Site icon Vistara News

Sleep Tips: ಸೊಂಪಾದ ನಿದ್ದೆ ಬರಲು ಈ 5 ಗಿಡಗಳು ಮನೆಯೊಳಗಿದ್ದರೆ ಸಾಕು!

plants in bedroom

ಹಲವರಿಗೆ ನಿದ್ದೆಯೇ ಸಮಸ್ಯೆ. ಇದಕ್ಕೆ ಕಾರಣ ಹಲವು. ಕೆಲಸದ ಒತ್ತಡ, ಏರುಪೇರಾದ ನಿದ್ದೆಯ ಸಮಯ, ವ್ಯಾಯಾಮವಿಲ್ಲದ ಆಲಸಿ ಜೀವನ, ಬದಲಾದ ಆಹಾರ ಶೈಲಿ, ಅತಿಯಾದ ವ್ಯಾಯಾಮ ಇತ್ಯಾದಿ ಇತ್ಯಾದಿ ಕಾರಣಗಳ ಜೊತೆಗೆ ಬೇರೆ ಹಲವಾರು ವಿಚಾರಗಳು ನಮ್ಮ ನಿದ್ದೆಯ ಸಮಸ್ಯೆಗೆ (sleep tips) ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಕಾರಣವಾಗಿರುತ್ತದೆ. ಆದರೆ, ಅದನ್ನು ಅರಿತುಕೊಳ್ಳುವಷ್ಟರಲ್ಲಿ ಸಮಯ ಮುಂದೆ ಸಾಗಿರುತ್ತದೆ. ಸಮಸ್ಯೆ ಉಲ್ಬಣಿಸುವ ತೊಂದರೆಯೂ ಇದೆ. ಅದಕ್ಕಾಗಿಯೇ ಇಂಥ ಸಮಸ್ಯೆಗಳನ್ನು ಸಮಸ್ಯೆಯೇ ಅಲ್ಲ ಎಂಬಂತೆ ನೋಡುವುದೂ ತಪ್ಪಾಗುತ್ತದೆ. ಆಗಾಗ ಇಂಥದ್ದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುವುದೂ (health tips) ಮುಖ್ಯವಾಗುತ್ತದೆ.

ಇಂಥ ನಿದ್ದೆಯ ಸಮಸ್ಯೆಗೆ ನಮ್ಮಲ್ಲೇ ಕೆಲವು ಪರಿಹಾರೋಪಾಯಗಳ ಪೈಕಿ ಕೆಲವು ಸಸ್ಯಗಳನ್ನು ನಮ್ಮ ಮಲಗುವ ಕೋಣೆಯಲ್ಲಿ ಬೆಳೆಸುವುದರಿಂದಲೂ ನಿದ್ದೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತವೆ ಸಂಶೋಧನೆಗಳು. ಕೆಲವು ಬಗೆಯ ಸಸ್ಯಗಳು ನಮ್ಮ ಮೂಡ್‌ ಹಾಗೂ ಆರೋಗ್ಯದ ಮೇಲೆ ಪಾಸಿಟಿವ್‌ ಪರಿಣಾಮ ಬೀರುತ್ತದಂತೆ. ಇವುಗಳನ್ನು ಬೆಳೆಸುವ ಮೂಲಕ ಬೇಗನೆ ನಾವು ನಿದ್ದೆಗೆ ಜಾರುತ್ತೇವೆ. ಹಾಗಾಗಿ, ನಿದ್ದೆಯ ಸಮಸ್ಯೆಯಲ್ಲಿ ನಿದ್ದೆಯ ತೊಂದರೆಯನ್ನು ಕಡಿಮೆ ಮಾಡಬಹುದಂತೆ. ಹಾಗಾದರೆ ಯಾವ ಗಿಡಗಳನ್ನು ಬೆಡ್‌ರೂಂನಲ್ಲಿಟ್ಟುಕೊಳ್ಳುವುದರಿಂದ ನಿದ್ದೆಯನ್ನು ಉತ್ತಮಪಡಿಸಿಕೊಳ್ಳಬಹುದು ಎಂಬುದನ್ನು ನೋಡೋಣ.

