ಚಳಿಗಾಲದಲ್ಲಿ ತಿನ್ನಲೇಬೇಕಾದ ಆಹಾರಗಳ ಪೈಕಿ ಎಳ್ಳಿಗೆ ಪ್ರಮುಖ ಸ್ಥಾನ. ಯಾಕೆಂದರೆ ಎಳ್ಳಿನಲ್ಲಿ ಚಳಿಗಾಲಕ್ಕೆ ನಮ್ಮ ದೇಹಕ್ಕೆ ಬೇಕಾಗುವ ಎಲ್ಲ ಗುಣಗಳೂ ಇವೆ. ಅದಕ್ಕಾಗಿಯೇ ವಿಪರೀತ ಚಳಿಯಿರುವ ಪ್ರದೇಶಗಗಳಲ್ಲಿ ಎಳ್ಳಿನ ತಿಂಡಿಗಳು ಸಾಮಾನ್ಯ. ಉತ್ತರ ಭಾರತದಲ್ಲಿ ಚಳಿಗಾಲ ಶುರುವಾಗುತ್ತಿದ್ದಂತೆ ಮಾರುಕಟ್ಟೆ ತುಂಬ ಎಳ್ಳಿನ ಚಿಕ್ಕಿಗಳೂ, ಸಿಹಿತಿಂಡಿಗಳೂ ಸೇರಿದಂತೆ ಎಳ್ಳಿನ ಬಗೆಬಗೆಯ ಭಕ್ಷ್ಯಗಳು ಮಾರುಕಟ್ಟೆಯಲ್ಲಿ ಸಿಗಲು ಆರಂಭವಾಗುತ್ತದೆ. ಮನೆಮನೆಗಳಲ್ಲೂ ಎಳ್ಳಿನ ತಿನಿಸುಗಳು ನಿತ್ಯವೂ ಮಾಡುತ್ತಾರೆ. ಮೊದಲೇ ಮಾಡಿಟ್ಟು ತಿನ್ನುತ್ತಾರೆ. ಹಾಗಾದರೆ ಚಳಿಗಾಲದಲ್ಲೇ ಎಳ್ಳು ಯಾಕೆ ತಿನ್ನಬೇಕು ಗೊತ್ತೇ? ಎಳ್ಳಿನ ಈ ಎಲ್ಲ ಗುಣಗಳ (Sesame benefits) ಕಾರಣದಿಂದಲೇ ಚಳಿಗಾಲಕ್ಕೂ ಎಳ್ಳಿಗೂ ಬಹುದೊಡ್ಡ ನಂಟು. ಬನ್ನಿ, ಆ ಗುಣಗಳ ಅವಲೋಕನ ಮಾಡೋಣ.
೧. ಚಳಿಗಾಲದಲ್ಲಿ ಹೇಳಿ ಕೇಳಿ, ದೇಹ ಬೆಚ್ಚಗಿಡುವ ಆಹಾರಗಳು ಬೇಕು. ಎಳ್ಳಿನಲ್ಲಿ ಉಷ್ಣಕ ಗುಣಗಳಿವೆ. ಎಳ್ಳು ತಿನ್ನುವುದರಿಂದ ದೇಹ ಬೆಚ್ಚಗಾಗುತ್ತದೆ. ದೇಹ ಬೆಚ್ಚಗಿದ್ದರೆ, ಚಳಿಗಾಲದಲ್ಲಿ ಯಾವ ರೋಗಗಳೂ ನಮ್ಮತ್ತ ಸುಳಿಯದು. ಹಾಗಾಗಿ, ಚಳಿಗಾಲಕ್ಕೆ ಎಳ್ಳು ಬೇಕೇಬೇಕು.
೨. ಎಳ್ಳಿನಲ್ಲಿ ಕ್ಯಾಲ್ಶಿಯಂ, ಮೆಗ್ನೀಶಿಯಂ, ಕಬ್ಬಿಣಾಂಶ ಹಾಗೂ ಝಿಂಕ್ ಹೇರಳವಾಗಿದೆ. ಚಳಿಗಾಲದಲ್ಲಿ ನಮ್ಮ ದೇಹಕ್ಕೆ ಬೇಕಾಗುವ ರೋಗ ನಿರೋಧಕ ಶಕ್ತಿ ಈ ಎಲ್ಲ ಪೋಷಕಾಂಶಗಳಿಂದ ದೊರೆಯುತ್ತದೆ. ಜೊತೆಗೆ ಚಳಿಗಾಲಕ್ಕೆ ನಮಗೆ ಸಾಕಷ್ಟು ಶಕ್ತಿಯೂ ಬೇಕು. ಇದು ಒಳ್ಲೆ ಶಕ್ತಿವರ್ಧಕ ಕೂಡಾ.
