Site icon Vistara News

Street Food: ಮಳೆಗಾಲದಲ್ಲಿ ಬೀದಿಬದಿಯ ತಿನಿಸುಗಳನ್ನು ಬಾಯಿಗಿಡುವ ಮೊದಲು ಇವಿಷ್ಟು ನೆನಪಿರಲಿ!

street food

ಭಾರತದಲ್ಲಿ ಬೀದಿಬದಿಯ ತಿನಿಸುಗಳಿಗೆ ಅದರದ್ದೇ ಆದ ಸೊಬಗಿದೆ. ಮಹಾನಗರಗಳಲ್ಲಿ ಬೀದಿಬದಿಯ ತಿನಿಸುಗಳನ್ನು ಆಗಾಗ ತಿನ್ನುವುದೇ ಮಜಾ. ಅದರಲ್ಲೂ ಕೆಲವು ಚಾಟ್‌ಗಳನ್ನು ಬೀದಿಬದಿಯಲ್ಲೇ ತಿನ್ನಬೇಕು. ಗೋಲ್‌ಗಪ್ಪೆ, ಮಸಾಲಪುರಿ, ಕಚೋಡಿಗಳು, ಸಮೋಸ, ಡಂಬ್ಲಿಂಗ್‌ಗಳು ಸೇರಿದಂತೆ ಬಗೆಬಗೆಯ ತಿನಿಸುಗಳಿಗೂ ಬೀದಿಗೂ ಅವಿನಾಭಾವ ನಂಟು. ಇವುಗಳ ಹೆಸರು ಕೇಳಿದೊಡನೆಯೇ ಬಾಯಲ್ಲಿ ನೀರೂರುವುದು ಖಚಿತ. ಆದರೆ ಬಹಳಷ್ಟು ಸಾರಿ ಬೀದಿಬದಿಯ ತಿನಿಸುಗಳನ್ನು ಹೊಟ್ಟೆಗಿಳಿಸಿದ ತಕ್ಷಣ ಹೊಟ್ಟೆಯಲ್ಲಿ ಕೆಲಸ ಪ್ರಾರಂಭವಾಗಿರುತ್ತದೆ. ಅಯ್ಯೋ ಯಾಕಾದರೂ ತಿಂದೆನೋ ಎಂದು ಆಮೇಲೆ ಅನಿಸಿದರೂ ಕಾಲ ಮಿಂಚಿರುತ್ತದೆ. ಅದರಲ್ಲೂ ಮಳೆಗಾಲ ಬಂದರೆ, ಈ ಸಮಸ್ಯೆ ಹೆಚ್ಚು. ಮಳೆಗಾಲದಲ್ಲಿ ಮಳೆನೀರು, ಅಥವಾ ವಾತಾವರಣದಲ್ಲಿರುವ ತೇವಾಂಶದಿಂದಾಗಿ ಆಹಾರಕ್ಕೆ ತಾಕುವ ಸಂಭವ ಹೆಚ್ಚಿರುವುದರಿಂದ ಆರೋಗ್ಯ ಸಮಸ್ಯೆಗಳುಂಟಾಗಬಹುದು. ಅಷ್ಟೇ ಅಲ್ಲ, ಬೀದಿಬದಿಯ ತಿಂಡಿಯ ಆಯ್ಕೆಗೂ ಒಂದು ಸಾಮಾನ್ಯ ಜ್ಞಾನ ಬೇಕಾಗಿರುತ್ತದೆ. ಯಾವ ಬಗೆಯ ತಿನಿಸನ್ನು ಎಲ್ಲಿ ತಿನ್ನಬಹುದು, ಯಾರ ಬಳಿಯ ತಿನಿಸುಗಳು ಸ್ವಚ್ಛವಾಗಿರುತ್ತವೆ ಎಂಬಿತ್ಯಾದಿ ಅರಿವು ಬಹಳ ಮುಖ್ಯ. ಹಾಗಾದರೆ ಬನ್ನಿ, ಬೀದಿಬದಿಯ ತಿನಿಸನ್ನು ಈ ಮಳೆಗಾಲದಲ್ಲಿ ತಿನ್ನುವ ಮೊದಲು (street food in monsoon) ಈ ಕೆಳಗಿನ ಕೆಲವು ಸಾಮಾನ್ಯ ಕಾಳಜಿ ನಿಮಗಿರಲಿ.

