Site icon Vistara News

NIMHANS Hospital: ಉತ್ತರ ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಎರಡನೇ ಹೈಟೆಕ್ ನಿಮ್ಹಾನ್ಸ್ ಆಸ್ಪತ್ರೆ!

Second hitech NIMHANS hospital to come up in North Bengaluru

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು (Department of Medical Education) ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಉತ್ತರ ಬೆಂಗಳೂರಿನಲ್ಲಿ ಎರಡನೇ ಹೈಟೆಕ್ ನಿಮ್ಹಾನ್ಸ್ ಆಸ್ಪತ್ರೆ (NIMHANS Hospital) ನಿರ್ಮಾಣಕ್ಕೆ ಮುಂದಾಗಲಾಗಿದೆ. 40 ಎಕರೆ ಜಾಗದಲ್ಲಿ ಮಲ್ಟಿ ಸೂಪರ್ ಸ್ಪೆಷಾಲಿಟಿ ನಿಮ್ಹಾನ್ಸ್ ಆಸ್ಪತ್ರೆ (Multi Super Speciality NIMHANS Hospital) ನಿರ್ಮಾಣ ಮಾಡುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಬೆಂಗಳೂರು ಸೇರಿದಂತೆ ಹಲವು ಕಡೆ ರಸ್ತೆ ಅಪಘಾತದಿಂದ ನರ ಹಾಗೂ ಬ್ರೈನ್ ಸಮಸ್ಯೆಯಿಂದ ಸಾವಿರಾರು ಜನರು ಮೃತಪಡುತ್ತಿದ್ದಾರೆ. ಮಾನಸಿಕ ಆರೋಗ್ಯ ಮತ್ತು ನರ ಸಮಸ್ಯೆಗಳಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ದೇಶದ ಅತ್ಯಂತ ಪ್ರತಿಷ್ಠಿತ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಾಗಿರುವ ನಿಮ್ಹಾನ್ಸ್‌ನ ಎರಡನೇ ಘಟಕವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾಗಿ ಹೇಳಿದ್ದಾರೆ.

ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ನಿಮ್ಹಾನ್ಸ್ ಆಸ್ಪತ್ರೆಯ ಮೇಲೆ ಸಾಕಷ್ಟು ಒತ್ತಡ ಹೆಚ್ಚಾಗಿದೆ. ಸಾಕಷ್ಟು ಬೆಡ್ ಸಮಸ್ಯೆಗಳು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಕಾಡುತ್ತಿವೆ. ಇದರಿಂದ ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಜತೆಗೆ ರೋಗಿಗಳ ಒತ್ತಡವೂ ಹೆಚ್ಚಿದೆ. ಅಲ್ಲದೆ, ನಿಮ್ಹಾನ್ಸ್ ಆಸ್ಪತ್ರೆಗೆ ರಾಜ್ಯದ ಜನರ ಒತ್ತಡದ ಜತೆಗೆ ಕೇರಳ ಆಂಧ್ರಪ್ರದೇಶ, ತಮಿಳನಾಡಿನ ಜನರ ಒತ್ತಡವೂ ಹೆಚ್ಚಾಗಿ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಅದರಲ್ಲೂ ಉತ್ತರ ಬೆಂಗಳೂರಿನ ಜನರಿಗೆ ಆ ಭಾಗದಲ್ಲಿ ಯಾವುದೇ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೊರತೆಯಿದೆ ಎಂದು ಸಮಸ್ಯೆಯ ತೀವ್ರತೆಯನ್ನು ಶರಣ ಪ್ರಕಾಶ್‌ ಪಾಟೀಲ್‌ ತೆರೆದಿಟ್ಟಿದ್ದಾರೆ.

ರಾಜ್ಯ ಸರ್ಕಾರದಿಂದ 40 ಎಕರೆ ಜಾಗ ಮಂಜೂರು

ಬೆಂಗಳೂರಿನಲ್ಲಿ ರೋಗಿಗಳಿಗೆ ಪರದಾಟ ಎದುರಾಗಿದೆ. ಹೀಗಾಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಯು ನಿಮ್ಹಾನ್ಸ್ ಎರಡನೇ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆಗೆ ಡಿಮ್ಯಾಂಡ್ ಮಾಡಿತ್ತು. ಇದಕ್ಕೆ ಕೇಂದ್ರ ಆರೋಗ್ಯ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ 40 ಎಕರೆ ಪ್ರದೇಶದಲ್ಲಿ ಬೆಂಗಳೂರಿನ ಕ್ಯಾನ್ಸನಹಳ್ಳಿಯಲ್ಲಿ ನಿಮ್ಹಾನ್ಸ್ ಆಸ್ಪತ್ರೆಯ ಎರಡನೇ ಘಟಕವನ್ನು ತೆರೆಯಲು ನಿರ್ಧಾರ ಮಾಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ: Kannada signboard rules: ಕನ್ನಡ ಬೋರ್ಡ್‌ ಕಡ್ಡಾಯ; ಡೆಡ್‌ಲೈನ್‌ವರೆಗೆ ದಾಳಿಗೆ ಅವಕಾಶ ಕೊಡಬೇಡಿ: ಬಿಬಿಎಂಪಿಗೆ ವ್ಯಾಪಾರಿಗಳ ಒತ್ತಾಯ

ಇಲ್ಲಿದ್ದಾರೆ ನುರಿತ ವೈದ್ಯರು

ಈಗಾಗಲೇ ರಾಜ್ಯ ಸರ್ಕಾರ ಇದಕ್ಕೆ ಭೂಮಿಯನ್ನು ನೀಡಿದೆ. ನಿಮ್ಹಾನ್ಸ್ ಆಸ್ಪತ್ರೆ ದೇಶದಲ್ಲಿಯೇ ಸಾಕಷ್ಟು ಹೊಸ ಹೊಸ ತಂತ್ರಜ್ಞಾನಗಳನ್ನೊಳಗೊಂಡ ವಿಶೇಷ ಆಸ್ಪತ್ರೆಯಾಗಿದೆ. ಮನುಷ್ಯನ ನರ ವಿಭಾಗದ ಕುರಿತು ಹಾಗೂ ಬ್ರೈನ್ ಸರ್ಜರಿ ಕುರಿತು ನುರಿತ ತಜ್ಞ ವೈದ್ಯರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ನಿಮ್ಹಾನ್ಸ್ ಆಸ್ಪತ್ರೆಯ ಎರಡನೇ ಘಟಕ ತಲೆ ಎತ್ತುತ್ತಿರುವುದು ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನವರಿಗೆ ವರದಾನವಾಗಿದೆ.

Exit mobile version