Site icon Vistara News

Story of Neem: ನಿಮಗೆ ಗೊತ್ತೇ, ಬೇವು ಕಹಿಯಲ್ಲ ಸಿಹಿ!

neem tree

:: ಪೂರ್ಣಿಮಾ ಹೆಗಡೆ

ಸುತ್ತ ಗಿಡ ಮರಗಳಿಂದ ಆವರಿಸಿರುವ ಕಂಪೆನಿಯ ಟೆರೆಸ್ ನಲ್ಲಿರುವ ಕೆಫೆಟೇರಿಯಾದ ಮೂಲೆಯಲ್ಲಿರುವ ಟೇಬಲ್ ನಮ್ಮ ಗುಂಪಿನ ಅಚ್ಚುಮೆಚ್ಚಿನ ಕಾಫಿ ಬ್ರೇಕ್ ತಾಣ. ಮಳೆ, ಹಸಿರ ಛಾವಣಿ, ಅದನ್ನು ನೋಡುತ್ತಾ ಬಿಸಿ ಬಿಸಿ ಕಾಫಿಯನ್ನು ಹೀರುವ ಮುದವೇ ಬೇರೆ. ಯಾರೋ ನೀರೆಯೊಬ್ಬಳು ತನ್ನ ಹಸಿರ ಸೆರಗಲ್ಲಿ ಒಂದೊಂದಾಗಿ ಹೊನ್ನ ಮಣಿಯನ್ನು ಆರಿಸಿ ಆರಿಸಿ ಪ್ರೀತಿಯಿಂದ ಪೇರಿಸಿಕೊಳ್ಳಲು ಪ್ರಯತ್ನಿಸಿದಂತೆ ಕಾಣುವ ದೃಶ್ಯ ಮನಸ್ಸಿಗೆ ತಂಪೆರೆದರೆ, ಬಿಸಿ ಬಿಸಿ ಕಾಫಿ ಉದರಕ್ಕೆ ಹಿತ ನೀಡುತ್ತಿತ್ತು. ಆದರೆ ರಸ್ತೆ ಅಗಲೀಕರಣದಿಂದ ಈ ದೃಶ್ಯ ಇನ್ನು ಸ್ವಲ್ಪ ದಿನಗಳಲ್ಲೇ ಕಾಣೆಯಾಗುವ ಸಂಗತಿ ಎಲ್ಲರಿಗೂ ಅರಿವಿತ್ತು.

ಕಾಫಿ ಕಪ್ ಹಿಡಿದು ಬಂದ ಮಿತಭಾಷಿ ರೋಹನ್ ಹೊರಗೆ ನೋಡುತ್ತಾ “ಆ ಬೇವಿನ ಮರವನ್ನಾದರೂ ಹಾಗೆ ಉಳಿಸಲಿ ಎನ್ನುವುದು ಅಷ್ಟೇ ನನ್ನ ಪ್ರಾರ್ಥನೆ” ಎಂದು ನುಡಿದಾಗ ನಮಗೆಲ್ಲಾ ಅಚ್ಚರಿ.

ಗುಂಪಿನಲ್ಲೆ ಮಾತಿನ ಮಲ್ಲಿ ನಂದಿತಾ “ಏಕೆ ಯಾವುದಾದರೂ ಮಧುರ ನೆನಪು ಆ ಮರದೊಂದಿಗೆ ಬೆಸೆದುಕೊಂಡಿದೆಯೆ?” ಎಂದು ಕಾಲೆಳೆದಾಗ, ತಟ್ಟನೇ ಆತ ನುಡಿದಿದ್ದ ” ಇಲ್ಲಾ , ಅದು ವಾಯುವ್ಯ ದಿಕ್ಕಿನಲ್ಲಿ ಇದೆ. ವಾಸ್ತು ಪ್ರಕಾರ ಬೇವಿನ ಮರ ಮನೆಯ ಅಥವಾ ಕಂಪೆನಿಯ ವಾಯುವ್ಯ ದಿಕ್ಕಿನಲ್ಲಿ ಇದ್ದರೆ ಆ ಕಂಪೆನಿಗೆ ಪ್ರಗತಿ “.

