ಯಾರಾದರೂ ಅನುಚಿತವಾದ್ದನ್ನು ಮಾತಾಡಿದರೆ, ʻನಿದ್ದೆಗಣ್ಣಲ್ಲಿ ಮಾತಾಡ್ತಿದ್ದೀಯಾ?ʼ ಎಂದು ಅವರನ್ನು ಇತರರು ಮೂದಲಿಸುವುದನ್ನು ಕಂಡಿರಬಹುದು. ನಿದ್ದೆಗಣ್ಣಲ್ಲಿ ಮಾತಾಡುವುದು, ನಡೆದಾಡುವುದು (Sleepwalking) ಇತ್ಯಾದಿ ಯಾವುದೇ ಚಟುವಟಿಕೆಯನ್ನು ಮಾಡಿದರೂ ಅದು ಮಾಡುವವರ ನಿಯಂತ್ರಣ ಮೀರಿ ಮಾಡುವುದು ಎನ್ನುವ ಅರ್ಥದಲ್ಲಿ ಅದನ್ನು ನೋಡುವುದು ಸಹಜ. ಆದರೆ ನಿದ್ದೆಯಲ್ಲಿ ಕೆಲವರು ನಡೆಯುವುದೇಕೆ, ಇದನ್ನು ಸರಿ ಪಡಿಸುವುದಕ್ಕೇನು ಮಾಡಬೇಕು ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ನಿದ್ದೆಯಲ್ಲಿ ನಡೆಯುವವರು (Sleepwalking) ಹಾಗೆ ಮಾಡುವುದೇಕೆ ಎಂಬ ಬಗ್ಗೆ ನಿಖರ ಕಾರಣ ಹುಡುಕುವುದಕ್ಕಾಗಿ ಸಂಶೋಧನೆಗಳು ಇನ್ನೂ ಜಾರಿಯಲ್ಲಿವೆ. ಹಾಗೆಂದು ಕಾರಣವೇ ಈವರೆಗೆ ವಿಜ್ಞಾನಿಗಳಿಗೆ ತಿಳಿದಿಲ್ಲ ಎಂಬುದೂ ಸರಿಯಲ್ಲ. ನಿದ್ದೆಗೆಡುವುದು, ಅತೀ ಒತ್ತಡ, ಅಲ್ಕೋಹಾಲ್ ವ್ಯಸನ, ಕೆಲವು ಔಷಧಗಳ ಅಡ್ಡ ಪರಿಣಾಮ, ನಿದ್ದೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು, ಎಪಿಲೆಪ್ಸಿ- ಇಂಥವು ನಿದ್ದೆಯಲ್ಲಿ ನಡೆಯುವುದಕ್ಕೆ ಕಾರಣವಾಗಿರಬಹುದು. ಅಪರೂಪಕ್ಕೊಮ್ಮೆ ನಿದ್ದೆಯಲ್ಲಿ ನಡೆಯುವುದು ಸಮಸ್ಯೆಯೇ ಅಲ್ಲ. ಆದರೆ ವ್ಯಕ್ತಿ ಪದೇಪದೆ ಈ ರೀತಿ ಮಾಡುತ್ತಿದ್ದರೆ ಸಮಸ್ಯೆ ಇದೆಯೆಂದೇ ಅರ್ಥ.
