ವಯಸ್ಸಾಗುವುದು ಪ್ರಕೃತಿ ಸಹಜ ಕ್ರಿಯೆ. ವಯಸ್ಸಾದಂತೆ ನಮ್ಮ ಚರ್ಮ ನಿಧಾನವಾಗಿ ಬದಲಾಗಲಾರಂಭಿಸುತ್ತದೆ. ಅಷ್ಟರವರೆಗೆ ಮಿರಮಿರ ಮಿನುಗುತ್ತಿದ್ದ ಚರ್ಮ ಎಷ್ಟೇ ಆರೋಗ್ಯವಂತರಾದರೂ, ಹೊಳಪನ್ನು ಕಳೆದುಕೊಳ್ಳದಿದ್ದರೂ ತನ್ನ ಬಿಗುವನ್ನು ಕಳೆದುಕೊಂಡು ಸುಕ್ಕುಗಟ್ಟುತ್ತಾ ಸಾಗುತ್ತದೆ. ಎಂಥಾ ಸೆಲೆಬ್ರಿಟಿಯೇ ಆಗಿರಲಿ, ಎಷ್ಟೇ ಶ್ರೀಮಂತರೇ ಆಗಿರಲಿ, ಎಂಥ ಜಾದೂಗಾಋನೇ ಇರಲಿ, ತನ್ನ ವಯಸ್ಸಾಗುವಿಕೆಯನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಆದರೆ, ಚರ್ಮಕ್ಕೆ ವಯಸ್ಸಾಗುವಿಕೆಯನ್ನು ಕೊಂಚ ಮಟ್ಟಿಗಾದರೂ ಕೆಲವು ಆಹಾರ ಕ್ರಮಗಳ ಮೂಲಕ ನಿಧಾನವಾಗಿಸಬಹುದು. ಅಂದರೆ, ನಲವತ್ತರ ವಯಸ್ಸಿನಲ್ಲಿ ಐವತ್ತರಂತೆ ಕಾಣುವ ಬದಲು ಮೂವತ್ತರಂತೆ ಕಂಗೊಳಿಸಬೇಕೆಂದರೆ, ಕಟ್ಟುನಿಟ್ಟಾಗಿ ಶಿಸ್ತುಬದ್ಧ ಆಹಾರಕ್ರಮದಿಂದ ಸಾಧ್ಯವಿದೆ. ಹಾಗಾದರೆ ಬನ್ನಿ, ವಯಸ್ಸಾಗದಂತೆ ನೀವು ಕಾಣಬಾರದು ಹಾಗೂ ನಿಮ್ಮ ಚರ್ಮ ಆರೋಗ್ಯದಿಂದ ಕಂಗೊಳಿಸಬೇಕು (Skin Care) ಎಂಬ ಬಯಕೆ ನಿಮ್ಮಲ್ಲಿದ್ದರೆ, ಈ ಕೆಳಗಿನ ಆಹಾರಗಳಿಂದ ದೂರವಿರಿ, ಅಥವಾ ಕಡಿಮೆ ಮಾಡಿ!