1. ಮಲ್ಲಿಗೆ: ಮಲ್ಲಿಗೆ ಕೇವಲ ಒಂದು ಬಿಳಿಯ ಹೂವಷ್ಟೇ ಅಲ್ಲ.  ಇದಕ್ಕೊಂದು ಅತ್ಯದ್ಭುತವಾದ ತನ್ನದೇ ಆದ ವಿಶೇಷ ಘಮವಿದೆ. ಇದರ ಘಮಕ್ಕೆ ಮನ ಸೋಲದೆ ಇದ್ದವರು ಯಾರಿದ್ದಾರು ಹೇಳಿ. ಮಲ್ಲಿಗೆಯ ಪರಿಮಳಕ್ಕೆ ನಮ್ಮ ಮೂಡನ್ನು ಇದ್ದಕ್ಕಿದ್ದಂತೆ ಉತ್ತಮಪಡಿಸುವ ಶಕ್ತಿಯಿದೆ. ಅದಕ್ಕೇ, ಮಲ್ಲಿಗೆಯನ್ನು ಪರಿಮಳಯುಕ್ತ ತೈಲಗಳ ತಯಾರಿಕೆಯಲ್ಲಿ ಬಳಸುತ್ತಾರೆ ಹಾಗೂ ಇಂತಹ ಎಣ್ಣೆಯನ್ನು ಮಾನಸಿಕವಾಗಿ ಚೈತನ್ಯ ನೀಡಲು, ಒತ್ತಡವನ್ನು ಕಡಿಮೆ ಮಾಡಲು ಬಹಳ ಸಂದರ್ಭಗಳಲ್ಲಿ ಅರೋಮಾ ಥೆರಪಿಯಲ್ಲೂ ಬಳಸಲಾಗುತ್ತದೆ. ಮಲ್ಲಿಗೆಯ ಗಿಡವನ್ನು ಬೆಳೆಸುವುದು ಕಷ್ಟವೇನಲ್ಲ. ಪುಟ್ಟ ಕುಂಡಗಳಲ್ಲೂ ಇದನ್ನು ಸುಲಭವಾಗಿ ಬೆಳೆಸಬಹುದು. ಕಿಟಕಿ ಬದಿಯಲ್ಲಿ, ಬೆಡ್‌ಸೈಡ್‌ ಟೇಬಲ್‌ ಮೇಲೆ ಮಲ್ಲಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಇದು ನಮ್ಮ ದುಗುಡದ ಮನಸ್ಥಿತಿಯನ್ನು ಶಾಂತಗೊಳಿಸಿ ನಮ್ಮನ್ನು ರಿಲ್ಯಾಕ್ಸ್‌ ಮಾಡುತ್ತದೆ. ಹಾಗಾಗಿ ಇದು ಉತ್ತಮ ನಿದ್ದೆಯನ್ನೂ ತರಿಸುತ್ತದೆ.

2. ನಾಗದಾಳೆ (ಸ್ನೇಕ್‌ ಪ್ಲಾಂಟ್‌): ನಾಗದಾಳೆ ಅಥವಾ ಸ್ನೇಕ್‌ ಪ್ಲಾಂಟ್‌ ಬೆಳೆಸುವುದುದ ಬಹಳ ಸುಲಭ. ಹೆಚ್ಚು ನೀರು ಹಾಗೂ ಪೋಷಣೆ ಬೇಡದ ಈ ಗಿಡದಿಂದ ಹಲವಾರು ಪ್ರಯೋಜನಗಳಿವೆ. ನೋಡಲು ಹಾವಿನಂತೆಯೇ ಕಾಣುವ ಕಾರಣ ಇದಕ್ಕೆ ಸುಲಭವಾಗಿ ಸ್ನೇಕ್‌ ಪ್ಲಾಂಟ್‌ ಎಂಬ ಹೆಸರೇ ಬಂದಿದೆ. ಇದನ್ನು ನೈಸರ್ಗಿಕ ಏರ್‌ ಪ್ಯೂರಿಫೈಯರ್‌ ಎಂದೂ ಕರೆಯುತ್ತಾರೆ. ಹೀಗೆ ಕರೆಯಲು ಕಾರಣವೂ ಇದೆ. ಇದು ಗಾಳಿಯಲ್ಲಿರುವ ವಿಷಕಾರಿ ಅನಿಲಗಳನ್ನು ತೆಗೆದು ಹಾಕಿ ವಾತಾವರಣವನ್ನು ಶುದ್ಧಗೊಳಿಸುತ್ತದೆ. ಇದನ್ನು ಕೋಣೆಯೊಳಗಿಟ್ಟರೆ ನಮಗೆ ರಾತ್ರಿಯಿಡೀ ಭರಪೂರ ಆಮ್ಲಜನಕದ ಪೂರೈಕೆಯೂ ಆಗುತ್ತದೆ. ಹೀಗಾಗಿಯೇ ಒಳ್ಳೆಯ ನಿದ್ದೆಯೂ ಆಗುತ್ತದೆ.