ನಿದ್ದೆಯಲ್ಲಿ ನಡೆಯುವುದು ಅಥವಾ ಇತರ ಚಟುವಟಿಕೆಗಳನ್ನು ಮಾಡುವುದರಲ್ಲೂ ವ್ಯತ್ಯಾಸವಿದೆ. ಕೆಲವು ಕೇವಲ ಒಂದಿಷ್ಟು ದೂರ ನಡೆದು ಮತ್ತೆ ಮಲಗಿ ಬಿಡುತ್ತಾರೆ. ಇನ್ನೂ ಕೆಲವು ಪ್ರಕರಣಗಳಲ್ಲಿ ವಸ್ತ್ರ ಧರಿಸಿ ತಯಾರಾಗುವುದು, ತಿನ್ನುವುದು, ಓಡುವುದು, ಏನನ್ನೋ ಸ್ವಚ್ಛ ಮಾಡುವುದು, ಹೊರಗೆಲ್ಲೋ ಹೋಗುವುದು, ಅಪರೂಪಕ್ಕೆ ಹಿಂಸಾತ್ಮಕ ಕೆಲಸ ಮಾಡುವುದು- ಹೀಗೆ ಹಲವು ರೀತಿಯ ಚಟುವಟಿಕೆಗಳನ್ನು ನಿದ್ದೆಯಲ್ಲಿ ಮಾಡುವವರಿದ್ದಾರೆ. ಇಂಥ ಯಾರಿಗೇ ಆದರೂ ಚಿಕಿತ್ಸೆಯ ಅಗತ್ಯವಿದೆ. ಕೆಲವೊಮ್ಮೆ ಮನೋಚಿಕಿತ್ಸೆಯೂ ಬೇಕಾಗುತ್ತದೆ.
ನಿದ್ದೆಯ ಚಟುವಟಿಕೆ ಕೆಲವೇ ನಿಮಿಷಗಳಿಂದ ಹಿಡಿದು, ಅರ್ಧ ತಾಸಿನವರೆಗೂ ತೆಗೆದುಕೊಳ್ಳಬಹುದು. ಹೆಚ್ಚಿನ ಬಾರಿ ನಿದ್ರಾವಶನಾದ ವ್ಯಕ್ತಿ ತಾನೇ ತನ್ನಷ್ಟಕ್ಕೆ ತನ್ನ ಹಾಸಿಗೆಗೆ ಮರಳಿ ನಿದ್ದೆ ಮಾಡಬಹುದು. ಕೆಲವೊಮ್ಮೆ ಇನ್ನೆಲ್ಲೋ ಹೋಗಿ ಮಲಗಬಹುದು ಅಥವಾ ಎಚ್ಚರವಾಗಿ ತಾನೆಲ್ಲಿದ್ದೇನೆ, ಇಲ್ಲಿಗೆ ಹೇಗೆ ಬಂದೆ ಎಂಬ ಬಗ್ಗೆ ಗೊಂದಲಗೊಳ್ಳಲೂಬಹುದು. ಆದರೆ ಸಾಮಾನ್ಯವಾಗಿ, ನಿದ್ದೆಯಿಂದ ಎಚ್ಚೆತ್ತ ಮೇಲೆ ವ್ಯಕ್ತಿಗೆ ತನ್ನ ನಿದ್ರಾಸ್ಥಿತಿಯ ಚಟುವಟಿಕೆಗಳ ಬಗ್ಗೆ ಯಾವುದೇ ನೆನಪೂ ಇರುವುದಿಲ್ಲ.
ಹಲವು ಮಕ್ಕಳು ನಿದ್ದೆಯಲ್ಲಿ ನಡೆಯುವುದಿದೆ. ಹಾಗೆಂದು ಅವರು ಬೆಳೆಯುತ್ತಾ ಹೋದಂತೆ ಈ ಅಭ್ಯಾಸ ಮುಂದುವರಿಯುತ್ತದೆ ಎಂಬ ಖಾತ್ರಿಯಿಲ್ಲ. ಅದು ತನ್ನಷ್ಟಕ್ಕೇ ಸರಿಯಾಗಲೂಬಹುದು. ಸಾಮಾನ್ಯವಾಗಿ ಎಚ್ಚರವಿದ್ದಾಗ ಅತಿಯಾದ ಚಟುವಟಿಕೆಯಿಂದಿರುವ ಮಕ್ಕಳು ನಿದ್ದೆಯಲ್ಲೂ ಅವಿಶ್ರಾಂತರಾಗಿ ಹೀಗಾಗುವ ಸಾಧ್ಯತೆಯಿದೆ. ಹಾಗಾಗಿ ಬಾಲ್ಯಾವಸ್ಥೆಯಲ್ಲಿ ನಿದ್ದೆಯಲ್ಲಿ ನಡೆಯುವುದು, ಓಡುವುದು, ಮಾತಾಡುವುದನ್ನು ಹಲವು ಮಕ್ಕಳಲ್ಲಿ ಕಾಣಬಹುದು.
