Site icon Vistara News

Spinach benefits: ಚಳಿಗಾಲದಲ್ಲಿ ದಿನವೂ ಪಾಲಕ್‌ ತಿನ್ನಿ, ಆರೋಗ್ಯವಾಗಿರಿ!

spinach

ಮುಂಬರುವ ಚಳಿಗಾಲದಲ್ಲಿ ಯಾವ ಆರೋಗ್ಯದ (Winter health) ಸಮಸ್ಯೆಯೂ ಬಾರದಂತೆ ಇರುವುದು ಹೇಗೆ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆಯೇ? ಚಳಿಗಾಲದಲ್ಲಿ ಸದಾ ಬೆಚ್ಚಗೆ ಇರುವುದು ಹೇಗಪ್ಪಾ ಅಂತನಿಸುತ್ತಿದೆಯೇ? ಈನ್ನು ಕೆಲ ತಿಂಗಳು ಮಾತ್ರ ತೂಕ ನಿಯಂತ್ರಿಸಲು ಸಾಧ್ಯವೇ ಇಲ್ಲವೆಂದು ಬೇಸರವೇ? ಹಾಗಿದ್ದರೆ ನಿಮ್ಮೆಲ್ಲ ವಿವಿಧ ಪ್ರಶ್ನೆಗಳಿಗೆ ಉತ್ತರ ಒಂದು ಹಿಡಿ ಪಾಲಕ್‌ ಸೊಪ್ಪಿನಲ್ಲಿದೆ! ಚಳಿಗಾಲದಲ್ಲಿ ಹೇರಳವಾಗಿ ಸಿಗುವ ತಾಜಾ ಸೊಪ್ಪುಗಳ ಪೈಕಿ ಪಾಲಕ್‌ಗೆ (spinach leaves) ಅಗ್ರಸ್ಥಾನ. ಶ್ರೀಮಂತ ಬಡವರೆನ್ನದೆ ಎಲ್ಲರ ಕೈಗೆ ಧಾರಾಳವಾಗಿ ಎಟಕುವ ಈ ಸೊಪ್ಪು ಪೋಷಕಾಂಶಗಳ (Spinach benefits) ಪವರ್‌ ಹೌಸ್‌. ಅದರಲ್ಲೂ, ಶೀತ, ನೆಗಡಿ, ಜ್ವರ ಸೇರಿದಂತೆ ಆರೋಗ್ಯದ ಸಮಸ್ಯೆಗಳು ಬರುವ ಚಳಿಗಾಲದಲ್ಲೇ ಪಾಲಕ್‌ ಯಾಕೆ ತಿನ್ನಬೇಕು (Spinach health benefits) ಎಂಬುದಕ್ಕೆ ಕಾರಣವೂ ಇವೆ.

ಪರ್ಷಿಯಾದಿಂದ ಮೂಲದಿಂದ ಭಾರತಕ್ಕೆ ಬಂದದ್ದು ಎಂದು ಹೇಳಲಾಗುವ ಪಲಾಕ್‌ ಸೊಪ್ಪು ಏಳನೇ ಶತಮಾನದಿಂದಲೂ ಬಾರತದಲ್ಲಿ ಹೇರಳವಾಗಿ ಆಹಾರದಲ್ಲಿ ದಿನನಿತ್ಯ ಬಳಕೆಯಾಗುತ್ತಿತ್ತು ಎಂಬ ಉಲ್ಲೇಖಗಳು ಇತಿಹಾಸದ ಪುಟಗಳಲ್ಲಿ ಸಿಗುತ್ತವಂತೆ. ಪೋಷಕಾಂಶಗಳ ವಿಚಾರಕ್ಕೆ ಬಂದರೆ ಪಲಾಕ್‌ ಸೊಪ್ಪನ್ನು ಮೀರಿಸುವವರಿಲ್ಲ. ವಿಟಮಿನ್‌ ಎ, ಸಿ, ಇ, ಕೆ1, ಬಿ9, ಕಬ್ಬಿಣಾಂಶ, ಪೊಟಾಶಿಯಂ, ಕ್ಯಾಲ್ಶಿಯಂ, ಮೆಗ್ನೀಶಿಯಂ ಹೀಗೆ ಎಲ್ಲವೂ ಇರುವ ಸಂಪದ್ಭರಿತ ಆಹಾರ. ಅದಕ್ಕೇ ಇದು ಪವರ್‌ ಹೌಸ್‌. ಮನೆಯಲ್ಲೂ, ಪುಟ್ಟ ಜಾಗದಲ್ಲಿ ಬೆಳೆಯಬಹುದಾದ ಪಾಲಕ್‌ ಸುಲಭವಾಗಿ ಬಾಲ್ಕನಿಯಲ್ಲಿ ಕುಂಡಗಳಲ್ಲಿ ಸುಲಭವಾಗಿ ಬೆಳೆದುಕೊಳ್ಳಬಹುದು.

