ವಿದ್ಯುನ್ಮಾನ ಹಚ್ಚೆಗಳ ಮೂಲಕ ದೇಹದಲ್ಲಾಗುವ ಸಮಸ್ಯೆಗಳ ಪೂರ್ವಭಾವಿ ಸೂಚನೆ ನೀಡಬಲ್ಲ ನ್ಯಾನೋ ತಂತ್ರಜ್ಞಾನದ ಬಗ್ಗೆ ದಕ್ಷಿಣ ಕೊರಿಯಾದ ಸಂಶೋಧಕರು ಕಾರ್ಯನಿರತರಾಗಿದ್ದಾರೆ. ಸೋಲ್ ನಗರದ ಸಮೀಪದಲ್ಲಿರುವ ಕೊರಿಯಾ ಉನ್ನತ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿಗಳು ವಿದ್ಯುನ್ಮಾನ ಹಚ್ಚೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದು ಜೈವಿಕ ಎಲೆಕ್ಟ್ರೋಡ್‌ನಂತೆ ಕಾರ್ಯನಿರ್ವಹಿಸುತ್ತದೆ.
ದ್ರವೀಕೃತ ಲೋಹ ಮತ್ತು ಕಾರ್ಬನ್ ನ್ಯಾನೋ ಟ್ಯೂಬ್‌ಗಳನ್ನು ಹೊಂದಿರುವ ಶಾಯಿಯ ಮೂಲಕ ಈ ಹಚ್ಚೆಯನ್ನು ದೇಹದ ಮೇಲೆ ಹಚ್ಚಲಾಗುವುದು. ಈ ಹಚ್ಚೆಗೆ ಇಸಿಜಿ ಅಥವಾ ಇನ್ನಾವುದಾದರೂ ಜೈವಿಕ ಸಂವೇದಕಗಳನ್ನು ಜೋಡಿಸಲು ಸಾಧ್ಯವಿದ್ದು, ಈ ಮೂಲಕ ದೇಹದೊಳಗೆ ಏನಾಗುತ್ತಿದೆ ಎಂಬುದನ್ನು ಅರಿಯಲು ಸಾಧ್ಯವಿದೆ. ರೋಗಿಯ ಹೃದಯ ಬಡಿತ, ರಕ್ತದೊತ್ತಡ, ಸಕ್ಕರೆಯ ಪ್ರಮಾಣ… ಹೀಗೆ ಬಹಳಷ್ಟು ಮಾಹಿತಿಯನ್ನು ಈ ಮೂಲಕ ಪಡೆದುಕೊಳ್ಳಬಹುದು.
ಇನ್ನೂ ಪ್ರಯೋಗ ಹಂತದಲ್ಲಿರುವ ಈ ತಂತ್ರಜ್ಞಾನವನ್ನು ಇನ್ನೂ ನಿಖರವಾಗಿ ಅಭಿವೃದ್ಧಿ ಪಡಿಸುವುದು ಪ್ರಯೋಗ ನಿರತ ವಿಜ್ಞಾನಿಗಳ ಗುರಿ. ʻಮುಂದಿನ ದಿನಗಳಲ್ಲಿ ದೇಹಕ್ಕೆ ಹಚ್ಚೆಯಂತೆ ಹಚ್ಚುವ ಶಾಯಿಯಲ್ಲಿ ನಿಸ್ತಂತು ಚಿಪ್ ಅಳವಡಿಸುವ ಉದ್ದೇಶ ನಮ್ಮದು. ಇದರಿಂದ ದೇಹದೊಂದಿಗೆ ನೇರವಾಗಿ ಸಂಹವನ ನಡೆಸಬಹುದು. ಇಸಿಜಿಯಂಥ ಯಂತ್ರಗಳೊಂದಿಗೆ ನಿಸ್ತಂತುವಾಗಿಯೇ ಸಂಪರ್ಕ ಸಾಧ್ಯವಿದೆʼ ಎಂದು ಈ ಸಂಶೋಧನೆಯ ಮುಂಚೂಣಿಯಲ್ಲಿರುವ ವಿಜ್ಞಾನಿ ಸ್ಟೀವ್ ಪಾರ್ಕ್ ಹೇಳಿದ್ದಾರೆ.
ದೇಹದೊಳಗೆ ಪ್ರವೇಶಿಸದೆ ಮೇಲ್ಮೈಯಲ್ಲೇ ಕೆಲಸ ಮಾಡುವ ಇಂಥ ಉಪಕರಣಗಳು ಗ್ಯಾಲಿಯಂನಂಥ ದ್ರವೀಕೃತ ಲೋಹಗಳಿಂದ ತಯಾರಾಗುವಂಥವು. ಥರ್ಮಾಮೀಟರ್‌ನಲ್ಲೂ ಇವುಗಳ ಬಳಕೆ ಇದೆ. ಪ್ಲಾಟಿನಂ ಲೇಪಿತ ಕಾರ್ಬನ್ ನ್ಯಾನೋ ಕೊಳವೆಗಳು ವಿದ್ಯುತ್‌ವಾಹಕಗಳಂತೆ ಕೆಲಸ ಮಾಡುತ್ತವೆ. ಇವುಗಳನ್ನು ಶಾಯಿಯಂತೆ ಚರ್ಮದ ಮೇಲೆ ಲೇಪಿಸಿದರಾಯಿತುʼ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕೊರಿಯಾದಲ್ಲಿ ಸೃಷ್ಟಿಯಾಗುತ್ತಿದೆ ಸ್ವಾವಲಂಬಿ ʼತೇಲುವ ನಗರʼ