Site icon Vistara News

Smartwatch Side Effects: ಸ್ಮಾರ್ಟ್‌ವಾಚ್‌ ಎಂಬ ಮತ್ತೊಂದು ಗ್ಯಾಜೆಟ್‌ ಭೂತ!: ಇದರ ಸೈಡ್‌ ಎಫೆಕ್ಟ್‌ ಏನು?

Smartwatch Side Effects

ಜಗತ್ತು ತಾಂತ್ರಿಕವಾಗಿ (Smartwatch Side Effects) ಇಂದು ಬಹಳಷ್ಟು ಮುಂದುವರಿದಿದೆ. ಬೆರಳ ತುದಿಯಲ್ಲೇ ಜಗತ್ತಿದೆ. ಎಲ್ಲ ಮಾಹಿತಿಗಲೂ ನಮಗೆ ನಮ್ಮ ಕೈಯಲ್ಲೇ ದೊರೆಯುತ್ತದೆ. ಸ್ಮಾರ್ಟ್‌ಪೋನ್‌ ಜೊತೆಗೆ ಎಲ್ಲರ ಕೈಗಳಲ್ಲೂ ಸ್ಮಾರ್ಟ್‌ ವಾಚ್‌ಗಳೂ ಇಂದು ಸ್ಥಾನ ಪಡೆದಿವೆ. ಯುವಜನರು, ಮುಖ್ಯವಾಗಿ ಫಿಟ್‌ನೆಸ್‌ ಕಾಳಜಿ ಹೊಂದಿದ ಮಂದಿ, ಜಿಮ್‌, ನಡಿಗೆ, ಜಾಗಿಂಗ್‌, ರನ್ನಿಂಗ್‌, ಸೈಕ್ಲಿಂಗ್‌ ಎಂದು ದೇಹ ದಂಡಿಸಿ ಫಿಟ್‌ ಆಗಿರುವ ಮಂದಿಗಳಲ್ಲಿ ಬಹುತೇಕ ಎಲ್ಲರೂ ಸ್ಮಾರ್ಟ್‌ವಾಚ್‌ಗಳನ್ನು ಬಳಸುತ್ತಾರೆ. ಆದರೆ, ನಿಜಕ್ಕೂ ಸ್ಮಾರ್ಟ್‌ ವಾಚ್‌ಗಳ ಅಗತ್ಯ ಅಷ್ಟಿದೆಯೇ? ಇದರಿಂದ ಹಾನಿಯೇ ಇಲ್ಲವೇ? ದಿನವಡೀ ಅವುಗಳನ್ನು ಧರಿಸಿಕೊಂಡಿರುವುದು ನಿಜಕ್ಕೂ ಒಳ್ಳೆಯದು ಮಾಡುತ್ತದೆಯೋ ಎಂಬಿತ್ಯಾದಿ ಪ್ರಶ್ನೆಗಳು ಕೆಲವರನ್ನು ಕಾಡಿರಬಹುದು. ಇನ್ನೂ ಕೆಲವರು ಈ ಯೋಚನೆಗಳೇ ಇಲ್ಲದೆ ಬಳಸುತ್ತಿರಬಹುದು. ಹಾಗಾದರೆ ಬನ್ನಿ,ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯೋಣ.

ಆರೋಗ್ಯದ ಮೇಲೇನು ಪರಿಣಾಮ?

ಸ್ಮಾರ್ಟ್‌ ವಾಚ್‌ಗಳಿಂದ ಬಹಳಷ್ಟು ಉಪಯೋಗಗಳಿವೆ ನಿಜ. ಒಪ್ಪೋಣ. ಆದರೆ, ಸ್ಮಾರ್ಟ್‌ ವಾಚ್‌ಗಳಿಂದ ಆರೋಗ್ಯದ ಮೇಲೆ ಬೀಳಬಹುದಾದ ಪರಿಣಾಮಗಳನ್ನು ಅಲ್ಲಗಳೆಯಲಾಗುವುದಿಲ್ಲ. ಯಾಕೆಂದರೆ, ಸ್ಮಾರ್ಟ್‌ ವಾಚ್‌ಗಳು ಬಿಡುಗಡೆ ಮಾಡುವ ಎಲೆಕ್ಟ್ರೋ ಮ್ಯಾಗ್ನೆಟಿಕ್‌ ಫೀಲ್ಡ್‌ ರೇಡಿಯೇಶನ್‌ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ. ತತ್‌ಕ್ಷಣವೇ ಇವುಗಳ ಮೂಲಕ ಆರೋಗ್ಯ ಹಾಳಾಗದಿದ್ದರೂ, ದೀರ್ಘಕಾಲದ ನಂತರ ಇವುಗಳ ಬಳಕೆ ದೇಹದ ಆರೋಗ್ಯದ ಮೇಲೆ ಖಂಡಿತ ದುಷ್ಪರಿಣಾಮ ಬೀರುತ್ತದೆ.

ತಲೆ ಸುತ್ತು, ತಲೆ ನೋವು!

