Site icon Vistara News

Sleep secret | ಇಷ್ಟಿದ್ದರೆ ದೇಹಕ್ಕೊಂದು ನೆಮ್ಮದಿಯ ಗುಡ್‌ ನೈಟ್‌!

sleep better

ʻನಿದ್ದೆಯನ್ನು ಗೆದ್ದವನು ಲೋಕದಲ್ಲಿ ಇದ್ದಾನೋʼ ಎಂಬುದು ನಿದ್ದೆಯನ್ನು ಗೆಲ್ಲುವುದು ಅಸಾಧ್ಯ ಎಂಬ ಧೋರಣೆಯ ಮಾತು. ಆದಾಗ್ಯೂ ದ್ವಾಪರದಲ್ಲಿ ಅರ್ಜುನನಿಗೆ ನಿದ್ದೆಯನ್ನು ಗೆದ್ದವನೆಂಬ ಹಿರಿಮೆಯಿತ್ತು. ಈಗಿನ ದಿನಗಳಲ್ಲಿ ನಿದ್ದೆಯನ್ನು ಗೆದ್ದವರಿಲ್ಲದಿದ್ದರೂ, ನಿದ್ದೆ ಬಾರದೆ ರಾತ್ರಿ ಕಳೆಯುವವರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಿದೆ. ಇದರ ಬೆನ್ನಿಗೇ, ನಿದ್ರಾಹೀನತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೂ ಏರಿವೆ. ಉದ್ಯೋಗ, ದಿನದ ಕೆಲಸ, ಸಾಮಾಜಿಕ ಮಾಧ್ಯಮಗಳು, ಮನರಂಜನೆ ಇತ್ಯಾದಿಗಳೆಲ್ಲಾ ಮುಗಿದೂ ಸಮಯ ಉಳಿದರೆ ನಿದ್ದೆ ಎಂಬಂಥ ಇತ್ತೀಚಿನ ಮನಸ್ಥಿತಿಯ ಫಲವಿದು.

ನಿದ್ದೆ ಯಾಕೆ ಬೇಕು ಎಂದರೆ ಮೇಲ್ನೋಟಕ್ಕೆ ಕಾಣುವ ಕಾರಣಗಳು ಹೀಗಿವೆ- ದೇಹದ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡುವುದಕ್ಕೆ, ಶಕ್ತಿ ಸಂಚಯನಕ್ಕೆ, ಅಂಗಾಂಶಗಳಲ್ಲಿ ತೊಂದರೆಯಿದ್ದರೆ ಸರಿಪಡಿಸಿಕೊಳ್ಳುವುದಕ್ಕೆ, ಮೆದುಳಿನ ಕಾರ್ಯ ಕ್ಷಮತೆಗೆ. ನಿದ್ದೆ ಇಲ್ಲದಿದ್ದರೆ ಆಗುವುದೇನು ಎಂಬ ಮಾಹಿತಿಯನ್ನೂ ಚುಟುಕಾಗಿ ಹೇಳುವುದಾದರೆ- ಸ್ಪಷ್ಟ ಯೋಚಿಸುವ ಸಾಮರ್ಥ್ಯ ಕಡಿತ, ಗಮನ ಕೇಂದ್ರೀಕರಿಸಲು ಕಷ್ಟ, ಪ್ರತಿಕ್ರಿಯೆ ಕುಂಠಿತ ಮತ್ತು ಭಾವನೆಗಳನ್ನು ಹಿಡಿತದಲ್ಲಿಡಲು ತೊಡಕಾಗುತ್ತದೆ. ಇವಲ್ಲದೆ, ಮಧುಮೇಹ, ಹೃದ್ರೋಗ, ತೂಕ ಹೆಚ್ಚಳ, ರೋಗನಿರೋಧಕ ಶಕ್ತಿ ಕುಂಠಿತ, ಲೈಂಗಿಕ ನಿರಾಸಕ್ತಿ, ಖಿನ್ನತೆಯಂಥ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ನಿದ್ರಾಹೀನತೆ ಕಾರಣವಾಗುತ್ತದೆ.

ಎಷ್ಟೊತ್ತು ನಿದ್ರಿಸಬೇಕು? ಈ ಪ್ರಶ್ನೆಗೆ ತಜ್ಞರಲ್ಲಿ ಸ್ಪಷ್ಟ ಉತ್ತರವಿದೆ. ಈ ಕೆಳಗಿನ ಕೋಷ್ಟಕವನ್ನು ಗಮನಿಸಿ.

