Site icon Vistara News

Skin Care Tips: ಹೊಳಪಿನ ಚರ್ಮಕ್ಕೆ ಈ ಐದು ಬೀಜಗಳನ್ನು ಸೇವಿಸಿ!

skin care seeds

ಚರ್ಮದ ಆರೋಗ್ಯದ (skin health) ಬಗ್ಗೆ ತಲೆ ಕೆಡಿಸಿಕೊಳ್ಳದವರಿಲ್ಲ. ಆದರೆ, ಆರೋಗ್ಯಕರ ಚರ್ಮವನ್ನು ರಾತ್ರಿ ಬೆಳಗಾಗುವುದರೊಳಗೆ ಪಡೆಯಲಾಗುವುದಿಲ್ಲ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಹೊಳೆಯುವ ಚರ್ಮದ ರಹಸ್ಯ ನಾವು ತಿನ್ನುವ ಆರೋಗ್ಯಕರ ಆಹಾರದಲ್ಲಿಯೂ ಅಡಗಿದೆ ಎಂಬ ಸತ್ಯವನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ಕೇವಲ, ಚರ್ಮದ ಹೊರ ಆರೈಕೆ ಸಾಲದು. ಹಣ್ಣು ಹಂಪಲುಗಳು, ತರಕಾರಿಗಳು, ಒಣಹಣ್ಣು, ಬೀಜಗಳು ಸೇರಿದಂತೆ ಎಲ್ಲ ಬಗೆಯ ಆಹಾರದ ಅವಶ್ಯಕತೆಯೂ ಚರ್ಮಕ್ಕಿದೆ. ಅದರಲ್ಲೂ ಕೆಲವು ಬೀಜಗಳು ಚರ್ಮಕ್ಕೆ ವಿಶೇಷ ಆರೈಕೆಯನ್ನು (Skin Care Tips) ಮಾಡುತ್ತದೆ. ನಮ್ಮ ಚರ್ಮ ಹೊಳಪಿನಿಂದ ಕೂಡಿರಬೇಕಾದರೆ, ಈ ಕೆಳಗಿನ ಬೀಜಗಳನ್ನು (skin care food) ನಾವು ನಮ್ಮ ನಿತ್ಯಾಹಾರದಲ್ಲಿ ಸೇರಿಸಿಕೊಳ್ಳಬಹುದು.

1. ಕುಂಬಳಕಾಯಿ ಬೀಜ: ಕುಂಬಳಕಾಯಿ ಬೀಜದಲ್ಲಿ ವಿಟಮಿನ್‌ ಇ ಇರುವುದರಿಂದ ಚರ್ಮಕ್ಕೆ ಪೂರಕ. ಬೀಜಗಳಲ್ಲಿ ಝಿಂಕ್‌ ಹೇರಳವಾಗಿ ಇರುವುದರಿಂದ ಕೊಲಾಜೆನ್‌ ಉತ್ಪಾದನೆಗೆ ಪ್ರಚೋದಿಸುತ್ತದೆ. ಇದರಿಂದ ಚರ್ಮವು ನಯವಾಗಿ ಹೊಳಪಾಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ಫ್ಯಾಟಿ ಆಸಿಡ್‌ಗಳು ಚರ್ಮಕ್ಕೆ ಬೇಕಾದ ಕೊಬ್ಬಿನ ಅಂಶವನ್ನೂ ನೀಡಿ, ಚರ್ಮ ಒಣಕಲಾಗದಂತೆ ಹಾಗೂ ಒರಟಾಗದಂತೆ ನೋಡಿಕೊಳ್ಳುತ್ತದೆ. ಕುಂಬಳಕಾಯಿ ಬೀಜಗಳನ್ನು ಹುರಿದು, ಆಹಾರಗಳ ಮೇಲೆ ಅಲಂಕಾರಕ್ಕೆ ಅಥವಾ ಸಲಾಡ್‌ ಜೊತೆಗೆ ಅಥವಾ ಹಾಗೆಯೇ ಹುರಿದು ತಿನ್ನಬಹುದು.

2. ಚಿಯಾ ಬೀಜಗಳು: ಚಿಯಾ ಬೀಜಗಳಲ್ಲಿ ತಂಪಾಗಿಸುವ ಗುಣ ಇದೆ. ಇದರಲ್ಲಿರುವ ಒಮೆಗಾ ೩ ಫ್ಯಾಟಿ ಆಸಿಡ್‌ ಚರ್ಮದ ಊತ ಹಾಗೂ ಒರಟಾಗುವಿಕೆಯನ್ನು ತಪ್ಪಿಸುತ್ತದೆ. ಸುಕ್ಕು ಹಾಗೂ ವಯಸ್ಸಾದಂತೆ ಹೆಚ್ಚಾಗುವ ಗೆರೆಗಳನ್ನು ಇದು ಕಡಿಮೆಗೊಳಿಸುತ್ತದೆ. ಇದನ್ನು ಮುಖದ ಚರ್ಮಕ್ಕೆ ಲೇಪಿಸಿಕೊಳ್ಳಲೂ ಬಳಸಬಹುದಾಗಿದ್ದು ಇದರಿಂದ ಕೇವಲ ಚರ್ಮವಲ್ಲದೆ, ತೂಕ ಇಳಿಕೆ, ಕೊಲೆಸ್ಟೆರಾಲ್‌ ಇಳಿಕೆ ಹಾಗೂ ಜೀರ್ಣಕ್ರಿಯೆ ಚುರುಕಾಗಿಸುವಿಕೆ ಸೇರಿದಂತೆ ಅನೇಕ ಆರೋಗ್ಯಕರ ಲಾಭಗಳನ್ನೂ ಪಡೆಯಬಹುದು. ಚಿಯಾ ಬೀಜಗಳನ್ನು ಹೇಗೆ ತಿನ್ನುವುದು ಎಂದು ತಲೆಬಿಸಿ ಮಾಡಿಕೊಳ್ಳಬೇಡಿ. ಯಾವುದಾದರೂ ಜ್ಯೂಸ್‌, ಸ್ಮೂದಿ ಜೊತೆಗೆ ನೆನೆಸಿ ಇದನ್ನು ತಿನ್ನಬಹುದು.

