ಯಾರಿಗೆ ತಾನೇ ತಾನು ಚಂದ ಕಾಣಬೇಕು ಎಂಬ ಆಸೆಯಿಲ್ಲ ಹೇಳಿ! ಹೀಗಾಗಿಯೇ ಇಂದು ಬಹುತೇಕರು ಚಂದ ಕಾಣಬೇಕು ಎಂದು ಸಾವಿರಾರು ರೂಪಾಯಿಗಳನ್ನು ಸೌಂದರ್ಯವರ್ಧಕಗಳಿಗೆ, ಬ್ಯೂಟಿ ಪಾರ್ಲರುಗಳಿಗೆ ಖರ್ಚು ಮಾಡುವುದು ಸಾಮಾನ್ಯವಾಗಿದೆ. ಅಷ್ಟೇ ಅಲ್ಲ, ಕಡಲೆಹಿಟ್ಟಿನಿಂದ ಹಿಡಿದು ನಿಂಬೆಹಣ್ಣಿನವರೆಗೆ ಎಲ್ಲರೂ ಬಹುತೇಕ ಎಲ್ಲ ಮನೆಮದ್ದುಗಳನ್ನೂ ಮುಖದ ಮೇಲೆ ಪ್ರಯೋಗಿಸುವವರೇ. ಆದರೂ ನಿಗದಿತ ಫಲಿತಾಂಶ ಕಾಣದೆ, ಸೌಂದರ್ಯದ ಬಗ್ಗೆ ಚಿಂತೆ ಮಾಡದೆ ಇರುವ ಮಂದಿಗೇನೂ ಕಡಿಮೆಯಿಲ್ಲ. ಅದರಲ್ಲೂ ವಯಸ್ಸು ಏರುತ್ತ ಹೋಗುವಾಗ 40 ದಾಟುತ್ತಾ ದಾಟುತ್ತಾ ಚರ್ಮದ ಸಮಸ್ಯೆಗಳೂ ಹೆಚ್ಚುತ್ತವೆ. ಚರ್ಮಕ್ಕೆ ವಯಸ್ಸಾಗುತ್ತಾ ಯೌವನದಲ್ಲಿದ್ದ ಹೊಳಪು ಕಡಿಮೆಯಾಗುತ್ತದೆ. ಇದಕ್ಕೆ ಕೇವಲ ಚರ್ಮದ ಹೊರಗಿನ ಕಾಳಜಿ ಮಾತ್ರ ಮುಖ್ಯವಲ್ಲ. ಒಳಗೂ ಕಾಳಜಿ ಬೇಕು. ನಮ್ಮ ದೇಹಕ್ಕೆ ಸೇರುವ ಪೋಷಕಾಂಶಗಳ ಮೇಲೆ ನಮಗೆ ಕಾಳಜಿಯಿದ್ದರೆ ಚರ್ಮವೂ ಹೊಳೆಯುತ್ತದೆ, ಸಮಸ್ಯೆಗಳು ಕಡಿಮೆಯಾಗುತ್ತದೆ. ಹಾಗಾದರೆ ಬನ್ನಿ, 40ರ ನಂತರವೂ ನೀವು ಚರ್ಮದ ಕಾಳಜಿ ಮಾಡಬೇಕಿದ್ದರೆ ಯಾವೆಲ್ಲ ಪೋಷಕಾಂಶಗಳು (skin care foods) ನಮ್ಮ ಹೊಟ್ಟೆಯನ್ನು ಎಷ್ಟು ಪ್ರಮಾಣದಲ್ಲಿ ಸೇರುವುದು ಮುಖ್ಯ ಎಂಬುದನ್ನು ನೋಡೋಣ.
1. ಪ್ರೊಟೀನ್: ಕೂದಲು ಹಾಗೂ ಚರ್ಮದ ಆರೋಗ್ಯಕ್ಕೆ ಸರಿಯಾದ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಪ್ರೊಟೀನ್‌ನ ಅವಶ್ಯಕತೆ ಇದೆ. ನಮ್ಮ ದೇಹದ ತೂಕದ ಪ್ರತಿ ಒಂದು ಕೆಜಿ ತೂಕಕ್ಕೆ ಒಂದು ಗ್ರಾಂ ಪ್ರೊಟೀನ್ ಬೇಕು. ಅಂದರೆ ನೀವು 60 ಕೆಜಿ ತೂಕ ಉಳ್ಳವರಾಗಿದ್ದರೆ 60 ಗ್ರಾಂ ಪ್ರೊಟೀನ್ ದಿನಕ್ಕೆ ನಿಮ್ಮ ಹೊಟ್ಟೆ ಸೇರಬೇಕು. ಪ್ರೊಟೀನ್ ಹೆಚ್ಚಿರುವ ಆಹಾರ ಸೇವನೆಯ ಮೂಲಕ ಈ ಪ್ರಮಾಣವನ್ನು ನೀವು ಪಡೆಯಬಹುದು.
