ಈರುಳ್ಳಿ ನಮ್ಮ ನಿತ್ಯದ ಆಹಾರದ ಭಾಗವಂತೂ ಹೌದು. ಈರುಳ್ಳಿಯಿಲ್ಲದೆ ನಮ್ಮ ಒಂದು ದಿನ ಮುಂದೆ ಹೋಗದು ಎಂಬಷ್ಟು ಈರುಳ್ಳಿಯನ್ನು ನಾವು ಅವಲಂಬಿಸಿಕೊಂಡಿದ್ದೇವೆ. ಸಾಂಬಾರು, ಚಟ್ನಿ, ದೋಸೆ, ಪರಾಟಾ, ಚಪಾತಿ, ಚಪಾತಿಗೆ ಬಗೆಬಗೆಯ ಸೈಡ್‌ಡಿಶ್‌ಗಳು ಎಲ್ಲವಕ್ಕೂ ಈರುಳ್ಳಿಯಿಲ್ಲದೆ (kitchen tips) ನಮ್ಮ ಕೈ ಮುಂದೆಯೇ ಹೋಗದು. ಮನೆಯಲ್ಲಿ ತರಕಾರಿಗಳೆಲ್ಲವೂ ಖಾಲಿಯಾದರೂ ಬುಟ್ಟಿಯಲ್ಲಿ ಈರುಳ್ಳಿ ಇಲ್ಲದೆ ಇರುವುದು ಬಹಳ ಅಪರೂಪವೇ ಸರಿ. ಇಂತಹ ಈರುಳ್ಳಿ ಸರಿಯಾಗಿ ಬಲಿಯುವುದಕ್ಕೆ ಮುನ್ನವೇ ಗಿಡ ಸಮೇತವೂ ಬಳಸುವುದುಂಟು. ಮಾರುಕಟ್ಟೆಯಲ್ಲಿ ಸ್ಪ್ರಿಂಗ್ ಅನಿಯನ್ (spring onion) ಹೆಸರಿನಲ್ಲಿ ಸಿಗುವ ಎಳೆ ಈರುಳ್ಳಿಗಳೂ ಕೂಡಾ ಈರುಳ್ಳಿಯಂತೆಯೇ ಆರೋಗ್ಯಕ್ಕೆ (health tips) ಒಳ್ಳೆಯದು. ಕೆಲವು ಸಮಸ್ಯೆಗಳಿಗೆ ಈರುಳ್ಳಿಗಿಂತಲೂ ಎಳೆ ಈರುಳ್ಳಿಯ ಸಾಮರ್ಥ್ಯ (Spring Onion Benefits) ಹೆಚ್ಚು. ಹಾಗಾಗಿ ಬನ್ನಿ ಈ ಎಳೆ ಈರುಳ್ಳಿಯ ಮಹಾತ್ಮೆಯನ್ನು ತಿಳಿಯೋಣ.
1. ಎಳೆ ಈರುಳ್ಳಿ ಗಿಡಗಳು ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಸಮತೋಲನಕ್ಕೆ ತರಲು ಸಹಾಯ ಮಾಡುತ್ತದೆ ಎಂದರೆ ನಂಬುತ್ತೀರಾ? ಹೌದು. ಎಳೆ ಈರುಳ್ಳಿ ಗಿಡಗಳಲ್ಲಿ ಸಲ್ಫರ್ ಪ್ರಮಾಣ ಹೆಚ್ಚಿರುವುದರಿಂದ ಇದು, ಇನ್ಸುಲಿನ್ ಉತ್ಪಾದನೆಯನ್ನು ಪ್ರಚೋದಿಸುವುದರಿಂದ ಮಧುಮೇಃಇಗಳಿಗೆ ಇದು ಒಳ್ಳೆಯದನ್ನೇ ಮಾಡುತ್ತದೆ.
