Site icon Vistara News

Skincare Tips: ಮುಖ ಫಳಫಳ ಹೊಳೆಯಬೇಕೆಂದು ಈ ತಪ್ಪುಗಳನ್ನು ಮಾಡಲೇಬೇಡಿ!

Skincare Tips

ಮುಖ ಕಾಂತಿಯುಕ್ತವಾಗಬೇಕು, ಚರ್ಮ ನಳನಳಿಸುತ್ತಿರಬೇಕೆಂಬ ಬಯಕೆ ಯಾರಿಗಿರುವುದಿಲ್ಲ? ಅದಕ್ಕಾಗಿಯೇ ಥರಾವರಿ ಕ್ರೀಮು, ಲೋಶನ್ನುಗಳನ್ನು ತಂದಿಟ್ಟುಕೊಳ್ಳುತ್ತೇವೆ. ಚಳಿಗಾಲಕ್ಕೆ ಬೇರೆ, ಮಳೆಗಾಲಕ್ಕೆ ಇನ್ನೊಂದು ಬೇಸಿಗೆಗೆ ಮತ್ತೊಂದು ಎಂದೆಲ್ಲಾ ಉಪಚಾರಗಳನ್ನು (skincare tips) ಮಾಡಿಕೊಂಡರೂ, ಬೇಕಾದ ಫಲಿತಾಂಶ ದೊರೆಯದಿದ್ದಾಗ ನಿರಾಶೆಯಾಗುತ್ತದೆ. ಎಲ್ಲೋ ಏನೋ ಎಡವಟ್ಟಾಗುತ್ತಿದೆಯೇ (skincare tips) ಎಂಬ ಅನುಮಾನ ಬಂದರೂ ಸಹಜವೆ. ನಿಜಕ್ಕೂ ನಾವು ಮಾಡುತ್ತಿರುವುದರಲ್ಲಿ ಏನಾದರೂ ತಪ್ಪಾಗುತ್ತಿದೆಯೇ ಎಂಬುದು ಗೊತ್ತಾಗುವುದು ಹೇಗೆ?

ಮುಖ ಒರೆಸುವುದು ಹೇಗೆ?

ಇದೇನು ಮಹಾ ವಿಷಯವಲ್ಲ, ನಮಗೇನು ಅಷ್ಟೂ ತಿಳಿಯವುದಿಲ್ಲವೇ ಎನ್ನಬಹುದು ಟವೆಲ್‌ನಿಂದ ಮುಖ ಒರೆಸುತ್ತಾ. ಸೌಂದರ್ಯ ಪರಿಣತರ ಪ್ರಕಾರ, ತೊಳೆದ ಮುಖವನ್ನು ಟವೆಲ್‌ ಒರೆಸುವುದೇ ತಪ್ಪು. ಆಗಾಗ ಆ ಟವೆಲ್‌ ತೊಳೆಯುತ್ತಿದ್ದರೆ ತೊಂದರೆಯಿಲ್ಲ, ಹಾಗಿಲ್ಲದಿದ್ದರೆ ಆ ಟವೆಲ್‌ಗಳಲ್ಲೇ ಬ್ಯಾಕ್ಟೀರಿಯಾಗಳಿದ್ದು ಮುಖದ ಮೊಡವೆಗಳನ್ನು ಹೆಚ್ಚಿಸುತ್ತವೆ. ಮುಖವನ್ನು ಗಾಳಿಗೆ ಆರಲು ಬಿಟ್ಟು, ಸ್ವಲ್ಪ ಒದ್ದೆ ಇರುವಾಗಲೇ ಮಾಯಿಸ್ಚರೈಸರ್‌ ಹಚ್ಚುವುದು ಸೂಕ್ತ.

ತಪ್ಪಾದ ಅನುಕ್ರಮ

ಸೀರಂ, ಮಾಯಿಸ್ಚರೈಸರ್‌, ರೆಟಿನೋಲ್‌ ಎನ್ನುತ್ತಾ ಬೇಕಾದ ಅನುಕ್ರಮದಲ್ಲಿ ಅವುಗಳನ್ನು ಮುಖಕ್ಕೆ ಹಚ್ಚುತ್ತಿದ್ದರೆ, ದೊರೆಯಬೇಕಾದ ಫಲಿತಾಂಶ ದೊರೆಯುವುದಿಲ್ಲ. ಇವುಗಳ ಪೈಕಿ ಲೋಶನ್‌ ಅಥವಾ ಹೆಚ್ಚು ದ್ರವರೂಪದಲ್ಲಿರುವುದನ್ನು ಮೊದಲು ಹಚ್ಚಿ. ಕ್ರೀಮ್‌ನಂತೆ ಗಟ್ಟಿಯಾಗಿರುವುದನ್ನು ನಂತರ ಹಚ್ಚಿ. ಇದರಿಂದ ಚರ್ಮಕ್ಕೆ ಹೀರಿಕೊಳ್ಳಲು ಅನುಕೂಲವಾಗುತ್ತದೆ.

ಸನ್‌ಬ್ಲಾಕ್‌

ಸೂಕ್ಷ್ಮ ಚರ್ಮವಿದ್ದು, ಬಿಸಿಲಿಗೆ ಒಡ್ಡಿದಾಗ ಮುಖದ ಮೇಲೆ ಕಪ್ಪು ಮಚ್ಚೆಗಳು ಬರುತ್ತವೆ ಎಂದಾದರೆ ಸನ್‌ಸ್ಕ್ರೀನ್‌ ದಿನವೂ ಅಗತ್ಯವಿದೆ. ಅದರಲ್ಲೂ ಬಿಸಿಲಿಗೆ ಪದೇಪದೆ ಹೋಗುವುದು ಅನಿವಾರ್ಯ ಎಂದಾದರೆ, ಸನ್‌ಬ್ಲಾಕ್‌ ಆಗಾಗ ಹಚ್ಚುವುದೂ ಅನಿವಾರ್ಯ.

