Site icon Vistara News

Skin Care Tips in Kannada: ಈ ಕಾರಣಕ್ಕಾಗಿ ನೀವು ಸನ್‌ಸ್ಕ್ರೀನ್‌ ಹಚ್ಚಿಕೊಳ್ಳಲೇಬೇಕು!

Skin Care Tips in Kannada

ಬಿಸಿಲಿಗೆ (sunny) ಹೊರಗೆ ಹೋಗುವ (Skin Care Tips in Kannada) ಮುನ್ನ ಮುಖದ ಚರ್ಮಕ್ಕೆ ಸನ್‌ಸ್ಕ್ರೀನ್‌ (sunscreen) ಹಚ್ಚಿಕೊಳ್ಳಬೇಕು ಎಂಬ ಕಿವಿಮಾತನ್ನು ನೀವು ಕೇಳಿರಬಹುದು. ಬಹುತೇಕರು ಇದನ್ನು ಪಾಲಿಸುತ್ತಾರೆ ಕೂಡ. ಆದರೆ, ಕೆಲವರು, ಉಡಾಫೆ ಮಾಡುವ ಜೊತೆಗೆ, ಬಿಸಿಲಿನಿಂದ ಚರ್ಮಕ್ಕೆ ಅಂಥದ್ದೇನೂ ಆಗಲ್ಲ, ಹೆಚ್ಚೆಂದರೆ ಸ್ವಲ್ಪ ಕಪ್ಪಾದೇನು (black) ಎಂದುಕೊಂಡು ಯಾವ ಸನ್‌ಸ್ಕ್ರೀನ್‌ಗಳ ಸಹವಾಸಕ್ಕೂ ಹೋಗುವುದಿಲ್ಲ.

ಚರ್ಮದ ತಜ್ಞರು (Skin specialist) ಹೇಳುವ ಪ್ರಕಾರ, ಸನ್‌ಸ್ಕ್ರೀನ್‌ ಹಚ್ಚದೇ ಇರುವುದರಿಂದ ಕೇವಲ ಕಪ್ಪಾಗುವುದಷ್ಟೇ ಅಲ್ಲ ಇತರ ಪರಿಣಾಮಗಳೂ ಇವೆ ಎನ್ನುತ್ತಾರೆ. ಸನ್‌ಸ್ಕ್ರೀನ್‌ ಹಚ್ಚುವುದರಿಂದ ಚರ್ಮಕ್ಕೆ ಸಾಕಷ್ಟು ಲಾಭಗಳಿವೆ. ಅವು ಯಾವುದು ಎಂಬುದನ್ನು ನೋಡೋಣ.

ಚರ್ಮದ ಕ್ಯಾನ್ಸರ್‌ ಅಪಾಯ ತಪ್ಪಿಸುತ್ತದೆ

ಸನ್‌ಸ್ಕ್ರೀನ್‌ ಹಚ್ಚುವುದರಿಂದ ಸೂರ್ಯನಿಂದ ಹೊರಬರುವ ಅಲ್ಟ್ರಾವಯಲೆಟ್‌ (ಯುವಿ) ಕಿರಣಗಳು ನೇರವಾಗಿ ನಿಮ್ಮ ಚರ್ಮವನ್ನು ತಾಕುವುದು ತಪ್ಪುತ್ತದೆ. ಹೀಗೆ ಈ ಕಿರಣಗಳು ಚರ್ಮವನ್ನು ನೇರವಾಗಿ ತಾಕುವುದರಿಂದ ಡಿಎನ್‌ಎಗಳ ಮೇಲೆ ಪರಿಣಾಮ ಬೀರಿ ಚರ್ಮದ ಕ್ಯಾನ್ಸರ್‌ನಂತಹ ಕಾಯಿಲೆಯೂ ಬರುವ ಅಪಾಯವಿದೆ. ನಿತ್ಯವೂ ಸನ್‌ಸ್ಕ್ರೀನ್‌ ಹಚ್ಚುವುದರಿಂದ ಮೆಲನೋಮ, ಕಾರ್ಸಿನೋಮಾದಂತಹ ಕ್ಯಾನ್ಸರ್‌ ಬರುವ ಅಪಾಯವನ್ನು ತಪ್ಪಿಸಬಹುದು. ಚರ್ಮದ ಮೇಲೆ ಯುವಿ ಕಿರಣಗಳಿಂದಾಗುವ ಹಾನಿಯನ್ನು ಕಡಿಮೆ ಮಾಡಬಹುದು.