2. ಜೀರ್ಣಕ್ರಿಯೆಯನ್ನೂ ಎಳೆ ಈರುಳ್ಳಿಗಳು ಪ್ರಚೋದಿಸುತ್ತವೆ. ಎಳೆ ಈರುಳ್ಳಿಯಲ್ಲಿ ಅತ್ಯಂತ ಹೆಚ್ಚು ನಾರಿನಂಶ ಇರುವುದರಿಂದ ಇದು ಸಾಮಾನ್ಯ ಈರುಳ್ಳಿಗಿಂತಲೂ ಹೆಚ್ಚು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇತರ ತರಕಾರಿಗಳ ಜೊತೆಗೆ ಈ ಎಳೆ ಈರುಳ್ಳಿಯನ್ನೂ ಸೇರಿಸಿ ಅಡುಗೆ ಮಾಡುವ ಮೂಲಕ ಇದರ ಅತ್ಯುತ್ತಮ ಪ್ರಯೋಜನವನ್ನು ಪಡೆಯಬಹುದು.
3. ಕಣ್ಣಿನ ಆರೋಗ್ಯಕ್ಕೂ ಎಳೆ ಈರುಳ್ಳಿ ಅತ್ಯಂತ ಒಳ್ಳೆಯದು. ಇದರಲ್ಲಿ ಕೆರಾಟಿನಾಯ್ಡ್ ಇರುವುದರಿಂದ ಕಣ್ಣಿಗೆ ಒಳ್ಳೆಯದನ್ನೇ ಮಾಡುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ವಿಟಮಿನ್ ಎ ಕೂಡಾ ಹೇರಳವಾಗಿರುವುದರಿಂದ ದೃಷ್ಠಿದೋಷ ಸೇರಿದಂತೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
4. ಶೀತ ನೆಗಡಿಗೂ ಎಳೆ ಈರುಳ್ಳಿ ಒಳ್ಳೆಯದು. ಎಳೆ ಈರುಳ್ಳಿಯನ್ನು ನಿತ್ಯದ ಆಹಾರದಲ್ಲಿ ಸೇರಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆಗಾಗ ಶೀತ ನೆಗಡಿ, ಕೆಮ್ಮು ಮತ್ತಿತರ ವೈರಲ್ ಹಾಗೂ ಬ್ಯಾಕ್ಟೀರಿಯಲ್ ತೊಂದರೆಗಳು ಕಾಣಿಸುಕೊಳ್ಳುವುದು ಕಡಿಮೆಯಾಗುತ್ತದೆ. ಕಫ ಸಂಗ್ರಹವಾಗುವ ಸಮಸ್ಯೆ ಇರುವ ಮಂದಿಗೂ ಇದು ಬಹಳ ಒಳ್ಳೆಯದು. ಕಫ ಕರಗಿ ನೀರಾಗಿ ಉಸಿರಾಟ ಸರಾಗವಾಗಿ ಆಗುವಂತೆ ಇದು ಮಾಡುತ್ತದೆ.
5. ಹೃದಯದ ಆರೋಗ್ಯಕ್ಕೂ ಎಳೆ ಈರುಳ್ಳಿಗಳು ಬಲು ಒಳ್ಳೆಯದು. ಇದರಲ್ಲಿರುವ ಆಂಟಿ ಇನ್‌ಫ್ಲಮೇಟರಿ ಗೂ ಆಂಟಿ ಆಕ್ಸಿಡೆಂಟ್ ಗುಣಗಳು ರಕ್ತದೊತ್ತಡದ ಏರುಪೇರು ಹಾಗೂ ಹೃದಯದ ಕೆಲಸವನ್ನು ಚುರುಕಾಗಿಸುವಲ್ಲಿ ನೆರವಾಗುತ್ತವೆ.