3. ಲೋಳೆಸರ (ಅಲೋವೆರಾ): ಆಲೊವೆರಾದ ಉಪಯೋಗಗಳು ಜನಜನಿತ. ಚರ್ಮಕ್ಕೆ ಸಂಬಂಧಿಸಿದಂತೆ ಇದರ ಪ್ರಯೋಜನಗಳು ಅನೇಕ. ಆದರೆ, ಇವು ನಮ್ಮ ರಾತ್ರಿಯ ನಿದ್ದೆಗೂ ಪ್ರಯೋಜನಕಾರಿ ಎಂಬ ವಿಷಯ ನಿಮಗೆ ಗೊತ್ತೇ? ಹೌದು. ಲೋಳೆಸರ ರಾತ್ರಿ ಆಮ್ಲಜನಕವನ್ನು ಬಿಡುಗಡೆ ಮಾಡಿ ಉತ್ತಮ ಪರಿಣಾಮಕಾರಿ ನಿದ್ದೆಗೆ ಸಹಾಯ ಮಾಡುತ್ತದೆ. ನಾಸಾದ ಸಂಶೋಧನೆಗಳ ಪ್ರಕಾರ, ಅತ್ಯುತ್ತಮ ಏರ್‌ ಪ್ಯೂರಿಫೈಯರ್‌ ಸಸ್ಯವೆಂದರೆ ಅಲೊವೆರಾವಂತೆ. ಇವುಗಳನ್ನು ಮನೆಯೊಳಗೆ ಬೆಳೆಸುವುದರಿಂದ ನಾವು ಉಸಿರಾಡುವ ಪರಿಸರದಲ್ಲಿ ಉತ್ತಮ ಗಾಳಿಯನು ಇರುವಂತೆ ಮಾಡಿ, ವಿಷಾನಿಲಗಳನ್ನು ಹೊಡೆದೋಡಿಸುತ್ತದೆ ಎಂದು ನಾಸಾವೇ ಹೇಳಿದೆ. ಜೊತೆಗೆ ಅತ್ಯಂತ ಸುಲಭವಾಗಿ ಬೆಳೆಸಬಹುದಾದ ಸಸ್ಯ ಇದಾಗಿದ್ದು, ಕಡಿಮೆ ಸೂರ್ಯನ ಬೆಳಕು ಹಾಗೂ ಕಡಿಮೆ ನೀರನ್ನು ಇವು ಉಪಯೋಗಿಸುತ್ತವೆ.

ಇದನ್ನೂ ಓದಿ: Sleep tips | ಚಳಿಗಾಲದಲ್ಲಿ ನಿದ್ದೆ ಬೇಕೆಂದರೆ ಈ ಏಳು ಸೂತ್ರಗಳನ್ನು ಮರೆಯದಿರಿ!