1. ಹೊಸ ಊರುಗಳಿಗೆ ಹೋದಾಗ, ಸ್ಥಳೀಯರು ಎಲ್ಲಿ ತಿನ್ನುವುದನ್ನು ಇಷ್ಟ ಪಡುತ್ತಾರೆ ಎಂಬುದನ್ನು ಗಮನಿಸಿ.  ಆ ಊರಿನ ಪ್ರಸಿದ್ಧ ಜಾಗಗಳನ್ನು ಆಯ್ಕೆ ಮಾಡಿ. ಮುಖ್ಯವಾಗಿ ಆಯಾ ಊರಿನ ಸ್ಥಳೀಯರ ಮೂಲಕ ಯಾವ ಜಾಗ ಸಾಂಪ್ರದಾಯಿಕ ಊಟಕ್ಕೆ ಹೆಸರುವಾಸಿ ಎಂಬುದನ್ನು ತಿಳಿದುಕೊಂಡು ಅಲ್ಲಿಗೆ ಹೋಗಿ.

2. ಬೀದಿಬದಿಯಲ್ಲಿ ತಿನ್ನುವಾಗ ಆದಷ್ಟೂ ಸಸ್ಯಾಹಾರಿ ತಿನಿಸುಗಳ ಆಯ್ಕೆ ಒಳ್ಳೆಯದು. ಮಾಂಸಾಹಾರದ ಬಗ್ಗೆ ನೀವು ತಜ್ಞರಾಗಿದ್ದರೆ, ನೋಡಿದ ತಕ್ಷಣ ಒಳ್ಳೆಯದು ಯಾವುದೆಂದು ಗೊತ್ತಿದ್ದರೆ ಚಿಂತೆಯಿಲ್ಲ. ಆದರೆ, ಬಹಳಷ್ಟು ಸಲ ಸರಿಯಾದ ಮಾಂಸದ ಆಯ್ಕೆ ಹಾಗೂ ಅದನ್ನು ಸರಿಯಾಗಿ ಬೇಯಿಸುವುದು ಇತ್ಯಾದಿ ಮಾಡಿರದಿದ್ದರೆ ಹೊಟ್ಟೆ ಕೆಡುವ ಅಪಾಯ ಇರುವುದರಿಂದ ಆದಷ್ಟೂ ಬೀದಿಬದಿಯಲ್ಲಿ ಸ್ವಚ್ಛತೆಗೆ ಅವಕಾಶ ಕಡಿಮೆ ಇರುವುದರಿಂದ ಈ ಬಗ್ಗೆ ಜಾಗರೂಕತೆ ವಹಿಸಿ.

3. ಬೀದಿಬದಿಯ ತಿನಿಸುಗಳನ್ನು ಆಯ್ಕೆ ಮಾಡುವಾಗ, ಅಥವಾ ಅಲ್ಲೇ ನಿಂತು ತಿನ್ನುವಾಗ ಸ್ವಚ್ಛತೆಯ ಬಗೆಗೆ ಗಮನ ಕೊಡಿ. ಕೊಳಕು ಚಾಕು, ಕೊಳಕು ಪ್ಲೇಟ್‌, ಸರಿಯಾಗಿ ತೊಳೆಯದ ತಟ್ಟೆ ಗ್ಲಾಸುಗಳು, ಕತ್ತರಿಸುವ ಜಾಗ ಗಲೀಜಾಗಿರುವುದು, ಮಾಡುವ ವ್ಯಕ್ತಿಯ ಕೈಯಲ್ಲಿ ದೊಡ್ಡ ಗಾಯವಿರುವುದು, ಒಂದೇ ನೀರನ್ನು ಎಲ್ಲದಕ್ಕೂ ಬಳಸುವುದು, ಮಳೆನೀರಿನ ಹೊಂಡದ ಅಥವಾ ನಿಂತ ನೀರಿನ ಬಳಿಯೇ ಅಡುಗೆ ಮಾಡುವುದು ಅಥವಾ ಸೊಳ್ಳೆ ನೊಣಗಳು ಅಲ್ಲೇ ಸುತ್ತಾಡುವುದು ಇತ್ಯಾದಿಗಳನ್ನು ಗಮನಿಸಿ. ಇಂತಹ ಜಾಗದಲ್ಲಿ ಕೊಡುವ ತಿನಿಸುಗಳು ಎಷ್ಟೇ ರುಚಿಯಾಗಿದ್ದರೂ, ನಿಮ್ಮ ಆರೋಗ್ಯ ಖಂಡಿತ ಕೆಡುತ್ತದೆ ನೆನಪಿಡಿ. ಬೀದಿಬದಿಯಲ್ಲಿ ಹೆಚ್ಚು ಸ್ವಚ್ಛತೆಯನ್ನು ಬಯಸುವುದು ಸಾಧ್ಯವಿಲ್ಲ ಎಂಬುದು ನಿಜವಾದರೂ ಕನಿಷ್ಠ ಸ್ವಚ್ಛತೆಯ ಅಗತ್ಯವನ್ನಾದರೂ ಬಯಸಿ.