ಹೇಳಿ ಕೇಳಿ ಚಳಿಗಾಲವೆಂದರೆ ಆರೋಗ್ಯ ಕೈಕೊಡುವ ಕಾಲ. ಇಂತಹ ಕಾಲದಲ್ಲಿ ನಮ್ಮ ದೇಹ ಬೆಚ್ಚಗಿರಬೇಕು. ದೇಹದ ಎಲ್ಲ ಅಂಗಗಳಿಗೂ ಸರಿಯಾದ ಶಕ್ತಿ ಉತ್ಪಾದನೆಗೆ ಪೂರಕ ಆಹಾರ ಬೇಕು. ರೋಗಗಳು ದೇಹವನ್ನು ಆಕ್ರಮಿಸದಂತೆ ತಡೆಯಲು ದೇಹಕ್ಕೆ ಸಾಮರ್ಥ್ಯಬೇಕು. ಈ ನಿಟ್ಟಿನಲ್ಲಿ ರೋಗ ನಿರೋಧಕ ಶಕ್ತಿ (immunity) ದೇಹದಲ್ಲಿರಬೇಕು. ಹಾಗಾಗಿಯೇ ಚಳಿಗಾಲದಲ್ಲಿ ಸದಾ ಪಾಲಕ್‌ ತಿನ್ನುತ್ತಿರಬೇಕು.

1. ರಕ್ತಹೀನತೆಯನ್ನು ತಡೆಯುತ್ತದೆ: ಪಾಲಕ್‌ ಸೊಪ್ಪನ್ನು ಆಹಾರದಲ್ಲಿ ಸೇರಿಸಿಕೊಂಡರೆ ಖಂಡಿತವಾಗಿಯೂ ರಕ್ತ ಪರಿಚಲನೆಯನ್ನು ಸರಾಗವಾಗಿಸುವುದಲ್ಲದೆ, ದೇಹದಲ್ಲಿ ಹೆಚ್ಚಿ ರಕ್ತದ ಉತ್ಪಾದನೆಗೆ ಸಹಕಾರಿಯಾಗುತ್ತದೆ. ರಕ್ತಹೀನತೆಯಂತ ಸಮಸ್ಯೆಯನ್ನು ದೂರವಿರಿಸುತ್ತದೆ.

2. ದೃಷ್ಟಿದೋಷವನ್ನು ನಿವಾರಿಸುತ್ತದೆ: ಪಾಲಕ್‌ನಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕಣ್ಣುನ ದೃಷ್ಟಿಗೆ ಸಹಕಾರಿ. ಕಣ್ಣಿಗೆ ಸೂರ್ಯನ ಕಿರಣಗಳಿಂದಾಗುವ ಹಾನಿಯನ್ನು ಇದು ತಡೆಯುವುದಲ್ಲದೆ, ದೃಷ್ಟಿಯನ್ನು ಚುರುಕಾಗಿಸುತ್ತದೆ. ಕಣ್ಣಿನ ಪೊರೆ ಬೇಗ ಬರದಂತೆ ನೋಡಿಕೊಳ್ಳುತ್ತದೆ.

