Site icon Vistara News

Sankranti 2023 | ಸಂಕ್ರಾಂತಿಯಲ್ಲಿ ಎಳ್ಳನ್ನೇಕೆ ತಿನ್ನಬೇಕು?

Sankranti 2023

ಮಕರ ಸಂಕ್ರಾಂತಿ (Sankranti 2023)  ಸಮೀಪಿಸುತ್ತಿದೆ. ಚಳಿಗಾಲ ಕಳೆದು ಸುಗ್ಗಿಯನ್ನು ಸಂಕೇತಿಸುವ ಈ ಹಬ್ಬವನ್ನು ದೇಶದ ವಿವಿಧೆಡೆಗಳಲ್ಲಿ ಆಚರಿಸಲಾಗುತ್ತದೆ. ಈ ದಿನ ಸಿಹಿ ಮತ್ತು ಖಾರ ಪೊಂಗಲ್‌, ಹುಗ್ಗಿ- ಹುಣಸೆಹಣ್ಣಿನ ಗೊಜ್ಜು- ಇಂಥವೆಲ್ಲಾ ಮಾಡುವುದು ಇದ್ದಿದ್ದೇ. ಜೊತೆಗೆ ನಾವು ಕಡ್ಡಾಯವಾಗಿ ತಿನ್ನುವ ಇನ್ನೊಂದು ಖಾದ್ಯವೆಂದರೆ ಎಳ್ಳು-ಬೆಲ್ಲ. ಈ ದಿನಗಳಲ್ಲಿ ಎಳ್ಳನ್ನು ಏಕೆ ತಿನ್ನಬೇಕು?

ಹಲವಾರು ಉತ್ತಮ ಗುಣಗಳ ಖನಿ ಈ ಎಳ್ಳು. ಪ್ರೊಟೀನ್‌, ಕಬ್ಬಿಣ, ಮೆಗ್ನೀಶಿಯಂ, ಸತು, ಕ್ಯಾಲ್ಶಿಯಂ, ಸೆಲೆನಿಯಂ ಮುಂತಾದ ಬಹಳಷ್ಟು ಉತ್ಕೃಷ್ಟ ಸತ್ವಗಳನ್ನು ಹೊಂದಿರುವ ಎಳ್ಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎಳ್ಳನ್ನು ಬೆಲ್ಲದೊಂದಿಗೆ ತಿನ್ನುವುದರಿಂದ ದೇಹದಲ್ಲಿ ಅಗತ್ಯ ಉಷ್ಣತೆಯನ್ನು ಕಾಪಾಡಿಕೊಳ್ಳುವುದು ಅನುಕೂಲ. ಹಾಗಾಗಿಯೇ ಚಳಿಗಾಲದಲ್ಲಿ ಎಳ್ಳು-ಬೆಲ್ಲದ ಮಿಶ್ರಣವನ್ನು ಅಗತ್ಯವಾಗಿ ತಿನ್ನಬೇಕು. ಇದಲ್ಲದೆ, ಶರೀರದ ಚಯಾಪಚಯವನ್ನು ಸಮತೋಲನದಲ್ಲಿ ಇಟ್ಟು, ಪಚನ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಎಳ್ಳಿಗಿದೆ. ಜೊತೆಗೆ, ಇದರಲ್ಲಿರುವ ಉತ್ತಮ ಕೊಬ್ಬಿನಂಶದಿಂದ ಕೊಲೆಸ್ಟ್ರಾಲ್‌ ಕಡಿಮೆ ಮಾಡಿ, ಹೃದ್ರೋಗ ತಡೆಗಟ್ಟಿ, ರಕ್ತದಲ್ಲಿನ ಸಕ್ಕರೆ ಅಂಶವನ್ನೂ ನಿಯಂತ್ರಿಸಲು ಅನುಕೂಲವಾಗುತ್ತದೆ.

