Site icon Vistara News

Speech Fasting: ಸದಾ ವಟವಟ ಮಾತಾಡ್ತಾ ಇರ್ತೀರಾ? ʼಮೌನವ್ರತʼ ಮಾಡಿ, ಆರೋಗ್ಯ ಸುಧಾರಣೆ ನೋಡಿ!

Speech Fasting

ಇಡೀ ಜಗತ್ತು ಸಂವಹನದ ಸೂತ್ರದಿಂದ ಬಂಧಿಸಲ್ಪಟ್ಟಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಇರಲಿ, ಮುಖಾಮುಖಿ ಭೇಟಿ ಇರಲಿ, ಅಂತೂ ಸಂವಹನ ನಡೆಯುತ್ತಲೇ ಇರಬೇಕು. ಅದರಲ್ಲೂ ಮಾತಿಗೆ ಕೂತರೆ ಸಾಮಾನ್ಯಕ್ಕೆ ನಿಲ್ಲಿಸುವುದಿಲ್ಲ ನಾವು. ಧ್ವನಿಪೆಟ್ಟಿಗೆಯನ್ನು ಶೋಷಿಸುತ್ತಲೇ ಇರುತ್ತೇವೆ. ನಮ್ಮ ದೇಹದ ಉಳಿದೆಲ್ಲ ಭಾಗಗಳಂತೆ ಧ್ವನಿ ಪೆಟ್ಟಿಗೆಗೂ ವಿಶ್ರಾಂತಿ ಬೇಕಾಗುತ್ತದೆ. ಅವಿಶ್ರಾಂತವಾಗಿ ಅದನ್ನು ದುಡಿಸುತ್ತಿದ್ದರೆ ಧ್ವನಿಪೆಟ್ಟಿಗೆಗೂ ಕಷ್ಟ ತಪ್ಪಿದ್ದಲ್ಲ. ಹಾಗಾಗಿಯೇ ಹಳೆಯ ಜನಗಳು ಹಲವಾರು ವ್ರತಗಳ ಜೊತೆಗೆ ʻಮೌನವ್ರತʼವನ್ನೂ ಆಗೀಗ ಇರಿಸಿಕೊಳ್ಳುತ್ತಿದ್ದರು. ಮೌನವ್ರತ ಎಂಬುದು ಕೆಲವೊಮ್ಮೆ ಹಾಸ್ಯಕ್ಕೆ ವಸ್ತುವಾದರೂ, ಇದರಿಂದ ಆರೋಗ್ಯಕ್ಕೆ ಲಾಭಗಳಿರುವುದು ಹೌದು. ಏನು ಪ್ರಯೋಜನ (Speech Fasting) ಮೌನದಿಂದ?

ಏನು ಹಾಗೆಂದರೆ?

ಯಾವುದೇ ಧಾರ್ಮಿಕ ಆಚರಣೆಯ ಸಲುವಾಗಿ ಮಾಡುವಂಥ ವ್ರತವಲ್ಲ ಇದು. ಇದನ್ನು ʻವೋಕಲ್‌ ರೆಸ್ಟ್‌ʼ ಅಥವಾ ಧ್ವನಿಪೆಟ್ಟಿಗೆಗೆ ನೀಡುವ ವಿಶ್ರಾಂತಿ ಎಂದು ಕರೆಯಲಾಗುತ್ತದೆ. ನಿಗದಿತ ಸಮಯದಲ್ಲಿ ಮಾತನಾಡದೆ, ಧ್ವನಿಪೆಟ್ಟಿಗೆಯನ್ನು ಯಾವುದಕ್ಕೂ ಬಳಸದೆ ಇರುವುದು ಎಂದು ಅರ್ಥ. ಇದರಿಂದ ಧ್ವನಿಪೆಟ್ಟಿಗೆಯ ಸುಸ್ತು, ಆಯಾಸವೆಲ್ಲ ಕಡಿಮೆಯಾಗಿ, ದುರಸ್ತಿಯಾಗಲು ಅನುಕೂಲವಾಗುತ್ತದೆ. ಹಾಡುಗಾರರು, ನಟರು, ಪ್ರವಚನ ನೀಡುವವರು, ಉಪನ್ಯಾಸಕರು ಇತ್ಯಾದಿ ಧ್ವನಿಯನ್ನೇ ಪ್ರಧಾನವಾಗಿ ಬಳಸುವವರು ಈ ತಂತ್ರಗಳನ್ನು ಅಳವಡಿಸಿಕೊಂಡರೆ ಅನುಕೂಲವಾದೀತು. ಹಾಡು, ಮಾತು, ಪಿಸುಮಾತಿಗೂ ಸದಾ ಕಾಲ ಕಂಪಿಸುತ್ತಲೇ ಇರುವ ಧ್ವನಿಪೆಟ್ಟಿಗೆಗೆ ಸುಸ್ತಾಗುತ್ತದೆ. ಇದರಿಂದ ಧ್ವನಿ ಬೀಳುವುದು, ಗಂಟಲು ಉಬ್ಬಿದಂತಾಗಿ ನೋವು ಕಾಣುವುದು ಸಾಮಾನ್ಯ. ಇದರಿಂದ ಧ್ವನಿಪೆಟ್ಟಿಗೆಗೆ ಹಾನಿಯಾಗುತ್ತದೆ. ಅದನ್ನು ವಿಶ್ರಾಂತಿಗೆ ದೂಡಿದಾಗ ಆಗುವ ಅನುಕೂಲಗಳು ಬಹಳಷ್ಟು.