ಚರ್ಮದ ಬಹುಪದರಗಳ ಮೇಲೆ ಹಾನಿ

ಯುವಿ ಕಿರಣಗಳಿಂದ ಚರ್ಮದ ಮೇಲೆ ಹಾನಿಯಾಗಿ ಸನ್‌ಬರ್ನ್‌ ಆಗುವ ಅಪಾಯ ಹೆಚ್ಚು. ಈ ಕಿರಣಗಳು, ಕೇವಲ ಚರ್ಮದ ಮೇಲ್ಮೈಯ ಮೇಲಷ್ಟೇ ಅಲ್ಲ, ಚರ್ಮದ ಬಹುಪದರಗಳ ಮೇಲೂ ಹಾನಿ ಮಾಡುತ್ತದೆ. ಇದರಿಂದ ಚರ್ಮ ಕೆಂಪಾಗುವುದು, ಉರಿಯೂತ, ನೋವು ಇತ್ಯಾದಿಗಳಾಗುತ್ತವೆ. ಸನ್‌ಸ್ಕ್ರೀನ್‌ ಹಚ್ಚಿದರೆ ಈ ಹಾನಿಯನ್ನು ತಪ್ಪಿಸಬಹುದು.

ಚರ್ಮದ ಬಿಗುತನ

ಯುವಿ ಕಿರಣಗಳು ಚರ್ಮದ ಒಳಗಿನ ಪದರವರೆಗೆ ತಲುಪಿ ಕೊಲಾಜೆನ್‌ ಹಾಗೂ ಇಲಾಸ್ಟಿನ್‌ ಫೈಬರ್‌ಗಳನ್ನು ಒಡೆಯುವ ಮೂಲಕ ಚರ್ಮದ ಮೇಲೆ ನೆರಿಗೆಗಳು, ಕಪ್ಪು ಚುಕ್ಕೆಗಳನ್ನು ಹೆಚ್ಚು ಮಾಡುತ್ತದೆ. ಚರ್ಮ ಜೋತು ಬೀಳುತ್ತದೆ. ಚರ್ಮದ ಬಿಗುತನ ಕಡಿಮೆಯಾಗುತ್ತದೆ.

ಕಪ್ಪು ಕಲೆ

ಯುವಿ ಕಿರಣಗಳು ಮೆಲನೋಸೈಟ್‌ಗಳನ್ನು ಪ್ರಚೋದಿಸುವ ಕಾರಣದಿಂದ ಮೆಲನಿನ್‌ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ ಚರ್ಮದ ಮೇಲೆ ಕಪ್ಪು ಕಲೆಗಳು, ಅಲ್ಲಲ್ಲಿ ಬದಲಾದ ಚರ್ಮದ ಬಣ್ಣ ಇತ್ಯಾದಿ ಸಮಸ್ಯೆಗಳು ಆರಂಭವಾಗುತ್ತದೆ. ಸನ್‌ಸ್ಕ್ರೀನ್‌ ಹೀಗಾಗದಂತೆ ತಡೆಗಟ್ಟುತ್ತದೆ.


ಅಲರ್ಜಿಯಂತಹ ಸಮಸ್ಯೆ

ಕೆಲವು ಮಂದಿಯ ಚರ್ಮ ಸೂರ್ಯನ ಬೆಳಕಿಗೆ ತೆರೆದುಕೊಂಡ ತಕ್ಷಣ ಅಲರ್ಜಿಯಂತಹ ಸಮಸ್ಯೆಗಳು ಉಂಟಾಗುತ್ತದೆ. ಸನ್‌ಸ್ಕ್ರೀನ್‌ ಹಚ್ಚುವುದರಿಂದ ಇದನ್ನು ತಡೆಯಬಹುದು.