ಕೆಲವರಿಗೆ ಸ್ಮಾರ್ಟ್‌ವಾಚ್‌ ಅತಿಯಾಗಿ ಬಳಸುವುದರಿಂದ ತಲೆಸುತ್ತು, ತಲೆನೋವು ಇತ್ಯಾದಿಗಳೂ ಬರಬಹುದು. ಇದು ಬಿಡುಗಡೆ ಮಾಡುವ ರೇಡಿಯೇಶನ್‌ನ ಪರಿಣಾಮವಿದು. ಹೆಚ್ಚು ಕಾಲ ಸ್ಮಾರ್ಟ್‌ ವಾಚ್‌ ಕಟ್ಟಿಕೊಂಡೇ ಇರುವ ಮಂದಿಯಲ್ಲಿ ಅತಿಯಾದ ಬಳಕೆಯಿಂದ ಈ ಸಮಸ್ಯೆಗಳು ಕಂಡುಬರಬಹುದು. ಹಾಗಾಗಿ, ಅಗತ್ಯದ ಸಂದರ್ಭ ಬಳಸಿ, ಉಳಿದ ಸಂದರ್ಭ ದೇಹದಿಂದ ಕಳಚಿ ಬೇರೆಡೆ ಇಡಬಹುದು.

ದೀರ್ಘ ಬಳಕೆಯ ಸೈಡ್‌ ಎಫೆಕ್ಟ್‌

ಇನ್ನೂ ಕೆಲವರಿಗೆ ಈ ಸ್ಮಾರ್ಟ್‌ ವಾಚ್‌ಗಳ ಅತಿಯಾದ ಬಳಕೆಯಿಂದ ನಿದ್ದೆ, ಸ್ಮರಣ ಶಕ್ತಿ ಇತ್ಯಾದಿಗಳ ಸಮಸ್ಯೆಯೂ ಉಂಟಾಗಬಹುದು. ಇಡೀ ದಿನ ಸ್ಮಾರ್ಟ್‌ವಾಚ್‌ ಕಟ್ಟಿಕೊಂಡೇ ಇರುವ ಮಂದಿಗೆ ನಿದ್ದೆಗೆ ಇದರಿಂದ ತೊಂದರೆಯಾಗಬಹುದು. ನಿದ್ದೆ ಕಡಿಮೆಯಾಗಬಹುದು. ಇದರಿಂದಾಗಿ ಮೂಡ್‌ ಸಮಸ್ಯೆಗಳು, ಕಿರಿಕಿರಿಯಾದಂತೆನಿಸುವುದು ಇತ್ಯಾದಿ ಸಮಸ್ಯೆಗಳೂ ಕಾಡಬಹುದು. ಸ್ಮರಣ ಶಕ್ತಿಯ ಮೇಲೀ ಇದು ಪರಿಣಾಮ ಬೀರಬಹುದು.

ದೇಹದ ಮೇಲೆ ಅಡ್ಡ ಪರಿಣಾಮ

ಕೇವಲ ಸ್ಮಾರ್ಟ್‌ ವಾಚ್‌ ಅಷ್ಟೇ ಅಲ್ಲ, ಬ್ಲೂ ಲೈಟ್‌ ಹೊರಹಾಕುವ ಎಲ್ಲ ಗ್ಯಾಜೆಟ್‌ಗಳೂ, ಟಿವಿ, ಸ್ಮಾರ್ಟ್‌ ಫೋನ್‌, ಮತ್ತಿತರ ವಸ್ತುಗಳಿಂದಲೂ ದೇಹದ ಮೇಲೆ ಅಡ್ಡ ಪರಿಣಾಮ ಇದ್ದೇ ಇದೆ. ಹಾಗಾಗಿ, ಇವುಗಳನ್ನು ಮಲಗುವ ಸಮಯಕ್ಕಿಂತ ಮುಂಚಿತವಾಗಿಯೇ ನಮ್ಮಿಂದ ದೂರವಿಟ್ಟರೆ ಸೊಂಪಾದ ನಿದ್ದೆ ಹತ್ತೀತು. ಆರಂಭದಲ್ಲಿ ಇದು ಅರ್ಥವಾಗದಿದ್ದರೂ, ಇವು ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆಗಳೇ ಹೆಚ್ಚು.

ಏನು ಮಾಡಬೇಕು?

ಇಂತಹ ಸಮಸ್ಯೆಗಳು ಕಂಡು ಬಂದಲ್ಲಿ ಇಂತಹ ಗ್ಯಾಜೆಟ್‌ಗಳ ಅತಿಯಾದ ಬಳಕೆಯನ್ನು ಕಡಿಮೆ ಮಾಡಬೇಕು. ವ್ಯಾಯಾಮ ಇತ್ಯಾದಿಗಳ ಸಮಸಯದಲ್ಲಿ ಬಳಸಿ ಆಮೇಳೆ ಅದನ್ನು ಕಳಚಿಡಬಹುದು. ಅಥವಾ ಇಡೀ ದಿನ ಬಳಸಿದರೂ ಮಲಗುವ ಮುನ್ನ ಸುಮಾರು ಎರಡರಿಂದ ಮೂರು ಗಂಟೆಗಳ ಮೊದಲೇ ಇದನ್ನು ಕಳಚಿಡುವುದು ಉತ್ತಮ. ಹಾಗಾಗಿ, ಇಂತಹ ಗ್ಯಾಜೆಟ್‌ಗಳೆಲ್ಲವನ್ನೂ, ಹಿತಮಿತವಾಗಿ ಒಳ್ಳೆಯದಕ್ಕಾಗಿ ಬಳಸಿ. ಅತಿಯಾದರೆ ಎಲ್ಲವೂ ವಿಷವೇ ಅಲ್ಲವೇ!

ಇದನ್ನೂ ಓದಿ: Mental Health: ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

Exit mobile version