ಆರೋಗ್ಯ
Skin Care Tips: ಹೊಳಪಿನ ಚರ್ಮಕ್ಕೆ ಈ ಐದು ಬೀಜಗಳನ್ನು ಸೇವಿಸಿ!
ಕೆಲವು ಬೀಜಗಳು ಚರ್ಮಕ್ಕೆ ವಿಶೇಷ ಆರೈಕೆಯನ್ನು (Skin Care Tips) ಮಾಡುತ್ತದೆ. ನಮ್ಮ ಚರ್ಮ ಹೊಳಪಿನಿಂದ ಕೂಡಿರಬೇಕಾದರೆ, ಈ ಕೆಳಗಿನ ಬೀಜಗಳನ್ನು (skin care food) ನಾವು ನಮ್ಮ ನಿತ್ಯಾಹಾರದಲ್ಲಿ ಸೇರಿಸಿಕೊಳ್ಳಬಹುದು.
ಚರ್ಮದ ಆರೋಗ್ಯದ (skin health) ಬಗ್ಗೆ ತಲೆ ಕೆಡಿಸಿಕೊಳ್ಳದವರಿಲ್ಲ. ಆದರೆ, ಆರೋಗ್ಯಕರ ಚರ್ಮವನ್ನು ರಾತ್ರಿ ಬೆಳಗಾಗುವುದರೊಳಗೆ ಪಡೆಯಲಾಗುವುದಿಲ್ಲ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಹೊಳೆಯುವ ಚರ್ಮದ ರಹಸ್ಯ ನಾವು ತಿನ್ನುವ ಆರೋಗ್ಯಕರ ಆಹಾರದಲ್ಲಿಯೂ ಅಡಗಿದೆ ಎಂಬ ಸತ್ಯವನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ಕೇವಲ, ಚರ್ಮದ ಹೊರ ಆರೈಕೆ ಸಾಲದು. ಹಣ್ಣು ಹಂಪಲುಗಳು, ತರಕಾರಿಗಳು, ಒಣಹಣ್ಣು, ಬೀಜಗಳು ಸೇರಿದಂತೆ ಎಲ್ಲ ಬಗೆಯ ಆಹಾರದ ಅವಶ್ಯಕತೆಯೂ ಚರ್ಮಕ್ಕಿದೆ. ಅದರಲ್ಲೂ ಕೆಲವು ಬೀಜಗಳು ಚರ್ಮಕ್ಕೆ ವಿಶೇಷ ಆರೈಕೆಯನ್ನು (Skin Care Tips) ಮಾಡುತ್ತದೆ. ನಮ್ಮ ಚರ್ಮ ಹೊಳಪಿನಿಂದ ಕೂಡಿರಬೇಕಾದರೆ, ಈ ಕೆಳಗಿನ ಬೀಜಗಳನ್ನು (skin care food) ನಾವು ನಮ್ಮ ನಿತ್ಯಾಹಾರದಲ್ಲಿ ಸೇರಿಸಿಕೊಳ್ಳಬಹುದು.
1. ಕುಂಬಳಕಾಯಿ ಬೀಜ: ಕುಂಬಳಕಾಯಿ ಬೀಜದಲ್ಲಿ ವಿಟಮಿನ್ ಇ ಇರುವುದರಿಂದ ಚರ್ಮಕ್ಕೆ ಪೂರಕ. ಬೀಜಗಳಲ್ಲಿ ಝಿಂಕ್ ಹೇರಳವಾಗಿ ಇರುವುದರಿಂದ ಕೊಲಾಜೆನ್ ಉತ್ಪಾದನೆಗೆ ಪ್ರಚೋದಿಸುತ್ತದೆ. ಇದರಿಂದ ಚರ್ಮವು ನಯವಾಗಿ ಹೊಳಪಾಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ಫ್ಯಾಟಿ ಆಸಿಡ್‌ಗಳು ಚರ್ಮಕ್ಕೆ ಬೇಕಾದ ಕೊಬ್ಬಿನ ಅಂಶವನ್ನೂ ನೀಡಿ, ಚರ್ಮ ಒಣಕಲಾಗದಂತೆ ಹಾಗೂ ಒರಟಾಗದಂತೆ ನೋಡಿಕೊಳ್ಳುತ್ತದೆ. ಕುಂಬಳಕಾಯಿ ಬೀಜಗಳನ್ನು ಹುರಿದು, ಆಹಾರಗಳ ಮೇಲೆ ಅಲಂಕಾರಕ್ಕೆ ಅಥವಾ ಸಲಾಡ್ ಜೊತೆಗೆ ಅಥವಾ ಹಾಗೆಯೇ ಹುರಿದು ತಿನ್ನಬಹುದು.
2. ಚಿಯಾ ಬೀಜಗಳು: ಚಿಯಾ ಬೀಜಗಳಲ್ಲಿ ತಂಪಾಗಿಸುವ ಗುಣ ಇದೆ. ಇದರಲ್ಲಿರುವ ಒಮೆಗಾ ೩ ಫ್ಯಾಟಿ ಆಸಿಡ್ ಚರ್ಮದ ಊತ ಹಾಗೂ ಒರಟಾಗುವಿಕೆಯನ್ನು ತಪ್ಪಿಸುತ್ತದೆ. ಸುಕ್ಕು ಹಾಗೂ ವಯಸ್ಸಾದಂತೆ ಹೆಚ್ಚಾಗುವ ಗೆರೆಗಳನ್ನು ಇದು ಕಡಿಮೆಗೊಳಿಸುತ್ತದೆ. ಇದನ್ನು ಮುಖದ ಚರ್ಮಕ್ಕೆ ಲೇಪಿಸಿಕೊಳ್ಳಲೂ ಬಳಸಬಹುದಾಗಿದ್ದು ಇದರಿಂದ ಕೇವಲ ಚರ್ಮವಲ್ಲದೆ, ತೂಕ ಇಳಿಕೆ, ಕೊಲೆಸ್ಟೆರಾಲ್ ಇಳಿಕೆ ಹಾಗೂ ಜೀರ್ಣಕ್ರಿಯೆ ಚುರುಕಾಗಿಸುವಿಕೆ ಸೇರಿದಂತೆ ಅನೇಕ ಆರೋಗ್ಯಕರ ಲಾಭಗಳನ್ನೂ ಪಡೆಯಬಹುದು. ಚಿಯಾ ಬೀಜಗಳನ್ನು ಹೇಗೆ ತಿನ್ನುವುದು ಎಂದು ತಲೆಬಿಸಿ ಮಾಡಿಕೊಳ್ಳಬೇಡಿ. ಯಾವುದಾದರೂ ಜ್ಯೂಸ್, ಸ್ಮೂದಿ ಜೊತೆಗೆ ನೆನೆಸಿ ಇದನ್ನು ತಿನ್ನಬಹುದು.
3. ಸೂರ್ಯಕಾಂತಿ ಬೀಜಗಳು: ಚರ್ಮದ ಮೇಲೆ ಮ್ಯಾಜಿಕ್ ಮಾಡಬಲ್ಲ ಬೀಜಗಳ ಪೈಕಿ ಸೂರ್ಯಕಾಂತಿ ಬೀಜ ಪ್ರಮುಖವಾದುದು. ಇದರಲ್ಲಿ ವಿಟಮಿನ್ ಇ ಮಾತ್ರವಲ್ಲ, ಸೆಲೆನಿಯಮ್, ಹಾಗೂ ಝಿಂಕ್ ಕೂಡಾ ಇವೆ. ಫ್ಯಾಟಿ ಆಸಿಡ್‌ಗಳೂ ಇವೆ. ಇದರಿಂದ ಚರ್ಮ ಮೃದುವಾಗಿ, ಸುಕ್ಕು ಕಡಿಮೆಯಾಗಿ, ನಯವಾಗುತ್ತದೆ. ಇದನ್ನು ಯಾವುದಾದರೂ ಸಲಾಡ್ ಮೇಲೆ ಅಲಂಕರಿಸುವ ಮೂಲಕ ತಿನ್ನಬಹುದು.
