Site icon Vistara News

Side Effects Of Fiber: ನಾರಿನ ಅಂಶ ಒಳ್ಳೆಯದು; ಆದರೆ ಅತಿಯಾಗಿ ತಿನ್ನಬಾರದು, ಏಕೆಂದರೆ…

Side Effects Of Fiber

ತಿಯಾದರೆ ಅಮೃತವೂ ವಿಷವೇ! ಇದು ಆಹಾರದ ವಿಷಯದಲ್ಲೂ ಸತ್ಯ. ಯಾವುದೇ ಪೋಷಕಾಂಶ ಏಕಪ್ರಕಾರವಾಗಿ ದೇಹಕ್ಕೆ ದೊರೆಯುತ್ತಿದ್ದರೆ, ಅದು ದೇಹದ ಅಗತ್ಯಕ್ಕಿಂತ ಹೆಚ್ಚಾಗಿದ್ದರೆ, ಹೊಸ ಸಮಸ್ಯೆ ಆರಂಭವಾಗುವುದಕ್ಕೆ ಅಷ್ಟು ಸಾಕು. ಉದಾ, ದೇಹಕ್ಕೆ ನಾರು ಬೇಕು. ಈ ಪೋಷಕಾಂಶ ಉಳಿದ ಆಹಾರಗಳೊಂದಿಗೆ ಸಮನ್ವಯದಲ್ಲಿದ್ದರೆ- ಹೊಟ್ಟೆ ಸ್ವಚ್ಛವಿರಿಸುತ್ತದೆ, ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ನೆರವಾಗುತ್ತದೆ, ಮಧುಮೇಹ ಹತೋಟಿಗೆ ಅನುಕೂಲವಾಗುತ್ತದೆ, ತೂಕ ಇಳಿಕೆ ಸೈ, ಬರಬಾರದ ರೋಗಗಳನ್ನೆಲ್ಲಾ ದೂರ ಇರಿಸಿ ದೀರ್ಘಾಯುವಾಗಲು ನೆರವಾಗುತ್ತದೆ. ಆದರೆ ಬೇಕಾಗುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶ ಹೊಟ್ಟೆಗೆ ಹೋದರೆ, (Side Effects Of Fiber) ಆರೋಗ್ಯ ಹಾಳಾಗಿ ನಾರುವುದಕ್ಕೆ ಅಷ್ಟು ಸಾಕು!

ನಾರಿನ ಅಂಶ ಹೆಚ್ಚು ದೊರೆಯುವುದೆಲ್ಲಿ?

ನಮಗೆ ನಾರಿನ ಸತ್ವಗಳು ಹೆಚ್ಚಾಗಿ ದೊರೆಯುವುದು ಬೇಳೆ-ಕಾಳುಗಳು, ಇಡೀ ಧಾನ್ಯಗಳು, ಹಣ್ಣು-ತರಕಾರಿಗಳಿಂದ. ಮಹಿಳೆಯರಿಗೆ ದಿನವೊಂದಕ್ಕೆ ಸುಮಾರು 22ರಿಂದ 29 ಗ್ರಾಂಗಳಷ್ಟು ನಾರು ಬೇಕಾದರೆ, ಪುರುಷರಿಗೆ ಈ ಪ್ರಮಾಣ 30ರಿಂದ 38 ಗ್ರಾಂಗಳಷ್ಟು. ದಿನಕ್ಕಿಷ್ಟು ಬೇಕು ಎಂಬಂತೆ ಒಂದೇ ಸಮ ತೌಡು ತಿನ್ನುತ್ತಾ ಕುಳಿತರೆ ಆರೋಗ್ಯ ಬುಡಮೇಲಾಗಲು ಎಷ್ಟೊತ್ತು ಬೇಕು? ಎಲ್ಲವೂ ಮಿತಿಯಲ್ಲಿದ್ದರೆ ಸರಿ; ಹಾಗಾಗಿ ದಿನಕ್ಕೆ ಅಗತ್ಯವಿರುವ ಪ್ರಮಾಣವನ್ನು ಆಹಾರಗಳುದ್ದಕ್ಕೂ ಹಂಚುವುದು ಸರಿಯಾದ ಕ್ರಮ. ಅಂದರೆ ಬೆಳಗಿನ ತಿಂಡಿಗೆ ಇದಿಷ್ಟು, ಮಧ್ಯಾಹ್ನ ಇನ್ನಷ್ಟು, ರಾತ್ರಿಗೆ ಉಳಿದಷ್ಟು ಎಂಬಂತೆ. ಒಂದೊಮ್ಮೆ ಸೇವಿಸಿದ ನಾರಿನಂಶ ಹೆಚ್ಚಾದರೆ, ಏನಿದರ ಪಾರ್ಶ್ವ ಪರಿಣಾಮಗಳು?