ಯುಗಾದಿಯಂದು ಬೇವು ಬೆಲ್ಲ ತಿನ್ನುವುದು ಮಾತ್ರ ತಿಳಿದಿದ್ದ ನನಗೆ ಈ ಉತ್ತರ ಆಶ್ಚರ್ಯವನ್ನು ಉಂಟು ಮಾಡಿತ್ತು. “ಬೇವಿನ ಮರ ವಾಸ್ತುಶಾಸ್ತ್ರದಲ್ಲಿ ಇಷ್ಟೊಂದು ಮಹತ್ವ ಪಡೆದಿದೆಯೇ ?” ಎಂದು ಉದ್ಗಾರ ತೆಗೆದಿದ್ದೆ.
“ವಾಸ್ತುಶಾಸ್ತ್ರ ಒಂದೇ ಅಲ್ಲ , ತುಂಬಾ ಉಪಯೋಗಗಳು ಇವೆ. ನಿಮಗೆ ಗೊತ್ತೆ ಪುರಿ ಜಗನ್ನಾಥ ದೇವಸ್ಥಾನದ ಮೂರ್ತಿಯನ್ನು ಕೇವಲ ಬೇವಿನ ಮರದಿಂದ ಮಾತ್ರ ಮಾಡುತ್ತಾರೆ! ” ಎನ್ನುವಲ್ಲಿಗೆ ನಮ್ಮ ಕಾಫಿ ಬ್ರೇಕ್ ಮುಗಿದಿತ್ತು.

ಈ ಘಟನೆಯಿಂದ ಬೇವಿನ ಮರದ ಬಗ್ಗೆ ತಿಳಿಯುವ ನನ್ನ ಕುತೂಹಲ ಗರಿಗೆದರಿತ್ತು. ಹೀಗೆ ನಮ್ಮ ಪುರಾಣಗಳು, ಆಯುರ್ವೇದ ಗ್ರಂಥಗಳ ಮೊರೆಹೊಕ್ಕಾಗ ತಿಳಿದಿದ್ದು ಹಲವು ಸಂಗತಿಗಳು.

ಪುರಾಣಗಳಲ್ಲಿ ಬೇವು

ನಮ್ಮ ಪುರಾಣಗಳಲ್ಲಿ ಬೇವಿನ ಮರದ ಕುರಿತು ವಿವಿಧ ರೀತಿಯ ಕಥೆಗಳನ್ನು ನಾವು ಕಾಣಬಹುದು. ಸಮುದ್ರ ಮಂಥನ ನಡೆದಾಗ ಹೊರಬಂದ ಅಮೃತದ ಕಲಶವನ್ನು ಅಸುರರು ಕಿತ್ತುಕೊಳ್ಳಲು ಹೋಗುತ್ತಾರೆ. ಆಗ ದೇವೇಂದ್ರನು ಅಮೃತದ ಕಲಶವನ್ನು ಹಿಡಿದು ಸ್ವರ್ಗಲೋಕಕ್ಕೆ ನೆಗೆಯುವಾಗ ಭೂಮಿಯ ಮೇಲೆ ಬಿದ್ದ ಅಮೃತದ ಹನಿಗಳು ಬೇವಿನ ಸಸಿಗಳಾದವು ಎಂಬ ಪ್ರತೀತಿ ಇದೆ. ಹೀಗೆ ಅಮೃತದಿಂದ ಹುಟ್ಟಿರುವದಕ್ಕಾಗಿ ಬೇವಿಗೆ “ಸರ್ವ ರೋಗ ನಿವಾರಿಣಿ” ಎಂದು ಹೆಸರಿದೆ.

ಕೆಲವು ಪ್ರದೇಶಗಳಲ್ಲಿ ದುರ್ಗಾ ಮಾತೆಯು ಬೇವಿನ ಮರದಲ್ಲಿ ನೆಲೆಸಿರುವಳು ಎಂಬ ನಂಬಿಕೆ ಇದ್ದರೆ , ಇನ್ನು ಕೆಲವು ಪ್ರದೇಶಗಳಲ್ಲಿ ಲಕ್ಷ್ಮೀ ದೇವಿ ನೆಲೆಸಿದ್ದಾಳೆ ಎನ್ನುವ ಪ್ರತೀತಿ ಇದೆ . ಹಾಗಾಗಿ ಕೆಲವು ದೇವಿ ದೇವಸ್ಥಾನಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಬೇವಿನ ಮರವು ವ್ಯಾಪಕವಾಗಿ ಕಂಡುಬರುವುದನ್ನು ಕಾಣಬಹುದು.

