ಗೊರಕೆಯ ಸಮಸ್ಯೆ (Snoring problem) ಪ್ರತಿಯೊಬ್ಬರನ್ನೂ ಜೀವನದಲ್ಲಿ ಒಮ್ಮೆಯಾದರೂ ಕಾಡದೇ ಇರುವುದಿಲ್ಲ. ಬಹಳ ಸರಳವಾದ, ಅಂಥ ದೊಡ್ಡ ಉಪದ್ರವಕಾರಿಯೂ ಅಲ್ಲದ ಒಂದು ಪುಟ್ಟ ಸಮಸ್ಯೆ ಇದಾದರೂ, ಅತಿಯಾಗಿ ತಲೆಕೆಡಿಸಿಕೊಳ್ಳಬಹುದಾದ ಸಮಸ್ಯೆ ಇದಲ್ಲವಾದರೂ ಕೆಲವೊಮ್ಮೆ ಇದು ಬಹಳ ಗಂಭೀರ ಸ್ವರೂಪವನ್ನೂ ತಾಳುತ್ತದೆ. ಯಾವಾಗಲಾದರೊಮ್ಮೆ ಗೊರಕೆ ಹೊಡೆಯುವುದು ಸಹಜ. ಆದರೆ, ನಿತ್ಯವೂ ಗೊರಕೆ ಹೊಡೆಯುವ ಅಭ್ಯಾಸವಿದ್ದರೆ, ಅದು ಖಂಡಿತವಾಗಿಯೂ ಪಕ್ಕದಲ್ಲಿರುವವರನ್ನು ಒಂದಲ್ಲ ಒಂದು ದಿನ ಬಾಧಿಸುತ್ತದೆ. ಥರಹೇವಾರಿ ಶಬ್ದಗಳನ್ನು ಹೊರಡಿಸುತ್ತಾ ಗೊರಕೆ ಹೊಡೆಯುವುದು ಇನ್ನೊಂದು ಸಮಸ್ಯೆ. ಇಂಥವರ ಪಕ್ಕದಲ್ಲಿರುವವನಿಗೆ ನಿದ್ದೆ ಎಂಬುದೇ ದುಃಸ್ವಪ್ನವಾಗಿಬಿಡುತ್ತದೆ. ಅಷ್ಟೇ ಅಲ್ಲ, ಗೊರಕೆ ಹೊಡೆಯುವವನ ನಿದ್ರೆಯನ್ನೂ ಇದು ಬಾಧಿಸುತ್ತದೆ. ಅಷ್ಟೇ ಅಲ್ಲ, ಕೆಲವೊಮ್ಮೆ ಇದು ನಿಮ್ಮಲ್ಲಿರುವ ಸಮಸ್ಯೆಯ ಮೂಲವನ್ನೂ ಹೇಳುತ್ತದೆ. ಬನ್ನಿ ನಿಮ್ಮ ಗೊರಕೆಯ (Snoring) ಸಮಸ್ಯೆಗೆ ಯಾವುದೆಲ್ಲ ಕಾರಣವಾಗಿರಬಹುದು ಎಂಬುದನ್ನು ನೋಡೋಣ.
ನಿರ್ಲಕ್ಷಿಸಬೇಡಿ
ಗೊರಕೆ ಎಂಬುದು ಒಂದು ಗಂಭೀರವಾದ ನಿದ್ರೆಯ ಸಮಸ್ಯೆಯೂ ಹೌದು. ಗಂಟಲಿನ ಮಾಂಸಖಂಡಗಳು ಅಗತ್ಯಕ್ಕಿಂತ ಹೆಚ್ಚೇ ರಿಲ್ಯಾಕ್ಸ್ ಆಗುವುದರಿಂದ ಗಾಳಿಯ ಹಾದಿಗೆ ಇದು ಅಡ್ಡವಾಗಿ ಪರಿಣಾಮಿಸುತ್ತದೆ. ಇದರಿಂದಾಗಿ ಶಬ್ದ ಉಂಟಾಗುತ್ತದೆ. ಇದನ್ನು ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ಮೂಗಿನ ದ್ವಾರವು ಬ್ಲಾಕ್
ಮೂಗಿನ ದ್ವಾರವು ಬ್ಲಾಕ್ ಆಗಿರುವುದರಿಂದಲೂ ಈ ಸಮಸ್ಯೆ ಉಂಟಾಗುವ ಸಂಭವವಿದೆ. ಮುಖ್ಯವಾಗಿ, ಅಲರ್ಜಿ, ನೆಗಡಿ ಅಥವಾ ಶೀತದಿಂದ ಮೂಗಿನ ದ್ವಾರ ಬಂದ್ ಆದಂತೆ ಆಗಿರುತ್ತದೆ. ಇಂಥ ಸಂದರ್ಭ ಗಾಳಿ ಆ ಮೂಲಕ ಪಾಸ್ ಆಗಲು ಕಷ್ಟವಾಗುತ್ತದೆ.
