Site icon Vistara News

Side Effects Of Bananas: ಬಾಳೆಹಣ್ಣು ಹೆಚ್ಚು ತಿಂದರೆ ಏನಾಗುತ್ತದೆ?

Side Effects Of Bananas

ಬಾಳೆಯ ಹಣ್ಣನ್ನು ಬಯಸದವರು ಅಪರೂಪ. ಇದನ್ನು ತಿನ್ನುವುದಕ್ಕೆ (Side Effects Of Bananas) ಇಂಥದ್ದೇ ಕಾರಣ ಎಂಬುದೂ ಬೇಕಿಲ್ಲ. ದೇವರ ಪ್ರಸಾದದ್ದು, ತಾಂಬೂಲದ ಜೊತೆಗಿನದ್ದು, ತಮ್ಮದೇ ತೋಟದ್ದೆಂದು ಯಾರೋ ಕೊಟ್ಟಿದ್ದು, ನಾವೇ ಅಂಗಡಿಯಿಂದ ತಂದಿದ್ದು, ಇಷ್ಟವೆಂದು ಮೆಂದಿದ್ದು, ಹಸಿವು ತಣಿಸಲು ತಿಂದಿದ್ದು, ಕ್ರೀಡೆಯ ನಡುವಿನ ಬ್ರೇಕ್‌ನಲ್ಲಿ, ಬೆಳಗಿನ ವ್ಯಾಯಾಮದ ಮೊದಲಿನ ಶಕ್ತಿ ಸಂಚಯನಕ್ಕೆ, ಮ್ಯಾರಥಾನ್‌ ಓಡುವಾಗ ಕಾಲಿಗೆ ಬಲ ನೀಡಲು, ಮಲಬದ್ಧತೆ ನಿವಾರಣೆಗೆ… ಕಾರಣಗಳು ಏನು ಬೇಕಿದ್ದರೂ ಆಗಬಹುದು.

ತಪ್ಪೇನಿಲ್ಲ ಬಿಡಿ. ಮಧುಮೇಹದ ಕಾಟವಿಲ್ಲ ಎಂದಾದರೆ ದಿನಕ್ಕೆ ಒಂದೆರಡು ಬಾಳೆಹಣ್ಣು ಮೆಲ್ಲುವುದು ವಿಷಯವೇ ಅಲ್ಲ. ಅಷ್ಟೊಂದು ಪೌಷ್ಟಿಕವಾದ, ಹೆಚ್ಚು ದುಬಾರಿಯಲ್ಲದೆ, ಎಲ್ಲರ ಕೈಗೆಟುಕುವಂಥ ಆಹಾರ ಎನಿಸಿಕೊಂಡಿರುವ ಬಾಳೆ ಹಣ್ಣು ಎಲ್ಲರಿಗೂ ಅಚ್ಚುಮೆಚ್ಚಾಗಿರುವುದರಲ್ಲಿ ಅಚ್ಚರಿಯೇನಿಲ್ಲ. ಶರ್ಕಪಿಷ್ಟ, ನಾರು, ವಿಟಮಿನ್‌ಗಳು, ಖನಿಜಗಳು ಎಲ್ಲವೂ ಇರುವಂಥ ಈ ಹಣ್ಣು ತಿಂದಿದ್ದು ಅತಿಯಾದರೆ ಸಮಸ್ಯೆಗಳು ಕಾಡಬಹುದೇ? ಅತಿಯಾದರೆ ಅಮೃತವೂ ವಿಷ ಎಂಬಂತೆ, ಅತಿಯಾಗಿ ತಿಂದರೆ (eating too many bananas) ಬಾಳೆಯೂ ಬವಣೆ ತರಬಹುದೇ? ಅದಕ್ಕೂ ಮೊದಲು ಬಾಳೆಯ ವಿವರಗಳನ್ನು ಗಮನಿಸೋಣ.

ಏನಿವೆ ಪೌಷ್ಟಿಕಾಂಶಗಳು?

