ಮೊಸರು ಭಾರತೀಯರ ಅಡುಗೆ ಮನೆಯ ಆರಾಧ್ಯ ದೈವ. ಅದರಲ್ಲೂ ದಕ್ಷಿಣ ಭಾರತೀಯರಿಗೆ ಮೊಸರಿಲ್ಲದೆ ಜೀವನ ಬಲು ದುಸ್ತರ. ನಿತ್ಯವೂ ಊಟದ ಕೊನೆಯಲ್ಲಿ ಮೊಸರನ್ನ ತಿನ್ನುವುದು ಬಹುತೇಕರಿಗೆ ಅಭ್ಯಾಸ. ಅಷ್ಟೇ ಅಲ್ಲ, ಅನೇಕ ಬಗೆಯಲ್ಲಿ ಮೊಸರಿನ ಬಳಗೆ ನಮ್ಮ ಮನೆಗಳಲ್ಲಿ ನಿತ್ಯವೂ ಇದೆ. ಬೇಸಿಗೆಯಲ್ಲಿ ಮಜ್ಜಿಗೆ ಮಾಡಿ ಕುಡಿಯಲು, ತಂಪಾದ ಲಸ್ಸಿ ಹೊಟ್ಟೆಗಿಳಿಸಲು ಮೊಸರು ಬೇಕೇ ಬೇಕು. ಇಂತಹ ಮೊಸರಿನಲ್ಲಿರುವ ಪ್ರೊಬಯಾಟಿಕ್ ಗುಣಗಳಿರುವುದರಿಂದ, ಈ ಒಳ್ಳೆಯ ಬ್ಯಾಕ್ಟೀರಿಯಾಗಳು ಹೊಟ್ಟೆಯನ್ನು, ಪಚನಕ್ರಿಯೆಯನ್ನು ಆರೋಗ್ಯವಾಗಿಡುತ್ತದೆ. ಆದರೆ, ಮೊಸರು ಬೇಸಿಗೆಯಲ್ಲಿ ಬಹುಬೇಗನೆ ಹುಳಿ ಬರುತ್ತದೆ. ಹೆಚ್ಚು ಕಾಲ ಹೊರಗೇ ಇಟ್ಟರೆ, ಹುಳಿಯಾಗುತ್ತದೆ. ಕೆಲವೊಮ್ಮೆ ಇದು ಅತಿ ಹುಳಿಯಾಗಿ ತನ್ನ ವಾಸನೆಯನ್ನೂ, ರುಚಿಯನ್ನೂ ಬದಲಾಯಿಸಿಬಿಡುತ್ತದೆ. ಹೀಗೆ ಹುಳಿಯಾದ ಮೊಸರೂ ಕೂಡಾ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೋ ಎಂಬ ಗೊಂದಲ ಕೆಲವರಲ್ಲಿ ಇರಬಹುದು. ಬನ್ನಿ, ಈ ಬಗ್ಗೆ (sour curd) ತಿಳಿಯೋಣ.
ಆರೋಗ್ಯಕ್ಕೆ ಹಾನಿಯೇ?
ಹುಳಿ ಮೊಸರಿನ ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಇದು ತೀರಾ ರುಚಿ ಕೆಡದೇ ಇದ್ದರೆ ಹಾಗೂ ಹಾಳಾಗದಿದ್ದರೆ, ಇದನ್ನು ಸೇವಿಸಬಹುದು. ಇದರಲ್ಲಿರುವ ಅಸಿಡಿಟಿ ಮಟ್ಟ ಹೆಚ್ಚಾದಷ್ಟು ಇದರಲ್ಲಿರುವ ಪ್ರೊಬಯಾಟಿಕ್ ಗುಣ ಹೆಚ್ಚುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೂ, ಇಂಥ ಮೊಸರನ್ನು ಸೇವಿಸುವ ಮುನ್ನ ಕೆಲವು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬನ್ನಿ ಅವು ಯಾವುವು ನೋಡೋಣ.
- ಹುಳಿ ಬಂದ ಮೊಸರನ್ನು ಫ್ರಿಡ್ಜ್ನಲ್ಲಿಟ್ಟಿರಬೇಕು ಹಾಗೂ ಅದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಇಟ್ಟಿರಬೇಕು. ಇಲ್ಲವಾದರೆ, ಇದರಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳೂ ಬೆಳೆಯುವ ಸಂಭವ ಹೆಚ್ಚು.
- ಮೊಸರಿನ ರೂಪ ಹಾಗೂ ಅದರ ಪರಿಮಳದಲ್ಲಿ ವ್ಯತ್ಯಾಸವಾಗಿದ್ದರೆ, ವಾಸನೆ ಬೀರುತ್ತಿದ್ದರೆ ಸೇವನೆ ಒಳ್ಳೆಯದಲ್ಲ. ಅಥವಾ ಹಳದಿ ಬಣ್ಣಕ್ಕೆ ತಿರುಗಿದ್ದರೂ ಕೂಡಾ ಇದನ್ನು ಸೇವಿಸಬಾರದು.
