Site icon Vistara News

Hair Care Tips: ಕೂದಲಿನ ಆರೈಕೆಗೆ ಸರಳ ಮನೆಮದ್ದುಗಳಿವು

Hair Care Tips

ಚಳಿಗಾಲ ಬಂತಲ್ಲವೇ, ಅಡಿಯಿಂದ ಮುಡಿಯವರೆಗೆ ಹಲವು ರೀತಿಯ ಆರೋಗ್ಯ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ನಳನಳಿಸುತ್ತಿವೆ. ಹೇರ್‌ ಪ್ಯಾಕ್‌, ಹೇರ್‌ ಆಯಿಲ್‌, ಫೇಸ್‌ ಪ್ಯಾಕ್‌, ಫೇಸ್‌ ಮಾಸ್ಕ್‌ನಿಂದ ಹಿಡಿದು ಪೆಡಿಕ್ಯೂರ್‌ ಕಿಟ್‌ವರೆಗೆ ಯಾವುದುಂಟು, ಯಾವುದಿಲ್ಲ. ಅದರಲ್ಲೂ ವಿವಿಧ ಹೇರ್‌ಕೇರ್‌ ಜಾಹೀರಾತುಗಳನ್ನು ನೋಡಿದರೆ, ತಲೆ ಕೂದಲು ಸರಿಯಾಗುತ್ತದೋ ಇಲ್ಲವೋ, ತಲೆ ಕೆಡುವುದಂತೂ ಹೌದು. ನಮ್ಮ ಜೇಬಿಗೂ ದೊಡ್ಡ ಕನ್ನವನ್ನೇ ಹಾಕುತ್ತವೆ. ಈ ದುಬಾರಿ ಬೆಲೆಯ ಉತ್ಪನ್ನಗಳು. ಚಳಿಗಾಲದಲ್ಲಿ ಕೂದಲ ಹೊಟ್ಟು, ಒರಟಾಗುವುದು, ಉದುರುವುದು ಹೆಚ್ಚಾಗುವುದು ನಿಜವಾದರೂ, ಇದನ್ನು ಸರಿಮಾಡಿಕೊಳ್ಳುವುದಕ್ಕೆ ದುಬಾರಿ ಬೆಲೆಯನ್ನೇ ತೆರಬೇಕೆನ್ನುವುದು ನಿಜವಲ್ಲ. ಸರಳವಾದ ಮನೆಮದ್ದುಗಳೂ (Hair care tips) ಪರಿಣಾಮಕಾರಿ ಆಗಿರುತ್ತವೆ.

ಮೆಂತೆ

ಮೆಂತೆ ಕಾಳುಗಳನ್ನು ಸ್ವಲ್ಪ ಕಾಲ ನೆನೆಸಿಟ್ಟುಕೊಳ್ಳಿ. ನಂತರ ಇದನ್ನು ನುಣ್ಣಗೆ ರುಬ್ಬಿ ಪೇಸ್ಟ್‌ ಮಾಡಿಕೊಳ್ಳಿ. ಇದನ್ನು ರುಬ್ಬುವಾಗ ಈರುಳ್ಳಿಯನ್ನು ಸೇರಿಸುವುದರಿಂದ ಪರಿಣಾಮವನ್ನು ಹೆಚ್ಚಿಸಬಹುದು. ಆದರೆ ಈರುಳ್ಳಿ ಸೇರಿಸುವುದರಿಂದ ಬರುವ ಕಿರುಘಾಟು ಕೆಲವರಿಗೆ ಇಷ್ಟವಾಗುವುದಿಲ್ಲ. ಹಾಗಿದ್ದಾಗ ಮೆಂತೆಯನ್ನು ಮಾತ್ರವೇ ರುಬ್ಬಿಕೊಳ್ಳಬಹುದು. ಇದನ್ನು ಕೂದಲ ಬುಡಕ್ಕೆ ಆಮೂಲಾಗ್ರವಾಗಿ ಹಚ್ಚಿ, ಸ್ವಲ್ಪ ಸಮಯದ ನಂತರ ತಲೆಯನ್ನು ಚೆನ್ನಾಗಿ ತೊಳೆಯಿರಿ.

ಎಣ್ಣೆ

ಕೊಬ್ಬರಿ ಎಣ್ಣೆ ಅಥವಾ ಆಲಿವ್‌ ಎಣ್ಣೆಗಳನ್ನು ತಲೆಯ ಬುಡಕ್ಕೆ ಮಸಾಜ್‌ ಮಾಡಿ. ಈ ಎಣ್ಣೆಗಳಿಗೆ ಕರ್ಪೂರದೆಣ್ಣೆಯನ್ನು ಸ್ವಲ್ಪ ಪ್ರಮಾಣದಲ್ಲಿ ಬೆರೆಸಿ ಹಚ್ಚುವುದು ಸಹ ಪರಿಣಾಮಕಾರಿ. ಕೂದಲ ಬುಡಕ್ಕೆ ಎಣ್ಣೆ ಹಚ್ಚುವುದರಿಂದ ಚರ್ಮ ಒಣಗುವುದನ್ನು ತಡೆಯಲು ಸಾಧ್ಯ. ಚರ್ಮ ಒಣಗಿದಂತೆ ಹೊಟ್ಟಾಗುವುದು ಹೆಚ್ಚುತ್ತದೆ.