ತೂಕವೂ ಕಾರಣ ಆಗಿರಬಹುದು
ನಿಮ್ಮ ಗೊರಕೆಯ ಸಮಸ್ಯೆಗೆ ಕಾರಣ ನಿಮ್ಮ ತೂಕವೂ ಆಗಿರಬಹುದು. ಹೌದು. ತೂಕ ಹೆಚ್ಚಳ, ಬೊಜ್ಜು ಸಮಸ್ಯೆಯೂ ಕೂಡ ಇದರ ಮೂಲ. ಮುಖ್ಯವಾಗಿ ಕುತ್ತಿಗೆ ಅಥವಾ ಗಂಟಲಿನ ಭಾಗದಲ್ಲಿ ತೂಕ ಹೆಚ್ಚಾಗುವುದರಿಂದ ಆ ಭಾಗದ ಮಾಂಸಖಂಡಗಳು ಹೆಚ್ಚಾಗಿ ಬೆಳೆದುಕೊಂಡು ಆ ಮೂಲಕ ಗಾಳಿ ಪಾಸ್ ಆಗಲು ಕಷ್ಟವಾಗಿ ಗೊರಕೆ ಉಂಟಾಗುತ್ತದೆ. ಉತ್ತಮ ಆರೋಗ್ಯಕರ ಆಹಾರ ಅಭ್ಯಾಸ ಹಾಗೂ ವ್ಯಾಯಾಮದಿಂದ ಈ ಸಮಸಯೆಯನ್ನು ಕಡಿಮೆ ಮಾಡಬಹುದು.
ಮಲಗುವ ಭಂಗಿ
ಮಲಗುವ ಭಂಗಿ ಕೂಡಾ ಗೊರಕೆಗೆ ಕಾರಣವಾಗಿರಬಹುದು. ಹೌದು. ಅಂಗಾತ ಮಲಗುವ ಸಂಧರ್ಭ ಕೆಲವೊಮ್ಮೆ ಗಂಟಲಿನ ದ್ವಾರದ ಮಾಂಸಖಂಡಗಳು ಗಾಳಿಯ ದ್ವಾರವನ್ನು ಅಗತ್ಯಕ್ಕಿಂತ ಹೆಚ್ಚು ಮುಚ್ಚುವುದರಿಂದ ಗಾಳಿ ಪ್ರವೇಶಕ್ಕೆ ಕಷ್ಟವಾಗುತ್ತದೆ.
ಆಲ್ಕೋಹಾಲ್ ಸೇವನೆ
ಆಲ್ಕೋಹಾಲ್ ಸೇವನೆಯೂ ಕೂಡಾ ಗೊರಕೆಗೆ ಕಾರಣವಾಗುತ್ತದೆ. ಆಲ್ಕೋಹಾಲ್ ಇತರ ಪೇಯಗಳ ಸೇವನೆಯಿಂದ ಗಂಟಲಿನ ಮಾಂಸಖಂಡಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅದು ಉಬ್ಬಿಕೊಂಡಂತಾಗಿ ಆ ಭಾಗದ ಮೂಲಕ ಗಾಳಿಯ ಪ್ರವೇಶಕ್ಕೆ ಕಷ್ಟವಾಗುತ್ತದೆ. ಪರಿಣಾಮವಾಗಿ ಗೊರಕೆ ಉಂಟಾಗುತ್ತದೆ.
ವಯಸ್ಸೂ ಕಾರಣ
ವಯಸ್ಸೂ ಕೂಡಾ ಗೊರಕೆಗೆ ಕಾರಣವಾಗಿರಬಹುದು. ಹೌದು. ವಯಸ್ಸಾದಂತೆ ನಾಲಿಗೆ ಹಾಗೂ ಗಂಟಲಿನ ಭಾಗದ ಮಾಂಸಖಂಡಗಳಲ್ಲಿ ಕೊಂಚ ವ್ಯತ್ಯಾಸವಾಗುತ್ತದೆ. ಇದರಿಂದಲೂ ಗೊರಕೆ ಬರುತ್ತದೆ. ಸಕಾರಾತ್ಮಕ ಜೀವನಕ್ರಮದಿಂದ ಉತ್ತಮ ನಿದ್ದೆಯನ್ನು ಪಡೆಯಬಹುದು ಇಲ್ಲವಾದರೆ ವಯಸ್ಸಾಗುತ್ತಾ ಆಗುತ್ತಾ ಇದು ನಿದ್ದೆಗೂ ಭಂಗ ತರುತ್ತದೆ.
ಇದನ್ನೂ ಓದಿ: Migraine Problem: ಮೈಗ್ರೇನ್ ಉಪಶಮನಕ್ಕೆ ರೋಸ್‌ಮೆರಿ ಸುಗಂಧ ತೈಲ ಮದ್ದು!
ಮಾಂಸಖಂಡಗಳ ರಚನೆ ಸಮಸ್ಯೆ
ಕೆಲವು ಮಂದಿಗೆ ಪ್ರಕೃತಿದತ್ತವಾಗಿ ಈ ಅಭ್ಯಾಸ ಬಂದಿರುತ್ತದೆ. ಅದಕ್ಕೆ ಕಾರಣ ಅವರ ನಾಲಿಗೆ ಹಾಗೂ ಗಂಟಲಿನ ಭಾಗದ ಮಾಂಸಖಂಡಗಳ ರಚನೆಯೇ ಹುಟ್ಟುವಾಗಲೇ ಹಾಗಿರುತ್ತದೆ. ಇದರಿಂದ ಮಲಗಿದ ಸಂದರ್ಭ ಗಾಳಿಪ್ರವೇಶಕ್ಕೆ ಕಷ್ಟವಾಗುತ್ತದೆ. ಕೆಲವು ಮಲಗುವ ಭಂಗಿಗಳಿಂದ ಈ ಸಮಸ್ಯೆಯ ಮಟ್ಟವನ್ನು ಕೊಂಚ ತಗ್ಗಿಸಬಹುದು.