾದ ಬೇರೆ ಅಂಶಗಳು ಹಾಗೂ ಅದನ್ನು ಪುಡಿಪುಡಿಯಾಗಿ ಯಾವಾಗಲೂ ಇರಿಸಬಲ್ಲ ಆಂಟಿ ಕೇಕಿಂಗ್‌ ಏಜೆಂಟ್‌ಗಳು ಇತ್ಯಾದಿಗಳಿಂದಾಗಿ ಅದರಲ್ಲಿರುವ ಖನಿಜಾಂಶಗಳು ನಷ್ಟವಾಗಿರುತ್ತವೆ. ಕಲ್ಲುಪ್ಪಿನಲ್ಲಿ, ನೈಸರ್ಗಿಕವಾಗಿ ಉಪ್ಪಿನಲ್ಲಿ ಇರಬಹುದಾದ ಎಲ್ಲ ಬಗೆಯ ಖನಿಜಾಂಶಗಳು ಅದರ ನೈಸರ್ಗಿಕ ರೂಪದಲ್ಲಿಯೇ ಇರುವುದರಿಂದ ಆರೋಗ್ಯದ ವಿಚಾರದಲ್ಲಿ ಹೆಚ್ಚು ಒಳ್ಳೆಯದು ಎಂದು ಹೇಳಬಹುದು.

ಕಲ್ಲುಪ್ಪು ಪರಿಣಾಮಕಾರಿ

ಸಾಮಾನ್ಯ ಉಪ್ಪಿನಲ್ಲಿ ಶೇ.97ರಷ್ಟು ಸೋಡಿಯಂ ಕ್ಲೋರೈಡ್‌ ಇದ್ದು, ಉಳಿದ ಶೇ.3ರಷ್ಟು ವಸ್ತುಗಳು ಸಂಸ್ಕರಣದ ಸಂದರ್ಭದಲ್ಲಿ ಸೇರಿಸಲ್ಪಡುತ್ತದೆ. ಮುಖ್ಯವಾಗಿ ಅಯೋಡಿನ್‌ ಈ ಸಂದರ್ಭ ಸೇರಿಸಲಾಗುತ್ತದೆ. ಆದರೆ ಕಲ್ಲುಪ್ಪಿನಲ್ಲಿ ಅಂದರೆ, ಭೂಮಿಯಡಿಯಿಂದ ದೊರೆಯುವ ಉಪ್ಪಿನಲ್ಲಿ ಶೇ.85ರಷ್ಟು ಸೋಡಿಯಂ ಕ್ಲೋರೈಡ್‌ ಇದ್ದು ಉಳಿದ ಶೇ.15ರಷ್ಟು ಅಂಶ ಕಬ್ಬಿಣಾಂಶ, ತಾಮ್ರ, ಝಿಂಕ್‌, ಅಯೋಡಿನ್‌, ಮ್ಯಾಂಗನೀಸ್‌, ಮೆಗ್ನೀಶಿಯಂ, ಸೆಲೆನಿಯಂ, ಅಯೋಡಿನ್‌ ಇತ್ಯಾದಿಗಳೂ ಇರುತ್ತವೆ. ಇದಕ್ಕೆ ಪ್ರತ್ಯೇಕವಾಗಿ ಅಯೋಡಿನ್‌ ಸೇರಿಸಲಾಗಿರುವುದಿಲ್ಲ. ಆದರೂ, ನೀರನ್ನು ಶುದ್ಧಿಕರಿಸಿ ಕುಡಿಯುವ ಅಭ್ಯಾಸ ಇತ್ತೀಚೆಗೆ ಹೆಚ್ಚಿರುವುದರಿಂದ, ನೀರಿನ ಮೂಲಕ ಖನಿಜಾಂಶಗಳು ಮನುಷ್ಯನ ದೇಹಕ್ಕೆ ಹೋಗುವುದಿಲ್ಲ. ಹೀಗಾಗಿ ಕಲ್ಲುಪ್ಪನ್ನು ಸೇವಿಸುವ ಪ್ರಮಾಣವೂ ಇತ್ತೀಚೆಗೆ ಹೆಚ್ಚಾಗುತ್ತಿದೆ. ಆ ಮೂಲಕ ಖನಿಜಾಂಶಗಳು ದೇಹಕ್ಕೆ ಸೇರುವ ಬಗೆ ಇದು. ಹಾಗಾಗಿ, ಸಾಮಾನ್ಯ ಪುಡಿ ಉಪ್ಪಿನಿಂದ ಕಲ್ಲುಪ್ಪು ಅನೇಕ ಬಗೆಯಲ್ಲಿ ಪರಿಣಾಮಕಾರಿ ಹಾಗೂ ಅರೋಗ್ಯಕರ ಎಂಬುದು ನಿಜ.

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

Exit mobile version