Site icon Vistara News

Sipping Tea Or Coffee With Meals: ಊಟತಿಂಡಿ ಜೊತೆಜೊತೆಗೆ ಚಹಾ ಕಾಫಿ ಹೀರುವ ಅಭ್ಯಾಸ ಒಳ್ಳೆಯದೇ, ಕೆಟ್ಟದ್ದೇ?

Sipping Tea Or Coffee With Meals

ಭಾರತೀಯರಿಗೆ ಚಹಾ, ಕಾಫಿಯೆಂದರೆ ಕೇವಲ ಪೇಯಗಳಲ್ಲ. ಇವು ಶಕ್ತಿವರ್ಧಕಗಳಂತೆ ನಮ್ಮನ್ನು ಸದಾ ಪೊರೆಯುತ್ತವೆ. ಬೆಳಗ್ಗೆ ಎದ್ದರೆ ಚಹಾ, ಬೇಸರವಾದರೆ ಚಹಾ, ಸಂತೋಷವಾದರೆ ಚಹಾ, ಗೆಳೆಯರು ಸಿಕ್ಕರೆ ಚಹಾ, ಒಬ್ಬರೇ ಬೋರು ಬಂದರೂ ಚಹಾ, ನಿದ್ದೆ ಬರುವ ಹಾಗನಿಸಿದರೆ ಚಹಾ, ಸುಸ್ತಾದರೆ ಚಹಾ, ಮಳೆ ಬಂದರೆ ಚಹಾ, ಚಳಿಯಾದರೆ ಚಹಾ… ಹೀಗೆ ಚಹಾ ಇಲ್ಲದೆ ಜೀವನವೇ ಇಲ್ಲವೆಂಬಷ್ಟು ಚಹಾ-ಕಾಫಿಯ ಜೊತೆಗೆ ನಂಟು. ಈ ಚಹಾ ಕಾಫಿಗಳು ಒಳ್ಳೆಯದಲ್ಲ, ಹಾಳು ಎಂಬವರ ಬಳಿ, ಇವುಗಳಿಂದ ದೇಹಕ್ಕೆ ಒಳ್ಳೆಯದೂ ಇವೆ ಎಂಬ ವಾದವನ್ನು ಗಟ್ಟಿಯಾಗಿ ಮಂಡಿಸುತ್ತೇವೆ. ಯಾಕೆಂದರೆ ಬಹುತೇಕ ಭಾರತೀಯರಿಗೆ ಚಹಾ ಕೇವಲ ಪೇಯವಲ್ಲ. ಅದು ಭಾವನೆ.
ಅದೇನೇ ಇರಲಿ, ನಮ್ಮಲ್ಲಿ ಅನೇಕರಿಗೆ ಚಹಾ ಅಥವಾ ಕಾಫಿಯನ್ನು ತಿಂಡಿಯ ಜೊತೆಗೆ ಹೀರುವ ಅಭ್ಯಾಸವಿದೆ. ಕೆಲವರು ಎದ್ದ ಕೂಡಲೇ, ಪೇಪರ್‌ ಕೈಗೆತ್ತಿಕೊಂಡು ಕಪ್‌ ಬಾಯಿಗಿಟ್ಟರೆ ಇನ್ನೂ ಕೆಲವರಿಗೆ ತಿಂಡಿಯ ಜೊತೆಗೆ ಬೇಕು. ಮತ್ತೆ ಕೆಲವರಿಗೆ ಎದ್ದ ಕೂಡಲೇ ಕುಡಿದರೂ ತಿಂಡಿಯ ಜೊತೆಗೂ ಬೇಕು. ಮತ್ತೆ ಕೆಲವರಿಗೆ ಊಟದ ಜೊತೆಗೂ ಬೇಕು. ಊಟವಾದ ತಕ್ಷಣ ಒಂದು ಲೋಟ ತುಂಬಾ ಕಾಫಿ ಅಥವಾ ಚಹಾ ಹೀರುವ ಮಂದಿಯೂ ಇದ್ದಾರೆ! ಹಾಗಾದರೆ, ಹೀಗೆ ಚಹಾ ಕಾಫಿಯನ್ನು ಊಟತಿಂಡಿಯ ಜೊತೆಗೆ ಕುಡಿಯುವುದು (Sipping Tea Or Coffee With Meals) ಒಳ್ಳೆಯದೋ ಕೆಟ್ಟದ್ದೋ ಎಂಬ ಪ್ರಶ್ನೆ ಹಲವರಲ್ಲಿ ಇರಬಹುದು. ಅಂಥವರಿಗೆ ಉತ್ತರ ಇಲ್ಲಿದೆ!

