Site icon Vistara News

Side Effects Of Dry Fruits: ಆರೋಗ್ಯಕ್ಕೆ ಒಳ್ಳೆಯದೆಂದು ಒಣಬೀಜಗಳನ್ನು ಅತಿಯಾಗಿ ತಿನ್ನುತ್ತೀರಾ? ಎಚ್ಚರ!

Side Effects Of Dry Fruits

ಒಣ ಬೀಜಗಳನ್ನು ತಿನ್ನುವುದು ಒಳ್ಳೆಯದು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಪೋಷಕಾಂಶಗಳ ಪವರ್‌ ಹೌಸ್‌ ಆಗಿರುವ ಈ ಬೀಜಗಳನ್ನು ಸೇವಿಸುವುದರಿಂದ ಸಾಕಷ್ಟು ಆರೋಗ್ಯದ ಲಾಭಗಳಿಗೆ. ದೇಹಕ್ಕೆ ಸಿಗಬೇಕಾದ ಎಲ್ಲ ಬಗೆಯ ಪೋಷಕಾಂಶಗಳನ್ನೂ ಒದಗಿಸುವ ಸುಲಭವಾದ ನೈಸರ್ಗಿಕ ವಿಧಾನವಿದು. ಆದರೆ, ನೆನಪಿಡಿ. ಅತಿಯಾದರೆ ಅಮೃತವೂ ವಿಷವೇ ಅಲ್ಲವೇ? ಪೋಷಕಾಂಶಗಳ ಪವರ್‌ ಹೌಸ್‌ ಆಗಿದ್ದರೂ ಬೀಜಗಳ ಅತಿಯಾದ ಸೇವನೆಯಿಂದ ಕೆಲವೊಮ್ಮೆ ಇದು ತೊಂದರೆಯನ್ನೂ ತರಬಹುದು. ಆರೋಗ್ಯ ಹೆಚ್ಚಿಸಲು ಹೊರಟು ಅನಾರೋಗ್ಯದ ಕಡೆಗೆ ಮುಖ ಮಾಡಬೇಖಾಗಬಹುದು. ಬನ್ನಿ, ಅತಿಯಾಗಿ ಬೀಜಗಳನ್ನು ಸೇವಿಸುವುದರಿಂದ ಐವ ಸಮಸ್ಯೆಗಳು ಉದ್ಭವಿಸಬಹುದು (Side Effects Of Dry Fruits) ಎಂಬುದನ್ನು ನೋಡೋಣ.

ತೂಕ ಏರಿಕೆ

ಬೀಜಗಳಲ್ಲಿ ಅತ್ಯಂತ ಹೆಚ್ಚು ಪೋಷಕಾಂಶಗಳಿವೆ. ವಿಟಮಿನ್‌ಗಳು, ಖನಿಜಾಂಶಗಳು, ನಾರಿನಂಶ, ಒಳ್ಳೆಯ ಕೊಬ್ಬು, ಸೇರಿದಂತೆ ಎಲ್ಲವೂ ಇದರಿಂದ ಪಡೆಯಬಹುದು. ಆದರೆ ಇವುಗಳ ಸೇವನೆ ಅತಿಯಾದರೆ, ತೂಕದಲ್ಲಿ ದಿಡೀರ್‌ ಏರಿಕೆಯಾಗಬಹುದು. ಬೊಜ್ಜು ಬರಬಹುದು. ಇದರಿಂದ ಸಿಗುವ ಲಾಭಗಳು ನಷ್ಟವಾಗಿ ಪರಿಣಮಿಸಬಹುದು. ಯಾಕೆಂದರೆ, ಹೆಚ್ಚಿನ ಕ್ಯಾಲರಿ ಇರುವ ಬೀಜಗಳನ್ನು ಅತಿಯಾಗಿ ತಿಂದರೆ, ಖಂಡಿತವಾಗಿಯೂ ತೂಕ ಏರಿಕೆಯಾಗಬಹುದು.