ಅಶ್ವಥ್ ವೃಕ್ಷಕ್ಕೆ ಹಾಗೂ ಬೇವಿನ ಮರಕ್ಕೆ ಮದುವೆ ಮಾಡಿಸುವ ಸಂಪ್ರದಾಯ ಈ ನಂಬಿಕೆಯಿಂದ ಬಂದಿದೆ. ಅಶ್ವತ್ಥ ಮರವನ್ನು ನಾರಾಯಣ ಎಂದೂ, ಬೇವಿನ ಮರವನ್ನು ಲಕ್ಷ್ಮೀ ದೇವಿ ಎಂದೂ ಭಾವಿಸಿ ಅವರನ್ನು ವಧು-ವರರಂತೆ ಸಿಂಗರಿಸಿ ಸಕಲ ವಿಧಿ ವಿಧಾನಗಳೊಂದಿಗೆ ಮದುವೆ ಕಾರ್ಯವನ್ನು ನೆರವೇರಿಸುತ್ತಾರೆ. ಬ್ರಹ್ಮ ಪುರಾಣದ ಪ್ರಕಾರ ಬೇವಿನ ಮರದಲ್ಲಿ ಆರು ರೋಗನಿರೋಧಕ ದೇವತೆಗಳು ನೆಲೆಸಿರುತ್ತಾರೆ . ಹಾಗಾಗಿ ಅದನ್ನು ಪೂಜಿಸಿದರೆ ರೋಗಭಯ ಇರುವುದಿಲ್ಲ ಎನ್ನುವುದು ಇನ್ನೊಂದು ನಂಬಿಕೆ.

ಜ್ಯೋತಿಷ್ಯ ಹಾಗೂ ವಾಸ್ತುಶಾಸ್ತ್ರದಲ್ಲಿ ಬೇವು

ಬೇವಿನ ಮರ ದೈವಿಕ ಶಕ್ತಿಯನ್ನು ಹೊಂದಿದೆ ಎಂಬ ನಂಬಿಕೆ ಇದೆ. ಹಾಗಾಗಿ ಬೇವಿನ ಮರಕ್ಕೆ ಧಾರ್ಮಿಕ ಮಹತ್ವ ಇದೆ. ಶನಿ ಹಾಗೂ ಕೇತುವು ಬೇವಿನ ಮರದೊಂದಿಗೆ ಸಂಬಂಧವನ್ನು ಹೊಂದಿದ್ದಾರೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ ಹಾಗಾಗಿ ಈ ಗ್ರಹಗಳ ಶಾಂತಿಗಾಗಿ ಮನೆಯಲ್ಲಿ ಬೇವಿನ ಗಿಡವನ್ನು ನೆಡಬೇಕು ಎಂಬ ನಂಬಿಕೆ ಇದೆ.

ಬೇವಿನ ಮರ ದೈವಿಕ ಶಕ್ತಿಗಳ ನೆಲೆಬೀಡು ಹಾಗೂ ಆ ಮರವನ್ನು ನೆಟ್ಟರೆ ಪೂರ್ವಜರ ಆಶೀರ್ವಾದ ಸಿಗುತ್ತದೆ ಹಾಗೂ ಇದರಿಂದ ಪಿತೃ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆ ಕೆಲವು ಪ್ರದೇಶಗಳಲ್ಲಿ ಕಂಡುಬರುತ್ತದೆ.

ಇನ್ನು ಕೆಲವು ಪ್ರದೇಶಗಳಲ್ಲಿ ಭಾನುವಾರದಂದು ಬೇವಿನ ಮರಕ್ಕೆ ನೀರು ಹಾಕಿದರೆ ಉತ್ತಮ ಆರೋಗ್ಯವನ್ನು ಪಡೆಯಬಹುದು ಹಾಗೂ ಜಾತಕದಲ್ಲಿ ಇರುವ ಅಶುಭ ಫಲಿತಾಂಶಗಳು ಇದರಿಂದ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ. ಬೇವಿನ ಸೊಪ್ಪಿನ ಹೊಗೆಯನ್ನು ಮನೆಯಲ್ಲಿ ಹಾಕುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶಿಸುವುದಿಲ್ಲ ಎಂಬ ನಂಬಿಕೆ ಹಲವೆಡೆ ಇದೆ.

