ಬಿಸಿಲಲ್ಲಿ (sunny) ಅಡ್ಡಾಡುವುದು (Skin Care Tips) ಎಲ್ಲರಿಗೂ ಪ್ರಿಯವೇನಲ್ಲ. ಆದರೆ ಬೇಸಿಗೆಯಲ್ಲಿ (summer) ಮನೆಯಿಂದ ಹೊರಬೀಳುತ್ತಿದ್ದಂತೆ ಬಿಸಿಲಿಗೆ ಸೋಕುವುದು ಬಿಟ್ಟರೆ ಬೇರೆ ದಾರಿ ಇರುವುದಿಲ್ಲ. ಇದರ ಪರಿಣಾಮವಾಗಿ ಚರ್ಮವೆಲ್ಲ (skin) ಕೆಂಪಾಗಿ ಸುಟ್ಟಂತಾಗುವುದು, ಕಪ್ಪಾಗುವುದು ಸಾಮಾನ್ಯ. ಬಿಸಿಲಿಗೆ ಚರ್ಮ ಕೆಂಪಾಗಿ, ಕಪ್ಪಾಗುವುದರಿಂದ ತ್ವಚೆಯ ಹೊಳಪು ಮಾಯವಾಗುತ್ತದೆ, ಸುಕ್ಕಾಗುತ್ತದೆ. ಕ್ರಮೇಣ ಕುಂದಿದಂತೆ ಕಾಣಲಾರಂಭಿಸುತ್ತದೆ.
ಜಾಹೀರಾತುಗಳಲ್ಲಿ ತೋರಿಸಿದಂತೆ ಮೈ-ಮುಖಗಳನ್ನೆಲ್ಲ ಮುಚ್ಚಿಕೊಂಡು ಅಡ್ಡಾಡುವುದು ಸಾಧ್ಯವಿಲ್ಲದ್ದು. ಇದಕ್ಕಾಗಿ ದಿನಕ್ಕೆ ಹಲವು ಬಾರಿ ದೇಹಕ್ಕೆಲ್ಲ ಸನ್‌ಬ್ಲಾಕ್ ಬಳಿದುಕೊಳ್ಳುವುದು ಎಲ್ಲರಿಗೂ ಅಸಾಧ್ಯ. ಹಾಗಾದರೆ ಬೇಸಿಗೆಯಲ್ಲಿ ಕಪ್ಪಾಗುವ ಚರ್ಮದ ರಕ್ಷಣೆ ಹೇಗೆ?
ಮಾರುಕಟ್ಟೆಯಲ್ಲಿ ʻಟ್ಯಾನ್ ರಿಮೂವ್ʼ ಎಂಬ ಹಣೆಪಟ್ಟಿಯೊಂದಿಗೆ ಬಹಳಷ್ಟು ಕ್ರೀಮ್‌ಗಳು ದೊರೆಯುತ್ತವೆ. ಅವಲ್ಲವೂ ಕಿಸೆಯ ಭಾರ ಇಳಿಸಿದಷ್ಟೇ ಸರಾಗವಾಗಿ ಸುಟ್ಟ ಗುರುತು ತೆಗೆಯುತ್ತವೆ ಎಂಬ ಖಾತ್ರಿಯೇನಿಲ್ಲ. ಕೆಲವೊಂದು ಕ್ರೀಮುಗಳು ಎಲ್ಲರ ಚರ್ಮಕ್ಕೆ ಒಗ್ಗುವುದೂ ಇಲ್ಲ. ಹಾಗಾಗಿ ಮನೆಮದ್ದುಗಳ ಮೊರೆ ಹೋಗುವುದೇ ಉತ್ತಮ ಎನಿಸುತ್ತದೆ. ಇದಕ್ಕಾಗಿ ಕೆಲವು ಸರಳವಾದ ಫೇಸ್‌ಮಾಸ್ಕ್‌ಗಳ ಕ್ರಮವನ್ನು ಇಲ್ಲಿ ವಿವರಿಸಲಾಗಿದೆ.
ಜೇನು-ಪಪ್ಪಾಯ ಮಾಸ್ಕ್
ಪಪ್ಪಾಯದ ಹೋಳುಗಳನ್ನು ಜೇನು ತುಪ್ಪದೊಂದಿಗೆ ಸೇರಿಸಿ ಬ್ಲೆಂಡ್ ಮಾಡಿ. ಈ ಮಿಶ್ರಣವನ್ನು ಉದಾರವಾಗಿ ಮುಖಕ್ಕೆಲ್ಲ ಲೇಪಿಸಿ. 30 ನಿಮಿಷಗಳ ಅನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದನ್ನು ವಾರದಲ್ಲಿ ಮೂರು ಬಾರಿ ಮಾಡಬಹುದು.
