Site icon Vistara News

Smoking Effects: ಮಹಿಳೆಯರೇ, ಧೂಮಪಾನದಿಂದ ನಿಮ್ಮ ಆರೋಗ್ಯದ ಮೇಲಾಗುವ ಪರಿಣಾಮದ ಅರಿವಿದೆಯೇ?

Smoking Effects

ಧೂಮಪಾನ, ಮದ್ಯಪಾನಗಳೆಂಬ ಚಟವು ಆರೋಗ್ಯಕ್ಕೆ ಹಾನಿಕರ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಆದರೂ, ಚಟದಿಂದ ಹೊರಕ್ಕೆ ಬರುವುದು ಸಾಧ್ಯವಾಗುವುದು ಕೆಲವರಿಗೆ ಮಾತ್ರ. ಹೊರಕ್ಕೆ ಬರಬೇಕು ಅಂದುಕೊಳ್ಳುವಷ್ಟರಲ್ಲಿ, ಆರೋಗ್ಯವು ಸರಿಪಡಿಸಲಾಗದ ಹಂತಕ್ಕೆ ತಲುಪಿರುತ್ತದೆ. ಪುರುಷರು ಮಹಿಳೆಯರೆಂಬ ಬೇಧವಿಲ್ಲದೆ ಇತ್ತೀಚೆಗಿನ ದಿನಗಳಲ್ಲಿ ಧೂಮಪಾನದ ಚಟಕ್ಕೆ ದಾಸರಾಗುತ್ತಿದ್ದಾರೆ. ಪುರುಷರ ಆರೋಗ್ಯವನ್ನು ಕಾಡುವಂತೆಯೇ ಸಹಜವಾಗಿಯೇ ಮಹಿಳೆಯರ ಆರೋಗ್ಯಕ್ಕೂ ಇದು ಮಾರಕ. ಆದರೆ ಮಹಿಳೆಯ ವಿಚಾರಕ್ಕೆ ಬಂದರೆ, ಈ ಚಟದ ಪರಿಣಾಮ ಮಹಿಳೆಯರನ್ನು ಸ್ವಲ್ಪ ಹೆಚ್ಚೇ ಕಾಡುತ್ತದೆ. ಕಾರಣ ಮಹಿಳೆಯರ ಹಾರ್ಮೋನು, ಆಕೆಗೆ ಪ್ರಕೃತಿದತ್ತವಾಗಿ ಬಂದಿರುವ ತಾಯಿಯಾಗುವ ಹೊಣೆ ಇತ್ಯಾದಿ. ಬನ್ನಿ, ಮಹಿಳೆಯರು ಧೂಮಪಾನಿಗಳಾದರೆ, ಯಾವೆಲ್ಲ ಆರೋಗ್ಯ ಸಮಸ್ಯೆಗಳು ಆಕೆಯನ್ನು ಕಾಡುವ ಅಪಾಯ ಹೆಚ್ಚು ಎಂಬುದನ್ನು (smoking effects) ವಿವರವಾಗಿ ನೋಡೋಣ.

ಕ್ಯಾನ್ಸರ್‌

ಧೂಮಪಾನದಿಂದ ಕಾರ್ಸಿನೋಜೆನ್‌ಗಳು ಡಿಎನ್‌ಎ ಮಟ್ಟದಲ್ಲಿ ದೇಹಕ್ಕೆ ಹಾನಿ ಮಾಡುವುದಲ್ಲದೆ, ಕ್ಯಾನ್ಸರ್‌ನ ಜೀವಕೋಶಗಳು ಬೆಳೆಯುವುದನ್ನು ಪ್ರೋತ್ಸಾಹಿಸುತ್ತದೆ. ಮುಖ್ಯವಾಗಿ, ಶ್ವಾಸಕೋಶಗಳು, ಸ್ತನ, ಕಿಡ್ನಿ ಹಾಗೂ ಗರ್ಭಕಂಠದ ಕ್ಯಾನ್ಸರ್‌ ಧೂಮಪಾನದಿಂದಲೂ ಬರುವ ಸಾಧ್ಯತೆಗಳು ಹೆಚ್ಚು. ಧೂಮಪಾನವನ್ನು ತ್ಯಜಿಸುವುದರಿಂದ ಕ್ಯಾನ್ಸರ್‌ನ ಭಯದಿಂದ ಖಂಡಿತವಾಗಿಯೂ ದೂರವಿರಬಹುದು. ಆಗಾಗ ಪರೀಕ್ಷೆ, ವ್ಯಾಯಾಮ, ಸರಿಯಾದ ಆಹಾರ ಹಾಗೂ ಆರೋಗ್ಯಕರ ಜೀವನಶೈಲಿಯಿಂದ ಆರೋಗ್ಯ ಸಾಧ್ಯ.