ಸತ್ವಗಳ ಖನಿ ಎಂದೇ ಕರೆಸಿಕೊಂಡಿದೆ ಬಾಳೆಯ ಹಣ್ಣು. ಫ್ಲೆವನಾಯ್ಡ್‌, ಕೆರೊಟಿನಾಯ್ಡ್‌ ಸೇರಿದಂತೆ ಹಲವು ರೀತಿಯ ಉತ್ಕರ್ಷಣ ನಿರೋಧಕಗಳು ಬಾಳೆಹಣ್ಣಿನಲ್ಲಿವೆ. ಹಾಗಾಗಿ ಮೊದಲ ಸುತ್ತಿಗೇ ಇದು ಆರೋಗ್ಯಕ್ಕೆ ಉಪಕಾರಿ ಎನಿಸಿಬಿಡುತ್ತದೆ. ವಿಟಮಿನ್‌ ಸಿ, ವಿಟಮಿನ್‌ ಬಿ೬ ನಂಥ ಜೀವಸತ್ವಗಳು ಜೀವಕ್ಕೆ ಹಿತ ಎನಿಸಿದರೆ, ನಾರು ಜೀರ್ಣಾಂಗಗಳ ದೇಖರೇಖಿ ನೋಡಿಕೊಳ್ಳುತ್ತದೆ. ಪೊಟಾಶಿಯಂ ಸಹ ಹೇರಳವಾಗಿ ಇರುವುದರಿಂದ ರಕ್ತದೊತ್ತಡ ಏರಿಳಿಯದಂತೆ ನಿರ್ವಹಣೆಗೂ ಇದು ನೆರವು ನೀಡುತ್ತದೆ. ಹಾಗಾಗಿ ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದು. ಸಕ್ಕರೆ ಮತ್ತು ಪಿಷ್ಟದ ಅಂಶಗಳು ಇದ್ದರೂ, ನಾರು ಸಾಕಷ್ಟು ಇರುವುದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿದಂತಿರುವ ಭಾವನೆ ಮೂಡಿಸಬಹುದು ಈ ಹಣ್ಣು. ಇಷ್ಟಲ್ಲಾ ಸದ್ಗುಣಗಳು ಇದರಲ್ಲಿ ಇದ್ದ ಮೇಲೆ, ಸ್ವಲ್ಪ ಹೆಚ್ಚು ತಿಂದರೆ ತಪ್ಪೇನು ಎಂಬ ಪ್ರಶ್ನೆ ಮೂಡಿದರೆ- ಅದು ಸಹಜ. ಆದರೆ…

ತೊಂದರೆಗಳಿವೆ!

ಒಳ್ಳೆಯದೆಂಬ ಕಾರಣಕ್ಕೆ ಬಾಳೆಹಣ್ಣನ್ನು ಅತಿಯಾಗಿ ತಿಂದರೆ, ಅದರಿಂದ ತೊಂದರೆಗಳು ಅಮರಿಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಇದೀಗ ಒಂದೆರಡು ಹಣ್ಣುಗಳಿಗೆ ತೊಂದರೆಯಿಲ್ಲ, ಆದರೆ ದಿನವೂ ನಾಲ್ಕಾರು ಹಣ್ಣುಗಳನ್ನು ಗುಳುಂ ಮಾಡಿದರೆ… ಕೆಲವೊಂದು ಸಣ್ಣ ತೊಂದರೆಗಳಿಂದ ಹಿಡಿದು, ದೊಡ್ಡ ಸಮಸ್ಯೆಗಳವರೆಗೂ ಬರುವ ಸಾಧ್ಯತೆಗಳನ್ನು ಪೌಷ್ಟಿಕಾಂಶ ಪರಿಣತರು ತಳ್ಳಿ ಹಾಕುವುದಿಲ್ಲ