ನೆಲ್ಲಿಕಾಯಿ

ಇದೀಗ ನೆಲ್ಲಿ ಕಾಯಿಯ ದಿನಗಳು. ತಾಜಾ ನೆಲ್ಲಿ ಕಾಯಿಗಳನ್ನು ರುಬ್ಬಿ ರಸ ತೆಗೆದು, ಅದಕ್ಕೆ ಸ್ವಲ್ಪ ಮದರಂಗಿ ಪುಡಿಯನ್ನು ಸೇರಿಸಿ ಕೂದಲಿಗೆ ಹಚ್ಚಿ, ಕೆಲಕಾಲ ಬಿಟ್ಟು ತಲೆಸ್ನಾನ ಮಾಡಬಹುದು. ಇದರಿಂದ ಹೊಟ್ಟು ಕಡಿಮೆಯಾಗಿ ಕೂದಲು ಸೊಂಪಾಗುತ್ತದೆ. ಅದಿಲ್ಲದಿದ್ದರೆ, ನೆಲ್ಲಿಕಾಯಿಯ ಜೊತೆ, ಕರಿಬೇವಿನ ಸೊಪ್ಪಿನ ರಸ ತೆಗೆದು ಕೊಬ್ಬರಿ ಎಣ್ಣೆಯಲ್ಲಿ ರಸ ಆರುವವರೆಗೆ ಕುದಿಸಿ. ಈ ಎಣ್ಣೆಯನ್ನು ಕೇಶತೈಲವಾಗಿ ಉಪಯೋಗಿಸಬಹುದು.

ಲೋಳೆಸರ

ಅಥವಾ ಅಲೋವೇರಾ ಕೂದಲುಗಳನ್ನು ರಿಪೇರಿ ಮಾಡುವಲ್ಲಿ ಒಳ್ಳೆಯ ಫಲಿತಾಂಶ ನೀಡುತ್ತದೆ. ಲೋಳೆಸರದ ಎಲೆಯಂಥವುಗಳಿಂದ ರಸ ತೆಗೆದು ಕೂದಲಿಗೆ ಹಚ್ಚಿಕೊಳ್ಳಬಹುದು. ಲೋಳೆಸರ ಇಲ್ಲದಿದ್ದರೆ ಮಾತುಕಟ್ಟೆಯಲ್ಲಿರುವ ಉತ್ತಮ ಗುಣಮಟ್ಟದ ಅಲೋವೇರಾ ಜೆಲ್‌ ಸಹ ಬಳಸಬಹುದು.

ಮೊಸರು

ಇದೂ ಸಹ ಹೊಟ್ಟು ತೆಗೆಯುವುದಕ್ಕೆ ಒಳ್ಳೆಯ ಉಪಾಯ. ತಲೆಯ ಒಂದಿಂಚೂ ಬಿಡದಂತೆ ಸಂಪೂರ್ಣವಾಗಿ ಮೊಸರು ಹಚ್ಚಿ. ಸ್ವಲ್ಪ ಕಾಲ ಬಿಟ್ಟು ಚೆನ್ನಾಗಿ ತೊಳೆಯಿರಿ. ಇವಿಷ್ಟೇ ಎಂದಲ್ಲ, ಶುದ್ಧ ಮದರಂಗಿ, ಮೊಟ್ಟೆ ಹೀಗೆ ನಾನಾ ವಸ್ತುಗಳನ್ನು ಮೊಸರಿಗೆ ಮಿಶ್ರ ಮಾಡಿ ಹಚ್ಚಿಕೊಳ್ಳಬಹುದು. ಕೂದಲ ಬುಡದ ಚರ್ಮದ ಶುಷ್ಕತೆಯನ್ನು ಹೋಗಲಾಡಿಸಿ, ಅದನ್ನು ಮೃದುವಾಗಿಸಿ, ಕೂದಲ ಆರೈಕೆ ಮಾಡುವುದರಿಂದ ಚಳಿಗಾಲದಲ್ಲೂ ನೀಳವೇಣಿಯರಾಗೇ ಉಳಿಯಬಹುದು.

ಈರುಳ್ಳಿ ರಸ

ಈರುಳ್ಳಿಯನ್ನು ರುಬ್ಬಿ ರಸ ತೆಗೆಯಿರಿ. ಇದಕ್ಕೆ ಕೆಲವು ಹನಿ ನಿಂಬೆರಸವನ್ನು ಬೆರೆಸಿ. ಇದನ್ನು ಕೂದಲಿನ ಬುಡಕ್ಕೆ ಲೇಪಿಸಿ, ಕೆಲಕಾಲ ಬಿಟ್ಟು ತೊಳೆಯಿರಿ. ಕೇವಲ ನಿಂಬೆರಸವನ್ನೇ ಕೂದಲಿಗೆ ಹಚ್ಚಬಹುದು. ಆದರೆ ನಿಂಬೆ ರಸವನ್ನು ನೇರವಾಗಿ ಕೂದಲಿಗೆ ಹಚ್ಚುವಂತಿಲ್ಲ. ಹಾಗೆ ಮಾಡಿದಲ್ಲಿ ಶುಷ್ಕತೆ ಹೆಚ್ಚಿ, ಕೂದಲಿಗೆ ಹಾನಿಯಾಗಬಹುದು. ನಿಂಬೆ ರಸವನ್ನು ಅಷ್ಟೇ ಪ್ರಮಾಣದ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರ ಮಾಡಿ. ಅದನ್ನು ಕೂದಲಿಗೆ ಹಚ್ಚಿ ಕೆಲಕಾಲ ಬಿಟ್ಟು ಚೆನ್ನಾಗಿ ತೊಳೆಯಿರಿ.

Exit mobile version