ಆರೋಗ್ಯ ಮರಳಿಸುತ್ತದೆ

ದೇಹದ ಯಾವುದೇ ಭಾಗಕ್ಕೂ ಅತಿ ಬಳಕೆಯಿಂದ ಆಯಾಸವಾದರೆ ವಿಶ್ರಾಂತಿ ಅಗತ್ಯವಾಗುತ್ತದೆ. ಹೀಗೆ ಮಾತಿನ ಉಪವಾಸದ ಮೂಲಕ ವಿಶ್ರಾಂತಿ ನೀಡುವುದರಿಂದ ಕಳೆದು ಹೋದ ಆರೋಗ್ಯ ಮರಳು ದೊರೆಯುವುದಕ್ಕೆ ಸಾಧ್ಯ. ಇದು ಧ್ವನಿಪೆಟ್ಟಿಗೆಯ ವಿಷಯದಲ್ಲೂ ಹೌದು. ಧ್ವನಿ ಪೆಟ್ಟಿಗೆಯಲ್ಲಿನ ಊತ, ಕಿರಿಕಿರಿ ಮುಂತಾದವುಗಳನ್ನು ಗುಣಪಡಿಸಬಹುದು.

ಗುಣಮಟ್ಟ ಸುಧಾರಣೆ

ಪದೇಪದೆ ಧ್ವನಿ ಬೀಳುತ್ತಿದ್ದರೆ, ಧ್ವನಿಯ ಗುಣಮಟ್ಟ ಹಾಳಾಗಿದ್ದರೆ, ಶೃತಿಯ ಸಮಸ್ಯೆಯಿದ್ದರೆ, ಸ್ಪಷ್ಟತೆ ಕಡಿಮೆಯಿದ್ದರೆ- ಇಂಥ ಎಲ್ಲ ಸಮಸ್ಯೆಗಳಿಗೆ ಮೌನ ಅಥವಾ ಧ್ವನಿಪೆಟ್ಟಿಗೆಯ ವಿಶ್ರಾಂತಿ ಮದ್ದಾಗಬಲ್ಲದು. ಧ್ವನಿ ಚಿಕಿತ್ಸೆಯಲ್ಲಿ ಮೌನವನ್ನೂ ಒಂದು ಸಾಧನವಾಗಿ ಬಳಸಲಾಗುತ್ತದೆ. ಇದರಿಂದ ಧ್ವನಿಯ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸಲು ಸಾಧ್ಯವಿದೆ.

ಹಾನಿ ಕಡಿಮೆ

ಧ್ವನಿಪೆಟ್ಟಿಗೆಯನ್ನು ಅತಿಯಾಗಿ ಮತ್ತು ಸತತ ಬಳಸುವುದರಿಂದ ಧ್ವನಿಪೆಟ್ಟಿಗೆಯಲ್ಲಿ ನಾಡ್ಯೂಲ್‌ ಅಥವಾ ಪಾಲಿಪ್‌ಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಧ್ವನಿಪೆಟ್ಟಿಗೆಗೆ ಹಾನಿ ಆಗುವ ಸಂಭವ ಇರುತ್ತದೆ. ಹಾಗಾಗಿ ಚಿಕಿತ್ಸಕ ಉದ್ದೇಶದಿಂದ ಮೌನ ವಹಿಸುವುದರಿಂದ ಇಂಥ ಹಾನಿಯನ್ನು ಕಡಿಮೆ ಮಾಡಲು ಸಾಧ್ಯವಿದೆ.