ಆಯುರ್ವೇದದಲ್ಲಿ ಬೇವು

ತನ್ನ ಔಷಧೀಯ ಗುಣಗಳಿಂದ ಬೇವು ಆಯುರ್ವೇದದಲ್ಲಿ ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ಬೇವಿನ ಪ್ರತಿಯೊಂದು ಭಾಗವೂ ಉಪಯುಕ್ತವಾಗಿದೆ. ಆಯುರ್ವೇದದಲ್ಲಿ ಬೇವನ್ನು “ನಿಂಬಾ ಮರ” ಎಂದು ಉಲ್ಲೇಖಿಸಲಾಗಿದೆ. ಮನುಷ್ಯನ ದೇಹದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಬೇವು ರಾಮಬಾಣವಾಗಿದೆ.

ರಕ್ತ ಶುದ್ಧೀಕರಣದಲ್ಲಿ ಸಹಾಯಕ
ಚರ್ಮರೋಗಗಳ ನಿವಾರಣೆಯಲ್ಲಿ ಉಪಯುಕ್ತ
ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದ ಉಂಟಾಗುವ ಸೋಂಕಿನ ವಿರುದ್ಧ ಹೋರಾಡುತ್ತದೆ
ಸೌಂದರ್ಯವರ್ಧಕಗಳಲ್ಲಿ ಉಪಯೋಗಿಸುತ್ತಾರೆ.
ಕೀಟನಾಶಕವಾಗಿ ಕೂಡಾ ಬಳಸುತ್ತಾರೆ.
ಮಧುಮೇಹ ನಿಯಂತ್ರಣದಲ್ಲಿ ಸಹಾಯಕಾರಿ

ಹೀಗೆ ನಾನಾ ರೀತಿಯಲ್ಲಿ ಬೇವಿನ ಉಪಯೋಗವನ್ನು ಕಾಣಬಹುದು.

ಕೃಷಿಯಲ್ಲಿ ಬೇವು

neem benefits

ಮಹಾಗೋನಿ ಕುಟುಂಬಕ್ಕೆ ಸೇರುವ ಬೇವಿಗೆ ಬಡವರ ಪಾಲಿನ ಸಾಗುವಾನಿ ಎನ್ನುವ ಹೆಸರಿದೆ . ತೀವ್ರ ತರದ ಬರಗಾಲದಲ್ಲಿ ಕೂಡ ಬದುಕುವ ಸಾಮರ್ಥ್ಯ ಬೇವಿನ ಮರಕ್ಕಿದೆ. ಕೀಟಗಳನ್ನು ನಿರ್ವಹಿಸಲು ಬೇವಿನ ಉತ್ಪನ್ನಗಳನ್ನು ರಾಸಾಯನಿಕ ಕೀಟನಾಶಕಗಳಿಗೆ ಪರ್ಯಾಯವಾಗಿ ಹಾಗೂ ರಸಗೊಬ್ಬರವಾಗಿ ಬಳಸಬಹುದು. ಮಣ್ಣನ್ನು ಸಮೃದ್ಧಗೊಳಿಸುವ ಗುಣ ಬೇವಿನ ಎಲೆಗಳಿಗೆ ಇದೆ. ಬೇವಿನ ಮರದ ಬೀಜದ ಹಿಂಡಿ ಉತ್ಕೃಷ್ಟ ಗೊಬ್ಬರವಾಗಿ ಉಪಯೋಗವಾಗುತ್ತದೆ.

ಗೃಹ ನಿರ್ಮಾಣ, ಪಿಠೋಪಕರಣಗಳು,ಆಟಿಕೆ, ಕೃಷಿ ಉಪಕರಣಗಳ ತಯಾರಿಕೆಯಲ್ಲಿ ಬೇವಿನ ಮರವನ್ನು ಉಪಯೋಗಿಸುತ್ತಾರೆ. ಬೇವಿನ ಮರದಿಂದ ತಯಾರಿಸಿದ ಪೀಠೋಪಕರಣಗಳ ಬಣ್ಣ ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ ಕೀಟಬಾಧೆಯಿಂದ ಮುಕ್ತವಾಗಿ ಬಹುಕಾಲ ಬಾಳಿಕೆ ಬರುತ್ತದೆ.