ಹೊಟ್ಟೆಯ ಸಮಸ್ಯೆ

ಹೊಟ್ಟೆ ನೋವು, ಉಬ್ಬರ, ಅಜೀರ್ಣದಂಥ ಸಮಸ್ಯೆಗಳು ಅತಿಯಾದ ನಾರಿನ ಆಹಾರದಿಂದ ಬರಬಹುದು. ಕಾರಣ, ಇಂಥ ಆಹಾರಗಳು ಪಚನವಾಗಲು ಹೆಚ್ಚು ಸಮಯ ಬೇಕು. ಹಾಗಾಗಿ ಮೇಲಿಂದ ಮೇಲೆ ತುಂಬದೆ, ಸ್ವಲ್ಪವಾಗಿಯೇ ನಾರಿನ ಆಹಾರವನ್ನು ಹೊಟ್ಟೆಗೆ ನೀಡಬೇಕು ಮತ್ತು ಜೀರ್ಣವಾಗಲು ಸಮಯವನ್ನೂ ಕೊಡಬೇಕಾಗುತ್ತದೆ. ಹಾಗಿಲ್ಲದಿದ್ದರೆ ಪಚನಕ್ರಿಯೆಯಲ್ಲಿ ಎಡವಟ್ಟಾಗುವುದು ಖಚಿತ.

ಪೋಷಕಾಂಶಗಳಿಗೂ ಹಿನ್ನಡೆ

ದೇಹಕ್ಕೆ ಬೇಕಾಗುವುದು ಕೇವಲ ನಾರು ಮಾತ್ರವೇ ಅಲ್ಲವಲ್ಲ- ಖನಿಜಗಳು, ಪ್ರೊಟೀನ್‌, ಜೀವಸತ್ವಗಳು, ಕೊಬ್ಬು ಎಲ್ಲವೂ ಸಂತುಲಿತ ಪ್ರಮಾಣದಲ್ಲಿ ಬೇಕಾಗುತ್ತದೆ. ಅತಿಯಾದ ನಾರಿನಿಂದ ಕ್ಯಾಲ್ಶಿಯಂ, ಕಬ್ಬಿಣ, ಸತುವಿನಂಥ ಸತ್ವಗಳನ್ನು ಹೀರಿಕೊಳ್ಳಲು ದೇಹಕ್ಕೆ ತೊಡಕಾಗುತ್ತದೆ. ಹಾಗಾಗಿ ಎಷ್ಟು ಬೇಕು ಎನ್ನುವುದು ಜೊತೆಗೆ ಎಷ್ಟು ಸಾಕು ಎನ್ನುವುದರ ಅರಿವೂ ಅಗತ್ಯ.

ಡಯರಿಯಾ

ಇದಕ್ಕಿದ್ದಂತೆ ದೇಹಕ್ಕೆ ಹೆಚ್ಚಿನ ನಾರಿನಂಶ ದೊರೆತಾದ ಅಜೀರ್ಣದಿಂದ ಡಯರಿಯಾ ಆಗುವ ಸಾಧ್ಯತೆಗಳೂ ಇವೆ. ಉದಾ, ಬಾಳೆಹಣ್ಣು, ಪಾಲಕ್‌ನಂಥ ಸೊಪ್ಪು, ಓಟ್‌ ಮುಂತಾದವುಗಳನ್ನು ಒಂದೇ ದಿನ ಅತಿಯಾಗಿ ತಿಂದಾಗ ಪದೇಪದೆ ಬಾತ್‌ರೂಂ ಕಡೆ ಓಡಾಡುವ ಸಂದರ್ಭಗಳು ಬರಬಹುದು, ಎಚ್ಚರವಿರಲಿ.

ನೀರು ಬೇಕು

ನಾರನ್ನು ನುಚ್ಚುನುರಿ ಮಾಡಿ ದೇಹಕ್ಕೆ ನೀಡುವುದಕ್ಕೆ ನಮ್ಮ ಜೀರ್ಣಾಂಗಕ್ಕೆ ಹೆಚ್ಚಿನ ನೀರು ಬೇಕು. ಅದಿಲ್ಲದಿದ್ದರೆ ಕರುಳಿನಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಕರುಳು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಹಾಗಾಗಿ ಯಥೇಚ್ಛವಾಗಿ ನೀರು ಕುಡಿಯುವುದು ಅಗತ್ಯ.

ಮಲಬದ್ಧತೆ

ಅರೆ, ಇದೇನು! ಮಲಬದ್ಧತೆ ಇರುವವರು ಹೆಚ್ಚು ನಾರು ಸೇವಿಸಬೇಕು ಎನ್ನುವ ಮಾತನ್ನು ಕೇಳಿಯೇ ಇರುತ್ತೇವೆ. ಆದರೆ ಇಲ್ಲಿ ವ್ಯತಿರಿಕ್ತ ಮಾತು ಹೇಳುತ್ತಿದ್ದಾರಲ್ಲಾ ಎಂದು ಯೋಚಿಸಿದರೆ, ಅತಿಯಾಗಿ ಔಷಧಿ ತಿಂದರೂ ಆರೋಗ್ಯ ಹಾಳಾಗುವುದಿಲ್ಲವೇ? ಇದೂ ಹಾಗೆಯೇ. ಡಯರಿಯಾ ಅಥವಾ ಮಲಬದ್ಧತೆ- ಯಾವುದೂ ಬೆನ್ನುಬೀಳಬಹುದು.

ಇದನ್ನೂ ಓದಿ: Health Tips: ನಿತ್ಯ 20 ನಿಮಿಷವೂ ದೈಹಿಕ ಚಟುವಟಿಕೆ ನಡೆಸುವುದಿಲ್ಲವೆ? ಹಾಗಾದರೆ ಅಪಾಯ ಖಚಿತ!

Exit mobile version