ಮಾನಸಿಕ ನೆಮ್ಮದಿ

ಹೊರಗಿನ ವ್ಯವಹಾರವನ್ನು ಕೊಂಚ ನಿಲ್ಲಿಸಿದರೆ, ಒಳಗಿನ ಮನೋವ್ಯಾಪಾರಕ್ಕೆ ತೆರೆದುಕೊಳ್ಳುವುದಕ್ಕೆ ಸಾಧ್ಯ. ನಮ್ಮ ಬಗ್ಗೆ ನಮಗೆ ತಿಳಿಯುವುದಕ್ಕೆ, ನಾವೇನು ಮಾಡುತ್ತಿದ್ದೇವೆ, ಅದನ್ನು ಯಾಕಾಗಿ ಮಾಡುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮೌನ ಸಾಧನವಾಗಬಲ್ಲದು. ಮಾನಸಿಕ ನೋವುಗಳನ್ನು ದೂರಮಾಡಿ, ಸಾಂತ್ವನಕ್ಕೆ ನಮ್ಮೊಳಗೇ ಜಾಗ ಮಾಡಿಕೊಡುತ್ತದೆ.

ಇದನ್ನೂ ಓದಿ: Egg Benefits: ನೀವು ಮೊಟ್ಟೆ ಪ್ರಿಯರೆ? ಹಾಗಾದರೆ ಎಷ್ಟು ಮೊಟ್ಟೆ ತಿನ್ನಬಹುದು ಎಂಬುದೂ ಅರಿವಿರಲಿ!

ಹೇಗೆ ಮಾಡಬೇಕು?

ಧ್ವನಿಗೆ ಎಷ್ಟು ಸಮಸ್ಯೆಯಾಗಿದೆ ಎಂಬುದರ ಮೇಲೆ ಎಷ್ಟು ಹೊತ್ತು ವಿಶ್ರಾಂತಿ ನೀಡಬೇಕು ಎಂಬುದನ್ನು ನಿರ್ಧರಿಸಬಹುದು. ದಿನದ ಒಂದಿಷ್ಟು ತಾಸು, ಇಡೀ ದಿನ, ವಾರದಲ್ಲಿ ಪ್ರತಿದಿನದ ಒಂದಿಷ್ಟು ಹೊತ್ತು- ಹೀಗೆ. ಮಾತಾಡುವುದಿಲ್ಲ ಎಂದರೆ ಗುನುಗಬಹುದು, ಪಿಸು ಮಾತಾಡಬಹುದು ಎಂದು ಅರ್ಥವಲ್ಲ, ಧ್ವನಿಪೆಟ್ಟಿಗೆಗೆ ಸಂಪೂರ್ಣ ವಿಶ್ರಾಂತಿ ನೀಡಬೇಕು. ಮೌನ ಮುರಿದ ಹೊತ್ತಿನಲ್ಲೂ ಸಿಕ್ಕಾಪಟ್ಟೆ ಕೂಗುವುದು, ಕಿರುಚುವುದು ಸಲ್ಲದು. ದಿನಕ್ಕೆ 3-4 ಲೀಟರ್‌ ನೀರು ಕುಡಿಯುವುದು ಅಗತ್ಯ. ಇದರಿಂದ ಧ್ವನಿಪೆಟ್ಟಿಗೆಗೆ ಬೇಕಾದ ತೇವವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಕೆಮ್ಮುವುದು, ಕ್ಯಾಕರಿಸುವುದು ಇತ್ಯಾದಿಗಳನ್ನು ಮಾಡುವ ಅಗತ್ಯವಿದ್ದರೆ, ನೆಗಡಿಯ ಸಮಸ್ಯೆಯಿದ್ದರೆ, ಬೆಚ್ಚಗಿನ ಉಪ್ಪು ನೀರಿನಿಂದ ಗಂಟಲನ್ನು ಚೆನ್ನಾಗಿ ಗಾರ್ಗಲ್‌ ಮಾಡುವುದು ಒಳ್ಳೆಯದು.

Exit mobile version