4. ಎಳ್ಳು: ಎಳ್ಳಿನಲ್ಲಿ ಹೇರಳವಾಗಿ ಝಿಂಕ್ ಇದ್ದು, ಇದರಲ್ಲಿ ಚರ್ಮ ವಯಸ್ಸಾಗುವಿಕೆಯನ್ನು ಕಡಿಮೆಗೊಳಿಸುವ ತಾಕತ್ತಿದೆ. ಮುಖ ಕೆಂಪುಕೆಂಪಾಗುವುದು, ಗುಳ್ಳೆಗಳಾಗುವುದನ್ನು ತಡೆಗಟ್ಟುತ್ತದೆ. ಮುಖ ಒಣಗಿದಂತಾಗುವುದು, ಸುಕ್ಕುಗಟ್ಟುವುದು, ಚರ್ಮ ಒರಟಾಗುವುದು ಇತ್ಯಾದಿಗಳಿಂದಲೂ ಇದು ಉಕ್ತಿ ನೀಡುತ್ತದೆ. ಕೇವಲ ಚರ್ಮಕ್ಕಲ್ಲದೆ, ಕೂದಲ ಆರೋಗ್ಯಕ್ಕೂ ಎಳ್ಳು ಅತ್ಯುತ್ತಮ. ಎಳ್ಳಿನ ಚಿಕ್ಕಿ ಸೇರಿದಂತೆ ಹಲವು ಬೇರೆ ವಿಧಾನಗಳ ಮೂಲಕ ಹೊಟ್ಟೆ ಸೇರುವಂತೆ ನೀವು ಮಾಡಬಹುದು.
5. ಅಗಸೆ ಬೀಜಗಳು (ಫ್ಲ್ಯಾಕ್ಸ್ ಸೀಡ್): ಚರ್ಮದ ಆರೋಗ್ಯಕ್ಕೆ ಫ್ಯಾಟಿ ಆಸಿಡ್ ಅತ್ಯಂತ ಅಗತ್ಯವಾಗಿದ್ದು, ಇದರಿಂದ ಚರ್ಮದ ಹೊಳಪು ಹೆಚ್ಚುತ್ತದಷ್ಟೇ ಅಲ್ಲ, ಚರ್ಮ ನುಣುಪಾಗಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದು ಹಾರ್ಮೋನಿನ ತೊಂದರೆಗಳನ್ನೂ ಸಮತೋಲನಗೊಳಿಸಿ, ಮೊಡವೆಗಳುಂಟಾಗುವುದನ್ನೂ ಕಡಿಮೆಗೊಳಿಸುತ್ತದೆ. ಮೊಸರಿನ ಜೊತೆ ಮಿಕ್ಸಿಯಲ್ಲೊಮ್ಮೆ ರುಬ್ಬಿಕೊಂಡು ಅಗಸೆ ಬೀಜಗಳನ್ನು ಹೊಟ್ಟೆ ಸೇರುವಂತೆ ಮಾಡಬಹುದು, ಅಥವಾ, ಇದರ ಲಡ್ಡು, ಬೇರೆ ಬೀಜಗಳ ಜೊತೆ ಸೇರಿಸಿ ಪ್ರೊಟೀನ್ ಬಾರ್ ಮತ್ತಿತರ ಬಗೆಯ ಭಕ್ಷ್ಯಗಳನ್ನು ತಯಾರಿಸಿ ತಿನ್ನಬಹುದು.
ಇದನ್ನೂ ಓದಿ: Hair And Skin Care Tips For Monsoon: ಮಳೆಗಾಲದಲ್ಲಿ ಕೂದಲು ಮತ್ತು ತ್ವಚೆಯ ಆರೈಕೆ ಹೇಗೆ?
ಆರೋಗ್ಯ
Benefits Of Ajwain: ಅಜವಾನವೆಂಬ ಘಾಟುಮದ್ದಿನ ಬಗ್ಗೆ ನಿಮಗೆ ಗೊತ್ತಿದೆಯೆ?
ಇದು ಭಾರತೀಯ ಅಡುಗೆ ಮನೆಗಳ ಸಂಗಾತಿ ಮಾತ್ರವೇ ಅಲ್ಲ, ಪಶ್ಚಿಮ ಏಷ್ಯಾ ಸಂಸ್ಕೃತಿಗಳಲ್ಲೂ ಸೂಪಶಾಸ್ತ್ರದ ಸಂಗಾತಿ. ಹೊಟ್ಟೆ ಬಿರಿಯುವಂಥ ಊಟ ಮಾಡಿದಾಗ, ಅಜವಾನದ (Benefits Of Ajwain) ಚಹಾ ಅಥವಾ ಕಷಾಯ ಕುಡಿಯುವುದರಿಂದ ಜೀರ್ಣ ಸರಾಗವಾಗಿ ಹೊಟ್ಟೆ ಭಾರ ಕಡಿಮೆಯಾಗುತ್ತದೆ. ಔಷಧೀಯ ಗುಣಗಳಿಗಾಗಿ ಇದರ ಬಳಕೆ ಅಪಾರ.
ಓಂಕಾಳು, ಅಜವಾನ (Benefits Of Ajwain) ಎಂದೆಲ್ಲಾ ಕರೆಸಿಕೊಳ್ಳುವ ಈ ಸಣ್ಣ ಬೀಜಗಳ ಬಳಕೆ ಹಲವು ಶತಮಾನಗಳಷ್ಟು ಹಳೆಯದ್ದು. ಒಗ್ಗರಣೆಗಳ ಘಮ ಹೆಚ್ಚಿಸುವ, ಚಕ್ಕುಲಿ, ಪಕೋಡಾದಂಥ ಕುರುಕಲು ತಿಂಡಿಗಳ ರುಚಿಗಟ್ಟಿಸುವ ಅಜವಾನ ಹಲವಾರು ರೀತಿಯಲ್ಲಿ ಬಳಕೆಯಲ್ಲಿದೆ. ಅದರಲ್ಲೂ ಔಷಧೀಯ ಗುಣಗಳಿಗಾಗಿ ಇದರ ಬಳಕೆ ಅಪಾರ. ಹಸಿವು ಹೆಚ್ಚಿಸುವ ಸರಳ ಕೆಲಸದಿಂದ ಹಿಡಿದು, ತೂಕ ಇಳಿಸುವ ಘನಂದಾರಿ ಕೆಲಸದವರೆಗೆ ಇದರ ಉಪಯೋಗ ಬಹಳಷ್ಟಿದೆ. ಇಲ್ಲಿದೆ ಈ ಪುಟ್ಟ ಬೀಜಗಳ ಮಾಹಿತಿ.