4. ಬಿಸಿಯಾಗಿಲ್ಲದ ಬೀದಿತಿಂಡಿಗಳ ಬಗ್ಗೆ ಜಾಗ್ರತೆ ವಹಿಸಿ. ಇಲ್ಲಿ ಬಳಕೆಯಾದ ನೀರು ಶುಚಿಯಾಗಿಲ್ಲದೆಯೂ ಇರಬಹುದು. ಸಾಮಾನ್ಯ ನೀರನ್ನು ಬಳಸಿರಬಹುದು. ಹಾಗಾಗಿ, ಬಿಸಿಯಾಗಿರುವ ತಿಂಡಿಗಳನ್ನು ಆಯ್ಕೆ ಮಾಡುವುದು ಉತ್ತಮ.

ಇದನ್ನೂ ಓದಿ: Monsoon Food Tips: ಮಳೆಗಾಲದಲ್ಲಿ ಮರೆಯಲೇಬಾರದ ಆಹಾರ ಸಂಗ್ರಹಣೆಯ ನವಸೂತ್ರಗಳಿವು!

5. ಸಮೋಸ, ಅಥವಾ ಇನ್ನಾವುದೇ ಇಂತಹ ತಿಂಡಿಗಳ ಜೊತೆ ಕೊಡುವ ಚಟ್ನಿ ಅಥವಾ ಸಾಸ್‌ಗಳ ಮೇಲೆ ಗಮನ ಇರಲಿ. ಇವು ಹೊರಗಿನ ಸಾಮಾನ್ಯ ನಳ್ಳಿ ನೀರಿನಿಂದ ಮಾಡಿರಬಹುದು ಅಥವಾ ಸೂರ್ಯನ ಬಿಸಿಲಿನಲ್ಲಿಯೇ ಬಹಳ ಹೊತ್ತು ಹೊರಗೆಯೇ ಇಟ್ಟಿರಬಹುದು.

6. ಬೇಯಿಸಿದ ಅಥವಾ ಸುಟ್ಟ ಬೀದಿಬದಿಯ ತಿನಿಸುಗಳಾದರೆ ಹೆಚ್ಚೇನೂ ತೊಂದರೆಯಾಗದು. ಉದಾಹರಣೆಗೆ ಸುಟ್ಟ ಜೋಳ, ಬೇಯಿಸಿದ ಸಿಹಿ ಗೆಣಸು, ಬೇಯಿಸಿದ ಜೋಳ, ಬೇಯಿಸಿದ ನೆಲಗಡಲೆ ಇತ್ಯಾದಿ ಇತ್ಯಾದಿಗಳು ಬಿಸಿ ಮಾಡಲ್ಪಟ್ಟಿರುವುದರಿಂದ ಇವುಗಳನ್ನು ತಿನ್ನುವುದರಿಂದ ತೊಂದರೆ ಬರಲಾರದು. ಆದರೆ, ತೆರೆದಿರುವ ಕತ್ತರಿಸಿಟ್ಟ ಹಣ್ಣು ತರಕಾರಿಗಳನ್ನು ತಿನ್ನುವುದು ಕೊಂಚ ಅಪಾಯಕಾರಿ.

7. ರಸ್ತೆಬದಿಯಲ್ಲಿ ಕುಡಿಯಬಹುದಾದ ಬೆಸ್ಟ್‌ ಪಾನೀಯ ಎಂದರೆ ಅದು ಚಹಾ. ಅದೂ ಕೂಡಾ ರಸ್ತೆ ಬದಿಯ ಪುಟ್ಟ ಕಿರಾಣಿ ಅಂಗಡಿಯ ಚಹಾದ ಸ್ವಾದವೇ ಬೇರೆ. ಇಂತಹುಗಳನ್ನು ಕುಡಿಯಲು ಹೆಚ್ಚು ಯೋಚಿಸುವ ಅಗತ್ಯವಿಲ್ಲ. ಆದರೆ, ಜ್ಯೂಸ್‌ ಇತ್ಯಾದಿಗಳನ್ನು ಕುಡಿಯುವಾಗ ನಿಮ್ಮೆದುರಲ್ಲೇ ತಾಜಾ ಆಗಿ ತಯಾರಿಸಿದರೆ ಕುಡಿಯಿರಿ. ಬಹಳ ಹೊತ್ತಿನ ಮೊದಲೇ ಮಾಡಿಟ್ಟ ಜ್ಯೂಸ್‌ ಇತ್ಯಾದಿಗಳಿಂದ ಆರೋಗ್ಯ ಸಮಸ್ಯೆ ಬರಬಹುದು ಎಚ್ಚರ.

ಇದನ್ನೂ ಓದಿ: Monsoon Food: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಕೆಂಪಕ್ಕಿ ಅನ್ನ!

Exit mobile version