Site icon Vistara News

Seedling Potatoes: ಮೊಳಕೆ ಬಂದ ಆಲೂಗಡ್ಡೆಯನ್ನು ತಿನ್ನೋದು ಒಳ್ಳೆಯದಲ್ಲ, ಯಾಕೆ ಗೊತ್ತೇ?

Seedling Potatoes

ನಮ್ಮ ಮನೆಯ ಅಡುಗೆ ಕೋಣೆಯಲ್ಲಿ ತರಕಾರಿಗಳೊಂದಿಗೆ ಯಾವತ್ತಾದರೂ ಆಲೂಗಡ್ಡೆ ಇಲ್ಲದಿರುವುದನ್ನು ಊಹಿಸಿ ನೋಡಿದ್ದೀರಾ? ಎಲ್ಲರ ಮನೆಗಳಲ್ಲೂ ಬಹುತೇಕ ಯಾವಾಗಲೂ ಆಲೂಗಡ್ಡೆ ಇದ್ದೇ ಇರುತ್ತದೆ. ಬಹಳ ಕಾಲ ಹಾಗೆಯೇ ಉಳಿಯುವ ಗುಣವಿರುವ ಆಲೂಗಡ್ಡೆ ಯಾವಾಗಲೂ ಆಪದ್ಬಾಂಧವ. ಏನಾದರೂ ರುಚಿಯಾಗಿ ದಿಢೀರ್‌ ಮಾಡಬೇಕೆಂದರೆ, ಸಹಾಯಕ್ಕೆ ಬರುವುದು ಈ ಆಲೂಗಡ್ಡೆಯೇ. ಒಂದು ಸಂಪೂರ್ಣ ಮಧ್ಯಾಹ್ನದೂಟವೋ, ಡಿನ್ನರೋ ಅಥವಾ ಸಂಜೆಯ ಕರುಂಕುರುಂ ಸ್ನ್ಯಾಕ್ಸೋ ಯಾವುದೇ ಬಗೆಯ ತಯಾರಿಗೂ ಆಲೂಗಡ್ಡೆಯದು ಸದಾ ಎತ್ತಿದ ಕೈ. ಮಕ್ಕಳಿಗೂ ಪ್ರಿಯ. ಹಾಗಾಗಿಯೇ ಇವನ್ನು ನಾವು ಮನೆಯಲ್ಲಿ ನಮ್ಮ ತರಕಾರಿ ಬಾಸ್ಕೆಟ್‌ನಲ್ಲಿ ಸದಾ ಇಟ್ಟಿರುತ್ತೇವೆ. ಕೆಲವೊಮ್ಮೆ ಇಟ್ಟೂ ಇಟ್ಟೂ ಕೊಳೆತು ಹೋದರೆ, ಇನ್ನೂ ಕೆಲವೊಮ್ಮೆ ಇವುಗಳಲ್ಲಿ ಮೊಳಕೆ ಬಂದು ಸಸಿಯೇ ಆಗಿಬಿಡುತ್ತದೆ. ಮೊಳಕೆ ಬಂದ ಕಾಳುಗಳೂ ಸೇರಿದಂತೆ ಎಲ್ಲ ಆಹಾರವೂ ಒಳ್ಳೆಯದೇ ಎಂದು ಭಾವಿಸುವ ನಾವು ಮೊಳಕೆ ಆಲೂಗಡ್ಡೆಯನ್ನೂ ಸಹಜವಾಗಿಯೇ ಹೆಚ್ಚು ಯೋಚಿಸದೆ ಒಳ್ಳೆಯದು ಎಂದೇ ಭಾವಿಸುತ್ತೇವೆ. ಆದರೆ ಇದು (Seedling potatoes) ನಿಜಕ್ಕೂ ಒಳ್ಳೆಯದೇ ಎಂಬುದನ್ನು ತಿಳಿಯೋಣ.

ವಿಷಕಾರಕ ಉತ್ಪತ್ತಿ

ಆಯುರ್ವೇದದ ಪ್ರಕಾರ, ಮೊಳಕೆ ಬಂದ ಆಲೂಗಡ್ಡೆ ಒಳ್ಳೆಯದಲ್ಲ. ಆಲೂಗಡ್ಡೆಗೆ ಮೊಳಕೆ ಬಂದಾಗ ಅದರಲ್ಲಿ ಗ್ಲೈಕೋಲ್ಕಲಾಯ್ಡ್ಸ್‌ ಎಂಬ ವಿಷಕಾರಕ ಉತ್ಪತ್ತಿಯಾಗುವ ಕಾರಣ ಇದು ಒಳ್ಳೆಯದಲ್ಲ. ಅಲ್ಲದೆ, ಆಲೂಗಡ್ಡೆಯ ಹಸಿರು ಭಾಗಗಳಲ್ಲಿ, ಕಣ್ಣಿನಲ್ಲಿ ಹಾಗೂ ಮೊಳಕೆಯಲ್ಲಿ ಈ ವಿಷಕಾರಕಗಳಿರುವ ಸಂಭವ ಹೆಚ್ಚು ಎನ್ನಲಾಗುತ್ತದೆ.