ಮೂಗರಳಿಸುವಂಥ ಘಮ ಇದ್ದರೂ, ರುಚಿಯಲ್ಲಿದು ಸ್ವಲ್ಪ ಕಟು, ಘಾಟು ಮತ್ತು ಖಾರ. ಇದೇ ಕಾರಣಕ್ಕಾಗಿ ಪರಾಟೆಗಳಿಂದ ತೊಡಗಿ ಉಪ್ಪಿನಕಾಯಿಗಳವರೆಗೆ ಹಲವು ರೀತಿಯ ಅಡುಗೆಗಳಲ್ಲಿ ಬಳಕೆಯಲ್ಲಿದೆ. ಇದು ಭಾರತೀಯ ಅಡುಗೆ ಮನೆಗಳ ಸಂಗಾತಿ ಮಾತ್ರವೇ ಅಲ್ಲ, ಪಶ್ಚಿಮ ಏಷ್ಯಾ ಸಂಸ್ಕೃತಿಗಳಲ್ಲೂ ಸೂಪಶಾಸ್ತ್ರದ ಸಂಗಾತಿ. ಕರಿಯುವಂಥ ಮತ್ತು ಖಾರದ ಅಡುಗೆಗಳಲ್ಲಿ ಇದರ ಘಮ ಪ್ರಿಯವೆನಿಸುತ್ತವೆ. ಹೊಟ್ಟೆ ಬಿರಿಯುವಂಥ ಊಟ ಮಾಡಿದಾಗ, ಅಜವಾನದ (ajwain) ಚಹಾ ಅಥವಾ ಕಷಾಯ ಕುಡಿಯುವುದರಿಂದ ಜೀರ್ಣ ಸರಾಗವಾಗಿ ಹೊಟ್ಟೆ ಭಾರ ಕಡಿಮೆಯಾಗುತ್ತದೆ.
ಉತ್ಕರ್ಷಣ ನಿರೋಧಕ
ಪ್ರಬಲ ಉತ್ಕರ್ಷಣ ನಿರೋಧಕವಾಗಿ ಇದು ಬಳಕೆಯಲ್ಲಿದ್ದು ಉರಿಯೂತ ನಿವಾರಿಸುವಲ್ಲಿ- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಫಂಗಸ್, ಬ್ಯಾಕ್ಟೀರಿಯಗಳೊಂದಿಗೆ ಹೋರಾಡುತ್ತದೆ. ಹಾಗೆಂದೇ ಜ್ವರ ಬಂದಾಗ ಓಂಕಾಳಿನ (carom seeds) ಬಳಕೆ ಪರಂಪರಾಗತ ಔಷಧ ಪದ್ಧತಿಯಲ್ಲಿದೆ. ಮುಟ್ಟಿನ ಹೊಟ್ಟೆನೋವಿನ ಉಪಶಮನಕ್ಕೂ ಇದು ಪರಿಣಾಮಕಾರಿ ಮದ್ದು.
ಜೀರ್ಣಕಾರಿ
ಅಜವಾನಕ್ಕೆ ದೇಹವನ್ನು ಡಿಟಾಕ್ಸ್ ಮಾಡುವ ಸಾಮರ್ಥ್ಯವಿದೆ. ಹಸಿವನ್ನು ಹೆಚ್ಚಿಸುವುದೇ ಅಲ್ಲದೆ, ಪಚನಕ್ರಿಯೆಯನ್ನು ಚುರುಕು ಮಾಡಬಲ್ಲದು. ಹೊಟ್ಟೆಯುಬ್ಬರ, ವಾಯುಬಾಧೆ, ಆಸಿಡಿಟಿ, ಅಜೀರ್ಣದಿಂದ ಉಂಟಾಗುವ ಹೊಟ್ಟೆನೋವಿಗೆ ಇದು ಶೀಘ್ರ ಉಪಶಮನ ನೀಡುತ್ತದೆ. ತೀವ್ರ ಆಸಿಡಿಟಿಯಿಂದ ಕರುಳಿನಲ್ಲಿ ಹುಣ್ಣಾದರೆ, ಆ ನೋವು ತಡೆಯಲು ಇದು ಉಪಯುಕ್ತ. ಡಯರಿಯಾ, ಕಿಬ್ಬೊಟ್ಟೆ ನೋವಿನ ಶಮನಕ್ಕೆ ಓಂಕಾಳಿನ ಕಷಾಯ ಬಳಕೆಯಲ್ಲಿದೆ. ಪುಟ್ಟ ಮಕ್ಕಳಿಗೆ ಅಜೀರ್ಣದಿಂದ ಹೊಟ್ಟೆ ನೋವು ಬಂದರೆ, ಓಂಕಾಳನ್ನು ಸೇವಿಸಲು ನೀಡುವ ಕ್ರಮವಿಲ್ಲ. ಬದಲಿಗೆ, ಅಜವಾನದ ಎಣ್ಣೆಯನ್ನು ಹೊಕ್ಕುಳಿನ ಸುತ್ತಮುತ್ತ ಹಚ್ಚಲಾಗುತ್ತದೆ. ಇದರಿಂದ ಜೀರ್ಣಾಂಗಗಳು ಚುರುಕಾಗುತ್ತವೆ.
ತೂಕ ಇಳಿಕೆ
ಜೀರ್ಣಾಂಗಗಳ ತೊಂದರೆಯನ್ನು ಕಡಿಮೆ ಮಾಡಿ, ದೇಹದ ಚಯಾಪಚಯವನ್ನೂ ಹೆಚ್ಚಿಸುವ ಈ ಮಸಾಲೆ ಬೀಜಗಳು, ತೂಕ ಇಳಿಕೆಗೂ ಬಳಕೆಯಾಗುತ್ತವೆ. ಇದರಲ್ಲಿರುವ ಥೈಮೋಲ್ (thymol) ಎಂಬ ಅಂಶವು ಚಯಾಪಚಯ ಚುರುಕಾಗಿಸಿ, ಕೊಬ್ಬನ್ನೂ ವಿಘಟಿಸುತ್ತದೆ. ಇದಕ್ಕಾಗಿ ಖಾಲಿ ಹೊಟ್ಟೆಯಲ್ಲಿ ಅಜವಾನದ ನೀರು ಕುಡಿಯುವ ಪದ್ಧತಿ ಚಾಲ್ತಿಯಲ್ಲಿದೆ. ದೇಹದಲ್ಲಿ ಶೇಖರವಾಗಿರುವ ಕೊಬ್ಬು ಕರಗಿಸಿ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಸಹ ಇದು ನೆರವು ನೀಡುತ್ತದೆ.
ಬಾಣಂತಿಯರಿಗೆ ಮದ್ದು
ಪರಂಪರೆಯ ಔಷಧಿಗಳಲ್ಲಿ, ಹೆರಿಗೆಯ ನಂತರ ಹೊಟ್ಟೆಯ ಭಾಗಕ್ಕೆ ಬಲ ತುಂಬುವ ಉದ್ದೇಶದಿಂದ ಬೆಲ್ಲ ಮತ್ತು ತುಪ್ಪದ ಜೊತೆಗೆ ಅಜವಾನದ ಪುಡಿಯನ್ನು ಸೇರಿಸಿ ನೀಡಲಾಗುತ್ತದೆ. ಅನಗತ್ಯ ಕೊಬ್ಬು ನಿವಾರಣೆಗೂ ಇದು ನೆರವಾಗುತ್ತದೆ. ಗರ್ಭಾಶಯದ ಸಂಕುಚನ-ವಿಕಸನವನ್ನು ಸರಾಗಗೊಳಿಸಿ ಮುಟ್ಟಿನ ಹೊಟ್ಟೆ ನೋವು ಸಹ ಕಡಿಮೆ ಮಾಡುತ್ತದೆ
ಯಾರಿಗೆ ಬೇಡ?