ಮೈಗ್ರೇನ್‌

ಅತಿಯಾದ ಮೈಗ್ರೇನ್‌ ತಲೆನೋವಿನ ಸಮಸ್ಯೆ ಇರುವವರಿಗೆ ವಿಪರೀತ ಬಾಳೆಹಣ್ಣು ತಿನ್ನುವುದು ಇನ್ನಷ್ಟು ತಲೆನೋವಿಗೆ ಕಾರಣವಾಗುತ್ತದೆ. ಅದರಲ್ಲೂ, ಸರಿಯಾಗಿ ಸಿಪ್ಪೆ ಸುಲಿಯದಿದ್ದರೆ, ಅದರಲ್ಲಿರುವ ಟೈರಮಿನ್‌ ಅಂಶವು ಹೊಟ್ಟೆ ಸೇರುತ್ತದೆ. ಇದರಿಂದ ಮೈಗ್ರೇನ್‌ ಕೆದರುವ ಸಾಧ್ಯತೆ ಹೆಚ್ಚು. ಈ ಟೈರಮಿನ್‌ ಅಂಶವನ್ನು ವಿಘಟಿಸಿ, ದೇಹದಿಂದ ಹೊರಗೆ ದಾಟಿಸುವ ರಾಸಾಯನಿಕಗಳು ಮೈಗ್ರೇನ್‌ ಸಮಸ್ಯೆ ಇರುವವರಲ್ಲಿ ಕಡಿಮೆಯಾದ್ದರಿಂದ, ಈ ಬಗ್ಗೆ ಎಚ್ಚರ ವಹಿಸುವುದು ಒಳಿತು.

ತೂಕ ಹೆಚ್ಚಳ

ಮಿತವಾಗಿ ಬಾಳೆಹಣ್ಣು ತಿನ್ನುವುದು ತೂಕ ಇಳಿಸುವವರಿಗೂ ಕ್ಷೇಮ. ಇದರಲ್ಲಿರುವ ನಾರಿನಿಂದಾಗಿ ಹೆಚ್ಚು ಸಮಯ ಹಸಿವಾಗದಂತೆ ಇದು ತಡೆಯುತ್ತದೆ. ಆದರೆ ಮದ್ದಿನ ಬದಲು ಮದ್ದಿನ ಮರವನ್ನೇ ತಿನ್ನಬಾರದಲ್ಲ! ಅತಿಯಾಗಿ ತಿಂದರೆ ತೂಕ ಏರುವುದರಲ್ಲಿ ಸಂಶಯವಿಲ್ಲ. ಇದರಲ್ಲಿರುವ ಸಕ್ಕರೆ ಮತ್ತು ಕಾರ್ಬ್‌ ಅಂಶಗಳೇ ಹೀಗೆ ತೂಕ ಏರುವುದಕ್ಕೆ ಕಾರಣವಾಗುತ್ತವೆ.

ಜೀರ್ಣಾಂಗಗಳ ಸಮಸ್ಯೆ

ಇದರಲ್ಲಿ ನಾರು ಇದ್ದರೂ ನೀರಿಲ್ಲ. ಇರುವುದರಲ್ಲಿ ಹೆಚ್ಚಿನಾಂಶ ಕರಗಬಲ್ಲ ನಾರು. ಇದನ್ನು ಮಿತವಾಗಿ ತಿಂದರೆ ಮಲಬದ್ಧತೆ ನಿವಾರಣೆ ಮಾಡುತ್ತದೆ. ಆದರೆ ಅತಿಯಾಗಿ ತಿಂದರೆ ಮಲಬದ್ಧತೆಗೆ ಕಾರಣವಾಗುತ್ತದೆ. ಜೊತೆಗೆ, ಆಸಿಡಿಟಿ, ಹೊಟ್ಟೆಯುಬ್ಬರ, ಅಜೀರ್ಣವನ್ನೂ ತರಬಹುದು. ಹಾಗಾಗಿ ಮಿತಿಮೀರಿದರೆ ತೊಂದರೆ ತಪ್ಪಿದ್ದಲ್ಲ.

ನಿದ್ದೆಗೆ ದಾರಿ!