ಒಟ್ಟಿನಲ್ಲಿ ತನ್ನ ವಿಶಿಷ್ಟವಾದ ಗುಣಗಳಿಂದ ಬೇವು ಜನೋಪಯೋಗಿ ಮರ ಎನಿಸಿದೆ. ಹುಡುಕುತ್ತಾ ಹೋದರೆ ಗಿಡ ಮರಗಳಿಂದ , ನಮ್ಮ ಪ್ರಕೃತಿಯಿಂದ ಸಿಗುವ ಉಪಯೋಗಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಪರೋಪಕಾರಂ ಇದಂ ಶರೀರಂ ಎನ್ನುವ ಮಾತಿಗೆ ಅನ್ವರ್ಥದಂತೆ ಪ್ರಕೃತಿಯಲ್ಲಿ ಇರುವ ಎಲ್ಲವೂ ಬದುಕುತ್ತಿದೆ ಬಹುಶಃ ಮನುಷ್ಯನನ್ನು ಹೊರತುಪಡಿಸಿ.

ಇದನ್ನೂ ಓದಿ: Health Tips: ತಾಮ್ರದ ಬಾಟಲಿಗಳಲ್ಲೇ ನಿತ್ಯವೂ ನೀರು ಕುಡಿಯುತ್ತೀರಾ? ಹಾಗಾದರೆ, ಪಿತ್ತಕೋಶ, ಕಿಡ್ನಿ ಹುಷಾರು!

ಯಾವತ್ ಭೂಮಂಡಲಂ ಧತ್ತೇ ಸಮೃಗವನಕಾನನಂ
ತಾವತ್ತಿಷ್ಠಥತಿ ಮೇದಿನ್ಯಾಂ ಸಂತತಿ ಪುತ್ರಪೌತ್ರಿಕೀ ||

ಸಂಸ್ಕೃತದ ಈ ಶ್ಲೋಕ “ಈ ಭೂಮಂಡಲದಲ್ಲಿ ಎಲ್ಲಿಯವರೆಗೆ ಕಾಡು ,ವನ,ಕಾನನ ಇರುತ್ತದೋ ಅಲ್ಲಿಯವರೆಗೆ ಜೀವಿಗಳ ಸಂತತಿ ಇರುತ್ತದೆ ” ಎಂದು ನಮ್ಮ ಅಡಿಪಾಯವಾದ ಮರಗಿಡಗಳ ಮಹತ್ವವನ್ನು ಸಾರುತ್ತದೆ. ನಮ್ಮ ಜೀವನಕ್ಕೆ ಆಧಾರವಾದ ಪ್ರಕೃತಿಯನ್ನು ನಾಶಮಾಡುತ್ತ ನಾವು ಏನನ್ನು ಸಾಧಿಸಲು ಹೊರಟಿದ್ದೇವೆ! ಈ ಕಾಲಕ್ಕೆ ಇದರ ಕುರಿತು ಅವಲೋಕಿಸುವ ಅವಶ್ಯಕತೆ ಖಂಡಿತವಾಗಿ ಇದೆ ಅದರ ಜೊತೆಗೆ ಸಂರಕ್ಷಣೆ ಹೊಣೆಯೂ ಇದೆ. ಇಲ್ಲವಾದಲ್ಲಿ ಈ ಹಸಿರನ್ನು ನಾಶ ಪಡಿಸುತ್ತ ಪಡಿಸುತ್ತ ನಾವು ಉಸಿರು ಚೆಲ್ಲುವ ದಿನ ಸನ್ನಿಹಿತವಾಗಬಹುದು.

ಒಂದೊಮ್ಮೆ ನಾವು ಯೋಚಿಸುವ ಹಾಗೆ ಮರಗಿಡಗಳು ಈ ಮನುಷ್ಯನಿಂದ ಏನು ಉಪಯೋಗಗಳಿವೆ ಎಂದು ಪಟ್ಟಿ ಮಾಡಹೊರಟರೆ ಆ ಪಟ್ಟಿಯಲ್ಲಿ ಏನಿರಬಹುದು ! ನಮ್ಮ ಸಂಪಾದನೆ ನಿಜಾರ್ಥದಲ್ಲಿ ಏನು? ಎದುರಿಗೆ ಕಾಣುತ್ತಿದ್ದ ಮರದಿಂದ ಎಲೆಯೊಂದು ” ನೀ ಯಾರಿಗಾದೆಯೋ ಎಲೆ ಮಾನವಾ” ಎನ್ನುತ್ತಾ ನಕ್ಕು ನಕ್ಕು ಧರೆಗುರುಳಿದಂತೆ ಭಾಸವಾಯಿತು!!

ಇದನ್ನೂ ಓದಿ: Hair Care: ತಲೆಕೂದಲಿನ ಯಾವ ಸಮಸ್ಯೆಗೆ ಯಾವ ಎಣ್ಣೆ ಸೂಕ್ತ?

Exit mobile version