ಗರ್ಭಿಣಿಯರಿಗೆ ಅಜವಾನದ ಬಳಕೆ ಮಾಡುವ ಕ್ರಮವಿಲ್ಲ. ಗರ್ಭಾಶಯನ ಸಂಚಲನಕ್ಕೆ ಇದು ಮೂಲವಾಗಬಹುದೆಂಬ ಕಾರಣ ಇದರ ಹಿಂದಿದೆ. ಪುಟ್ಟ ಮಕ್ಕಳಿಗೂ ಈ ಕಟು ರುಚಿಯ ಬೀಜಗಳನ್ನು ನೀಡುವುದಿಲ್ಲ. ಅಗತ್ಯವಿದ್ದರೆ ಅದರ ಎಣ್ಣೆಯನ್ನು ಲೇಪಕ್ಕೆ ಬಳಸುತ್ತಾರೆ. ರಕ್ತದೊತ್ತಡದ ಔಷಧಿ ಮೇಲಿರುವವರು ನಿಯಮಿತವಾಗಿ ಅಜವಾನ ಸೇವಿಸುವುದು ಸಲ್ಲದು. ಅಲರ್ಜಿಗಳಿದ್ದವರು ಈ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ.
ಇದನ್ನೂ ಓದಿ: Improve Oral Health: ಹಣ್ಣುಗಳ ಸೇವನೆಯಿಂದ ಬಾಯಿಯ ಆರೋಗ್ಯ ಸುಧಾರಿಸುತ್ತದೆಯೆ?
Relationship
Parenting Tips: ನಿಮ್ಮ ಮಕ್ಕಳು ಅಡ್ಡ ಬೆಳೆಯದೆ, ಉದ್ದ ಬೆಳೆಯಬೇಕೆಂದರೆ ಈ ಆಹಾರವನ್ನೇ ನೀಡಿ!
ಮಕ್ಕಳು ಉದ್ದ ಬೆಳೆಯುವಂತೆ ಮಾಡುವುದೇನೂ ಬ್ರಹ್ಮವಿದ್ಯೆ ಅಂದುಕೊಳ್ಳಬೇಡಿ. ಮಕ್ಕಳ ದೇಹಕ್ಕೆ ಈ ಕೆಳಗಿನ ಆಹಾರಗಳನ್ನು ನಿಯಮಿತವಾಗಿ ಕೊಡುತ್ತಿದ್ದೇವಾ ಎಂದು ಒಮ್ಮೆ ಯೋಚಿಸಿದರೆ (Parenting tips) ಸಾಕು, ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲೇ ಸಿದ್ಧ!
ಮಕ್ಕಳು ಬೆಳೆಯುವ ವಯಸ್ಸಿನಲ್ಲಿ ಚೆನ್ನಾಗಿ ತಿನ್ನಬೇಕು ಎಂಬ ಹಿರಿಯರ ಮಾತನ್ನು ನೀವು ಕೇಳಿರಬಹುದು. ಹೆಚ್ಚಾಗಿ, ಮನೆಯಲ್ಲಿರುವ ಹಿರಿಯರು, ಮಕ್ಕಳಿಗೆ ಆರೋಗ್ಯಪೂರ್ಣವಾದ ಆಹಾರವನ್ನು (Healthy food) ನೀಡುವುದನ್ನು ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಕೆಲವು ಪರಂಪರಾಗತ ತಿಂಡಿಗಳು, ಹಳೆಯ ತಿನಿಸುಗಳು, ಧಾನ್ಯ ಬೇಳೆಕಾಳುಗಳು ಹಾಗೂ ತರಕಾರಿಗಳಿಂದ ಸಮೃದ್ಧವಾದ ಆಹಾರ ಇತ್ಯಾದಿಗಳು ಮಕ್ಕಳ ನಿತ್ಯಾಹಾರವಾಗಿರಲಿ (children food) ಎಂದು ಮನೆಯಲ್ಲಿರುವ ಹಿರಿಯರು ಹೆಚ್ಚು ದೇಸೀ ತಿನಿಸುಗಳು, ಪೋಷಕಾಂಶಯುಕ್ತ ಬೆಳಗಿನ ಉಪಹಾರಗಳು ಇತ್ಯಾದಿಗಳತ್ತ ಗಮನ ನೀಡುತ್ತಾರೆ. ಆದರೆ ಇತ್ತೀಚೆಗಿನ ಧಾವಂತದ ಬದುಕಿನಲ್ಲಿ ಮಕ್ಕಳ ಕಣ್ಣಿಗೆ ಮಾರುಕಟ್ಟೆಯಲ್ಲೂ ಥರಹೇವಾರಿ, ಬಣ್ಣಬಣ್ಣದ ಆಕರ್ಷಕ, ರುಚಿಕಟ್ಟಾದ ಆಹಾರಗಳು ಸಿಗುವುದರಿಂದ ಮಕ್ಕಳೂ ಕೂಡಾ ಅವುಗಳ ದಾಸರಾಗುತ್ತಿದ್ದಾರೆ. ಇದರಿಂದ ಮಕ್ಕಳು ಎಳವೆಯಲ್ಲಿಯೇ ಹಲವಾರು ಆರೋಗ್ಯ ಸಮಸ್ಯೆಗಳನ್ನೂ (Health problems) ಎದುರಿಸುತ್ತಿದ್ದಾರೆ. ಬೊಜ್ಜು (Cholesterol) ಹೆಚ್ಚಾಗುತ್ತಿದೆ. ಮಧುಮೇಹ (Diabetes) ಸಾಮಾನ್ಯವಾಗುತ್ತಿದೆ. ನಮ್ಮ ಮಕ್ಕಳು ಉದ್ದ ಬೆಳೆಯದೆ ಅಡ್ಡ ಬೆಳೆಯುತ್ತಿದ್ದಾರಲ್ಲಾ ಎಂಬ ಕೊರಗೂ ಕೂಡಾ ಪೋಷಕರದು. ಹಾಗಾದರೆ ಮಕ್ಕಳು ಉದ್ದ ಬೆಳೆಯುವಂತೆ ಮಾಡುವುದೇನೂ ಬ್ರಹ್ಮವಿದ್ಯೆ ಅಂದುಕೊಳ್ಳಬೇಡಿ. ಮಕ್ಕಳ ದೇಹಕ್ಕೆ ಈ ಕೆಳಗಿನ ಆಹಾರಗಳನ್ನು ನಿಯಮಿತವಾಗಿ ಕೊಡುತ್ತಿದ್ದೇವಾ ಎಂದು ಒಮ್ಮೆ ಯೋಚಿಸಿದರೆ (Parenting tips) ಸಾಕು, ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲೇ ಸಿದ್ಧ!
1. ಡೈರಿ ಉತ್ಪನ್ನಗಳು: ಹಾಲು, ಮೊಸರು, ಚೀಸ್ ಮತ್ತಿತರ ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಶಿಯಂ ಹೇರಳವಾಗಿರುವುದರಿಂದ ಮಕ್ಕಳಿಗೆ ಅತ್ಯಂತ ಅಗತ್ಯ. ಬೆಳೆಯುವ ವಯಸ್ಸಿನಲ್ಲಿ ಮಕ್ಕಳಿಗೆ ಕ್ಯಾಲ್ಶಿಯಂನ ಅಗತ್ಯ ಅತ್ಯಂತ ಹೆಚ್ಚಿರುವುದರಿಂದ ಅವರ ಎಲುಬು ಗಟ್ಟಿಯಾಗಿ, ಶಕ್ತಿಶಾಲಿಯಾಗಿ ಬೆಳವಣಿಗೆ ಹೊಂದಲು ಪೋಷಕಾಂಶಗಳು ಬೇಕೇಬೇಕು. ಹುಟ್ಟಿದ ಮಕ್ಕಳಿಂದ ಹಿಡಿದು ಹದಿಹರೆಯ ಮುಗಿಯುವವರೆಗೂ ಮೂಳೆಗಳ ಬೆಳವಣಿಗೆ ಬಹಳ ಪ್ರಮುಖವಾಗಿ ಆಗುವುದರಿಂದ ಇಂತಹ ಸಂದರ್ಭ ಕ್ಯಾಲ್ಶಿಯಂ ಮಕ್ಕಳಿಗೆ ಸಿಗುವುದು ಅತ್ಯಂತ ಅಗತ್ಯ ಕೂಡಾ.
