Site icon Vistara News

Winter Sleep: ಚಳಿಗಾಲದಲ್ಲಿ ನಿದ್ದೆ ಹೆಚ್ಚೇ? ಕಾರಣವಿದೆ!

Winter Sleep

ಳಿಗಾಲದ ರಾತ್ರಿಗಳು ದೀರ್ಘ; ನಿದ್ದೆ ಇನ್ನೂ ದೀರ್ಘ! ಬೆಳಗಾಗಿದ್ದು ಗೊತ್ತೇ ಆಗುವುದಿಲ್ಲ; ಗೊತ್ತಾದರೂ ಏಳಲು ಮನಸ್ಸಾಗುವುದಿಲ್ಲ. ನಸುಕಿಗೆ ಕಿರುಚುವ ಅಲಾರಾಂ ಗಡಿಯಾರ ಆ ಹೊತ್ತಿನ ಶತ್ರುವಿನಂತೆ ಭಾಸವಾಗುತ್ತದೆ. ಚಳಿ ಹೆಚ್ಚಾದಷ್ಟೂ ಹೊದ್ದು ಮಲಗಿದರಾಯ್ತು ಎಂಬ ಭಾವ ತೀವ್ರವಾಗುತ್ತದೆ. ಚಳಿಗಾಲ ಕಳೆದು, ರಾತ್ರಿ ಕಿರಿದಾಗಿ, ಸೆಖೆ ಏರುತ್ತಿದ್ದಂತೆ ನಿದ್ದೆಯೂ ಕಡಿಮೆಯಾಗುತ್ತದೆ. ಹೀಗೇಕೆ? ನಿಜಕ್ಕೂ ಹೀಗಾಗುವುದು ಹೌದೇ ಅಥವಾ ಇದು ನಮ್ಮ ಭ್ರಮೆಯೇ? ವಿಜ್ಞಾನಿಗಳ ಬಳಿ ಇದಕ್ಕೆ ಉತ್ತರವಿದೆ.

ಸೂರ್ಯನ ಬೆಳಕಿಗೆ ಮತ್ತು ದೇಹದೊಳಗಿನ ಜೈವಿಕ ಗಡಿಯಾರ ಅಥವಾ ಸರ್ಕಾಡಿಯನ್‌ ರಿದಂಗೆ ನೇರ ಸಂಬಂಧವಿದೆ. ಇದಕ್ಕೆ ತಕ್ಕಂತೆ ನಮ್ಮ ಚಟುವಟಿಕೆಗಳನ್ನು ನಾವು ಹೊಂದಿಸಿಕೊಳ್ಳುವುದು ಜಾಣತನ ಎನ್ನುತ್ತಾರೆ ಜರ್ಮನಿಯ ಹೆಡ್‌ವಿಗ್ಸ್‌ ಆಸ್ಪತ್ರೆಯ ಅಧ್ಯಯನಕಾರರು. ಹಾಗಾಗಿ ನಿದ್ದೆ ಹಾಳುಬೀಳಾದ ಇಂದಿನ ನಗರವಾಸಿಗಳಿಂದ ಹಿಡಿದು ಎಲ್ಲರಿಗೂ, ಚಳಿಗಾಲದಲ್ಲಿ ನಿದ್ದೆ ಸ್ವಲ್ಪ ಹೆಚ್ಚು. ಅದರಲ್ಲೂ ನಮಗೆ ಕನಸುಗಳನ್ನು ನೀಡುವ ಆರ್‌ಇಎಮ್‌ (rapid eye movement) ನಿದ್ದೆಯ ಅವಧಿ ಚಳಿಗಾಲದಲ್ಲಿ ದೀರ್ಘ, ಬೇಸಿಗೆಯಲ್ಲಿ ಕಡಿಮೆಯಂತೆ. ಹಾಗಾಗಿ ಋತುಮಾನಕ್ಕೂ ನಮ್ಮ ನಿದ್ದೆಗೂ ಸ್ಪಷ್ಟವಾದ ನಂಟಿದೆ.