3. ಸೂರ್ಯಕಾಂತಿ ಬೀಜಗಳು: ಚರ್ಮದ ಮೇಲೆ ಮ್ಯಾಜಿಕ್‌ ಮಾಡಬಲ್ಲ ಬೀಜಗಳ ಪೈಕಿ ಸೂರ್ಯಕಾಂತಿ ಬೀಜ ಪ್ರಮುಖವಾದುದು. ಇದರಲ್ಲಿ ವಿಟಮಿನ್‌ ಇ ಮಾತ್ರವಲ್ಲ, ಸೆಲೆನಿಯಮ್‌, ಹಾಗೂ ಝಿಂಕ್‌ ಕೂಡಾ ಇವೆ. ಫ್ಯಾಟಿ ಆಸಿಡ್‌ಗಳೂ ಇವೆ. ಇದರಿಂದ ಚರ್ಮ ಮೃದುವಾಗಿ, ಸುಕ್ಕು ಕಡಿಮೆಯಾಗಿ, ನಯವಾಗುತ್ತದೆ. ಇದನ್ನು ಯಾವುದಾದರೂ ಸಲಾಡ್‌ ಮೇಲೆ ಅಲಂಕರಿಸುವ ಮೂಲಕ ತಿನ್ನಬಹುದು.

4. ಎಳ್ಳು: ಎಳ್ಳಿನಲ್ಲಿ ಹೇರಳವಾಗಿ ಝಿಂಕ್‌ ಇದ್ದು, ಇದರಲ್ಲಿ ಚರ್ಮ ವಯಸ್ಸಾಗುವಿಕೆಯನ್ನು ಕಡಿಮೆಗೊಳಿಸುವ ತಾಕತ್ತಿದೆ. ಮುಖ ಕೆಂಪುಕೆಂಪಾಗುವುದು, ಗುಳ್ಳೆಗಳಾಗುವುದನ್ನು ತಡೆಗಟ್ಟುತ್ತದೆ. ಮುಖ ಒಣಗಿದಂತಾಗುವುದು, ಸುಕ್ಕುಗಟ್ಟುವುದು, ಚರ್ಮ ಒರಟಾಗುವುದು ಇತ್ಯಾದಿಗಳಿಂದಲೂ ಇದು  ಉಕ್ತಿ ನೀಡುತ್ತದೆ. ಕೇವಲ ಚರ್ಮಕ್ಕಲ್ಲದೆ, ಕೂದಲ ಆರೋಗ್ಯಕ್ಕೂ ಎಳ್ಳು ಅತ್ಯುತ್ತಮ. ಎಳ್ಳಿನ ಚಿಕ್ಕಿ ಸೇರಿದಂತೆ ಹಲವು ಬೇರೆ ವಿಧಾನಗಳ ಮೂಲಕ ಹೊಟ್ಟೆ ಸೇರುವಂತೆ ನೀವು ಮಾಡಬಹುದು.

5. ಅಗಸೆ ಬೀಜಗಳು (ಫ್ಲ್ಯಾಕ್ಸ್‌ ಸೀಡ್‌): ಚರ್ಮದ ಆರೋಗ್ಯಕ್ಕೆ ಫ್ಯಾಟಿ ಆಸಿಡ್‌ ಅತ್ಯಂತ ಅಗತ್ಯವಾಗಿದ್ದು, ಇದರಿಂದ ಚರ್ಮದ ಹೊಳಪು ಹೆಚ್ಚುತ್ತದಷ್ಟೇ ಅಲ್ಲ, ಚರ್ಮ ನುಣುಪಾಗಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದು ಹಾರ್ಮೋನಿನ ತೊಂದರೆಗಳನ್ನೂ ಸಮತೋಲನಗೊಳಿಸಿ, ಮೊಡವೆಗಳುಂಟಾಗುವುದನ್ನೂ ಕಡಿಮೆಗೊಳಿಸುತ್ತದೆ. ಮೊಸರಿನ ಜೊತೆ ಮಿಕ್ಸಿಯಲ್ಲೊಮ್ಮೆ ರುಬ್ಬಿಕೊಂಡು ಅಗಸೆ ಬೀಜಗಳನ್ನು ಹೊಟ್ಟೆ ಸೇರುವಂತೆ ಮಾಡಬಹುದು, ಅಥವಾ, ಇದರ ಲಡ್ಡು, ಬೇರೆ ಬೀಜಗಳ ಜೊತೆ ಸೇರಿಸಿ ಪ್ರೊಟೀನ್‌ ಬಾರ್‌ ಮತ್ತಿತರ ಬಗೆಯ ಭಕ್ಷ್ಯಗಳನ್ನು ತಯಾರಿಸಿ ತಿನ್ನಬಹುದು.

ಇದನ್ನೂ ಓದಿ: Hair And Skin Care Tips For Monsoon: ಮಳೆಗಾಲದಲ್ಲಿ ಕೂದಲು ಮತ್ತು ತ್ವಚೆಯ ಆರೈಕೆ ಹೇಗೆ?

Exit mobile version