2. ಒಮೆಗಾ 3: ಮೂರೂ ಬಗೆಯ ಒಮೆಗಾ 3 ಅಂದರೆ ಎಎಲ್‌ಎ, ಡಿಹೆಚ್‌ಎ ಹಾಗೂ ಇಪಿಎ ಯನ್ನು ದೇಹ ಪಡೆಯುವುದು ಕಷ್ಟ. ಎಎಲ್‌ಎ ಸಸ್ಯಾಹಾರಿಗಳು ತಮ್ಮ ಸಾಮಾನ್ಯ ಆಹಾರದ ಮೂಲಕ ಪಡೆದುಕೊಂಡರೂ ಉಳಿದೆರಡು ಬಗೆಯ ಒಮೆಗಾ 3 ಪಡೆಯುವುದು ಅಷ್ಟು ಸುಲಭವಲ್ಲ. ಹಾಗಾಗಿ, ಸರಿಯಾದ ಪ್ರಮಾಣದಲ್ಲಿ ಇವೂ ನಮ್ಮ ದೇಹ ಸೇರುವಂತೆ ಆಹಾರ ಸೇವಿಸಬೇಕು.
3. ಹಣ್ಣು ತರಕಾರಿಗಳು: ಹಣ್ಣು ತರಕಾರಿಗಳನ್ನು ನಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೇರಿಸಿಕೊಳ್ಳುವುದು ಬಹಳ ಮುಖ್ಯ. ಇವುಗಳ ಮೂಲಕ ದೇಹಕ್ಕೆ ವಿಟಮಿನ್, ಖನಿಜಾಂಶಗಳು, ನಾರಿನಂಶ ಸೇರಿದಂತೆ ಎಲ್ಲ ಬಗೆಯ ಪೋಷಕಾಂಶಗಳೂ ಲಭ್ಯವಾಗುತ್ತವೆ. ಹಾಗಾಗಿ ಚರ್ಮ ನಳನಳಿಸುತ್ತಿರಲು ನಿತ್ಯವೂ ಬಗೆಬಗೆಯ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸಬೇಕು.
ಇದನ್ನೂ ಓದಿ: Hair And Skin Care Tips For Monsoon: ಮಳೆಗಾಲದಲ್ಲಿ ಕೂದಲು ಮತ್ತು ತ್ವಚೆಯ ಆರೈಕೆ ಹೇಗೆ?
4. ಜೀವಸತ್ವಗಳು ಹಾಗೂ ಖನಿಜಾಂಶಗಳು: ನೀವು ಸೇವಿಸುತ್ತಿರುವ ಆಹಾರಗಳ ಬಗೆಗೆ ತಿಳಿದುಕೊಳ್ಳಿ. ಯಾವ ಬಗೆಯ ಖನಿಜಾಂಶಗಳು ಹಾಗೂ ಜೀವಸತ್ವಗಳು ನೀವು ತಿನ್ನುವ ಆಹಾರದ ಮೂಲಕ ನಿಮ್ಮ ಹೊಟ್ಟೆ ಸೇರುತ್ತದೆ ಎಂಬ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ. ಎಲ್ಲ ಬಗೆಯ ಹಾಗೂ ಬಗೆಬಗೆಯ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ದೇಹಕ್ಕೆ ಸೇರಲಿ. ಜಂಕ್ ಆಹಾರಗಳ ಸೇವನೆ ಆದಷ್ಟೂ ಕಡಿಮೆ ಮಾಡಿ. ಚಿಟಮಿನ್ ಡಿ, ಬಿ12 ಹಾಗೂ ಕಬ್ಬಿಣಾಂಶ ಎಲ್ಲವೂ ನಿಮ್ಮ ಚರ್ಮದ ಆರೋಗ್ಯಕ್ಕೂ ಮುಖ್ಯ ಎಂಬುದು ನೆನಪಿರಲಿ. ಇವು ಸಾಕಷ್ಟು ಪ್ರಮಾಣದಲ್ಲಿ ನಿಮ್ಮ ಹೊಟ್ಟೆಗೆ ಸೇರುತ್ತಿಲ್ಲವಾಗಿದ್ದರೆ, ಇವುಗಳ ಕೊರತೆ ಇದ್ದರೆ, ವೈದ್ಯರ ಸಲಹೆಯ ಮೇರೆಗೆ ಸಪ್ಲಿಮೆಂಟ್ ಸೇವಿಸಿ.
ತಜ್ವರ ಪ್ರಕಾರ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದರಲ್ಲಿ, ಕೇವಲ ಚರ್ಮದ ಹೊರಮೈಯ ಕಾಳಜಿ ಮಾತ್ರ ಮುಖ್ಯವಾಗುವುದಿಲ್ಲ. ಸಾಕಷ್ಟು ಇತರ ಸಂಗತಿಗಳೂ ಇದನ್ನು ಪ್ರಭಾವಿಸುತ್ತವೆ. ಹಾಗಾಗಿ, ನಿಗದಿತ ವ್ಯಾಯಾಮ, ಉತ್ತಮ ಆಹಾರ ಸೇವನೆ ಎಲ್ಲವೂ ಇದ್ದರೆ ಚರ್ಮ ಸೇರಿದಂತೆ ದೇಹ ಉತ್ತಮ ಆರೋಗ್ಯ ಸಂಪಾದನೆಯಲ್ಲಿ ಹಿಂದೆ ಬೀಳದು.
ಇದನ್ನೂ ಓದಿ: Korean Skin v/s Indian Skin: ಕೊರಿಯನ್ ಗ್ಲಾಸ್ ಸ್ಕಿನ್ ವರ್ಸಸ್ ಇಂಡಿಯನ್ ತ್ವಚೆ! ಅವರಂತಾಗಲು ಸಾಧ್ಯವಿಲ್ಲ ಯಾಕೆ?