ಓಟ್‌ಮೀಲ್-ಮೊಸರು
ಮುಖದ ಮೇಲಿನ ಜಡ ಕೋಶಗಳನ್ನು ತೆಗೆಯುವ ಸಾಮರ್ಥ್ಯ ಓಟ್‌ಮೀಲ್‌ಗಿದ್ದರೆ, ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಚರ್ಮದ ತೇವವನ್ನು ಕಾಪಾಡಿ ಮೃದುವಾಗಿಸಬಲ್ಲದು. ಟ್ಯಾನ್ ತೆಗೆಯುವುದಕ್ಕೆ ಇದು ಒಳ್ಳೆಯ ಉಪಾಯ. ಓಟ್‌ಮೀಲ್ ಪುಡಿಯನ್ನು ಮಂದವಾದ ಮೊಸರಿನಲ್ಲಿ ಕಲೆಸಿ, ಮುಖಕ್ಕೆಲ್ಲ ಲೇಪಿಸಿ. 20 ನಿಮಿಷಗಳ ನಂತರ ಉಗುರು ಬಿಸಿ ನೀರಿನಲ್ಲಿ ತೊಳೆಯಿರಿ. ವಾರಕ್ಕೆರಡು ಬಾರಿ ಮಾಡಬಹುದು ಇದನ್ನು.
ಶ್ರೀಗಂಧ-ತೆಂಗಿನೆಣ್ಣೆ
ಸುಟ್ಟು ಕೆಂಪಾದಂಥ ಚರ್ಮಕ್ಕೆ ಇದು ಒಳ್ಳೆಯ ಉಪಶಮನ ನೀಡುತ್ತದೆ. ಶ್ರೀಗಂಧ ಸುಟ್ಟ ಚರ್ಮವನ್ನು ತಂಪಾಗಿಸಿದರೆ, ಕೊಬ್ಬರಿ ಎಣ್ಣೆ ದುರಸ್ತಿ ಮಾಡಿ, ತೇವವನ್ನು ಹೆಚ್ಚಿಸುತ್ತದೆ. ಸುಟ್ಟು ಕೆಂಪಾದ ಚರ್ಮವನ್ನು ಶೀಘ್ರವೇ ಗುಣ ಪಡಿಸುತ್ತದೆ. 30 ನಿಮಿಷಗಳ ನಂತರ ಉಗುರು ಬಿಸಿ ನೀರಿನಲ್ಲಿ ತೊಳೆಯಬಹುದು. ಆದರೆ ಒಂದು ಎಚ್ಚರಿಕೆ ತೆಗೆದುಕೊಳ್ಳಬೇಕು. ಮುಖದಲ್ಲಿ ಮೊಡವೆಗಳಿದ್ದರೆ, ಇಂಥ ಎಣ್ಣೆಯುಕ್ತ ಪೇಸ್ಟ್‌ಗಳು ಮೊಡವೆಯ ಸಮಸ್ಯೆಯನ್ನು ಹೆಚ್ಚಿಸಬಹುದು.
ಇದನ್ನೂ ಓದಿ: Health Tips in Kannada: ಬೇಸಿಗೆಯಲ್ಲಿ ನಿಜಕ್ಕೂ ನಮ್ಮ ದೇಹಕ್ಕೆ ಬೇಕಾಗಿರುವುದು ಈ ಆಹಾರಗಳು
ಮೊಸರು-ಕಾಫಿ
ಕಾಫಿಗೆ ಚರ್ಮವನ್ನು ಎಕ್ಸ್‌ಫಾಲಿಯೇಟ್ ಮಾಡುವ ಸಾಮರ್ಥ್ಯವಿದೆ. ಮೊಸರು ತ್ವಚೆಯನ್ನು ಮೃದುವಾಗಿಸುತ್ತದೆ. ಇದರ ಜೊತೆಗೆ ಕೊಂಚ ಟೊಮೇಟೊ ರಸವನ್ನೂ ಬೆರೆಸಿದರೆ, ಸುಟ್ಟಂತಾದ ಚರ್ಮಕ್ಕೆ ಉತ್ಕರ್ಷಣ ನಿರೋಧಕಗಳ ಆರೈಕೆಯೂ ದೊರೆತಂತಾಗುತ್ತದೆ. ಈ ಮೂರು ವಸ್ತುಗಳನ್ನು ಬ್ಲೆಂಡ್ ಮಾಡಿ, ಬಿಸಿಲಿಗೆ ಕೆಂಪಾದ ಭಾಗಕ್ಕೆಲ್ಲ ಹಚ್ಚಿ. 20 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಮಾಡಿದರೆ ಸಾಕಾಗುತ್ತದೆ.