ವರ್ಷ
ಅಗತ್ಯ ಪ್ರಮಾಣದ ನಿದ್ದೆ
65 ವರ್ಷ ಮತ್ತು ಮೇಲ್ಪಟ್ಟವರು
7ರಿಂದ 8 ತಾಸು
18ರಿಂದ 64ರ ಪ್ರಾಯ
7ರಿಂದ 9 ತಾಸು
14ರಿಂದ 17ರ ಪ್ರಾಯ
8ರಿಂದ 10 ತಾಸು
6ರಿಂದ 13ರ ಪ್ರಾಯ
9ರಿಂದ 11 ತಾಸು
3ರಿಂದ 5ರ ಪ್ರಾಯ
10ರಿಂದ 13 ತಾಸು
1ರಿಂದ 2 ವರ್ಷ
11ರಿಂದ 14 ತಾಸು
4ರಿಂದ 11 ತಿಂಗಳು
12ರಿಂದ 15 ತಾಸು
ಹುಟ್ಟಿದ ಮೊದಲ ಮೂರು ತಿಂಗಳು
14ರಿಂದ 17 ತಾಸು

ಕೆಲವೊಮ್ಮೆ ನಿದ್ದೆಯ ಪ್ರಮಾಣ, ರೀತಿಗಳಲ್ಲಿ ತಾತ್ಕಾಲಿಕ ವ್ಯತ್ಯಾಸವಾಗಬಹುದು. ಅದನ್ನು ಆದಷ್ಟೂ ಶೀಘ್ರ ಸಾಮಾನ್ಯ ಸ್ಥಿತಿಗೆ ತಂದುಕೊಳ್ಳುವುದು ಮುಖ್ಯ. ‍ಕಣ್ತುಂಬಾ ನಿದ್ದೆ ಬರಬೇಕಾದರೆ ಏನು ಮಾಡಬೇಕು ಎಂಬುದು ಬಹಳಷ್ಟು ಜನರ ಪ್ರಶ್ನೆ. ಇಂಥ ಕೆಲವು ವಿಷಯಗಳು ಸುಖನಿದ್ರೆಗೆ ನೆರವಾಗಬಹುದು-

ನಿದ್ದೆಗೊಂದು ನಿಯಮವಿರಲಿ: ದಿನಾ ರಾತ್ರಿ ಮಲಗುವ ಮತ್ತು ಬೆಳಗ್ಗೆ ಏಳುವ ವೇಳೆಯನ್ನು ಖಾಯಂ ಮಾಡಿಕೊಳ್ಳಿ. ರಜೆ, ಹಬ್ಬ-ಹರಿದಿನ, ಪಾರ್ಟಿ… ಏನೇ ಆದರೂ ಈ ವೇಳಾಪಟ್ಟಿಯನ್ನು ಆದಷ್ಟೂ ಬದಲಿಸದಿರುವುದು ಸೂಕ್ತ.

ಸಾಕು ಪ್ರಾಣಿಗಳನ್ನು ದೂರವಿಡಿ: ಬೆಕ್ಕು, ನಾಯಿಯಂಥ ಸಾಕುಪ್ರಾಣಿಗಳನ್ನು ತಮ್ಮೊಂದಿಗೆ ಹಾಸಿಗೆಯಲ್ಲೇ ಮಲಗಿಸಿಕೊಳ್ಳುವುದು ಅನೇಕರಿಗೆ ಪ್ರಿಯವಾಗಿರಬಹುದು. ಆದರೆ ಸಂಶೋಧನೆಯ ಪ್ರಕಾರ, ನಿದ್ದೆಗೇಡುತನಕ್ಕೆ ಇದೂ ಕಾರಣವಾಗಬಹುದು. ಹಾಗಾಗಿ ಮಲಗುವಾಗ ಅವುಗಳನ್ನು ದೂರ ಇಡಿ.

ಕೆಫೇನ್‌ ಸಾಕು!: ಹೆಚ್ಚಿನ ಕೆಫೇನ್‌ ದೇಹಕ್ಕೆ ಸೇರಿದರೆ ನಿದ್ದೆಗೇಡು ಗ್ಯಾರಂಟಿ. ಹಾಗಾಗಿ ಸಂಜೆಯ ನಂತರ ಕಾಫಿ, ಚಹಾ, ಪೆಪ್ಸಿ ಥರದ ಪಾನೀಯಗಳು, ಚಾಕಲೇಟ್‌ಗಳಿಗೆಲ್ಲಾ ಕಡಿವಾಣ ಹಾಕುವುದು ಸೂಕ್ತ.

ಇದನ್ನೂ ಓದಿ: ಪ್ರವಾಸವೆಂದರೆ ಪ್ರಯಾಸ ಪಡುವ Motion sickness ಮಂದಿಗೊಂದಿಷ್ಟು ಗುಟ್ಟು!

ಫೋನ್‌ ತೆಗೆದಿಡಿ: ಮಲಗುವ ಕನಿಷ್ಠ ಒಂದು ತಾಸು ಮುಂಚೆ ಎಲ್ಲಾ ರೀತಿಯ ಸ್ಕ್ರೀನ್‌ಗಳಿಂದ ಕಣ್ಣುಗಳನ್ನು ಮುಕ್ತಗೊಳಿಸಿ. ಅದರಲ್ಲೂ ಫೋನ್‌ ಪರದೆಯ ನೀಲಿ ಬೆಳಕು ಮೆದುಳನ್ನು ಪ್ರಚೋದಿಸುತ್ತಲೇ ಇರುತ್ತದಂತೆ.

