Site icon Vistara News

Sleeping Tips: ನಿಮಗೆ ರಾತ್ರಿ ನಿದ್ದೆ ಬರುತ್ತಿಲ್ಲವೆ? ಮಲಗುವ ಮುನ್ನ ಈ ಪೇಯಗಳನ್ನು ಕುಡಿಯಿರಿ!

Sleeping tips

ಪ್ರತಿದಿನ ನಿದ್ದೆ ಮಾಡುವುದು ಹೇಗೆ ಎಂದು ಹೆಣಗಾಡುತ್ತಿದ್ದೀರಾ? ಬೇಗ ನಿದ್ದೆ ಮಾಡಬೇಕು ಎಂದು ಹೊರಟು ನಿದ್ದೆ ಬರದೆ, ಬಂದ ನಿದ್ದೆಯಲ್ಲೂ ಏನೇನೋ ಕನಸುಗಳು, ಅರೆಬರೆ ನಿದ್ದೆಯಂಥ ಭಾವ ಅಥವಾ ನಿದ್ದೆ ಬರಲು ಹೆಚ್ಚು ಸಮಯ ಹಿಡಿಯುವುದು ಇತ್ಯಾದಿ ಸಮಸ್ಯೆಗಳು ನಿಮ್ಮದಾಗಿದ್ದರೆ ಅದರ ಬಗ್ಗೆ ನೀವು ಮೊದಲೇ ಎಚ್ಚೆತ್ತುಕೊಳ್ಳಬೇಕು. ಇತ್ತೀಚೆಗಿನ ದಿನಗಳಲ್ಲಿ ಈ ಸಮಸ್ಯೆ ಬಹಳ ಮಂದಿಯನ್ನು ಕಾಡುತ್ತಿದೆ. ಕಾರಣ ಗೊತ್ತೇ ಇದೆ. ಅತಿಯಾದ ಕೆಲಸ, ನಿದ್ದೆಯ ಸಮಯದ ಏರಿಳಿತ, ಕಚೇರಿಯ ಒತ್ತಡ, ತಡರಾತ್ರಿಯವರೆಗೆ ಮೊಬೈಲ್‌ ವೀಕ್ಷಣೆ, ಸಾಮಾಜಿಕ ಜಾಲತಾಣಗಳ ವೀಕ್ಷಣೆ, ಸಿನಿಮಾ ನೋಡುವುದು ಇತ್ಯಾದಿಗಳಿಂದಾಗಿ ನಿದ್ದೆಯ ಸಮಯವಿದು ಅಲ್ಲೋಲಕಲ್ಲೋಲವಾಗಿದೆ. ಹೀಗಾಗಿ, ಕೆಲವೊಮ್ಮೆ ಬೇಕೆಂದರೂ ನಿದ್ದೆ ಬರುವುದಿಲ್ಲ. ನಿದ್ದೆಯ ಈ ಸಮಸ್ಯೆಯಿಂದ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾದರೆ, ಇಂಥ ಸಮಸ್ಯೆ ಇರುವ ಮಂದಿ ಇದು ವಿಕೋಪಕ್ಕೆ ಹೋಗುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ನಿದ್ದೆಗೆ ಸಹಕಾರಿಯಾಗುವ ಆಹಾರವೂ ಸೇರಿದಂತೆ ನಿದ್ದೆಗೆ ಒಂದೆರಡು ಗಂಟೆಯ ಮೊದಲೇ ಮೊಬೈಲನ್ನು ದೂರವಿಡುವುದು, ಸಿನಿಮಾ ವೀಕ್ಷಣೆ ನಿಲ್ಲಿಸುವುದು ಇತ್ಯಾದಿ ಮುಂಜಾಗರೂಕತೆ ವಹಿಸಿಕೊಂಡರೆ, ಮತ್ತೆ ನಿಮ್ಮ ನಿದ್ರಾದೇವಿ ನಿಮ್ಮ ಬಳಿಗೆ ಬರುತ್ತಾಳೆ. ಸರಿಯಾದ ಆಹಾರಕ್ರಮದ ಜೊತೆಗೆ ಈ ಕೆಳಗಿನ ಕೆಲವು ಡ್ರಿಂಕ್‌ಗಳನ್ನು ರಾತ್ರಿ ಸೇವಿಸಿ ಮಲಗುವುದರಿಂದ ನಿಮಗೆ ನಿದ್ದೆ (Sleeping Tips) ಸುಲಭವಾಗುತ್ತದೆ.

ಮಲಗುವ ಮೊದಲು ಹಾಲು ಕುಡಿಯಿರಿ

ರಾತ್ರಿ ಮಲಗುವ ಮುಂಚೆ ಒಂದು ಲೋಟ ಬಿಸಿಯಾದ ಹಾಲು ಕುಡಿಯುವುದರಿಂದ ಸೊಂಪಾದ ನಿದ್ರೆ ಬರುತ್ತದೆ. ಆಯುರ್ವೇದವೂ ಇದನ್ನು ಪುಷ್ಠೀಕರಿಸುತ್ತದೆ. ದೇಹಕ್ಕೆ ಬೇಕಾದ ಕ್ಯಾಲ್ಶಿಯಂ ಕೂಡಾ ಹಾಲಿನಲ್ಲಿ ದೊರೆಯುವ ಜೊತೆಗೆ, ಈ ಕ್ಯಾಲ್ಶಿಯಂನಿಂದ ನಿದ್ರಾಹೀನತೆಯ ಸಮಸ್ಯೆಯೂ ಪರಿಹಾರವಾಗುತ್ತದೆ. ಹಾಲಿನಲ್ಲಿರುವ ಸೆರೆಟೋನಿನ್‌ ಎಂಬ ಅಂಶವು ನಮ್ಮನ್ನು ರಿಲ್ಯಾಕ್ಸ್‌ ಮಾಡಿಸುತ್ತದೆ.