ಹೃದಯದ ಕಾಯಿಲೆ

ಸಿಗರೇಟಿನಲ್ಲಿರುವ ನಿಕೋಟಿನ್‌ ಹಾಗೂ ಇತರ ರಾಸಾಯಿಕಗಳಿಂದ ರಕ್ತನಾಳಗಳು ಸಂಕುಚಿತವಾಗುವುದಲ್ಲದೆ, ಅಧಿಕ ರಕ್ತದೊತ್ತಡದಂಥ ಸಮಸ್ಯೆಗಳೂ ಆಗಬಹುದು. ಇದರಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತಿತರ ಸಮಸ್ಯೆಗಳು ಬರುವ ಅಪಾಯ ಹೆಚ್ಚು.

ಉಸಿರಾಟದ ಕಾಯಿಲೆಗಳು

ಧೂಮಪಾನದಿಂದ ಶ್ವಾಸಕೋಶದ ಕಾಯಿಲೆಗಳು ಬರುವ ಸಂಭವ ಅತ್ಯಂತ ಹೆಚ್ಚು. ಕ್ರೋನಿಕ್‌ ಅಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ ಎಂಬ ಅಪಾಯಕಾರಿ ಶ್ವಾಸಕೋಶದ ಕಾಯಿಲೆ, ಶ್ವಾಸಕೋಶದ ಕ್ಯಾನ್ಸರ್‌ ಬರಬಹುದು. ಸಿಗರೇಟು ಬಿಟ್ಟು, ಉತ್ತಮ ಆಹಾರ ಶೈಲಿ ಹಾಗೂ ಆರೋಗ್ಯಕರ ಜೀವನಶೈಲಿಯಿಂದ ಈ ಅಪಾಯವನ್ನು ತಪ್ಪಿಸಬಹುದು.

ಸಂತಾನೋತ್ಪತ್ತಿಯ ಸಮಸ್ಯೆ

ಧೂಮಪಾನದ ಅಭ್ಯಾಸವು ನೇರವಾಗಿ ನಿಮ್ಮ ಹಾರ್ಮೋನುಗಳ ಮೇಲೆ ಪರಿಣಾಮ ಬೀರುವುದರಿಂದ ಸಂತಾನೋತ್ಪತ್ತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಬಹುಬೇಗನೆ ಮೆನೋಪಾಸ್‌ ಆಗುವುದು, ಮಕ್ಕಳನ್ನು ಮಾಡಿಕೊಳ್ಳಲು ತೊಂದರೆಯಾಗುವುದು, ಗರ್ಭದಲ್ಲಿರುವ ಮಗುವಿಗೆ ಸಮಸ್ಯೆಗಳಾಗುವುದು ಇತ್ಯಾದಿ ಸಮಸ್ಯೆಗಳು ಮಹಿಳೆಯರನ್ನು ತೀವ್ರವಾಗಿ ಕಾಡಬಹುದು.

ಸಂಧಿವಾತ

ಧೂಮಪಾನವು ನಮ್ಮ ದೇಹದಲ್ಲಿ ಕ್ಯಾಲ್ಶಿಯಂ ಹೀರಿಕೆಗೆ ಅಡ್ಡಿ ಉಂಟು ಮಾಡುತ್ತದೆ. ಇದು ಎಲುಬಿನ ಸಾಂದ್ರತೆಯ ಮೇಲೆ ಪರಿಣಾಮ ಬೀರುವುದರಿಂದ ಕ್ಯಾಲ್ಶಿಯಂ ಕೊರತೆಯಿಂದಾಗಿ ಸಂಧಿವಾತ, ಮೂಳೆ ಸವೆತದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಬಹುಬೇಗನೆ ಮುಪ್ಪಿನ ಲಕ್ಷಣಗಳು

