ಕೊಲೆಸ್ಟ್ರಾಲ್ ಎನ್ನುತ್ತಿದ್ದಂತೆ ಸಾಮಾನ್ಯವಾಗಿ ಎಲ್ಲರೂ ಹೌಹಾರುತ್ತೇವೆ. ಆದರೆ ನಮ್ಮ ಶರೀರಕ್ಕೆ ಅದೂ ಬೇಕು, ಮಿತವಾಗಿ. ಶರೀರದಲ್ಲಿನ ಚೋದಕಗಳು ಮತ್ತು ಜೀರ್ಣಾಂಗಗಳಲ್ಲಿನ ಕಿಣ್ವಗಳ ಉತ್ಪಾದನೆಗೆ ನಮಗೆ ಕೊಲೆಸ್ಟ್ರಾಲ್ ಅಗತ್ಯವಿದೆ. ರಕ್ತದಲ್ಲಿನ ಈ ಅಂಟಾದ ವಸ್ತುವು ಮಿತಿ ಮೀರಿದಾಗ ಮಾತ್ರ ಆರೋಗ್ಯಕ್ಕೆ ಆಪತ್ತು ತರುತ್ತದೆ. ಅಂದರೆ ರಕ್ತದ ಸರಾಗ ಪರಿಚಲನೆಯನ್ನು ಏರುಪೇರು ಮಾಡಿ, ರಕ್ತನಾಳಗಳಲ್ಲಿ ಜಮೆಯಾಗಿ, ಹೃದಯಕ್ಕೆ ರಕ್ತ ಪೂರೈಕೆಯಾಗುವುದನ್ನು ತಡೆಯುತ್ತದೆ. ಪರಿಣಾಮವೇ ಹೃದಯಾಘಾತ. ಹಾಗಾಗಿಯೇ ಕೊಲೆಸ್ಟ್ರಾಲ್ ಪ್ರಮಾಣವನ್ನು ಮಿತಿಯಲ್ಲಿ ಇರಿಸಿಕೊಳ್ಳಬೇಕು ಎಂಬುದು ಮಹತ್ವದ್ದು. ಚಳಿಗಾಲದಲ್ಲಿನ ಹಲವು ಹಣ್ಣುಗಳು ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ. ಅಂದರೆ ತಿನ್ನುವ ಹಣ್ಣಿನಲ್ಲಿ ನಾರಿನ ಪ್ರಮಾಣ ಹೆಚ್ಚಿದ್ದರೆ ಕೊಲೆಸ್ಟ್ರಾಲ್ ಕಡಿತಕ್ಕೆ ಅನುಕೂಲವಾಗುತ್ತದೆ. ಅದರಲ್ಲೂ ಕರಗುವಂಥ ನಾರುಗಳು ಈ ವಿಷಯದಲ್ಲಿ ಹೆಚ್ಚಿನ ಉಪಕಾರ ಮಾಡುತ್ತವೆ. ಈ ಋತುಮಾನದಲ್ಲಿ ದೊರೆಯುವ ಯಾವ ಹಣ್ಣುಗಳಲ್ಲಿ ಈ ಗುಣಗಳು ಇವೆ ಎನ್ನುವುದನ್ನು ಗಮನಿಸೋಣ.
ಕಿತ್ತಳೆ ಹಣ್ಣುಗಳು
ಒಮ್ಮೆ ಮಾರುಕಟ್ಟೆಯಲ್ಲಿ ಕಣ್ಣಾಡಿಸಿದರೆ, ಘಮಘಮಿಸುವ ಕಿತ್ತಳೆ ಹಣ್ಣುಗಳು ಗಮನ ಸೆಳೆಯುತ್ತವೆ. ಅದು ಹುಳಿಯಿರಲಿ, ಸಿಹಿಯಿರಲಿ ಸತ್ವಗಳಿಗೆ ಮೋಸವಿಲ್ಲ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿದ್ದರೂ, ಕೊಲೆಸ್ಟ್ರಾಲ್ ನಿರ್ವಹಣೆಗೂ ಇದು ನೆರವಾಗುವುದು ತಿಳಿಯದಿರಬಹುದು. ನಿಯಮಿತವಾಗಿ ಕಿತ್ತಳೆಯನ್ನು ಸೇವಿಸುವುದರಿಂದ ಎಲ್‌ಡಿಎಲ್ ಅಥವಾ ಕೆಟ್ಟ ಕೊಬ್ಬು ಕಡಿಮೆಯಾಗುತ್ತದೆ ಎನ್ನುತ್ತವೆ ಬಹಳಷ್ಟು ಅಧ್ಯಯನಗಳು.