ಎಳನೀರು ಕುಡಿಯಿರಿ

ಮೆಗ್ನೀಶಿಯಂನ ಕೊರತೆ ಕೂಡ ಖಿನ್ನತೆ ಹಾಗೂ ಉದ್ವೇಗದಂತಹ ಸಮಸ್ಯೆಯನ್ನು ತರುತ್ತದೆ. ಇದರಿಂದಾಗಿ ನಿದ್ರಾಹೀನತೆಯೂ ಕೂಡಾ ಬರುತ್ತದೆ. ಹಾಗಾಗಿ ಹೆಚ್ಚು ಮೆಗ್ನೀಶಿಯಂ ಇರುವ ಎಳನೀರನ್ನು ಕುಡಿಯುವುದರಿಂದಲೂ ಈ ಸಮಸ್ಯೆಗೆ ಉತ್ತರ ದೊರೆಯುತ್ತದೆ. ಮನಸ್ಸನ್ನೂ ಇದು ಶಾಂತಿಯುತವಾಗಿ ಇರಿಸುತ್ತದೆ.

ಬಾಳೆಹಣ್ಣಿನ ಶೇಕ್‌

ಬಾಳೆಹಣ್ಣಿನಲ್ಲಿ ಮೆಗ್ನೀಶಿಯಂ ಹಾಗೂ ಪೊಟಾಶಿಯಂ ಹೇರಳವಾಗಿ ಇರುವುದರಿಂದ ರಾತ್ರಿ ಮಲಗುವ ಮೊದಲು ಬಾಳೆಹಣ್ಣಿನ ಶೇಕ್‌ ಮಾಡಿಯೂ ಕುಡಿಯಬಹುದು. ಮಧುಮೇಹ ಹಾಗೂ ಇತರ ಸಮಸ್ಯೆಗಳಿಲ್ಲದವರು ಹೀಗೆ ಮಾಡುವ ಮೂಲಕ ರಾತ್ರಿ ಸೊಂಪಾದ ನಿದ್ದೆಯನ್ನು ಮಾಡಬಹುದು.

ಇದನ್ನೂ ಓದಿ: Cotton Candy: ಕಾಟನ್‌ ಕ್ಯಾಂಡಿ ಯಾಕೆ ಎಷ್ಟೊಂದು ಅಪಾಯಕಾರಿ ಗೊತ್ತೆ?

ಬಾದಾಮಿ ಹಾಲು

ಬಿಸಿಬಿಸಿಯಾದ ಬಾದಾಮಿ ಹಾಲನ್ನು ಕುಡಿಯುವುದರಿಂದಲೂ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ಬಾದಾಮಿ ಹಾಲು ಮಾಡಿಕೊಂಡು, ಅದಕ್ಕೆ ಕೇಸರಿ ದಳಗಳನ್ನು ಹಾಕಿ ಕುಡಿಯುವುದು ಬಹಳ ಒಳ್ಳೆಯದು. ಇದು ನರ ಸಂಬಂಧೀ ಸಮಸ್ಯೆಗಳನ್ನು ಪರಿಹಾರ ಮಾಡಿ ಸೊಂಪಾದ ನಿದ್ರೆಯನ್ನು ಕರುಣಿಸುತ್ತದೆ.

ಕ್ಯಾಮೋಮೈಲ್‌ ಚಹಾ

ಕ್ಯಾಮೋಮೈಲ್‌ ಚಹಾ ಕುಡಿಯುವುದರಿಂದಲೂ ಪರಿಹಾರ ಸಿಗುತ್ತದೆ. ಇದರಲ್ಲಿ ಫ್ಲೇವನಾಯ್ಡ್‌ಗಳು ಇರುವುದರಿಂದ ಇದು ನಿದ್ದೆಗೆ ಸಹಾಯ ಮಾಡುತ್ತದೆ. ಆದಷ್ಟೂ ಸಂಜೆಯಾದ ಮೇಲೆ ಕೆಫೀನ್‌ ಇರುವ ಡ್ರಿಂಕ್‌ಗಳನ್ನು ಸೇವಿಸದಿರಿ. ರಾತ್ರಿಯೂಟ ಆದಷ್ಟೂ ಸರಳವಾಗಿರಲಿ. ಹಿತಮಿತವಾಗಿರಲಿ. ಮಲಗುವುದಕ್ಕೂ ಮೊದಲು ಮೂರು ಗಂಟೆಗಳ ಮೊದಲೇ ಊಟ ಮುಗಿಸಿಕೊಳ್ಳಿ. ಚುರುಕಾಗಿರಿ. ಮೊಬೈಲನ್ನು ದೂರವಿಟ್ಟು, ಮನೆಯವರೊಂದಿಗೆ ಖುಷಿಯಿಂದ ಸಮಯ ಕಳೆದು ನಿದ್ದೆಗೆ ಜಾರಿ. ಈ ಶಿಸ್ತುಬದ್ಧ ಜೀವನ ಅಳವಡಿಸಿಕೊಂಡರೆ ನಿದ್ದೆ ಸಮಸ್ಯೆಯಾಗದು. ಆರೋಗ್ಯವೂ ವೃದ್ಧಿಯಾಗುತ್ತದೆ.

Exit mobile version