ಸಿಹಿತಿಂಡಿ
ಸಿಹಿತಿಂಡಿ ಎಂದರೆ ಪಂಚಪ್ರಾಣವೇ? ಸಿಹಿತಿಂಡಿ ನಿತ್ಯವೂ ತಿನ್ನುತ್ತೀರಾ? ಹಾಗಿದ್ದರೆ ನಿಮ್ಮ ಚರ್ಮಕ್ಕೆ ಬೇಗನೆ ವಯಸ್ಸಾಗುತ್ತದೆ! ಹೌದು, ಸಿಹಿತಿಂಡಿ ನಿಮ್ಮ ಚರ್ಮಕ್ಕೆ ಹಾನಿ ಮಾಡಬಲ್ಲ ಪ್ರಮುಖ ಆಹಾರ. ಇದು ನಿಮ್ಮ ನಾಲಿಗೆಗೆ ಸಂತೋಷ ನೀಡಬಹುದಾದರೂ, ನಿಮ್ಮ ಚರ್ಮಕ್ಕಲ್ಲ. ಇದನ್ನು ಹೆಚ್ಚು ತಿನ್ನುವುದರಿಂದ ಚರ್ಮದಲ್ಲಿ ಗ್ಲೈಕೇಶನ್ ಎಂಬ ಕ್ರಿಯೆ ನಡೆಯುವ ಮೂಲಕ ಸಕ್ಕರೆಯ ಅಂಶ ದೇಹದ ಪ್ರೊಟೀನ್ ಜೊತೆಗೆ ಸೇರಿ ಕೊಲಾಜೆನ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರೊಟೀನು ಚರ್ಮವನ್ನು ಯೌವನಾವಸ್ಥೆಯಲ್ಲಿಟ್ಟುಕೊಳ್ಳಲು ಸಹಾಯ ಮಾಡುವ ಕಾರಣ, ಹೆಚ್ಚು ಸಕ್ಕರೆ ತಿನ್ನುವುದು ಚರ್ಮದ ಸುಕ್ಕು, ನೆರಿಗೆ ಹಾಗೂ ಜೋತು ಬೀಳುವಿಕೆಯಂಥ ಸಮಸ್ಯೆಗೆ ನಿಧಾನವಾಗಿ ಕಾರಣವಾಗಬಹುದು.
ಮದ್ಯಪಾನ
ಗೆಳೆಯರ ಜೊತೆ ಪಾರ್ಟಿ ಇತ್ಯಾದಿ ಇಷ್ಟವೇ? ಡ್ರಿಂಕ್ಸ್ ಇಲ್ಲದೆ, ಪಾರ್ಟಿ ಹೇಗೆ ಎನ್ನುತ್ತೀರಾ? ಹಾಗಾದರೆ ಇಲ್ಲಿ ಕೇಳಿ. ಮದ್ಯಪಾನದಿಂದ ನಿಮ್ಮ ಚರ್ಮಕ್ಕೆ ಖಂಡಿತ ಒಳ್ಳೆಯದಾಗದು. ಇವೆಲ್ಲ ಖುಷಿಗಳನ್ನು ಮಿಸ್ ಮಾಡಲು ಮನಸ್ಸಿಲ್ಲದಿದ್ದರೆ, ನಿಮ್ಮ ಆರೋಗ್ಯ ಹಾಗೂ ಚರ್ಮದ ಆರೋಗ್ಯವನ್ನೂ ನೀವು ಬೆಲೆ ತೆರಲೇಬೇಕಾಗುತ್ತದೆ. ನಿತ್ಯವೂ ಇಂಥ ಕೆಟ್ಟ ಚಟಕ್ಕೆ ದಾಸರಾದರೆ ಆರೋಗ್ಯವೂ, ಜೊತೆಗೆ ಸೌಂದರ್ಯವೂ ಹಾಳಾಗುತ್ತದೆ. ಹೆಚ್ಚು ಆಲ್ಕೋಹಾಲ್ ಕುಡಿಯುವುದರಿಂದ ಚರ್ಮದಲ್ಲಿ ಸುಕ್ಕು ಹೆಚ್ಚಾಗುತ್ತದೆ. ಪಿತ್ತಕೋಶಕ್ಕೆ ಹಾನಿಯಾಗಿ ಹೊಸ ಅಂಗಾಂಶಗಳ ಉತ್ಪಾದನೆಯ ಶಕ್ತಿ ಕಡಿಮೆಯಾಗುತ್ತದೆ.
ಸಂಸ್ಕರಿಸಿದ ಮಾಂಸ
ಸಂಸ್ಕರಿಸಿದ ಮಾಂಸವೂ ಕೂಡಾ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಸಂಸ್ಕರಿಸಿದ ಮಾಂಸದಲ್ಲಿ ಪ್ರಿಸರ್ವೇಟಿವ್‌ಗಳು, ರುಚಿಕಾರಕಗಳೂ ಸೇರಿಸಿರುವುದರಿಂದ ಇವುಗಳ ಪರಿಣಾಮ ಖಂಡಿತವಾಗಿಯೂ ಆರೋಗ್ಯದ ಮೇಲೆ ಆಗುತ್ತದೆ. ಇದರಲ್ಲಿ ಹೆಚ್ಚು ಸೋಡಿಯಂ ಇರುವುದರಿಂದ ಹೃದಯ ಸಂಬಂಧೀ ರೋಗಗಳೂ ಉಂಟಾಗಬಹುದು.