ಇದು ಆನುವಂಶಿಕವಾಗಿಯೂ ಬರುವ ಸಾಧ್ಯತೆಯಿದೆ. ನಿದ್ದೆಗಣ್ಣಿನಲ್ಲಿ ಓಡಾಡುವವರ ಚರಿತ್ರೆ ಕುಟುಂಬದಲ್ಲಿ ಇದ್ದರೆ, ಅಂಥವರು ನಿದ್ದೆಯಲ್ಲಿ ನಡೆಯುವ ಸಾಧ್ಯತೆ ಉಳಿದವರಿಗಿಂತ ಅಧಿಕ. ಹೆಚ್ಚಿನ ಪ್ರಕರಣಗಳಲ್ಲಿ ಅತೀವ ನಿದ್ದೆಗೇಡುತನದಿಂದಾಗಿ ಈ ಸಮಸ್ಯೆ ತಲೆದೋರುತ್ತದೆ. ಅದಲ್ಲದೆ, ನಿದ್ದೆ ಬರಿಸುವಂಥ ಮಾತ್ರೆಗಳು, ಸೈಕೋಸಿಸ್ ಚಿಕಿತ್ಸೆಗೆ ನೀಡಲಾಗುವ ನ್ಯೂರೊಲೆಪ್ಟಿಕ್ ಔಷಧಗಳು, ಅಲರ್ಜಿ ನಿಯಂತ್ರಣಕ್ಕೆ ನೀಡಲಾಗುವ ಆಂಟಿಹಿಸ್ಟಮಿನ್‌ಗಳು- ಈ ರೀತಿಯ ಮದ್ದುಗಳಿಂದ ನಿದ್ದೆಯಲ್ಲಿ ಚಟುವಟಿಕೆ ಮಾಡುವ ಸಾಧ್ಯತೆಯಿದೆ. ಈ ಸಮಸ್ಯೆ ಇದೆ ಎಂಬುದು ಅರಿವಾದಾಗ ವೈದ್ಯರನ್ನು ಕಾಣುವುದು ಒಳಿತು. ದೈಹಿಕ ಪರೀಕ್ಷೆ, ನಿದ್ದೆಯ ಅಧ್ಯಯನ (ಪಾಲಿಸೋಮ್ನೋಗ್ರಫಿ), ಅಪರೂಪದ ಪ್ರಕರಣಗಳಲ್ಲಿ ಇಇಜಿ (ಮೆದುಳಿನ ಚಟುವಟಿಕೆಗಳ ಅಧ್ಯಯನ) ಮುಂತಾದವು ಸಮಸ್ಯೆಯನ್ನು ಬಿಡಿಸಲು ನೆರವಾಗುತ್ತವೆ.
ಈ ಸಮಸ್ಯೆಯ ನಿಯಂತ್ರಣಕ್ಕೆ ಜೀವನಶೈಲಿಯಲ್ಲಿ ಮಾರ್ಪಾಡುಗಳು ಅಗತ್ಯವಾಗುತ್ತವೆ. ಆರೋಗ್ಯಕರವಾದ ನಿದ್ದೆಯ ಅಭ್ಯಾಸ, ಒತ್ತಡ ನಿರ್ವಹಣೆ, ಅಲ್ಕೋಹಾಲ್ ದೂರ ಮಾಡುವುದು, ಖಿನ್ನತೆ ದೂರ ಮಾಡುವಂಥ ಔಷಧಿಗಳು, ಮನೋಚಿಕಿತ್ಸೆ ಮುಂತಾದವು ಈ ಸಿಕ್ಕು ಬಿಡಿಸಲು ನೆರವಾಗುತ್ತವೆ.
ಇದನ್ನೂ ಓದಿ: Health Tips: ಬೇಸಿಗೆಯಲ್ಲಿ ಕಾಡುವ ಎದೆಯುರಿಗೆ ಈ ಮಸಾಲೆ ಪದಾರ್ಥಗಳೇ ಕಾರಣ!