2. ಮೊಟ್ಟೆ: ಮೊಟ್ಟೆಯಲ್ಲಿ ಅತ್ಯಂತ ಸಮೃದ್ಧವಾಗಿ ಪ್ರೊಟೀನ್, ಅಮೈನೋ ಆಸಿಡ್ ಇರುವುದರಿಂದ ಇವು ಮಕ್ಕಳ ಪ್ರತಿಯೊಂದು ಅಂಗಾಂಶದ ಬೆಳವಣಿಗೆಯಲ್ಲೂ ಮಹತ್ವದ ಪಾತ್ರ ವಹಿಸುತ್ತವೆ. ಅಂಗಾಂಶದ ಬೆಳವಣಿಗೆ, ರಿಪೇರಿ ಇತ್ಯಾದಿಗಳ ಕೆಲಸವೂ ಪ್ರೊಟೀನ್‌ನಿಂದಲೇ ಆಗುತ್ತದೆ. ಮಕ್ಕಳಿಗೆ ಪ್ರೊಟೀನ್ ಮೊಟ್ಟೆಯಿಂದ ಅತ್ಯಂತ ಹೆಚ್ಚು ಸಿಗುತ್ತದೆ. ಮೊಟ್ಟೆ ತಿನ್ನದ ಮಂದಿ ಮೊಟ್ಟೆಗೆ ಪರ್ಯಾಯ ಮೂಲಗಳನ್ನು ಹುಡುಕಿಕೊಳ್ಳಬೇಕು.
3. ಮಾಂಸ: ಚಿಕನ್, ಟರ್ಕಿ ಮತ್ತಿತರ ಮಾಂಸಗಳಿಂದಲೂ ಪ್ರೊಟೀನ್, ಝಿಂಕ್ ಮತ್ತಿತರ ಪೋಷಕಾಂಶಗಳು ಲಭ್ಯವಾಗುವುದರಿಂದ ಇದು ಎಲುಬಿನ ಬೆಳವಣಿಗೆಯಲ್ಲಿಯೂ ಸಹಾಯ ಮಾಡುತ್ತವೆ.
4. ಮೀನು: ಸಾಲ್ಮನ್, ಮಕೆರೆಲ್ ಮತ್ತಿತರ ಮೀನುಗಳಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್‌ಗಳು ಹೇರಳವಾಗಿರುವುದರಿಂದ ಬೆಳವಣಿಗೆಗೆ ಪೂರಕವಾಗಿದೆ.
5. ದ್ವಿದಳ ಧಾನ್ಯಗಳು ಹಾಗೂ ಬೇಳೆಕಾಳುಗಳು: ದ್ವಿದಳ ಧಾನ್ಯಗಳಲ್ಲಿಯೂ, ಬೇಳೆ ಕಾಳುಗಳಲ್ಲಿಯೂ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿರುವ ಪ್ರೊಟೀನ್, ಕಬ್ಬಿಣಾಂಶ, ಝಿಂಕ್ ಕೂಡಾ ಇದೆ. ಇವು ಸಂಪೂರ್ಣ ಆರೋಗ್ಯಕ್ಕೆ ಅತ್ಯಂತ ಅವಶ್ಯಕ ಕೂಡಾ.
6. ಹಸಿರು ಸೊಪ್ಪು ತರಕಾರಿಗಳು: ಬಸಳೆ, ಪಾಲಕ್ ಸೇರಿದಂತೆ ಹಸಿರು ಸೊಪ್ಪು ತರಕಾರಿಗಳಲ್ಲಿ ಸಾಕಷ್ಟು ವಿಟಮಿನ್, ಖನಿಜಾಂಶ ಹಾಗೂ ಆಂಟಿ ಆಕ್ಸಿಡೆಂಟ್‌ಗಳೂ ಇರುವುದರಿಂದ ಮಕ್ಕಳ ಒಟ್ಟು ಆರೋಗ್ಯಕ್ಕೆ ಇದು ಪೂರಕವಾಗಿದೆ.
7. ಬೀಜಗಳು: ಬಾದಾಮಿ, ವಾಲ್‌ನಟ್, ಪಿಸ್ತಾ, ಕುಂಬಳಕಾಯಿ ಬೀಜ, ಸೌತೇಕಾಯಿ ಬೀಜ, ಚಿಯಾ ಬೀಜ, ಅಗಸೆ ಬೀಜ ಸೇರಿದಂತೆ ಎಲ್ಲ ಬಗೆಯ ಬೀಜಗಳಲ್ಲೂ ಮೆಗ್ನೀಶಿಯಂ ಸೇರಿದಂತೆ ಎಲ್ಲ ಬಗೆಯ ಪೋಷಕಾಂಶಗಳೂ ಇರುವುದರಿಂದ ಬೆಳವಣಿಗೆಗೆ ಇವು ಸಹಾಯ ಮಾಡುತ್ತವೆ.
8. ಹಣ್ಣುಗಳು: ಕಿತ್ತಳೆ, ಸ್ಟ್ರಾಬೆರ್ರಿ, ಕಿವಿ ಮತ್ತಿತರ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಮಕ್ಕಳಲ್ಲಿ ರೋಗನಿರೋಧಕತೆ ಹೆಚ್ಚಿಸಿ, ಆರೋಗ್ಯವಂತರನ್ನಾಗಿ ಮಾಡುವ ಮೂಲಕ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ.
ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳು ಶಾಲೆಯಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಬೇಕೇ? ಇಲ್ಲಿವೆ ನವಸೂತ್ರಗಳು!
ಆರೋಗ್ಯ
World Lung Day: ಶ್ವಾಸಕೋಶದ ಸಮಸ್ಯೆ ಉಂಟಾಗದಿರಲು ಹೀಗೆ ಮಾಡಿ
ದೇಹದ ಉಳಿದೆಲ್ಲ ಅಂಗಗಳಿಗೆ ಅನ್ವಯಿಸುವ ಬಹಳಷ್ಟು ನಿಯಮಗಳು ನಮ್ಮ ಪುಪ್ಪುಸಗಳಿಗೂ ಅನ್ವಯಿಸುತ್ತವೆ. ಸಮತೋಲಿತವಾದ ಆಹಾರ ಶ್ವಾಸಕೋಶಗಳ (World Lung Day) ದೀರ್ಘ ಬಾಳಿಕೆಗೆ ನಾಂದಿ ಹಾಡಬಲ್ಲದು. ಒತ್ತಡ ನಿವಾರಣೆಯ ಪ್ರಮುಖ ತಂತ್ರವಾದ ಪ್ರಾಣಾಯಾಮವು ಶ್ವಾಸಕೋಶಗಳಿಗೆ ಶಕ್ತಿ ತುಂಬಬಲ್ಲದು. ನಿಯಮಿತ ವ್ಯಾಯಾಮ ಬಹಳಷ್ಟು ಮಾಡಬಲ್ಲದು.