ಧೂಮಪಾನ ಮಾಡುವುದರಿಂದ ಚರ್ಮದಲ್ಲಿ ರಕ್ತಪರಿಚಲನೆಗೆ ಅಡ್ಡಿಯುಂಟಾಗುತ್ತದೆ. ಇದರಿಂದ ಚರ್ಮ ಸುಕ್ಕಾಗುವುದು, ನಿರಿಗೆಗಳು ಉಂಟಾಗಿ ಬಹುಬೇಗನೆ ನಿಜವಾದ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣಿಸಬಹುದು. ಮಹಿಳೆಯರ ಸೌಂದರ್ಯದ ಮೇಲೆ ಇದು ಬೀರುವ ಪರಿಣಾಮ ಹೆಚ್ಚು.

ರೋಗನಿರೋಧಕ ಶಕ್ತಿಯ ಕೊರತೆ

ಧೂಮಪಾನದಿಂದ ರೋಗನಿರೋಧಕತೆಯ ಮೇಲೆ ಪರಿಣಾಮ ಬೀರಬಹುದು. ರೋಗ ನಿರೋಧಕ ಶಕ್ತಿ ಕುಂಠಿತವಾಗಿ ಸುಲಭವಾಗಿ ರೋಗಗಳಿಗೆ ತುತ್ತಾಗಬಹುದು. ಸರಿಯಾದ ನಿದ್ದೆ, ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯ ಜೊತೆಗೆ ಧೂಮಪಾನವನ್ನು ತ್ಯಜಿಸಿದರೆ, ಮತ್ತೆ ಮೊದಲಿನಂತಾಗಬಹುದು.

ಗರ್ಭಧಾರಣೆ ಸಮಸ್ಯೆಗಳು

ಮಹಿಳೆಯರಲ್ಲಿ ಮುಖ್ಯವಾಗಿ ಕಾಣುವ ಸಮಸ್ಯೆ ಎಂದರೆ ಅದು ಗರ್ಭಧಾರಣೆಗೆ ಸಂಬಂಧಿಸಿದ್ದು. ಧೂಮಪಾನದ ಚಟವಿರುವ ಮಹಿಳೆಯರಲ್ಲಿ, ಗರ್ಭಸ್ರಾವ, ಗರ್ಭಪಾತ, ಮಗುವಿನ ಬೆಳವಣಿಗೆಯಲ್ಲಿ ಕುಂಠಿತ ಮತ್ತಿತರ ಸಮಸ್ಯೆಗಳು ಕಾಡಬಹುದು.

ಋತುಚಕ್ರದ ಸಮಸ್ಯೆಗಳು

ಧೂಮಪಾನದಿಂದಾಗಿ ಹಾರ್ಮೋನಿನ ಸಮಸ್ಯೆಗಳು ಸಹಜವಾಗಿರುವ ಕಾರಣ ಋತುಚಕ್ರದ ಸಮಸ್ಯೆಗಳೂ ಕೂಡಾ ಕಾಣಿಸಬಹುದು. ಬಹುಬೇಗನೆ ಮೆನೋಪಾಸ್‌ ಕೂಡಾ ಆಗಬಹುದು.

Weight Loss Tips: ನಲವತ್ತರ ನಂತರ ತೂಕ ಇಳಿಸುವುದು ಹೇಗೆ?ಇದನ್ನೂ ಓದಿ:

ದೈಹಿಕ ಫಿಟ್‌ನೆಸ್‌ ಕೊರತೆ

ಎಲ್ಲಕ್ಕಿಂತ ಮುಖ್ಯವಾಗಿ ಧೂಮಪಾನ ಮಾಡುವುದರಿಂದ ಫಿಟ್‌ನೆಸ್‌ನ ಸಮಸ್ಯೆಯೂ ಕಾಡಬಹುದು. ಶ್ವಾಸಕೋಶದ ಶಕ್ತಿ ಸಾಮರ್ಥ್ಯದಲ್ಲಿ ಇಳಿಮುಖವಾಗುವುದರಿಂದ ಇವು ನೇರವಾಗಿ ಇಡೀ ದೇಹದ ಮಾಂಸಖಂಡ ಹಾಗೂ ದೈಹಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

Exit mobile version