3. ರಕ್ತದೊತ್ತಡವನ್ನು ಸರಿಪಡಿಸುತ್ತದೆ: ಅಧಿಕ ರಕ್ತದೊತ್ತಡ ಸದ್ಯ ಎಲ್ಲರನ್ನೂ ಕಾಡುವ ಸಮಸ್ಯೆ. ಗರ್ಭಿಣಿ ಸ್ತ್ರೀಯರನ್ನೂ ಕೂಡಾ. ಆದರೆ, ಪಾಲಕ್‌ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಅಧಿಕ ರಕ್ತದೊತ್ತಡವನ್ನು ಸಮತೋಲನದಲ್ಲಿರಿಸುವಲ್ಲಿ ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಿ ಸಹಜಸ್ಥಿತಿಗೆ ತರುವ ಕಾರಣವಾಗಿಯೇ ಇದು ಹೃದ್ರೋಗ ಸಮಸ್ಯೆಯಿರುವ ಮಂದಿಗೂ ಒಳ್ಳೆಯದು.

4. ಎಲುಬನ್ನು ಗಟ್ಟಿಗೊಳಿಸುತ್ತದೆ: ಇದರಲ್ಲಿರುವ ಕಬ್ಬಿಣಾಂಶ, ವಿಟಮಿನ್‌ ಕೆ, ಕ್ಯಾಲ್ಶಿಯಂ, ಪೊಟಾಶಿಯಂಗಳು ಎಲುಬಿನ ಶಕ್ತಿವರ್ಧನೆಗೆ ಅನುಕೂಲಕರವಾಗಿದೆ. ದೇಹ ಸರಿಯಾದ ಪ್ರಮಾಣದ ಕ್ಯಾಲ್ಶಿಯಂ ಅನ್ನು ಆಹಾರದಿಂದ ಹೀರಿಕೊಳ್ಳಲು ಪಾಲಕ್‌ ಸಹಾಯ ಮಾಡುವ ಕೆಲಸವನ್ನೂ ಇದು ಮಾಡುತ್ತದೆ. ಪ್ರತಿದಿನವೂ ಒಂದು ಕಪ್‌ ಪಾಲಕ್‌ ಸೊಪ್ಪನ್ನು ಆಹಾರವಾಗಿ ಸೇವಿಸಸುವುದರಿಂದ ಖಂಡಿತವಾಗಿಯೂ ಎಲುಬು ಶಕ್ತಿಯುತವಾಗುತ್ತದೆ.

5. ತೂಕ ಇಳಿಕೆ ಮಾಡುತ್ತದೆ: ಚಳಿಗಾಲದಲ್ಲಿ ದಿಢೀರ್‌ ಏರುವ ತೂಕದ ಸಮಸ್ಯೆಗೆ ಪಾಲಕ್‌ ಬೆಸ್ಟ್‌ ಪರಿಹಾರ. ಏಕೆಂದರೆ ಇದು ತೂಕವನ್ನು ಕಡಿಮೆ ಮಾಡಲು ಪೂರಕವಾಘಿರುವ ಆಹಾರ. ಪಾಲಕ್‌ ತಿನ್ನುವುದರಿಂದ ಬಹಳ ಹೊತ್ತಿನವರೆಗೆ ಬೇರೇನೂ ತಿನ್ನದೆ ಇರಲು ಸಾಧ್ಯವಾಗುತ್ತದೆ, ಇದರಿಂದ ನಾವು ಸೇವಿಸುವ ಆಹಾರದಲ್ಲಿ ಗಣನೀಯ ಬದಲಾವಣೆಯಾಗುವುದಲ್ಲದೆ, ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ. ಹಾಗೂ ಆರೋಗ್ಯವನ್ನೂ ವೃದ್ಧಿಸುತ್ತದೆ.

ಇದನ್ನೂ ಓದಿ: Health Tips: ಈ ಆಹಾರಗಳನ್ನು ಸೇವಿಸಿದರೆ ಸರಸದ ಸಮಯ ಆದೀತು ವಿರಸಮಯ!

Exit mobile version