೩. ಎಳ್ಳು ರೋಗ ನಿರೋಧಕತೆಯನ್ನೂ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ವಿಟಮಿನ್ ಇ ಹೇರಳವಾಗಿದೆ. ಈ ಗುಣ ಚಳಿಗಾಲಕ್ಕೆ ಅತ್ಯಂತ ಅಗತ್ಯವಾಗಿ ಬೇಕು.
೪. ಎಳ್ಳಿನಲ್ಲಿರುವ ಕ್ಯಾಲ್ಶಿಯಂ ಹಾಗೂ ಝಿಂಕ್ ನಮ್ಮ ದೇಹದ ಎಲುಬಿನ ಆರೋಗ್ಯಕ್ಕೆ ಅತ್ಯಂತ ಮುಖ್ಯ. ಚಳಿಗಾಲದಲ್ಲಿ ಮೂಳೆಗಳ ನೋವು ಹೆಚ್ಚಾಗದಂತೆ ಕಾಪಾಡಲೂ ಕೂಡಾ ಎಳ್ಳು ನೆರವಾಗುತ್ತದೆ.
೫. ಎಳ್ಳಿನಲ್ಲಿ ಸಾಕಷ್ಟು ಫ್ಯಾಟಿ ಆಸಿಡ್‌ಗಳೂ ಇರುವುದರಿಂದ ಚರ್ಮದ ಆರೋಗ್ಯವನ್ನೂ ಚಳಿಗಾಲದಲ್ಲಿ ಕಾಫಾಡುತ್ತದೆ. ಎಳ್ಳು ಚರ್ಮವನ್ನು ಒಡೆಯದಂತೆ ಕಾಪಾಡುವಲ್ಲಿ ನೆರವಾಗುತ್ತದೆ.
೬. ಎಳ್ಳಿನಲ್ಲಿ ಒಳ್ಳೆಯ ಕೊಬ್ಬು ಇರುವುದರಿಂದ ಹೃದಯದ ಆರೋಗ್ಯವನ್ನೂ ಇದು ಕಾಪಾಡುತ್ತದೆ. ಆ ಮೂಲಕ ಕೆಟ್ಟ ಕೊಲೆಸ್ಟೆರಾಲ್ ಅನ್ನು ದೂರ ಸರಿಸುತ್ತದೆ.
೭. ಚಳಿಗಾಲದಲ್ಲಿ ನಿತ್ರಾಣ, ತಲೆಸುತ್ತು ಮತ್ತಿತರ ಸಮಸ್ಯೆಗಳನ್ನು ಹೊಂದಿರುವ ಮಂದಿಗೂ ಎಳ್ಳು ಅತ್ಯುತ್ತಮ. ಇದರಲ್ಲಿ ವಿಟಮಿನ್ ಬಿ ಹೇರಳವಾಗಿದ್ದು ಇದು ಶಕ್ತಿವರ್ಧಕವಾಗಿ ಕೆಲಸ ಮಾಡುತ್ತದೆ.
೮. ಇವಿಷ್ಟೇ ಅಲ್ಲ, ಕೆಲವು ಸಂಶೋಧನೆಗಳು, ಎಳ್ಳು ಮಧುಮೇಹದ ಮಂದಿಗೂ ಒಳ್ಳೆಯ ಆಹಾರ ಎಂದು ದೃಢಪಡಿಸಿವೆ. ಇದರ ಸೇವನೆಯಿಂದ ಮಧುಮೇಹ ಸಮತೋಲನದಲ್ಲಿರುತ್ತದೆ ಎನ್ನಲಾಗುತ್ತದೆ.
ಇದನ್ನೂ ಓದಿ: Different Types of Seeds with Health Benefits: ಆರೋಗ್ಯ ವೃದ್ಧಿಗೆ ಬೇಕಾದ ಪೌಷ್ಟಿಕ ಬೀಜಗಳಿವು