ಒದ್ದೆ ಚರ್ಮಕ್ಕೇ ಹಚ್ಚಬೇಕು

ಹ್ಯಾಲುರೋನಿಕ್‌ ಆ್ಯಸಿಡ್ ಬಳಸುವಾಗ ಒದ್ದೆ ಮುಖಕ್ಕೇ ಹಚ್ಚಬೇಕು. ಆನಂತರ ಮಾಯಿಸ್ಚರೈಸರ್‌ ಬಳಸುವುದು ಸೂಕ್ತ. ಇಲ್ಲದಿದ್ದರೆ ಮುಖದ ಚರ್ಮ ಒಣಗಿದಂತಾಗುತ್ತದೆ. ಇದು ರೆಟಿನೋಲ್‌ ವಿಷಯದಲ್ಲೂ ಹೌದು. ಈ ಕ್ರೀಮ್‌ಗಳ ನಂತರ ಚೆನ್ನಾಗಿ ಮಾಯಿಸ್ಚರೈಸರ್‌ ಹಚ್ಚದಿದ್ದರೆ ಚರ್ಮ ಒಣಗುತ್ತದೆ. ಪರಿಣಾಮವೂ ಪ್ರತಿಕೂಲವಾಗಿಯೇ ದೊರೆಯುತ್ತದೆ.

ಕೈ ಹಾಕಬೇಡಿ

ಲೋಶನ್‌ಗಳಾದರೆ ಬಾಟಲಿಗಳಿಂದ ಕೈಗೆ ಹಾಕಿಕೊಳ್ಳಬಹುದು. ಕ್ರೀಮುಗಳಾದರೆ ಅವುಗಳ ಡಬ್ಬಿಯೊಳಗೇ ಕೈ ಹಾಕುವುದು ಮಾಮೂಲಿ. ಹೀಗೆ ಮಾಡುವುದರಿಂದ ಕ್ರೀಮ್‌ಗೆ ಬ್ಯಾಕ್ಟೀರಿಯಾ ಸೇರಬಹುದು ಎನ್ನುತ್ತಾರೆ ತಜ್ಞರು. ಹಾಗಾಗಿ ಕೈಯಿಕ್ಕುವಾಗ ಕೈ ತೊಳೆದುಕೊಳ್ಳಿ ಅಥವಾ ಇದಕ್ಕಾಗಿಯೇ ಪ್ರತ್ಯೇಕವಾದ ಚಮಚೆಯನ್ನು ಇರಿಸಿಕೊಳ್ಳಿ. ಕ್ರೀಮ್‌ಗಳು ಮಲಿನವಾಗದಂತೆ ನೋಡಿಕೊಳ್ಳುವುದು ಮುಖ್ಯ

ಗಮನಿಸಿ

ದೇಹಕ್ಕೆ ನೀರು ಕಡಿಮೆಯಾದರೆ ಅದರ ಲಕ್ಷಣಗಳು ತ್ವಚೆಯ ಮೇಲೆ ಗೋಚರಿಸುತ್ತವೆ. ಚರ್ಮ ಒಣಗಿದಂತಾಗುವುದು, ಕೆಂಪಾಗುವುದು ಇವೆಲ್ಲ ಚರ್ಮಕ್ಕೆ ಮತ್ತು ದೇಹಕ್ಕೆ ನೀರು ಕಡಿಮೆಯಾದ ಲಕ್ಷಣಗಳು. ಚೆನ್ನಾಗಿ ನೀರು ಕುಡಿಯಿರಿ ಮತ್ತು ಉತ್ತಮ ಗುಣಮಟ್ಟದ ಮಾಯಿಸ್ಚರೈಸರ್‌ ಬಳಸಿ.

ಮೇಕಪ್‌ ತೆಗೆಯಿರಿ

ಎಷ್ಟೇ ಆಯಾಸವಾಗಿರಲಿ, ನಿದ್ದೆ ಬರುತ್ತಿರಲಿ ಅಥವಾ ಇನ್ನೇನೇ ಆಗಿರಲಿ, ಮಲಗುವಾಗ ಕಡ್ಡಾಯವಾಗಿ ಮೇಕಪ್‌ ಮುಖದಿಂದ ತೆಗೆಯಿರಿ. ಎಂಥಾ ಒಳ್ಳೆಯ ಮೇಕಪ್‌ ಧರಿಸಿದ್ದರೂ, ರಾತ್ರಿಡೀ ಅದು ಚರ್ಮಕ್ಕೆ ಅಂಟಿಕೊಂಡಿದ್ದರೆ ಹಾನಿ ಮಾಡುತ್ತದೆ. ಸೂಕ್ಷ್ಮ ನೆರಿಗೆಗಳ ಒಳಸೇರಿ ಚರ್ಮ ರಿಪೇರಿಯಾಗುವುದನ್ನು ತಡೆಯುತ್ತದೆ. ದಿನವಿಡೀ ಚರ್ಮಕ್ಕೆ ಅಂಟಬಹುದಾದ ಧೂಳು, ಕೊಳೆ, ಬೆವರುಗಳನ್ನು ಸ್ವಚ್ಛವಾಗಿಸಿ ಮಲಗುವುದು ಮಹತ್ವದ್ದು.

ಇದನ್ನೂ ಓದಿ: Healthy food for Kidney: ಕಿಡ್ನಿ ಸಮಸ್ಯೆಯೇ? ಈ ಆಹಾರಗಳು ಕಿಡ್ನಿ ಆರೋಗ್ಯಕ್ಕೆ ಪೂರಕ!

Exit mobile version