ಪ್ರೂನ್
ಪ್ಲಮ್ ಹಣ್ಣನ್ನು ಒಣಗಿಸಿದಾಗ ಅದು ಪ್ರೂನ್ ಎಂದು ಕರೆಸಿಕೊಳ್ಳುತ್ತದೆ. ನಾರಿನಂಶ ವಿಫುಲವಾಗಿ ಇರುವ ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಭರಪೂರ ಇವೆ. ತಿನ್ನುವುದಕ್ಕೂ ರುಚಿಯಾಗಿರುವ ಈ ಹಣ್ಣುಗಳು ಮಲಬದ್ಧತೆ ನಿವಾರಣೆಗೆ ದೊಡ್ಡ ಸಹಾಯ ಮಾಡುತ್ತವೆ. ರಜೋನಿವೃತ್ತಿಯಾದ ಮಹಿಳೆಯರು ದಿನಕ್ಕೆ ೫೦ ಗ್ರಾಂ ಪ್ರೂನ್ ತಿನ್ನುವುದರಿಂದ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಬಹುದು ಎನ್ನುತ್ತವೆ ಅಧ್ಯಯನಗಳು. ಮಾತ್ರವಲ್ಲ, ಉತ್ಕರ್ಷಣ ನಿರೋಧಕಗಳು ಹೇರಳವಾಗಿರುವ ಇದನ್ನು ತಿನ್ನುವುದರಿಂದ ದೇಹದಲ್ಲಿ ಉರಿಯೂತ ಶಮನ ಮಾಡಬಹುದು.
ಸೇಬು
ಮಾರುಕಟ್ಟೆಯಲ್ಲಿ ಕೆಂಪು ಕೆಂಪಾದ ಸೇಬುಗಳು ಕಣ್ಣಿಗೆಸೆಯುತ್ತಿದ್ದರೆ ತಪ್ಪದೆ ಖರೀದಿಸಿ, ತಿನ್ನಿ. ಪೆಕ್ಟಿನ್ ಎಂಬ ಕರಗಬಲ್ಲ ನಾರಿನಿಂದ ಸಮೃದ್ಧವಾಗಿರುವ ಸೇಬು ಸೇವನೆಯಿಂದ ಕೊಲೆಸ್ಟ್ರಾಲ್ ಜಮೆಯಾಗುವುದನ್ನು ತಡೆಯಬಹುದು. ಜೊತೆಗೆ ಜೀರ್ಣಾಂಗಗಳ ಆರೋಗ್ಯವೂ ವೃದ್ಧಿಸುತ್ತದೆ. ಈ ಎಲ್ಲಾ ಕಾರಣಗಳಿಂದ ದಿನಕ್ಕೊಂದು ಸೇಬು ತಿನ್ನುವುದು ಹಲವು ರೀತಿಯಲ್ಲಿ ಲಾಭದಾಯಕ.
ಅವಕಾಡೊ
ಬೆಣ್ಣೆ ಹಣ್ಣು ಎಂದೇ ಕರೆಸಿಕೊಳ್ಳುವ ಇದು ಉತ್ತಮ ಕೊಬ್ಬಿನಿಂದ ಸಾಂದ್ರವಾದ ಹಣ್ಣು. ಕೆಟ್ಟ ಕೊಬ್ಬನ್ನು ನಿವಾರಿಸಿ, ಅದರ ಬದಲಿಗೆ ಒಳ್ಳೆಯ ಕೊಬ್ಬನ್ನು ದೇಹಕ್ಕೆ ನೀಡುವಂಥ ಅತ್ಯಂತ ಪೌಷ್ಟಿಕ ಹಣ್ಣಿದು. ಅಧಿಕ ಪ್ರಮಾಣದಲ್ಲಿ ನಾರು ಸಹ ಇರುವುದರಿಂದ ದೇಹದ ಒಟ್ಟಾರೆ ಸ್ವಾಸ್ಥ್ಯವನ್ನು ಹೆಚ್ಚಿಸಿ, ಆರೋಗ್ಯ ವೃದ್ಧಿಗೆ ಈ ಹಣ್ಣು ಕಾರಣವಾಗುತ್ತದೆ.
ಬೆರ್ರಿಗಳು
ಸ್ಟ್ರಾಬೆರಿ, ಬ್ಲೂಬೆರಿ, ಬ್ಲಾಕ್‌ಬೆರಿ ಮುಂತಾದ ಯಾವುದೇ ಬೆರ್ರಿಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ದೇಹ ಸೇರುತ್ತವೆ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ನೆರವಾಗುತ್ತವೆ. ನಾರು ಸಹ ಭರಪೂರ ಇರುವುದರಿಂದ ದೇಹಕ್ಕೆ ಹಲವು ರೀತಿಯಲ್ಲಿ ಬೆರ್ರಿಗಳ ಸೇವನೆ ಲಾಭದಾಯಕ ಎನ್ನುವುದರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ: Health Benefits Of Curd Rice: ಮೊಸರನ್ನ ಎಂಬ ಅಮೃತ: ಹೊಟ್ಟೆಗೂ ಹಿತ, ದೇಹಕ್ಕೂ ಹಿತ!