ಇಷ್ಟೆಲ್ಲ ಒಳ್ಳೆಯ ಗುಣಗಳನ್ನು ಹೊತ್ತಿರುವ ಎಳೆ ಈರುಳ್ಳಿ ಅಥವಾ ಸ್ಪ್ರಿಂಗ್ ಆನಿಯನ್ ಒಳಸುವುದು ಹೇಗೆ ಎಂದು ನೀವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಈರುಳ್ಳಿಯಂತೆಯೇ ಈರುಳ್ಳಿಗೆ ಬದಲಾಗಿ ಹಲವು ಕಡೆಗಳಲ್ಲಿ ಇದನ್ನೂ ಬಳಸಲು ಸಾಧ್ಯವಿದೆ. ಅಷ್ಟೇ ಅಲ್ಲ, ಇನ್ನೂ ಕೆಲವು ಬಗೆಯ ಅಡುಗೆಗಳಿಗೆ ಈ ಎಳೆ ಈರುಳ್ಳಿಗಳು ಮ್ಯಾಜಿಕ್ಕನ್ನೇ ಮಾಡುತ್ತವೆ. ಕೆಲವು ಸ್ಟರ್ ಫ್ರೈಗಳಲ್ಲಿ ಎಳೆ ಈರುಳ್ಳಿಯನ್ನು ಸೇರಿಸಿದರೆ ರುಚಿ ಹೆಚ್ಚು. ಸಲಾಡ್‌ಗಳಿಗೂ ಈ ಎಳೆ ಈರುಳ್ಳಿಯನ್ನು ಹೆಚ್ಚಿ ಸೇರಿಸಬಹುದು. ಇದು ಸಲಾಡ್‌ನ ರುಚಿಯನ್ನು ಮತ್ತಷ್ಟು ಹೆಚ್ಚಿಸಬಹುದು. ಇನ್ನೂ ಕೆಲವೊಮ್ಮೆ, ಹಲವು ಸೈಡ್‌ಡಿಶ್‌ಗಳನ್ನು ಅಲಂಕರಿಸಲು ಈ ಎಳೆ ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಮೇಲೆ ಹಾಕಬಹುದು. ನೀವು ಡಿಪ್ ಹಾಗೂ ಸಾಸ್‌ಗಳನ್ನು ಮನೆಯಲ್ಲೇ ಮಾಡುವ ಅಭ್ಯಾಸವಿದ್ದರೆ ಅದಕ್ಕೂ ಸೇರಿಸಬಹುದು. ಇನ್ನು ಸಾಂಪ್ರದಾಯಿಕ ಅಡುಗೆಗಳನ್ನೇ ನೀವು ಹೆಚ್ಚು ಮಾಡುತ್ತಿದ್ದರೆ, ದೋಸೆ, ಪಡ್ಡು ಇತ್ಯಾದಿಗಳಿಗೂ ಎಳೆ ಈರುಳ್ಳಿಯನ್ನು ಹೆಚ್ಚಿ ಸೇರಿಸಬಹುದು. ಚಪಾತಿ ಯೋ ರೊಟ್ಟಿಯನ್ನೋ ಮಾಡುವಾಗಲೂ ಹಿಟ್ಟಿನ ಜೊತೆ ಇದನ್ನೂ ಸಣ್ಣದಾಗಿ ಹೆಚ್ಚಿ ಕಲಸಿಕೊಳ್ಳಬಹುದು. ಮನಸ್ಸು ಮಾಡಿದರೆ, ಹೀಗೆ ಸೇರಿಸಲು ನೂರು ದಾರಿಗಳಿವೆ. ಆದಷ್ಟೂ ಈ ಹಲವು ಬಗೆಗಳಲ್ಲಿ ಇಂತಹ ತರಕಾರಿಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಸೇರಿಸುವ ಬಗೆಯನ್ನು ಹುಡುಕಿಕೊಂಡು ನೀವೂ ತಿನ್ನಿ. ಮಕ್ಕಳಿಗೂ ತಿನ್ನಿಸಿ, ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಿ.
ಇದನ್ನೂ ಓದಿ: Kitchen tips: ಈರುಳ್ಳಿಯನ್ನು ಹೆಚ್ಚು ಕಾಲ ಉಳಿವಂತೆ ಕಾಪಾಡಲು ಹೀಗೆ ಮಾಡಿ!