ಜೀರ್ಣಕ್ರಿಯೆ ಸಮಸ್ಯೆ

ಜೀರ್ಣಕ್ರಿಯೆಯ ಸಮಸ್ಯೆಗಳೂ ಹಲವರಲ್ಲಿ ಬರುವ ಸಾಧ್ಯತೆಗಳಿವೆ. ಹೊಟ್ಟೆಯುಬ್ಬರ, ಗ್ಯಾಸ್‌, ಬೇದಿ ಇತ್ಯಾದಿಗಳಿಗೂ ಕಾರಣವಾಗಬಹುದು. ಮುಖ್ಯವಾಗಿ ಮೊದಲೇ ಜೀರ್ಣಕ್ರಿಯೆಯ ಸಮಸ್ಯೆ ಇರುವ ಮಂದಿಗೆ, ಸೂಕ್ಷ್ಮವಾದ ಜೀರ್ಣಕ್ರಿಯೆಯನ್ನು ಹೊಂದಿದ ಮಂದಿಯಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ಬಾದಾಮಿ, ಗೋಡಂಬಿಯಂತಹ ಬೀಜಗಳಲ್ಲಿ ಆಕ್ಸಲೇಟ್‌ ಹಾಗೂ ಫೈಟೇಟ್‌ಗಳಿದ್ದು ಇವು ಖನಿಜಾಂಶಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಯನ್ನು ಕಡಿಮೆ ಮಾಡುವ ಕಾರಣ ಬಹಳ ಸಾರಿ, ಕಿಡ್ನಿ ಕಲ್ಲಿನಂತಹ ಸಮಸ್ಯೆಯನ್ನು ಹುಟ್ಟುಹಾಕಬಹುದು.
ಅಷ್ಟೇ ಅಲ್ಲ, ಬೀಜಗಳಲ್ಲಿ ಕೊಬ್ಬಿನಂಶ ಹೇರಳವಾಗಿ ಇರುವುದರಿಂದ ಇವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತೆ. ಇದರಿಂದ ಹೊಟ್ಟೆ ತುಂಬಿರುವ ಅನುಭವವೇ ಹೆಚ್ಚಿರುತ್ತದೆ. ಹೆಚ್ಚು ಬೀಜಗಳನ್ನು ತಿಂದಾಗ ಈ ಭಾವ ಹೆಚ್ಚಿರುವುದರಿಂದ ಹಾಗೂ ಬಹುಬೇಗನೆ ಜೀರ್ಣವಾಗದೆ, ಹೊಟ್ಟೆ ಭಾರವಾದ ಅನುಭವ ನೀರುತ್ತದೆ. ಬೀಜಗಳಲ್ಲಿರುವ ಆಕ್ಸಲೇಟ್‌ ಹಾಗೂ ಫೈಟೇಟ್‌ಗಳು ಪೋಷಕಾಂಶಗಳ ಹೀರಿಕೆಯ ವಿಚಾರದಲ್ಲಿ ಕೆಲವೊಮ್ಮೆ ಅಡ್ಡಿಯನ್ನು ಉಂಟು ಮಾಡುವ ಗುಂವನ್ನೂ ಹೊಂದಿದೆ. ಇದು ಜೀರ್ಣನಾಳಗಳ ಒಳಮೈಗೆ ಕಿರಿಕಿರಿನ್ನು ಉಂಟು ಮಾಡುತ್ತದೆ. ಆಗಾಗ ಬೀಜಗಳನ್ನು ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡವರು ಖಂಡಿತ ತಮ್ಮ ಅಭ್ಯಾಸದ ಬಗ್ಗೆ ಗಮನ ಹರಿಸುವುದು ಸೂಕ್ತ. ಯಾಕೆಂದರೆ ಈ ಅತಿಯಾದ ಬೀಜಗಳ ಸೇವನೆ ಅಭ್ಯಾಸ ಕೊಲೆಸ್ಟೆರಾಲ್‌ ಹಾಗೂ ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಒಳ್ಳೆಯ ಕೊಬ್ಬು ಒಳ್ಳೆಯದಾಗಿಯೇ ವರ್ತಿಸಬೇಕೆಂದರೆ, ಇವುಗಳ ಸೇವನೆ ಹಿತಮಿತವಾಗಿರಬೇಕು.