ಚಹಾ ಅಥವಾ ಕಾಫಿಯಿಲ್ಲದೆ ಹಲವರು ತಮ್ಮ ದಿನವನ್ನು ಹೇಗೆ ಆರಂಭಿಸುವುದು ಎಂಬ ಯೋಚನೆಯನ್ನೂ ಮಾಡಲಾರರು. ಚಹಾ-ಕಾಫಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು, ದೇಹಕ್ಕೆ ಒಳ್ಳೆಯದು, ಇವು ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆ ಕಳುಹಿಸಲು ಸಹಾಐ ಮಾಡುತ್ತವೆ ಎಂಬ ವಾದಗಳೆಲ್ಲ ಸರಿಯಾದರೂ, ಅತಿಯಾಗಿ ಕುಡಿಯುವುದು ಒಳ್ಳೆಯದಲ್ಲ. ಜೊತೆಗೆ, ಕಾಫಿ ಚಹಾದ ಜೊತೆಗೆ ಬಿಸ್ಕತ್ತು, ರಸ್ಕ್‌, ಬ್ರೆಡ್‌ ಇತ್ಯಾದಿಗಳನ್ನೂ ತೆಗೆದುಕೊಳ್ಳುವುದು ಕೂಡಾ ಒಳ್ಳೆಯದಲ್ಲ. ಅಷ್ಟೇ ಅಲ್ಲ, ತಿಂಡಿಯ ಜೊತೆಗೆ, ಊಟದ ಜೊತೆಗೆ ಕಾಫಿ ಚಹಾ ಕುಡಿಯುವುದು ಖಂಡಿತ ಒಳ್ಳೆಯದಲ್ಲ. ಯಾಕೆ ಗೊತ್ತಾ? ಚಹಾ ಅಥವಾ ಕಾಫಿಯಂಥ ಪೇಯಗಳನ್ನು ತಿಂಡಿಯ ಜೊತೆಗೆ ಕುಡಿದರೆ, ತಿಂದ ಆಹಾರದಲ್ಲಿರುವ ಪೋಷಕಾಂಶಗಳು ಸರಿಯಾಗಿ ದೇಹಕ್ಕೆ ಸೇರದು.

ಇದನ್ನೂ ಓದಿ: Empty Stomach Foods: ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ!

ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನಾವು ಆಹಾರದ ಮೂಲಕ ಸೇವಿಸಿದಾಗ ಅವುಗಳು ಸಂಪೂರ್ಣವಾಗಿ ಸಮರ್ಪಕವಾಗಿ ದೇಹದಲ್ಲಿ ಹೀರಿಕೆಯಾಗಬೇಕಾದರೆ, ಸೂಕ್ತ ವಾತಾವರಣ ಇರಬೇಕು. ಎಲ್ಲ ಪೋಷಕಾಂಶಗಳೂ ಎಲ್ಲ ಸಂದರ್ಭ ಹೀರಿಕೊಳ್ಳಲ್ಪಡುತ್ತದೆ ಎಂಬುದಕ್ಕೆ ಗ್ಯಾರೆಂಟಿ ಇಲ್ಲ. ಆ ಸೂಕ್ತ ವಾತಾವರಣವನ್ನು ನಾವು ನಿರ್ಮಿಸಬೇಕು. ಕಾಫಿ ಹಾಗೂ ಚಹಾದಲ್ಲಿ ಪಾಲಿಫಿನಾಲ್‌ ಹಾಗೂ ಟ್ಯಾನಿನ್‌ ಇರುವುದರಿಂದ ಇವುಗಳು ಆಹಾರದಿಂದ ಸಿಗುವ ಕಬ್ಬಿಣಾಂಶವನ್ನು ದೇಹ ಹೀರಿಕೊಳ್ಳದಂತೆ ಮಾಡುತ್ತದೆ. ಸಸ್ಯಾಧಾರಿತ ಕಬ್ಬಿಣಾಂಶವು ದೇಹಕ್ಕೆ ಸೇರುವ ಪ್ರಕ್ರಿಯೆಯೇ ನಿಧಾನವಿರುವುದರಿಂದ ಹಾಗೂ ಈ ಕ್ರಿಯೆ ಕಾಫಿ ಹಾಗೂ ಚಹಾದ ಜೊತೆ ಇನ್ನೂ ಕಷ್ಟವಾಗುತ್ತದೆ. ಕೇವಲ ಕಬ್ಬಿಣಾಂಶ ಮಾತ್ರವಲ್ಲ, ಬೇರೆ ಪೋಷಕಾಂಶಗಳೂ ಕೂಡಾ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಸೇರದೆ, ಪೋಲಾಗಿ ಬಿಡುತ್ತದೆ. ಹಾಗಾಗಿ, ಚಹಾ ಕಾಫಿಯನ್ನು ಊಟತಿಂಡಿಯ ಜೊತೆಗೆ ಅಥವಾ ಇತರ ಆಹಾರದ ಜೊತೆಗೆ ಸೇವಿಸುವ ಅಭ್ಯಾಸವನ್ನು ಕಡಿಮೆ ಮಾಡಿ. ಸಾಧ್ಯವಾದರೆ, ಕನಿಷ್ಟವೆಂದರೆ ಒಂದು ಗಂಟೆಯ ಸಮಯ ಕೊಡಿ. ನಂತರ ಸೇವಿಸಿ. ಚಹಾ-ಕಾಫಿ ಚಟವಾಗದೆ, ಅದು ದಿನಕ್ಕೆ ಹೆಚ್ಚೆಂದರೆ ಎರಡು ಬಾರಿ ಇರಲಿ. ಅತಿಯಾಗದಂತೆ, ಹಿತಮಿತವಾಗಿ ಚಹಾ ಕಾಫಿ ಸೇವಿಸುವುದು ಯಾವತ್ತಿಗೂ ಒಳ್ಳೆಯದು. ನೆನಪಿಡಿ.

Exit mobile version