Site icon Vistara News

Spandana Vijay Raghavendra : ಯುವಕರೇ ಹೃದಯ ಜೋಪಾನ; ಆಗಾಗ ತಪಾಸಣೆಗೆ ಡಾ. ಸಿ.ಎನ್‌ ಮಂಜುನಾಥ್‌ ಸಲಹೆ

Dr. CN Manjunath

ಬೆಂಗಳೂರು: ಖ್ಯಾತ ನಟ ಪುನೀತ್‍ ರಾಜ್‍ಕುಮಾರ್ (Puneet Rajkumar) ಹೃದಯಾಘಾತಕ್ಕೆ (Heart attack) ತುತ್ತಾದ ಬೆನ್ನಿಗೇ ಇದೀಗ 44 ವರ್ಷದ ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರೂ ಹೃದಯಸ್ತಂಭನಕ್ಕೆ (Cardiac Arrest) ಒಳಗಾಗಿ ತಮ್ಮ ಜೀವನ ಪಯಣ ಮುಗಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೆಚ್ಚುತ್ತಿರುವ ಹೃದಯ ಸಮಸ್ಯೆ ಮತ್ತು ಇಂಥ ಆರೋಗ್ಯವಂತರ ನಿರ್ಗಮನ ಆತಂಕವನ್ನು ಹೆಚ್ಚಿಸಿದೆ.

ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ ಅವರು ಯಾವುದೇ ಪೂರ್ವ ಸಮಸ್ಯೆಗಳಿಂದ ಬಳಲುತ್ತಿರಲಿಲ್ಲ. ಫಿಟ್‌ ಆ್ಯಂಡ್ ಫೈನ್ ಆಗಿದ್ದರು. ಆದರೂ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದರೆ ಎಲ್ಲರೂ ಸ್ವಲ್ಪ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವುದಕ್ಕೆ ಸಂದೇಶ ನೀಡಿದಂತೆಯೇ ಅಲ್ಲವೇ? ಹೌದು ಎನ್ನುತ್ತಾರೆ ಖ್ಯಾತ ಹೃದಯತಜ್ಞ (Heart Specialist) ಡಾ. ಸಿ.ಎನ್‌ ಮಂಜುನಾಥ್‌ (Dr. CN Manjunath) ಹೃದಯಾಘಾತ ನಡೆಸುವುದನ್ನು ತಪ್ಪಿಸಲು ಸಾಧ್ಯವಾಗುತ್ತದೋ ಗೊತ್ತಿಲ್ಲ. ಆದರೆ, ನಮ್ಮ ಹೃದಯದ ಸ್ಥಿತಿಗತಿಯನ್ನು ಆಗಾಗ ಅರಿತುಕೊಳ್ಳುವುದು ಉತ್ತಮ ಎನ್ನುವುದು ಅವರು ನೀಡುವ ಸಲಹೆ.

ಸ್ಪಂದನಾ ಅವರಿಗೆ ಆಗಿರುವುದು ಸಡನ್‌ ಕಾರ್ಡಿಯಾಕ್‌ ಅರೆಸ್ಟ್‌ (sudden Cardiac Arrest). ಅಂದರೆ, ದಿಢೀರ್‌ ಹೃದಯ ಸ್ತಂಭನ. ಈ ರೀತಿ ಹಠಾತ್‌ ಹೃದಯಾಘಾತವಾದಾಗ ಕೆಲವೊಮ್ಮೆ ಆಸ್ಪತ್ರೆಗೆ ಹೋಗುವಷ್ಟು ಸಮಯ ಕೂಡಾ ಇರುವುದಿಲ್ಲ. ಶೇ. 5ರಷ್ಟು ಮಂದಿಗೆ ಹೃದಯಾಘಾತವಾಗಿ ಕೆಲವೇ ನಿಮಿಷಗಳಲ್ಲಿ ಹೃದಯದ ಬಡಿತವೇ ನಿಂತುಹೋಗುತ್ತದೆ ಎನ್ನುತ್ತಾರೆ ಡಾ. ಸಿ.ಎನ್‌. ಮಂಜುನಾಥ್‌.