ಅಂಗಾಂಶಗಳ ಮೇಲೆ ಕೆಟ್ಟ ಪರಿಣಾಮ

ಯುವಿ ಕಿರಣಗಳು ಫ್ರೀ ರ್ಯಾಡಿಕಲ್ಸ್‌ಗಳ ಬಿಡುಗಡೆಗೆ ಉದ್ದೀಪಿಸುವುದರಿಂದ ಇದು ಚರ್ಮದ ಅಂಗಾಂಶಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸನ್‌ಸ್ಕ್ರೀನ್‌ನಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಇದನ್ನು ಕಡಿಮೆ ಮಾಡುತ್ತವೆ. ವಾತಾವರಣದಲ್ಲಿರುವ ಮಾಲಿನ್ಯ ಚರ್ಮವನ್ನು ನೇರವಾಗ ತಲುಪದಂತೆಯೂ ನೋಡಿಕೊಳ್ಳುತ್ತದೆ.

ಒಣ ಚರ್ಮ

ಸೂರ್ಯನ ಬೆಳಕಿನ ಚರ್ಮ ಹೆಚ್ಚು ಹೊತ್ತು ತೆರೆದೇ ಇರುವುದರಿಂದ ಚರ್ಮ ಒಣಗಿದಂತಾಗುತ್ತದೆ. ಚರ್ಮದ ಮೇಲಿನ ನೀರಿನಂಶ ಆರಿಹೋಗುವುದು ಸೇರಿದಂತೆ ನಾನಾ ಸಮಸ್ಯೆಗಳು ಕಾಡುತ್ತವೆ. ಇದರಿಂದ ಚರ್ಮ ನಿಸ್ತೇಜವಾಗಿ, ಒಣವಾಗಿ ಕಾಣಿಸುತದೆ. ತಾಜಾತನ ಮಾಯವಾಗುತ್ತದೆ.

ಇದನ್ನೂ ಓದಿ: Most Costly Medicine: ಒಂದೇ ಒಂದು ಡೋಸ್ ಗೆ 17 ಕೋಟಿ ರೂ! ಈ ಔಷಧ ಏಕೆ ಇಷ್ಟೊಂದು ದುಬಾರಿ?

ನೀರುಗುಳ್ಳೆ, ಕಜ್ಜಿ ಸಂಭವ

ಬೇಸಿಗೆಯ ಬಿಸಿಲಿಗೆ ಚರ್ಮ ಸದಾ ತೆರೆದಿರುವುದರಿಂದ ಬೇಸಿಗೆ ನೀರುಗುಳ್ಳೆಗಳು, ಕಜ್ಜಿಗಳು ಬರುವ ಸಂಭವವೂ ಇರುತ್ತದೆ. ಸನ್‌ಸ್ಕ್ರೀನ್‌ ಹಚ್ಚುವುದರಿಂದ ಇಂಥ ಸಮಸ್ಯೆ ಬರಲಾರದು.

ರಕ್ಷಣಾ ಕವಚ

ಸನ್‌ಸ್ಕ್ರೀನ್‌ ಹಚ್ಚುವುದಕ್ಕೂ ಮೊದಲು ನೀವು ಹಚ್ಚಿದ ಮಾಯ್‌ಶ್ಚರೈಸರ್‌ ಅಥವಾ ಇತರ ಕ್ರೀಂಗಳು ನಿಮ್ಮ ಚರ್ಮದೊಳಕ್ಕೆ ಸರಿಯಾಗಿ ಇಳಿಯುತ್ತವೆ ಹಾಗೂ ಇದಕ್ಕೆ ರಕ್ಷಣಾ ಕವಚವಾಗಿ ಸನ್‌ಸ್ಕ್ರೀನ್‌ ಲೋಶನ್‌ ಕೆಲಸ ಮಾಡುತ್ತದೆ. ಹೀಗಾಗಿ, ಮೊದಲು ಹಚ್ಚಿದ ಕ್ರೀಂಗಳ ಸದ್ಬಳಕೆಯನ್ನು ಚರ್ಮ ಮಾಡಿಕೊಳ್ಳುತ್ತದೆ.

Exit mobile version