ಗ್ಲೈಕೋಲ್ಕಲಾಯ್ಡ್ಸ್‌ ಒಳ್ಳೆಯದಲ್ಲ

ಗ್ಲೈಕೋಲ್ಕಲಾಯ್ಡ್ಸ್‌ ಮನುಷ್ಯರ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲವಾದ್ದರಿಂದ ಇವುಗಳ ಸೇವನೆ ಒಳ್ಳೆಯದಲ್ಲ. ಇದರಿಂದ ಕರುಳಿನ ಆರೋಗ್ಯಕ್ಕೆ ಸಮಸ್ಯೆಯಾಗಬಹುದು. ತಲೆಸುತ್ತು, ವಾಂತಿ, ಹೊಟ್ಟೆ ನೋವು, ತಲೆನೋವು ಇತ್ಯಾದಿಗಳೂ ಬರಬಹುದು. ಇದು ಅತಿಯಾದರೆ ಕೆಲವೊಮ್ಮೆ ಪ್ರಾಣಕ್ಕೂ ಅಪಾಯ ಬರಬಹುದು ಎನ್ನಲಾಗುತ್ತದೆ. ಇಂತಹ ಪ್ರತಿಕ್ರಿಯೆ ಎಲ್ಲರ ದೇಹದ ಮೇಲೂ ಆಗುವುದಿಲ್ಲ. ಕೆಲವರಿಗೆ ಅಪರೂಪಕ್ಕೆ ಇಂತಹ ಆರೋಗ್ಯ ಸಮಸ್ಯೆ ಬರಬಹುದು.

ಕಹಿ ರುಚಿ

ಗ್ಲೈಕೋಲ್ಕಲಾಯ್ಡ್ಸ್‌ ಅಂಶ ಆಲೂಗಡ್ಡೆಯಲ್ಲಿ ಹೆಚ್ಚಾದರೆ ಅದಕ್ಕೊಂದು ಕಹಿ ರುಚಿ ಬರುತ್ತದೆ. ಇದು ತಿನ್ನಲು ರುಚಿಯೂ ಆಗಿರುವುದಿಲ್ಲ.

ಪೋಷಕಾಂಶದಲ್ಲಿ ಇಳಿಕೆ

ಆಲೂಗಡ್ಡೆ ಮೊಳಕೆ ಬರುವ ಸಂದರ್ಭದಲ್ಲಿ ಆಲೂಗಡ್ಡೆಯ ಪೋಷಕಾಂಶದಲ್ಲಿ ಕೊಂಚ ಇಳಿಕೆಯಾಗುತ್ತದೆ. ಮೊಳಕೆ ಪ್ರಕ್ರಿಯೆ ಪೋಷಕಾಂಶಗಳನ್ನು ಬಳಸುವುದರಿಂದ ಹೀಗಾಗುತ್ತದೆ.

ಸಿಪ್ಪೆ ತೆಗೆದು ಬಳಸಬಹುದು

ಗ್ಲೈಕೋಲ್ಕಲಾಯ್ಡ್ಸ್‌ ಪ್ರಮಾಣ ಹೆಚ್ಚಿರುವುದು ಆಲೂಗಡ್ಡೆಯ ಕಣ್ಣುಗಳಲ್ಲಿ, ಮೊಳಕೆಯಲ್ಲಿ ಹಾಗೂ ಎಲೆಗಳಲ್ಲಿ. ಹಾಗಾಗಿ, ಆಲೂಗಡ್ಡೆಯಿಂದ ಈ ಭಾಗಗಳನ್ನು ಕತ್ತರಿಸಿ ತೆಗೆದು ಉಳಿದ ಭಾಗವನ್ನು ಬಳಸಬಹುದು. ಅಂತಹ ಸಂದರ್ಭದಲ್ಲಿ ಸಿಪ್ಪೆಯನ್ನೂ ತೆಗೆದೇ ಬಳಸುವುದು ಒಳ್ಳೆಯದು.

ಇದನ್ನೂ ಓದಿ: Belly Fat Loss Tips: ಚಿಂತೆ ಮಾಡಬೇಡಿ, ನಿಮ್ಮ ಹೊಟ್ಟೆ ಕರಗಿಸಲು ಸಾಧ್ಯ!

ಸಂಗ್ರಹಿಸುವುದು ಹೇಗೆ?

ಹಾಗಾದರೆ, ಮೊಳಕೆ ಬರದಂತೆ ಆಲೂಗಡ್ಡೆಯನ್ನು ಸಂಗ್ರಹಿಸಿಡುವುದು ಹೇಗೆ ಎಂಬ ಸಂಶಯ ನಿಮ್ಮಲ್ಲಿ ಎದ್ದಿರಬಹುದು. ಅತ್ಯುತ್ತಮ ವಿಧಾನ ಎಂದರೆ, ಆಲೂಗಡ್ಡೆಯನ್ನು ತಂಪಾದ, ಕತ್ತಲಿರುವ ಬೆಳಕು ಅಷ್ಟಾಗಿ ಬೀಳದ, ಒಣ ಪ್ರದೇಶದಲ್ಲಿಡಬೇಕು. ಆದರೆ, ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿ ಮಾತ್ರ ಇಡಬೇಡಿ. ಅತಿಯಾದ ತಂಪಿನಿಂದ ಆಲೂಗಡ್ಡೆಯಲ್ಲಿರುವ ಸಕ್ಕರೆಯಂಶ ಹೆಚ್ಚಾಗಬಹುದು.

Exit mobile version