ಇತ್ತೀಚೆಗೆ 45 ವರ್ಷದ ಒಳಗಿನ ಮಹಿಳೆಯರು ಹಾಗೂ ಪುರುಷರಲ್ಲಿ ಕೂಡಾ ಸಡನ್ ಹಾರ್ಟ್ ಅಟ್ಯಾಕ್ ಕಂಡು ಬರುತ್ತಿದೆಯಂತೆ. ಆಹಾರ ಪದ್ಧತಿಯಲ್ಲಿ ಬದಲಾವಣೆ ಹಾಗೂ ವೇಗವಾಗಿ ದೇಹ ತೂಕ ಇಳಿಸಿಕೊಳ್ಳಬೇಕು ಎನ್ನುವ ತವಕಗಳಿಂದಾಗಿ ಅಡ್ಡ ದಾರಿಗಳನ್ನು ಹಿಡಿಯುವ ಕಾರಣ ಹೃದಯ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎನ್ನುವುದು ಡಾ. ಸಿ.ಎನ್‌. ಮಂಜುನಾಥ್‌ ಅಭಿಪ್ರಾಯ.

ಯಾರಿಗೆ ಅಪಾಯ? ಎಲ್ಲೆಲ್ಲ ಸೂಚನೆಗಳು ಸಿಗುತ್ತವೆ?

ದೇಹದಲ್ಲಿ ಹೆಚ್ಚು ಕೊಲೆಸ್ಟೆರಾಲ್ ಇದ್ದವರಿಗೆ, ಯಾವುದೇ ದೈಹಿಕ ವ್ಯಾಯಾಮ ಮಾಡದವರಿಗೆ, ಹೆಚ್ಚು ಬಿಪಿ ಇರುವವರಿಗೆ, ಡಯಾಬಿಟಿಸ್ ರೋಗಿಗಳಿಗೆ ಮತ್ತು ಹೆಚ್ಚು ತೂಕ ಇರುವವರಿಗೆ ಹೃದಯಾಘಾತವಾಗುವ ಸಂಭವ ಹೆಚ್ಚಾಗಿರುತ್ತದೆ.

ಹೃದಯಾಘಾತವಾದಾಗ ಎದೆಯ ಎಡ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವು ಜನರಿಗೆ ಕತ್ತು, ಗಂಟಲು, ಹೊಟ್ಟೆಯ ಮೇಲ್ಭಾಗ, ಬೆನ್ನು, ತೋಳು, ಸೊಂಟ, ದವಡೆ ಮತ್ತು ಭುಜಗಳಲ್ಲಿ ನೋವು ಕಾಣಿಸಿಕೊಳ್ಳಹುದು. ಎದೆ ಮತ್ತು ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: Spandana Vijay Raghavendra: ಕೊರೊನಾ ಬಳಿಕ ಹೃದಯಾಘಾತ ಹೆಚ್ಚಳ? ವರದಿ, ತಜ್ಞರು ಹೇಳುವುದೇನು?

ಕೆಲವರಿಗೆ ತಂಪು ವಾತಾವರಣದಲ್ಲೂ ಸಹ ದೇಹ ಬೆವರಬಹುದು. ವಾಕರಿಕೆ, ಉಸಿರಾಡಲು ಕಷ್ಟವಾಗುವುದು, ತಲೆ ಸುತ್ತುವುದು, ವೇಗವಾದ ಎದೆ ಬಡಿತವೂ ಸಹ ಹೃದಯಾಘಾತದ ಲಕ್ಷಣಗಳೇ ಆಗಿವೆ. ಈ ರೀತಿ ಸಮಸ್ಯೆಗಳು ಕಾಣಿಸಿಕೊಂಡ ವ್ಯಕ್ತಿ ಕುಸಿದು ಬೀಳುವ ಅಪಾಯವಿರುತ್ತದೆ ಮತ್ತು ಹೆಚ್ಚಿನವರಿಗೆ ಆ ಕ್ಷಣದಲ್ಲೇ ಸಾವು ಕೂಡಾ ಆಕ್ರಮಿಸಿಕೊಂಡು ಬಿಡುತ್ತದೆ.

ಸ್ಪಂದನಾ ಅವರಿಗೆ ಏನು ಸಮಸ್ಯೆಯಾಗಿತ್ತು, ಅವರದ್ದು ಸಡನ್‌ ಕಾರ್ಡಿಯಾಕ್‌ನಿಂದ ಸಂಭವಿಸಿದ ಮರಣವೇ ಎನ್ನುವುದು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಬೇಕಾಗಿದೆ. ಆದರೆ, ಹೃದಯದ ಬಗ್ಗೆ ಎಚ್ಚರ ವಹಿಸುವುದು ಎಲ್ಲರ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಡಾ. ಮಂಜುನಾಥ್‌ ಅವರು ನೀಡುವ ಸಲಹೆ.

Exit mobile version