- ಲ್ಯಾಕ್ಟೋಸ್ಗೆ ಬ್ಯಾಕ್ಟೀರಿಯಾ ಸೇರಿ ಹುದುಗು ಬಂದು ಲ್ಯಾಕ್ಟಿಕ್ ಆಸಿಡ್ ಆದಾಗ ಮೊಸರು ಹುಳಿ ಬರುತ್ತದೆ. ಇದು ನೈಸರ್ಗಿಕವಾದ, ಸಹಜವಾದ ಪ್ರಕ್ರಿಯೆ. ಇದಕ್ಕೆ ಕಾಲಾವಕಾಶ ಬೇಕು. ಎಷ್ಟು ಹೊತ್ತು ಹುಳಿಬರುವಿಕೆಯಲ್ಲಿ ತೆಗೆದುಕೊಂಡಿದೆ ಎಂಬುದರ ಮೇಲೆ ಮೊಸರಿನ ಹುಳಿ ನಿರ್ಧರಿತವಾಗುತ್ತದೆ.
- ಹುಳಿ ಬರಲು ಆರಂಭವಾದ ಮೊಸರನ್ನು ಫ್ರಿಡ್ಜ್ನಲ್ಲಿಡುವ ಮೂಲಕ ಹುಳಿ ಬರುವಿಕೆಯ ಹಂತವನ್ನು ನಿಧಾನವಾಗಿಸಬಹುದು. ಹೆಚ್ಚು ಹೊತ್ತು ಹೊರಗೇ ಇಟ್ಟರೆ ಮತ್ತೆ ಹೆಚ್ಚು ಹುಳಿ ಬಂದು ಸೇವಿಸಲು ಅಯೋಗ್ಯವಾಗುತ್ತದೆ.
- ಮೊಸರನ್ನು ತೆಗೆಯಲು ಬಳಸುವ ಸೌಟು ಯಾವಾಗಲೂ ಶುದ್ಧವಾಗಿರಲಿ. ಮೊಸರು ಬಹುಬೇಗನೆ ಬೇರೆ ವಸ್ತುಗಳ ಮೂಲಕ ಕಲುಷಿತಗೊಂಡು ಹಾಳಾಗುವ ಸಂಭವವಿದೆ.
- ಹುಳಿ ಮೊಸರನ್ನು ತಿಂದು ಅಭ್ಯಾಸವಿಲ್ಲದಿದ್ದರೆ ಒಮ್ಮೆಲೆ ಹೆಚ್ಚು ಸೇವಿಸಬೇಡಿ. ಸ್ವಲ್ಪ ಸ್ವಲ್ಪವೇ ನಿಮ್ಮ ಆಹಾರದಲ್ಲಿ ಸೇರಿಸಿ.
- ಹುಳಿ ಮೊಸರನ್ನು ಹಾಗೆಯೇ ತಿನ್ನಲು ಸಾಧ್ಯವಾಗದಿದ್ದರೆ, ಬೇರೆ ಆಹಾರಗಳ ಜೊತೆಗೆ ಸೇವಿಸಿ. ಆಗ ಅದರ ಪರಿಣಾಮ ಕಡಿಮೆಯಾಗುತ್ತದೆ.
- ಎಲ್ಲಕ್ಕಿಂತ ಮುಖ್ಯವಾಗಿ ಹುಳಿ ಮೊಸರನ್ನು ಹಗಲಿನಲ್ಲಿ ಸೇವಿಸಿ. ರಾತ್ರಿಯ ಸಮಯ ಆದಷ್ಟೂ ಸೇವಿಸದೆ ಇರುವುದು ಒಳ್ಳೆಯದು. ನೀವು ಹೆಚ್ಚು ಆಕ್ಟಿವ್ ಆಗಿದ್ದಾಗ ಹಗಲು ಹೊತ್ತಿನಲ್ಲಿ ಅಥವಾ ಮಧ್ಯಾಹ್ನದೂಟದ ಜೊತೆಗೆ ಸೇವಿಸಬಹುದು.
- ನಿಮ್ಮ ದೇಹಕ್ಕೆ ಹುಳಿ ಮೊಸರಿನಿಂದ ಏನಾದರೂ ತೊಂದರೆಯಾಗುತ್ತದೆಯೋ ಗಮನಿಸಿ. ಏನಾದರೂ ಸಮಸ್ಯೆಯಾದರೆ, ದಯವಿಟ್ಟು ಸೇವಿಸಬೇಡಿ. ನಿಮ್ಮ ದೇಹಕ್ಕೆ ಹೊಂದುತ್ತಿಲ್ಲ ಎಂದೇ ಅರ್ಥ.
ಇದನ್ನೂ ಓದಿ: Internet Addiction: ಈ 10 ಲಕ್ಷಣಗಳು ನಿಮ್ಮಲ್ಲಿದ್ದರೆ, ನೀವೂ ಇಂಟರ್ನೆಟ್ ಚಟಕ್ಕೆ ಬಿದ್ದಿದ್ದೀರಿ ಎಂದರ್ಥ!