ಹೊಟ್ಟೆ ಭಾರವಾಗುವಷ್ಟು ಬಾಳೆಹಣ್ಣು ತಿಂದು ಕೆಲಸಕ್ಕೆ ಕುಳಿತು ತೂಕಡಿಸುವವರನ್ನು ನೋಡಿರಬಹುದು. ಒಂದೆರಡು ಹಣ್ಣಿಗೆ ಹೀಗಾಗದಿರಬಹುದು. ಆದರೆ ಒಟ್ಟಾರೆಯಾಗಿ ಬಾಳೆಹಣ್ಣಿನ ಸತ್ವಗಳು ಅತಿಯಾಗಿ ರಕ್ತ ಸೇರುತ್ತಿದ್ದರೆ, ಮೆದುಳನ್ನು ಮಂಕಾಗಿಸುವುದು ನಿಜ. ತೂಕಡಿಕೆ, ಚುರುಕಿಲ್ಲದೆ ಮಬ್ಬಾಗಿರುವುದು ಮುಂತಾದವು ಸಾಮಾನ್ಯವಾಗಬಹುದು. ಈ ಹಣ್ಣಿನಲ್ಲಿರುವ ಟ್ರಿಪ್ಟೊಫ್ಯಾನ್‌ ಅಂಶ ಇದಕ್ಕೆ ಕಾರಣ ಎನ್ನಲಾಗುತ್ತದೆ.

ಹಲ್ಲುಗಳ ಸಮಸ್ಯೆ

ಸಿಹಿ ಹೆಚ್ಚಿರುವ ಇದನ್ನು ಸಿಕ್ಕಾಪಟ್ಟೆ ತಿನ್ನುವುದು, ಆನಂತರ ಬಾಯಿ ಶುಚಿ ಮಾಡದಿರುವುದು ಹಲ್ಲುಗಳ ಸಮಸ್ಯೆಗೂ ಮೂಲವಾಗಬಹುದು. ಇದರಲ್ಲಿ ಹೆಚ್ಚಿರುವ ಪಿಷ್ಟದ ಅಂಶವನ್ನು ಬಾಯಲ್ಲಿರುವ ಬ್ಯಾಕ್ಟೀರಿಯಾಗಳು ವಿಘಟಿಸಿದಾಗ ಆಮ್ಲಗಳು ಬಿಡುಗಡೆಗೊಳ್ಳುತ್ತವೆ. ಅವು ದೀರ್ಘಕಾಲ ಬಾಯಲ್ಲೇ ಇದ್ದರೆ ಹಲ್ಲುಗಳ ಎನಾಮಲ್‌ ಕವಚ ದುರ್ಬಲವಾಗುತ್ತದೆ.

ಮಧುಮೇಹ

ಗ್ಲೂಕೋಸ್‌, ಫ್ರಕ್ಟೋಸ್‌ನಂಥ ಪಿಷ್ಟಗಳು ಇದರಲ್ಲಿ ಹೆಚ್ಚಿರುವುದರಿಂದ ಇದನ್ನು ಮಧುಮೇಹಿಗಳು ಹೆಚ್ಚು ತಿನ್ನುವಂತಿಲ್ಲ. ಇದು ಹೊಟ್ಟೆಗೆ ಹೋಗುತ್ತಿದ್ದಂತೆ ತ್ವರಿತವಾಗಿ ರಕ್ತ ಸೇರಿ, ಅಲ್ಲಿನ ಸಕ್ಕರೆಯ ಮಟ್ಟವನ್ನು ಏರಿಸುತ್ತದೆ. ಹಾಗಾಗಿ ಮಧುಮೇಹ-ಪೂರ್ವದ ಸ್ಥಿತಿಯಲ್ಲಿ ಇದ್ದವರಿಗೂ ಇದನ್ನು ತೀರಾ ಮಿತವಾಗಿಯೇ ತಿನ್ನುವುದಕ್ಕೆ ವೈದ್ಯರು ಸೂಚಿಸುತ್ತಾರೆ.

ಇದನ್ನೂ ಓದಿ: Cinnamon Health Benefits: ದಾಲ್ಚಿನ್ನಿಯಲ್ಲಿದೆ ಚಿನ್ನದಂಥಾ ಆರೋಗ್ಯಕಾರಿ ಗುಣ!

Exit mobile version