ಇವು ಜಟಿಲ ಪ್ರಶ್ನೆಗಳು- ಉಸಿರಾಡುವ ಗಾಳಿ ಇಷ್ಟೊಂದು ಕಲುಷಿತವಾಗಿರುವಾಗ ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಸೋಂಕುಗಳು ನೇರವಾಗಿ ಶ್ವಾಸಕೋಶಕ್ಕೇ ದಾಳಿ ಇಡುವಾಗ, ಅದನ್ನು ಜೋಪಾನ ಮಾಡುವುದು ಸಾಧ್ಯವೇ? ಪುಪ್ಪುಸಗಳ ಅನಾರೋಗ್ಯ ಎಂಬುದು ಅತ್ಯಂತ ಸಾಮಾನ್ಯ ವಿಷಯ ಎನಿಸಿರುವ ದಿನಗಳಲ್ಲಿ, ಅವುಗಳ ದೀರ್ಘ ಬಾಳಿಕೆಗೆ ಏನು ಮಾಡಬೇಕು? ಸೆಪ್ಟೆಂಬರ್ 25ನೇ ದಿನ ವಿಶ್ವ ಶ್ವಾಸಕೋಶ ದಿನವನ್ನಾಗಿ (World Lung Day) ಆಚರಿಸುತ್ತಿರುವುದು, ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಮಹತ್ವವನ್ನು ಹೆಚ್ಚಿಸಿಕೊಂಡಿದೆ.
ಗಾಳಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯುವಲ್ಲಿ ಸಮುದಾಯದ ಇಚ್ಛಾಶಕ್ತಿ ಬೇಕು. ಏಕಾಂಗಿಯಾಗಿ ಹೋರಾಡಿ ಯಶಸ್ಸು ಪಡೆದವರಿಲ್ಲವೆಂದಲ್ಲ; ಆದರೆ ಅದು ಎಲ್ಲರಿಗೂ ಸಾಧ್ಯವೇ ಎಂಬುದೂ ಯೋಚಿಸುವ ವಿಚಾರ. ಈ ವಿಷಯದ ಹೊರತಾಗಿ, ಇನ್ನೇನನ್ನಾದರೂ ವೈಯಕ್ತಿವಾಗಿ ನಾವು ಮಾಡಬಹುದೇ? ಖಂಡಿತ, ದೇಹದ ಉಳಿದೆಲ್ಲಾ ಅಂಗಗಳಿಗೆ ಅನ್ವಯಿಸುವ ಬಹಳಷ್ಟು ನಿಯಮಗಳು ನಮ್ಮ ಪುಪ್ಪುಸಗಳಿಗೂ ಅನ್ವಯಿಸುತ್ತವೆ. ಸಮತೋಲಿತವಾದ ಆಹಾರ ಶ್ವಾಸಕೋಶಗಳ (World Lung Day) ದೀರ್ಘ ಬಾಳಿಕೆಗೆ ನಾಂದಿ ಹಾಡಬಲ್ಲದು. ಒತ್ತಡ ನಿವಾರಣೆಯ ಪ್ರಮುಖ ತಂತ್ರವಾದ ಪ್ರಾಣಾಯಾಮವು ಶ್ವಾಸಕೋಶಗಳಿಗೆ ಶಕ್ತಿ ತುಂಬಬಲ್ಲದು. ನಿಯಮಿತ ವ್ಯಾಯಾಮ ಬಹಳಷ್ಟು ಮಾಡಬಲ್ಲದು. ಇವುಗಳನ್ನೇ ವಿವರವಾಗಿ ನೋಡುವುದಾದರೆ-
ಬಿಸಿಯಾದ, ತಾಜಾ ಆಹಾರ ಸೇವಿಸಿ
ಅಡುಗೆ ಮಾಡುವುದಕ್ಕೆ ಸಮಯವೇ ಇಲ್ಲ ಎಂಬ ನೆವ ಇಟ್ಟುಕೊಂಡು ಸಿಕ್ಕಿದಲ್ಲಿ, ಸಿಕ್ಕಿದ್ದನ್ನು ತಿಂದುಕೊಂಡು ಕಾಲ ಹಾಕುವುದು ಖಂಡಿತಕ್ಕೂ ಆರೋಗ್ಯದ ಮೇಲೆ ಬರೆ ಹಾಕುತ್ತದೆ. ಅದರಲ್ಲೂ ತಂಗಳು ತಿನ್ನುವುದು, ಫ್ರಿಜ್‌ನಲ್ಲಿರುವ ಅತಿಯಾದ ತಣ್ಣನೆಯ ಆಹಾರ, ಹಲ್ಲು ಜುಂಮ್ಮೆನ್ನುವಂಥ ಜ್ಯೂಸ್, ಸೋಡಾಗಳು ಶ್ವಾಸಕೋಶಗಳ ಉರಿಯೂತವನ್ನು ಹೆಚ್ಚಿಸುತ್ತವೆ. ಹಾಗಾಗಿ ಇಡೀ ಧಾನ್ಯಗಳನ್ನು ಮತ್ತು ಬಿಸಿಯಾದ ಆಹಾರಗಳನ್ನು ತಾಜಾ ಇರುವಾಗಲೇ ಸೇವಿಸುವುದು ಒಳ್ಳೆಯದು
ಸಾಂಬಾರ್ ಪದಾರ್ಥಗಳು
ಭಾರತೀಯ ಅಡುಗೆ ಮನೆಗಳಲ್ಲಿ ಬಳಕೆಯಾಗುವ ಬಹಳಷ್ಟು ಸಾಂಬಾರ್ ಪದಾರ್ಥಗಳು ರುಚಿಗೆ ಮಾತ್ರವೇ ಅಲ್ಲ, ಪಚನ ಕಾರ್ಯಕ್ಕೂ ಸೈ. ಅರಿಶಿನ, ಜೀರಿಗೆ, ಧನಿಯಾ, ಕಾಳು ಮೆಣಸು, ಶುಂಠಿ, ಚಕ್ಕೆ ಮುಂತಾದವು ಜೀರ್ಣಕ್ರಿಯೆಯನ್ನು ಚುರುಕು ಮಾಡುತ್ತವೆ. ಸರಿಯಾಗಿ ಜೀರ್ಣವಾಗದ ಆಹಾರಗಳು ಕಫಕ್ಕೂ ಕಾರಣವಾಗಬಹುದು. ಕೆಲವೊಮ್ಮೆ ಅಲರ್ಜಿಯಂಥ ಪ್ರತಿಕ್ರಿಯೆಗಳನ್ನೂ ದೇಹ ತೋರಿಸಬಹುದು. ಹಾಗಾಗಿ ಸಾಂಬಾರ ಪದಾರ್ಥಗಳನ್ನು ನಿಯಮಿತ ಮತ್ತು ಮಿತವಾಗಿ ಬಳಸಿ
ಹರ್ಬಲ್ ಚಹಾಗಳು ಅಥವಾ ಕಷಾಯಗಳು
ತುಳಸಿ, ಅತಿಮಧುರ, ಶುಂಠಿ, ನಿಂಬೆಹುಲ್ಲು, ಪುದೀನಾ ಮುಂತಾದ ಮೂಲಿಕೆಗಳ ಚಹಾ ಇಲ್ಲವೇ ಕಷಾಯಗಳು ಶ್ವಾಸಕೋಶಗಳ ಆರೋಗ್ಯಕ್ಕೆ ಹಿತಕಾರಿ. ಇವು ರೋಗ ನಿರೋಧಕ ಶಕ್ತಿಯನ್ನು ಚುರುಕು ಮಾಡುವುದೇ ಅಲ್ಲದೆ, ಗಂಟಲಿಗೆ ಆರಾಮ ನೀಡಿ, ಕಫ ಕರಗಿಸಲೂ ನೆರವು ನೀಡುತ್ತವೆ
ಆರೋಗ್ಯಕರ ಕೊಬ್ಬು
ಕೊಬ್ಬೆಲ್ಲ ಕೆಟ್ಟದ್ದು ಎಂದು ಭಾವಿಸಿದವರಿಗೆ ಇಲ್ಲೊಂದು ಕಿವಿ ಮಾತು- ಸಂಸ್ಕರಿತ ಕೊಬ್ಬುಗಳನ್ನು, ಕರಿದ ಆಹಾರಗಳನ್ನು ದೂರ ಇರಿಸಿದಷ್ಟೂ ಕ್ಷೇಮ. ಆದರೆ ಆರೋಗ್ಯಕರ ಕೊಬ್ಬುಗಳು ದೇಹಕ್ಕೆ ದೊರೆಯಲೇಬೇಕು. ತುಪ್ಪ, ಕೊಬ್ಬರಿ ಎಣ್ಣೆ, ಆಲಿವ್ ಎಣ್ಣೆ, ಅಗಸೆ ಎಣ್ಣೆ ಮುಂತಾದವು ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಇದು ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚಳಕ್ಕೂ ಬೇಕಾದವು.