ಹೃದಯದ ಮಿತ್ರ
ಹೃದಯದ ಮಾಂಸಖಂಡಗಳನ್ನು ಬಲಗೊಳಿಸುವ ಸಾಮರ್ಥ್ಯ ಎಳ್ಳಿಗಿದೆ. ಅಷ್ಟೇ ಅಲ್ಲ, ಇದರಲ್ಲಿರುವ ಬಿ೧ ಜೀವಸತ್ವದಿಂದ ರಕ್ತ ಪರಿಚಲನೆ ಸರಾಗವಾಗುತ್ತದೆ. ಮೆಗ್ನೀಶಿಯಂ ಸತ್ವದಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳಿಗೆ ದೇಹದಲ್ಲಿ ಉರಿಯೂತ ಶಮನ ಮಾಡುವ ಗುಣವಿರುವುದರಿಂದ ಹೃದಯದ ಒಟ್ಟಾರೆ ಆರೋಗ್ಯಕ್ಕೆ ಬಹಳಷ್ಟು ಅನುಕೂಲ ಕಲ್ಪಿಸುತ್ತದೆ.

ಮಧುಮೇಹಿಗಳಿಗೂ ಉತ್ತಮ
ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿರ್ವಹಿಸಲು ಮತ್ತು ಇನ್ಸುಲಿನ್‌ ಪ್ರಮಾಣ ಸ್ಥಿರವಾಗಿಡಲು ಎಳ್ಳು ಉತ್ತಮ ಆಯ್ಕೆ. ಇದರಲ್ಲಿ ನಾರಿನಂಶ ವಿಫುಲವಾಗಿದ್ದು, ದೇಹದ ತೂಕವನ್ನು ಕಾಯ್ದುಕೊಳ್ಳಲೂ ನೆರವಾಗುತ್ತದೆ. ಮಾತ್ರವಲ್ಲ, ದೀರ್ಘ ಸಮಯದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುವ ಇದು ಹಸಿವು ನಿಯಂತ್ರಿಸಲು ಒಳ್ಳೆಯ ಉಪಾಯ.

ಜೀರ್ಣಕಾರಿ
ನಾರಿನಂಶ ಹೆಚ್ಚಿರುವ ಈ ಆಹಾರ ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಿಂದ ಮಲಬದ್ಧತೆಯನ್ನೂ ದೂರ ಮಾಡಬಹುದು. ಕರುಳನ್ನು ರಕ್ಷಿಸುವ ತಿಲದಿಂದ ಜಠರ ರೋಗಗಳೂ ಪರಿಹಾರವಾಗುತ್ತವೆ. ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ವೃದ್ಧಿಸುವಂತಾಗುತ್ತದೆ.

ಮೂಳೆಗಳ ಬಲವರ್ಧನೆ
ಪ್ರೊಟೀನ್‌, ಮೆಗ್ನೀಶಿಯಂ ಮತ್ತು ಕ್ಯಾಲ್ಶಿಯಂಗಳ ಭಂಡಾರವಿದು. ಇವು ಮೂಳೆಗಳನ್ನು ಆರೋಗ್ಯಕರ ಮತ್ತು ಸಶಕ್ತವಾಗಿ ಇರಿಸುತ್ತವೆ. ಎಲುಬುಗಳ ಶಕ್ತಿ ವರ್ಧನೆಗೆ ಮಾತ್ರವೇ ಅಲ್ಲ, ಹಲವಾರು ಹಾರ್ಮೋನುಗಳ ಸರಿಯಾಗಿ ಸ್ರವಿಸುವಂತೆ ಮಾಡುವುದಕ್ಕೂ ದೇಹಕ್ಕೆ ಕ್ಯಾಲ್ಶಿಯಂ ಅಗತ್ಯವಿದೆ.

ಇದನ್ನೂ ಓದಿ| Healthy Food | ನಾಲಿಗೆಯ ಮಾತು ಕೇಳಬೇಡಿ, ದೇಹಕ್ಕೆ ಕಲಿಸಿ ಆರೋಗ್ಯದ ಪಾಠ!

Exit mobile version