4. ಲ್ಯಾವೆಂಡರ್:‌ ಮಲ್ಲಿಗೆಯಂತೆಯೇ, ತನ್ನ ಪರಿಮಳದ ಕಾರಣದಿಂದ ಪ್ರಯೋಜನಗಳಿರುವ ಲ್ಯಾವೆಂಡರ್‌ ಶಾಂತಿ ಹಾಗೂ ನೆಮ್ಮದಿಯ ನಿದ್ದೆಯನ್ನು ನಮಗೆ ನೀಡುವಲ್ಲಿ ತನ್ನ ಕೊಡುಗೆ ಖಂಡಿತವಾಗಿಯೂ ನೀಡುತ್ತದೆ. ಇದರದೊಂದು ಗಿಡವನ್ನು ಕೋಣೆಯಲ್ಲಿ ಹೊಂದಿರುವುದರಿಂದ ಇಡೀ ದಿನ ಉಲ್ಲಾಸವನ್ನೂ, ಚೈತನ್ಯವನ್ನೂ ಪಡೆಯಬಹುದು. ಇದರಿಂದ ಒತ್ತಡ, ಮಾನಸಿಕ ಖಿನ್ನತೆ ಎಲ್ಲವೂ ಕಡಿಮೆಯಾಗುತ್ತದೆ. ಅಧಿಕ ರಕ್ತದೊತ್ತಡ ಇರುವವರಿಗೂ ಇದು ಒಳ್ಳೆಯದು. ಲ್ಯಾವೆಂಡರ್‌ ಹೂವಿನ ಸ್ಪ್ರೇಯನ್ನು ತಮ್ಮ ದಿಂಬಿನ ಮೇಲೆ, ಬೆಡ್‌ಶೀಟಿನ ಮೇಲೆ ಚುಮುಕಿಸಿ ನಿದ್ದೆ ಮಾಡುವವರೂ ಇದ್ದಾರೆ. ಸ್ನಾನದ ನೀರಿಗೆ ಲ್ಯಾವೆಂಡರ್‌ ಎಣ್ಣೆಯ ಹನಿ ಹಾಕಿ ಸ್ನಾನ ಮಾಡಿ ಮಲಗಿದರೆ ಸೊಂಪಾದ ನಿದ್ದೆ ಬರುತ್ತದೆಯಂತೆ. ಹಲವರು ಒಣಗಿಸಿಸ ಶೇಖರಿಸಿಟ್ಟ ಲ್ಯಾಂವೆಂಡರ್‌ ಹೂಗೊಂಚಲನ್ನು ಇದೇ ಕಾರಣಕ್ಕೆ ತಮ್ಮ ಬೆಡ್‌ರೂಂನಲ್ಲಿಡುತ್ತಾರೆ. ಆದರೆ, ಇವೆಲ್ಲಕ್ಕಿಂತ ಹೆಚ್ಚು ಪ್ರಯೋಜನಕಾರಿ, ಲ್ಯಾವೆಂಡರ್‌ ಗಿಡವನ್ನೇ ಮಲಗುವ ಕೋಣೆಯಲ್ಲಿ ಬೆಳೆಸುವುದು.

5. ಸ್ಪೈಡರ್‌ ಪ್ಲಾಂಟ್‌: ಸ್ನೇಕ್‌ ಪ್ಲಾಂಟ್‌ನಂತೆಯೇ ಕಾಣಿಸುವ ಆದರೆ, ಅದರಷ್ಟು ದಪ್ಪ ಎಲೆಯಲ್ಲದ ಗಿಡವಿದು. ಮನೆಯೊಳಗೆ ಬೆಳೆಸಬಹುದಾದ, ಕಡಿಮೆ ಪೋಷಣೆ ಬಯಸುವ ಇದು ಅತ್ಯಂತ ಬೆಸ್ಟ್‌ ನೈಸರ್ಗಿಕ ಏರ್‌ ಪ್ಯೂರಿಫೈಯರ್‌ ಗಿಡ. ಇದು ನಮ್ಮ ಕೋಣೆಯಲ್ಲಿರುವ ವಿಷಕಾರಿ ಅನಿಲಗಳನ್ನು ತೆಗೆದು ಹಾಕಿ ಶುದ್ಧ ಆಮ್ಲಜನಕದ ಪೂರೈಕೆಯನ್ನು ರಾತ್ರಿಯೂ ಮಾಡುತ್ತದೆ. ನಾಸಾದ ಸಂಶೋದನೆಯ ಪ್ರಕಾರ 24 ಗಂಟೆಗಳಲ್ಲಿ ಕೋಣೆಯೊಂದರ ವಿಷಕಾರಿ ಅನಿಲಗಳ ಶೇ 95ರಷ್ಟು ತೆಗೆದು ಹಾಕಿದ ಗಿಡ ಈ ಸ್ಪೈಡರ್‌ ಪ್ಲಾಂಟ್‌. ಹಾಗಾಗಿ ಇದನ್ನು ಕೋಣೆಯಲ್ಲಿ ಇಡುವುದರಿಂದ ಶುದ್ಧ ಗಾಳಿಯ ಜೊತೆಗೆ ಸೊಂಪಾದ ನಿದ್ದೆ ಖಚಿತ.

ಇದನ್ನೂ ಓದಿ: Lifestyle Tips: ಆರೋಗ್ಯಕರ ಒತ್ತಡರಹಿತ ಜೀವನಕ್ಕೆ ಸರಳ ಸಪ್ತಸೂತ್ರಗಳು!

Exit mobile version