ರಾತ್ರಿಗೆ…ನೋ ಚಿಯರ್ಸ್‌!: ರಾತ್ರಿಯ ಹೊತ್ತು ಒಂದೆರಡು ಪೆಗ್‌ ಒಳಗಿಳಿದರೆ ನಿದ್ದೆ ಖಾತ್ರಿ ಎನ್ನುವವರಿಗೆ ಈ ಕಿವಿಮಾತು. ಇದರಿಂದ ನಿದ್ದೆ ಬರಬಹುದು, ಆದರೆ ಬೆಳಗ್ಗೆ ಎದ್ದಾಗ ಸುಖನಿದ್ರೆ ಮಾಡಿದಂತಿರುವುದಿಲ್ಲ ದೇಹ ಮತ್ತು ಮನಸ್ಸು. ಈ ಹ್ಯಾಂಗೋವರ್‌ ಸ್ಥಿತಿಯೂ ನಿದ್ದೆಗೇಡುತನದ ಒಂದು ಭಾಗವೇ.

ವ್ಯಾಯಾಮ ಬೇಡ: ಅಂದರೆ ಹಾಗಲ್ಲ! ಮಲಗುವ ಮುನ್ನ ಮೆದುಳನ್ನು ಚೋದಿಸುವಂತೆ ಬೆವರು ಹರಿಸಿ ವ್ಯಾಯಾಮ ಮಾಡುವುದು ಖಂಡಿತಾ ಸಲ್ಲದು. ಬೆಳಗ್ಗೆ ಬೇಗೆದ್ದು ಎಷ್ಟಾದರೂ ಬೆವರು ಹರಿಸಿ, ತೊಂದರೆಯಿಲ್ಲ.

ತೈಲಗಳ ಬಳಕೆ: ಸ್ವಲ್ಪ ಪ್ರಮಾಣದಲ್ಲಿ ತಲೆಗೆ ತೈಲ ಲೇಪಿಸುವುದರಿಂದ ನಿದ್ದೆ ಉತ್ತಮವಾಗುವ ಸಾಧ್ಯತೆಯಿದೆ. ಅದರಲ್ಲೂ ಲ್ಯಾವೆಂಡರ್‌ ಆಯಿಲ್‌ನಂಥ ಸುಗಂಥ ತೈಲಗಳು, ಮಾನಸಿಕ ಒತ್ತಡ ಕಡಿಮೆ ಮಾಡಿ ನಿದ್ದೆಯನ್ನು ಉದ್ದೀಪಿಸುವ ಗುಣ ಹೊಂದಿವೆ.

ಧ್ಯಾನ: ಬೇಡದ ಆಲೋಚನೆಗಳನ್ನು ತಲೆಯಿಂದ ಹೊರಗಟ್ಟಿ, ನಿದ್ದೆಯ ಗುಣಮಟ್ಟವನ್ನು ಸುಧಾರಿಸುವ ಸಾಮರ್ಥ್ಯ ಧ್ಯಾನಕ್ಕಿದೆ. ಒಮ್ಮೆ ನಿದ್ದೆ ಮಾಡಿದ ಮೇಲೆ, ಪದೇಪದೆ ಎಚ್ಚರವಾಗದೆ, ಎಷ್ಟು ಹೊತ್ತು ಗಾಢವಾಗಿ ನಿದ್ರಿಸುತ್ತೀರಿ ಎಂಬುದರಿಂದ ನಿದ್ದೆಯ ಗುಣಮಟ್ಟ ನಿರ್ಧಾರವಾಗುತ್ತದೆ.

ಸುಖನಿದ್ರೆಯ ಪ್ರಯೋಜನಗಳು ಬೇಕಾದಷ್ಟಿವೆ. ನಿದ್ದೆಯಿಂದ ತೂಕ ಇಳಿಕೆಗೂ ಸಹಾಯಕ. ನಿದ್ರಾಹೀನತೆಯಿಂದ ನಮ್ಮ ಅರಿವಿಲ್ಲದೆಯೇ ತಿನ್ನುವ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ತೂಕವೂ ಹೆಚ್ಚೀತು. ನಿದ್ದೆ ಸರಿಯಾಯಿತೋ, ಇದೆಲ್ಲದಕ್ಕೂ ಕಡಿವಾಣ. ಖಿನ್ನತೆಯಂಥ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಶೇ. ೯೦ರಷ್ಟು ಮಂದಿಗೆ ನಿದ್ರಾಹೀನತೆಯ ಸಮಸ್ಯೆ ಕಂಡುಬಂದಿದೆ. ನಿದ್ದೆಯ ಗುಣಮಟ್ಟ ಸುಧಾರಣೆಗೆ ಪೂರಕವಾದಂಥ ಜೀವನಶೈಲಿ ಬದಲಾವಣೆಗಳಿಂದ ಜೀವನದ ಗುಣಮಟ್ಟವನ್ನೂ ವೃದ್ಧಿಸಿಕೊಳ್ಳಬಹುದು.

ಇದನ್ನೂ ಓದಿ: ಹೃದಯ ಆರೋಗ್ಯ ಚೆನ್ನಾಗಿರಬೇಕಾ? ಸಾಕಷ್ಟು ನಿದ್ರೆ ಮಾಡಿ!

Exit mobile version