ಜೇನುತುಪ್ಪ
ಯಾವುದೇ ಸಂಸ್ಕರಣೆಗೆ ಒಳಗಾಗದ ನೈಸರ್ಗಿಕ ಜೇನುತುಪ್ಪ ಶ್ವಾಸಕೋಶ ಆರೋಗ್ಯಕ್ಕೆ ಬಹಳ ಒಳ್ಳೆಯದು. ಗಂಟಲಲ್ಲಿ ಕಿರಿಕಿರಿ, ನೆಗಡಿ, ಕೆಮ್ಮಿನಂಥ ಲಕ್ಷಣಗಳಿದ್ದರೆ, ಜೇನುತುಪ್ಪದೊಂದಿಗೆ ತುಳಸಿ ರಸ ಅಥವಾ ಶುಂಠಿ ರಸ ಮುಂತಾದ ಸರಳ ಮನೆಮದ್ದುಗಳು ಉಪಶಮನ ನೀಡುತ್ತವೆ.
ಸಂಸ್ಕರಿತ/ರಿಫೈನ್ಡ್ ಆಹಾರಗಳು ಬೇಡ
ಬಿಳಿ ಅಕ್ಕಿ, ರಿಫೈನ್ಡ್ ಎಣ್ಣೆ, ಬಿಳಿ ಬ್ರೆಡ್, ಬಿಳಿ ಪಾಸ್ತಾ, ಮೈದಾದಿಂದ ತಯಾರಾದ ಆಹಾರಗಳು- ಇಂಥವೆಲ್ಲವೂ ಸಂಸ್ಕರಿತ ಆಹಾರಗಳ ಪಟ್ಟಿಯಲ್ಲಿ ಬರುತ್ತವೆ. ಆಹಾರ ಸಂಸ್ಕಾರಗೊಂಡಷ್ಟೂ ದೇಹದಲ್ಲಿ ಉರಿಯೂತಕ್ಕೆ ಕಾರಣವಾಗುತ್ತವೆ. ಅದರಲ್ಲೂ ಶ್ವಾಸಕೋಶಗಳ ಉರಿಯೂತವೆಂದರೆ ಕೆಮ್ಮು, ಉಬ್ಬಸ, ಅಸ್ತಮಾದಂಥ ಲಕ್ಷಣಗಳು ಕಾಡತೊಡಗುತ್ತವೆ. ಹಾಗಾಗಿ ಉರಿಯೂತಕ್ಕೆ ಕಾರಣವಾಗುವ ಆಹಾರಗಳನ್ನು ದೂರ ಮಾಡಿ.
ನೀರು-ನಿದ್ದೆ ಬೇಕು
ದಿನಕ್ಕೆ ಎಂಟು ತಾಸುಗಳ ನಿದ್ದೆಯು ದೇಹದಲ್ಲಿ ಅಗತ್ಯ ದುರಸ್ತಿ ಕಾರ್ಯಗಳನ್ನು ಮಾಡಿಸಲು ನೆರವಾಗುತ್ತದೆ. ದಿನಕ್ಕೆಂಟು ಗ್ಲಾಸ್ ನೀರು ಕುಡಿಯುವುದು ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೆ ಅಗತ್ಯ.
ಇದನ್ನೂ ಓದಿ: Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!
ಆರೋಗ್ಯ
Tips For Eyes: ಕಣ್ಣು ಅದುರುವುದಕ್ಕೆ ಶಕುನ ಕಾರಣವಲ್ಲ! ಮತ್ತೇನು ಕಾರಣ?
ಕಣ್ಣು ಅದುರುವುದು (Tips For Eyes) ಸಾಮಾನ್ಯ. ಆದರೆ ಇದು ಶಕುನದ ಸೂಚಕ ಎಂದು ಹೇಳುವವರೇ ಹೆಚ್ಚು. ಆದರೆ ಇದಕ್ಕೆ ಅಸಲಿ ಕಾರಣ ಏನು? ಪರಿಹಾರ ಏನು? ಈ ಲೇಖನ ಓದಿ.
ಕಣ್ಣು ಅದುರುತ್ತಿದೆಯೇ? (Tips For Eyes) ಎಡಗಣ್ಣೋ- ಬಲಗಣ್ಣೋ? ಇದೆಂಥಾ ಶಕುನವೆಂದು ಪಂಚಾಂಗ ನೋಡುವುದೋ ಅಥವಾ ಯಾರಲ್ಲೋ ಶಾಸ್ತ್ರ ಕೇಳುವವರಿಗೇನೂ ಬರವಿಲ್ಲ. ಮುಂದಾಗಲಿರುವ ಯಾವುದನ್ನೋ, ಅದುರುವ ಮೂಲಕ ಸೂಚಿಸುವುದಕ್ಕೆ ಕಣ್ಣುಗಳಿಗೆ ಸಾಧ್ಯವಿಲ್ಲದಿದ್ದರೂ, ದೇಹದ ಕುರಿತಾಗಿ ಬೇರೇನನ್ನೋ ಅವು ಸೂಚಿಸುವುದು ಹೌದು. ಅಂದರೆ, ಕಣ್ಣುಗಳ ಮೇಲೆ ಒತ್ತಡ, ಆಯಾಸ ಹೆಚ್ಚಿದಾಗ, ನೇತ್ರಗಳಲ್ಲಿ ಶುಷ್ಕತೆಯಿದ್ದರೆ, ಅತಿಯಾದ ಕೆಫೇನ್ ಅಥವಾ ಆಲ್ಕೊಹಾಲ್ ಸೇವನೆ, ನಿರ್ಜಲೀಕರಣ- ಇಂಥ ಸಂದರ್ಭಗಳಲ್ಲಿ ಕಣ್ಣುಗಳು ಅದುರುವುದಿದೆ. ಇದಲ್ಲದೆಯೂ ಬೇರೆ ಕಾರಣಗಳು ಇರಬಹುದು. ವಿಟಮಿನ್ ಬಿ12 ಕೊರತೆ, ಸ್ಕ್ರೀನ್‌ಗಳನ್ನು ಅತಿಯಾಗಿ ನೋಡಿದಾಗ ಉಂಟಾಗುವ ಆಯಾಸ, ಒತ್ತಡ, ಧೂಮಪಾನ, ಖಿನ್ನತೆಯಂಥ ಕಾರಣಗಳಿಗೂ ಕಣ್ಣು ಅದುರಬಹುದು.
ಏನು ಮಾಡಬೇಕು?