ಮಿತವಾಗಿ ತಿನ್ನಬೇಕು

ತಜ್ಞರು ಹೇಳುವಂತೆ, ಬೀಜಗಳ ಅತ್ಯುನ್ನತ ಲಾಭಗಳನ್ನು ನಾವು ಪಡೆಯಬೇಕೆಂದರೆ ಅವನ್ನು ಮಿತವಾಗಿ ತಿನ್ನಬೇಕು. ಯಾವುದೂ ಅತಿಯಾಗಬಾರದು. ಬೀಜಗಳಲ್ಲಿ ಆರೋಗ್ಯಕರ ಕೊಬ್ಬು, ನಾರಿನಂಶ, ಪ್ರೊಟೀನ್‌, ವಿಟಮಿನ್‌ ಬಿ ಹಾಗೂ ಇಯಂತಹ ಪೋಷಕ ತತ್ವಗಳಿದ್ದು, ಮೆಗ್ನೀಷಿಯಂ, ಪೊಟಾಶಿಯಂ, ಝಿಂಕ್‌ನಂತಹ ಖನಿಜಾಂಶಗಳಿದ್ದು ಹೇರಳವಾಗಿ ಆಂಟಿ ಆಕ್ಸಿಡೆಂಟ್‌ಗಳೂ ಇವೆ. ಇವನ್ನು ಹಿತಮಿತವಾಗಿ ಸೇವಿಸಿದರೆ ಹೆಚ್ಚು ಲಾಭ ಪಡೆಯಬಹುದು.

ಇದನ್ನೂ ಓದಿ: Sugar Vs Jaggery In Tea: ಸಕ್ಕರೆ ಬದಲು ಬೆಲ್ಲ ಹಾಕಿ ಚಹಾ ಕುಡಿದರೆ ಆರೋಗ್ಯಕ್ಕೆ ನಿಜಕ್ಕೂ ಲಾಭ ಇದೆಯೆ?

ಎಷ್ಟು ತಿನ್ನಬಹುದು

ಹಾಗಾದರೆ ದಿನಕ್ಕೆ ಎಷ್ಟು ತಿನ್ನಬಹುದು ಎಂಬ ಗೊಂದಲ ನಿಮ್ಮನ್ನು ಕಾಡುವುದು ಸಹಜವೇ. ತಜ್ಞರ ಪ್ರಕಾರ, ನಿಮ್ಮ ಮುಷ್ಟಿಯೊಳಗೆ ಹಿಡಿಯುವಷ್ಟು ಬೀಜಗಳನ್ನು ನೀವು ದಿನವೊಂದಕ್ಕೆ ಸೇವಿಸಬಹುದು. ಎಲ್ಲ ಬೀಜಗಳೂ ಸೇರಿ ಅದು ನಿಮ್ಮ ಮುಷ್ಠಿ ಗಾತ್ರಕ್ಕಿಂತ ಹೆಚ್ಚಾಗುವುದು ಬೇಡ. ಅಂದರೆ ಸುಮಾರು ೨೮ ಗ್ರಾಂನಷ್ಟು ಬೀಜಗಳ ಸೇವನೆಯನ್ನು ನೀವು ಮಾಡಬಹುದು. ಈ ಮುಷ್ಠಿಯಲ್ಲಿ ಎಲ್ಲ ಬಗೆಯ ಬೀಜಗಳೂ ಸೇರಿರಲಿ, ಕುಂಬಳಕಾಯಿ ಬೀಜ, ಬಾದಾಮಿ, ವಾಲ್ನಟ್‌, ಗೋಡಂಬಿ, ಕಡಲೆಕಾಯಿ, ಸೂರ್ಯಕಾಂತಿ ಬೀಜ ಇತ್ಯಾದಿಗಳೆಲ್ಲ ನಿಮ್ಮ ಮುಷ್ಠಿ ಗಾತ್ರದಿಂದ ಹೊರಚೆಲ್ಲದಿರಲಿ. ಹೀಗೆ ಮಾಡುವುದರಿಂದ ಈ ಬೀಜಗಳ ಎಲ್ಲ ಬಗೆಯ ಪೋಷಕಾಂಶಗಳ ಲಾಭವನ್ನೂ ನೀವು ಪಡೆಯುವಂತಾಗುತ್ತೀರಿ.

Exit mobile version