ಈ ಅಧ್ಯಯನಕ್ಕಾಗಿ, ನಿದ್ದೆಯ ಸಮಸ್ಯೆಯಿರುವ 188 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಆದರೆ ಇವರಾರು ನಿದ್ದೆಗಾಗಿ ಔಷಧ ತೆಗೆದುಕೊಳ್ಳದವರಾಗಿದ್ದರು. ಅವರನ್ನು ಎಬ್ಬಿಸಲು ಯಾವುದೇ ಅಲರಾಂಗಳು ಇಲ್ಲದಂಥ, ಪ್ರಯೋಗಶಾಲೆಯಲ್ಲಿ ಅವರೆಲ್ಲರನ್ನೂ ಮಲಗಿಸಿ, ನಿದ್ದೆಯ ಪೂರ್ವಾಪರಗಳನ್ನು ಹಲವಾರು ತಿಂಗಳುಗಳವರೆಗೆ ಗಮನಿಸಲಾಗಿತ್ತು. ಬೇಸಿಗೆಗಿಂತಲೂ ಚಳಿಗಾಲದಲ್ಲಿ ಇವರ ನಿದ್ದೆಯ ಅವಧಿ ಸುಮಾರು ಒಂದು ತಾಸಿನಷ್ಟು ಹೆಚ್ಚಾಗಿತ್ತು. ಜೊತೆಗೆ, ಆರ್‌ಇಎಂ ನಿದ್ದೆಯ ಅವಧಿಯೂ ಅರ್ಧ ತಾಸಿನಷ್ಟು ಅಧಿಕವಾಗಿತ್ತು.

“ಋತುಮಾನದ ಬದಲಾವಣೆಯು ಭೂಮಿಯ ಮೇಲಿನ ಎಲ್ಲಾ ಜೀವಿಗಳ ಮೇಲೆ ಸರ್ವತ್ರವಾಗಿ ಪರಿಣಾಮ ಬೀರುತ್ತದೆ. ಇದು ಸಹಜ. ಆದರೆ ಈ ಪರಿಣಾಮದಿಂದ ನಮ್ಮಲ್ಲಿ ಹೆಚ್ಚಿನ ಬದಲಾವಣೆ ಆಗದಂತೆ ನಾವು ನಿರ್ವಹಿಸಲು ಯತ್ನಿಸುತ್ತೇವೆ” ಎನ್ನುತ್ತಾರೆ ಅಧ್ಯಯನಕಾರರು. ಆದರೆ ಈ ಅಧ್ಯಯನವನ್ನು ನಿದ್ದೆಯ ಸಮಸ್ಯೆಯಿಲ್ಲದ, ಆರೋಗ್ಯವಂತ ಜನರ ಮೇಲೆ ನಡೆಸಿ, ಪರಿಣಾಮ ಒಂದೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವ ಅಗತ್ಯವಿದೆ.

ಕೆಲವು ಭೌಗೋಳಿಕ ಪ್ರದೇಶಗಳಲ್ಲಿ ಋತುಮಾನದ ಬದಲಾವಣೆಯೊಂದಿಗೆ, ದಿನ-ರಾತ್ರಿಯ ಅವಧಿಯಲ್ಲಿ ತೀವ್ರ ಬದಲಾವಣೆ ಉಂಟಾಗುತ್ತದೆ. ಬೇಸಿಗೆಯಲ್ಲಿ ರಾತ್ರಿ 9ಕ್ಕೆ ಕತ್ತಲಾಗಿ, ಬೆಳಗಿನ 5ಕ್ಕೇ ಸೂರ್ಯ ಮೂಡಿದರೆ, ಚಳಿಗಾಲದಲ್ಲಿ ಸಿಕ್ಕಾಪಟ್ಟೆ ಹಿಮ ಸುರಿದು, ಸಂಜೆ ೪ಕ್ಕೆ ಕತ್ತಲಾಗಿ ಬೆಳಗಿನ 7ಕ್ಕೆ ರವಿ ಬರುವಂಥ ಪ್ರದೇಶಗಳಿವೆ. ಇಂಥ ಸ್ಥಳಗಳಲ್ಲಿ ಋತುಮಾನಕ್ಕೆ ತಕ್ಕಂತೆ ದಿನ-ರಾತ್ರಿಯನ್ನು ಮತ್ತು ನಿದ್ದೆಯನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಸುಲಭದ್ದಲ್ಲ.

ಇದನ್ನೂ ಓದಿ: Health Tips: ನಮ್ಮ ಶಕ್ತಿಗುಂದಿಸುವ ಈ ವಿಷಯಗಳ ಬಗ್ಗೆ ಎಚ್ಚರ ವಹಿಸಿ!

Exit mobile version