ಕಣ್ಣುಗಳು ನಮ್ಮ ಮಾತಿಗೆ ಬೆಲೆ ಕೊಡದಂತೆ ತಮ್ಮಷ್ಟಕ್ಕೆ ತಾವೇ ಅದುರುತ್ತಿದ್ದರೆ, ಕಿರಿಕಿರಿಯ ಸಂಗತಿಯದು. ಒಂದೊಮ್ಮೆ ಕಣ್ಣು ಒಣಗಿದಂತಾಗಿ ಅದುರುತ್ತಿದ್ದರೆ, ನೇತ್ರಗಳನ್ನು ಬಿಗಿಯಾಗಿ ಮುಚ್ಚಿಕೊಳ್ಳಿ. ಮತ್ತೆ ದೊಡ್ಡದಾಗಿ ಕಣ್ಣಗಲಿಸಿ. ಇದೊಂದು ರೀತಿಯಲ್ಲಿ ಅತಿಯಾಗಿ ಮಿಟುಕಿಸಿದಂತೆ. ಹೀಗೆ ಮಾಡುವುದರಿಂದ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುತ್ತವೆ. ಒಣಗಿದ ಅನುಭವ ಕಡಿಮೆಯಾಗುತ್ತದೆ. ಮಾತ್ರವಲ್ಲ, ಕಣ್ಣು ಮತ್ತು ಮುಖದ ಮಾಂಸಖಂಡಗಳಿಗೆ ಸಣ್ಣ ವ್ಯಾಯಾಮವಾದಂತಾಗಿ ಈ ಭಾಗಗಳಲ್ಲಿ ರಕ್ತ ಸಂಚಾರ ವೃದ್ಧಿಯಾಗುತ್ತದೆ.
ಮಸಾಜ್
ಬೆರಳಿನಿಂದ ಕಣ್ಣುಗಳ ಕೆಳ ರೆಪ್ಪೆಯ ಅಡಿಗೆ ಸಣ್ಣದಾಗಿ ಮಸಾಜ್ ಮಾಡಬಹುದು. ಈ ಸಂದರ್ಭದಲ್ಲಿ ಕಣ್ಣುಗಳನ್ನು ಸತತವಾಗಿ ಮಿಟುಕಿಸಲೂ ಬಹುದು. ಆದರೆ ಈ ಕೆಲಸ ಮಾಡುವಾಗ ಕೈಗಳನ್ನು ಮೊದಲು ಶುಚಿ ಮಾಡಿಕೊಳ್ಳಬೇಕಾಗುತ್ತದೆ. ಹಾಗಿಲ್ಲದಿದ್ದರೆ ಸೋಂಕಾಗುವ ಸಾಧ್ಯತೆ ಇಲ್ಲದಿಲ್ಲ. ಹೀಗೆ ಮಸಾಜ್ ಮಾಡುವುದರಿಂದ ಕಣ್ಣುಗಳಿಗೆ ರಕ್ತ ಸಂಚಾರ ವೃದ್ಧಿಸುವುದೇ ಅಲ್ಲದೆ, ಈ ಭಾಗದ ಮಾಂಸಖಂಡಗಳು ಬಲಗೊಳ್ಳುತ್ತವೆ.
ಇದನ್ನೂ ಓದಿ: Eye health foods | ಕಣ್ಣು ಆರೋಗ್ಯವಾಗಿ ಇರಬೇಕಿದ್ದರೆ ಇವನ್ನೆಲ್ಲ ತಿನ್ನುತ್ತಿರಿ!
ವ್ಯಾಯಾಮ
ದೃಷ್ಟಿಯ ಚಲನೆಯನ್ನು ಮೇಲೆ-ಕೆಳಗೆ-ಎಡಕ್ಕೆ-ಬಲಕ್ಕೆ-ವೃತ್ತಾಕಾರದಲ್ಲಿ ಹಾಗೂ ಮುಚ್ಚಿ-ಬಿಟ್ಟು ಮಾಡಿ ಕಣ್ಣುಗಳಿಗೆ ವ್ಯಾಯಾಮ ಮಾಡಿಸಬಹುದು. ಇದರಿಂದ ಸತತವಾಗಿ ಸ್ಕ್ರೀನ್ ನೋಡಿದರಿಂದ ಉಂಟಾದ ಒತ್ತಡ, ಆಯಾಸ ಕಡಿಮೆಯಾಗುತ್ತದೆ.
ಆಲ್ಕೊಹಾಲ್ ಸೇವನೆ ನಿಲ್ಲಿಸಿ
ಕೆಫೇನ್ ಮತ್ತು ಆಲ್ಕೊಹಾಲ್ ಸೇವನೆ ಹೆಚ್ಚಿದರೂ ಈ ಕಿರಿಕಿರಿ ಎದುರಾದೀತು. ಇದೇ ಕಾರಣ ಹೌದಾದರೆ, ಪರಿಹಾರ ನಿಮ್ಮ ಕೈಯಲ್ಲೇ ಇದೆ. ದೇಹಕ್ಕೆ ನೀರು ಕಡಿಮೆಯಾದರೂ ಕಣ್ಣದುರುವುದುಂಟು. ಹಾಗಾಗಿ ಸಾಕಷ್ಟು ನೀರು ಕುಡಿಯಿರಿ.
ಶುದ್ಧ ನೀರಿನಿಂದ ತೊಳೆಯಿರಿ
ಬೆಚ್ಚಗಿನ ಮತ್ತು ತಂಪಾದ ಶುದ್ಧ ನೀರಿನಿಂದ ಕಣ್ಣು ತೊಳೆಯಬಹುದು. ಅಂದರೆ, ಮುಚ್ಚಿದ ಕಣ್ಣುಗಳ ಮೇಲೆ ಒಮ್ಮೆ ಬೆಚ್ಚಗಿನ ನೀರು, ಇನ್ನೊಮ್ಮೆ ತಣ್ಣೀರು ಹಾಕಿ ತೊಳೆಯುವುದು. ತಣ್ಣೀರಿನಿಂದ ಕಣ್ಣಿನ ರಕ್ತನಾಳಗಳು ಸಂಕುಚಿತಗೊಂಡರೆ, ಬೆಚ್ಚಗಿನ ನೀರಿನಿಂದ ಅವು ವಿಕಸನಗೊಳ್ಳುತ್ತವೆ. ಕಣ್ಣುಗಳು ತುಂಬಾ ಅದುರುತ್ತಿದ್ದರೆ, ಇದನ್ನು ದಿನಕ್ಕೆ ನಾಕಾರು ಬಾರಿ ಮಾಡಬಹುದು. ಕಣ್ಣಿನ ರಕ್ತ ಪರಿಚಲನೆ ಉತ್ತಮಗೊಂಡು, ಅದುರುವುದು ಕಡಿಮೆಯಾಗುತ್ತದೆ.
ಈ ಎಲ್ಲಾ ಪ್ರಯತ್ನಗಳ ನಂತರವೂ ಸಮಸ್ಯೆ ಪರಿಹಾರವಾಗಲಿಲ್ಲ ಎಂದರೆ, ದೃಷ್ಟಿಯಲ್ಲಿ ದೋಷ ಕಂಡುಬಂದರೆ, ಕಣ್ಣುಗಳಲ್ಲಿ ಈವರೆಗಿಲ್ಲದ ಯಾವುದಾದರೂ ಸಮಸ್ಯೆ ಪ್ರಾರಂಭವಾದರೆ, ಅದುರುವಾಗ ಕಣ್ಣುಗಳು ಸಂಪೂರ್ಣ ಮುಚ್ಚಿಕೊಳ್ಳುತ್ತಿದ್ದರೆ ವೈದ್ಯರನ್ನು ಕಾಣಬಹುದು.
-
ದೇಶ15 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ22 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ15 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ16 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್22 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ22 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್19 hours ago
Ruturaj Gaikwad : ಚೀನಾಗೆ ಹೊರಡುವ ಮೊದಲು ಪುಣೆಯ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಋತುರಾಜ್