ಎಳ್ಳೆಣ್ಣೆ ಬಹಳ ಹಿಂದಿನಿಂದಲೂ ಭಾರತದಲ್ಲಿ ನಮ್ಮ ಹಿರಿಯರು ಬಳಸುತ್ತಾ ಬಂದಿರುವ ಎಣ್ಣೆ. ಎಳ್ಳಿನಿಂದ ತಯಾರಿಸುವ ಈ ಎಣ್ಣೆ ಕೇವಲ ಆಹಾರಕ್ಕಷ್ಟೇ ಅಲ್ಲ, ವೈದ್ಯಕೀಯ ಉಪಯೋಗಕ್ಕೂ ಪ್ರಾಚೀನ ಕಾಲದಿಂದಲೂ ಬಳಸಲ್ಪಡುತ್ತಿತ್ತು ಎಂಬುದಕ್ಕೆ ಪುರಾವೆಗಳು ಸಿಗುತ್ತವೆ. ಇದರಲ್ಲಿರುವ ಪೋಷಕಾಂಶಗಳ ಕಾರಣದಿಂದ ಇದೊಂದು ಅತ್ಯುತ್ತಮ, ಆರೋಗ್ಯಕರ ಎಣ್ಣೆಗಳ ಸಾಲಿಗೆ ಸೇರುತ್ತದೆ. ಉತ್ತಮ ಆರೋಗ್ಯ, ಸರಿಯಾದ ಪಚನಕ್ರಿಯೆ, ಒಳ್ಳೆಯ ಕೂದಲು, ಚರ್ಮದ ಆರೋಗ್ಯ ಎಲ್ಲವೂ ಸೇರಿದಂತೆ ಸಾಕಷ್ಟು ಆರೋಗ್ಯಕರ ಲಾಭಗಳನ್ನು ಎಳ್ಳೆಣ್ಣೆಯ ಬಳಕೆಯಿಂದ ಪಡೆಯಬಹುದು. ಬನ್ನಿ, ಆಗಾಗ, ಅಡುಗೆಯಲ್ಲಿ ಎಳ್ಳೆಣ್ಣೆಯನ್ನು ಸ್ವಲ್ಪ ಬಳಸುವುದರಿಂದ ಏನೆಲ್ಲ ಲಾಭಗಳ್ನು ಪಡೆಯಬಹುದು (Sesame Oil Benefits) ಎಂಬುದನ್ನು ನೋಡೋಣ.
- ಎಳ್ಳೆಣ್ಣೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಂಟಿಆಕ್ಸಿಡೆಂಟ್ಗಳಿವೆ. ವಿಟಮಿನ್ ಇ ಹಾಗೂ ಲಿಗ್ನನ್ಗಳೆಂಬ ಈ ಆಂಟಿ ಆಕ್ಸಿಡೆಂಟ್ಗಳು ದೇಹವನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತವೆ. ಅಂಗಾಶಗಳಿಗೆ ಹಾನಿಯಾಗುವುದನ್ನು ಇದು ತಡೆಯುವುದಷ್ಟೇ ಅಲ್ಲ, ಕ್ಯಾನ್ಸರ್, ಹೃದಯದ ಕಾಯಿಲೆಯಂಥ ದೊಡ್ಡ ಸಮಸ್ಯೆಗಳಿಂದಲೂ ಕೊಂಚ ರಕ್ಷಣೆ ನೀಡುತ್ತದೆ.
- ಎಳ್ಳೆಣ್ಣೆಯಲ್ಲಿ ಆಂಟಿ ಇನ್ಪ್ಲಮೇಟರಿ ಗುಣಗಳು ಸಾಕಷ್ಟಿವೆ. ಹೀಗಾಗಿ ಇದು ಸಂಧಿವಾತ ಮತ್ತಿತರ ಉರಿಯೂತದ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಎಳ್ಳೆಣ್ಣೆಯಲ್ಲಿ ಪಾಲಿ ಸ್ಯಾಚುರೇಟೆಡ್ ಫ್ಯಾಟ್ ಹಾಗೂ ಮೋನೋ ಸ್ಯಾಚುರೇಟೆಡ್ ಎಣ್ಣೆ ಎರಡೂ ಇರುವುದರಿಂದ ಇದು ಕೆಟ್ಟ ಕೊಲೆಸ್ಟೆರಾಲ್ ಮಟ್ಟವನ್ನು ಕೆಳಗಿಳಿಸಿ, ಒಳ್ಳೆಯ ಕೊಲೆಸ್ಟೆರಾಲ್ ಮಟ್ಟವನ್ನು ಏರಿಸಲು ಸಹಾಯ ಮಾಡುತ್ತದೆ. ಇದು ಹೃದಯದ ಕಾಯಿಲೆ, ಪಾರ್ಶ್ವವಾಯು ಮತ್ತಿತರ ಸಮಸ್ಯೆಗಳನ್ನೂ ದೂರವಿರಿಸಲು ಸಹಾಯ ಮಾಡುತ್ತದೆ.
- ಎಳ್ಳೆಣ್ಣೆಯಲ್ಲಿ ಮೆಗ್ನೀಶಿಯಂನ ಪ್ರಮಾಣ ಹೆಚ್ಚಿದ್ದು ಇದು ರಕ್ತ ಪರಿಚಲನೆಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡವನ್ನೂ ಸಮತೋಲನಕ್ಕೆ ತರಲು ಸಹಾಯವಾಗುತ್ತದೆ. ಪರಿಣಾಮವಾಗಿ, ಹೃದಯದ ಸಮಸ್ಯೆ ಹಾಗೂ ಪಾರ್ಶ್ವವಾಯುವಿನಂಥ ಸಮಸ್ಯೆಗಳೂ ದೂರ ಉಳಿಯುತ್ತವೆ.
- ಎಳ್ಳೆಣ್ಣೆಯಲ್ಲಿ ಕ್ಯಾಲ್ಶಿಯಂ, ಮೆಗ್ನೀಶಿಯಂ, ಝಿಂಕ್, ಕಾಪರ್ ಹೆಚ್ಚಿನ ಪ್ರಮಾಣದಲ್ಲಿ ಇವೆ. ಇದರಿಂದ ಎಲುಬಿನ ಸಾಂದ್ರತೆ ಹಾಗೂ ಸಾಮರ್ಥ್ಯ ಕಡಿಮೆಯಾಗದು. ವಯಸ್ಸಾದಂತೆ ಕಾಣಿಸಿಕೊಳ್ಳುವ ಎಲುಬಿನ ಸಮಸ್ಯೆಗಳೂ ಅಷ್ಟು ಬೇಗನೆ ಬಾರದು. ಮೂಳೆಗಳ ಆರೋಗ್ಯಕ್ಕೆ ಎಳ್ಳೆಣ್ಣೆ ಅತ್ಯಂತ ಒಳ್ಳೆಯದು.
- ಚರ್ಮದ ಆರೋಗ್ಯಕ್ಕೆ ಎಳ್ಳೆಣ್ಣೆ ಒಳ್ಳೆಯದು. ಇದರಲ್ಲಿ ವಿಟಮಿನ್ ಇ ಇರುವುದರಿಂದ ಇದು ಚರ್ಮವನ್ನು ಕಲೆಗಳಿಂದ, ಸುಕ್ಕಿನಿಂದ ಮುಕ್ತವಾಗಿಸುತ್ತದೆ. ಚರ್ಮದಲ್ಲಿ ಕಪ್ಪು ಕಲೆಗಳಾಗದಂತೆ ನೋಡಿಕೊಳ್ಳುತ್ತದೆ. ಚರ್ಮಕ್ಕೆ ಹೆಚ್ಚು ತೇವಾಂಶ ನೀಡಿ, ಚರ್ಮ ಲಕಲಕನೆ ಹೊಳೆಯುವಂತೆ ಮಾಡುತ್ತದೆ.
- ಎಳ್ಳೆಣ್ಣೆ ಬಾಯಿಯ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಹಾಗೂ ಕೊಳಕನ್ನು ತೆಗೆದು, ಕ್ಯಾವಿಟಿಯಂಥ ಸಮಸ್ಯೆ ಬರದಂತೆ ಕಾಪಾಡುತ್ತದೆ.
- ಎಳ್ಳೆಣ್ಣೆ ಪಚನಕ್ರಿಯೆಗೆ ಒಳ್ಳೆಯದು. ಎಳ್ಳೆಣ್ಣೆಯಲ್ಲಿರುವ ಜಾರುವ ಗುಣವು ಆಹಾರವನ್ನು ಒಳಗಿನ ಜೀರ್ಣಾಂಗವ್ಯೂಹದಲ್ಲಿ ಚೆನ್ನಾಗಿ ಜಾರಿಕೊಂಡು ಹೋಗುವ ಹಾಗೆ ಮಾಡುವ ಜೊತೆಗೆ ಪಚನಕ್ರಿಯೆಗೆ ಸಹಕರಿಸಿ ಮಲಬದ್ಧತೆಯ ಸಮಸ್ಯೆಯನ್ನು ದೂರವಿರಿಸುತ್ತದೆ.
- ಎಳ್ಳೆಣ್ಣೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಝಿಂಕ್ ಹಾಗೂ ರೋಗನಿರೋಧಕತೆ ಹೆಚ್ಚಿಸುವ ಖನಿಜಾಂಶಗಳು ಎಲ್ಲ ಪೋಷಕಾಂಶಗಳೂ ಕೂಡಾ ದೇಹಕ್ಕೆ ಹೀರಿಕೆಯಾಗುವಂತೆ ನೋಡಿಕೊಳ್ಳುತ್ತದೆ.
- ಕೂದಲ ಆರೋಗ್ಯಕ್ಕೂ ಕೂಡ ಎಳ್ಳೆಣ್ಣೆ ಒಳ್ಳೆಯದು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ಗಳು ಕೂದಲ ಬುಡವನ್ನು ಗಟ್ಟಿಕೊಳಿಸಿ ಕೂದಲಿಗೆ ಶಕ್ತಿಯನ್ನು ನೀಡುತ್ತದೆ. ಕೂದಲುದುರುವಿಕೆಯ ಸಮಸ್ಯೆ ಇರುವ ಮಂದಿಗೂ ಇದು ಒಳ್ಳೆಯದು. ಎಳ್ಳೆಣ್ಣೆಯ ನಿಯಮಿತ ಸೇವನೆ ಹಾಗೂ ಕೂದಲಿಗೆ ಬಳಕೆ ಮಾಡುವುದರಿಂದ ಆರೋಗ್ಯಕರವಾದ ಹೊಳಪಾದ, ಸೊಂಪಾದ ಕೂದಲು ನಿಮ್ಮದಾಗುತ್ತದೆ.
ಇದನ್ನೂ ಓದಿ: Sipping Tea Or Coffee With Meals: ಊಟತಿಂಡಿ ಜೊತೆಜೊತೆಗೆ ಚಹಾ ಕಾಫಿ ಹೀರುವ ಅಭ್ಯಾಸ ಒಳ್ಳೆಯದೇ, ಕೆಟ್ಟದ್ದೇ?