ಫಾಸ್ಟ್‌ಫುಡ್
ಫಾಸ್ಟ್ ಜೀವನದಲ್ಲಿ ಫಾಸ್ಟ್‌ಫುಡ್ ಇಲ್ಲದೆ ಹೇಗೆ ಎಂದು ಕೇಳಬಹುದು. ಫಾಸ್ಟ್ ಫುಡ್ ರುಚಿ ಒಮ್ಮೆ ಹಚ್ಚಿಕೊಂಡರೆ, ಬಿಡುವುದಾದರೂ ಹೇಗೆ ಅಲ್ಲವೇ? ಆದರೆ, ಫಾಸ್ಟ್ ಫುಡ್ ಒಳ್ಳೆಯದಲ್ಲ ಎಂಬ ಸತ್ಯ ಎಲ್ಲರಿಗೂ ಅರಿವಿದೆ. ಕರಿದ, ರುಚಿರುಚಿಯಾದ ಫಟಾಫಟ್ ತಿನಿಸುಗಳು ದೇಹದಲ್ಲಿ ಆಮ್ಲೀಯ ಒತ್ತಡವನ್ನು ಹೆಚ್ಚಿಸುವುದಲ್ಲದೆ, ಚರ್ಮದ ರಂಧ್ರಗಳನ್ನು ಮುಚ್ಚುತ್ತವೆ. ಇದರಿಂದ ಚರ್ಮ ಬಹುಬೇಗನೆ ವಯಸ್ಸಾದಂತೆ ಕಾಣಬಹುದು. ಜೊತೆಗೆ ಆರೋಗ್ಯವೂ ಹಾಳಾದರೆ, ಚರ್ಮ ಸುಂದರವಾಗಿ ಕಾಣದು.
ಆಲೂಗಡ್ಡೆ ಚಿಪ್ಸ್
ಆಲೂಗಡ್ಡೆ ಚಿಪ್ಸ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ಒಮ್ಮೆ ಒಂದು ಚಿಪ್ಸ್ ಬಾಯಿಗಿಟ್ಟರೆ ಪ್ಯಾಕೆಟ್ ಮುಗಿಯುವವರೆಗೆ ಕೈಎತ್ತಲು ಮನಸ್ಸಾಗದು ನಿಜ. ಚಿಪ್ಸ್ ಒಳ್ಳೆಯದಲ್ಲ ಎಂದು ಗೊತ್ತಿದ್ದೂ ಬಿಡಲು ಸಾಧ್ಯವಾಗದು. ಆದರೆ, ಈ ಚಿಪ್ಸ್ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮದ ಸೌಂದರ್ಯಕ್ಕೂ ವೈರಿಯೇ. ಇದನ್ನು ಎಣ್ಣೆಯಲ್ಲಿ ಕರಿಯುವುದರಿಂದ ಹಾಗೂ ಟ್ರಾನ್ಸ್ ಫ್ಯಾಟ್ ಸಾಕಷ್ಟು ಮಟ್ಟದಲ್ಲಿರುವುದರಿಂದ ಚರ್ಮಕ್ಕೂ ಆರೋಗ್ಯಕ್ಕೂ ಹಾನಿಯುಂಟು ಮಾಡುತ್ತದೆ. ಚರ್ಮದ ಸೌಂದರ್ಯ ಹಾಗೂ ಆರೋಗ್ಯಕ್ಕೆ ಒಂದಕ್ಕೊಂದು ಸಂಬಂಧ ಇರುವುದರಿಂದ ಆರೋಗ್ಯ ಹಾಳಾದರೆ ಚರ್ಮವೂ ಹಾಳು ಎಂಬುದು ಸತ್ಯ.
ಇದನ್ನೂ ಓದಿ: Summer Drinks: ಬೇಸಿಗೆ ಧಗೆಗೆ ನಿಂಬೆಹಣ್ಣಿನ ಪಾನಕಗಳ ಥರಹೇವಾರಿ ಐಡಿಯಾಗಳು ಇಲ್ಲಿವೆ!