Site icon Vistara News

Eyes Care While Studying: ಪರೀಕ್ಷೆಯ ದಿನಗಳಲ್ಲಿ ಕಣ್ಣಿನ ಕಾಳಜಿ ಹೀಗಿರಲಿ…

Eyes Care While Studying

ಪರೀಕ್ಷೆಯ ಋತು ಬಂತು. ಈ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಒತ್ತಡಗಳಿರುತ್ತವೆ. ರಾತ್ರಿ ನಿದ್ದೆಗೆಟ್ಟು ಓದಬೇಕು ಎನ್ನುವ ದೈಹಿಕ ಒತ್ತಡ, ಹೆಚ್ಚಿನ ಅಂಕಗಳು ಬೇಕು ಎನ್ನುವ ಮಾನಸಿಕ ಒತ್ತಡ, ಇವೆಲ್ಲವುಗಳ ಮೊತ್ತವಾಗಿ ಒತ್ತಡ ಹೆಚ್ಚುವುದು ಕಣ್ಣುಗಳ ಮೇಲೆ. ಪುಸ್ತಕದಲ್ಲಿರುವುದು ಮಸ್ತಕಕ್ಕೆ ಇಳಿಯಬೇಕೆಂದರೆ ಕಣ್ಣಿನ ಶ್ರಮವೂ ಅಗತ್ಯ. ಈಗಿನ ಹೈಬ್ರಿಡ್‌ ವ್ಯಾಸಂಗದ ಮಾದರಿಗಳಲ್ಲಿ ದಿನವೂ ಗಂಟೆಗಟ್ಟಲೆ ಸ್ಕ್ರೀನ್‌ ನೋಡದೆ ದಾರಿಯಿಲ್ಲ. ಅಂತೂ, ಕಣ್ಣಿಗೆ ತೊಂದರೆ ತಪ್ಪಿದ್ದಲ್ಲ. ಹಾಗಾದರೆ ಪರೀಕ್ಷೆ ಮುಗಿಯುವಷ್ಟರಲ್ಲಿ ಕಣ್ಣಿನ ಕತೆಯೂ ಮುಗೀತು ಎಂಬಂತಾಗದೆ ಇರಲು ಏನು ಮಾಡಬೇಕು? ಪರೀಕ್ಷೆಯ ದಿನಗಳಲ್ಲಿ (eyes care while studying) ಕಣ್ಣಿನ ಕಾಳಜಿ ಮಾಡುವುದು ಹೇಗೆ?

ಸಮಯ ಬದಲಿಸಿ

ರಾತ್ರಿಯ ಸಮಯ ಹೆಚ್ಚಿನ ಓದು ಅನಿವಾರ್ಯವಾದರೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಹಗಲಿನ ಸ್ವಚ್ಛ ಬೆಳಕಿನಲ್ಲಿ ಗೆಜೆಟ್‌ಗಳಲ್ಲಿ ಕೆಲಸ ಮಾಡಿ, ರಾತ್ರಿಯ ಬೆಳಕಿನಲ್ಲಿ ಪುಸ್ತಕದ ಕೆಲಸಗಳಲ್ಲಿ ಕೆಲಸ ಮುಗಿಸಿಕೊಳ್ಳಿ. ರಾತ್ರಿಯ ಹೊತ್ತು ಪರದೆಗಳನ್ನು ನೋಡುವುದು ನಿದ್ದೆಯ ಗುಣಮಟ್ಟವನ್ನು ತಗ್ಗಿಸುತ್ತದೆ. ನಿದ್ದೆಗೆಡುವ ಈ ದಿನಗಳಲ್ಲಿ, ಮಲಗಿದಾಗಲೂ ನಿದ್ದೆ ಬರದಂತಾದರೆ ಆರೋಗ್ಯ… ದೇವ್ರೇ ಗತಿ!

ಆದ್ಯತೆ ನೀಡಿ

ಓದುವುದಕ್ಕೆ ಆನ್‌ಲೈನ್‌ ಆಯ್ಕೆಗಿಂತ ಪುಸ್ತಕ ಹಿಡಿಯುವುದಕ್ಕೆ ಆದ್ಯತೆ ನೀಡಿ. ಅನಿವಾರ್ಯವಾದ್ದನ್ನು ಮಾತ್ರವೇ ಗೆಜೆಟ್‌ ಮೂಲಕ ಮಾಡಿ. ಕೈಯಲ್ಲಿ ಪುಸ್ತಕವಿದ್ದರೂ, ಅದನ್ನು ಬದಿಗಿರಿಸಿ, ಆಪ್‌ಗಳಲ್ಲಿ ಪಠ್ಯಗಳನ್ನು ಓದುವ ಅಭ್ಯಾಸವನ್ನು ಕಡಿಮೆ ಮಾಡುವುದು ಎಲ್ಲ ದೃಷ್ಟಿಯಿಂದಲೂ ಸೂಕ್ತ. ಇದರಿಂದ ಕಣ್ಣುಗಳ ಮೇಲಿನ ಒತ್ತಡವನ್ನು ಕೊಂಚ ಕಡಿಮೆ ಮಾಡಬಹುದು. ಹನಿಗೂಡಿದರೆ ಹಳ್ಳ ಎಂಬಂತೆ, ಇಷ್ಟಿಷ್ಟಾಗಿಯೇ ಕಣ್ಣುಗಳ ಮೇಲಿನ ಒತ್ತಡ ಅತೀವವಾಗಿ ಹೆಚ್ಚುವುದನ್ನು ತಡೆಯಬಹುದು.

ಭಂಗಿ ಸರಿಯಿರಲಿ

ಓದಲು ಕುಳಿತುಕೊಳ್ಳುವಾಗಿನ ಭಂಗಿಯನ್ನು ಸರಿಯಾಗಿರಿಸಿಕೊಳ್ಳಿ. ಕೈಯಲ್ಲಿ ಪುಸ್ತಕ ಹಿಡಿದು ಬಿದ್ದುಕೊಳ್ಳುವುದು, ಟ್ಯಾಬ್‌ ಹಿಡಿದು ಮಂಚದ ಮೇಲೆ ಉರುಳಿಕೊಳ್ಳುವುದು- ಇಂಥವುಗಳಿಂದ ಕಣ್ಣುಗಳ ಮೇಲಿನ ಒತ್ತಡ ಹೆಚ್ಚುತ್ತದೆ. ಟ್ಯಾಬ್ಲೆಟ್‌ ಅಥವಾ ಸ್ಮಾರ್ಟ್‌ ಫೋನ್‌ನಲ್ಲಿ ಓದುವ ಬದಲು ಲ್ಯಾಪ್‌ಟಾಪ್‌ ಬಳಸುವುದು ಕ್ಷೇಮ. ಇದನ್ನಾದರೂ ಸ್ವಚ್ಛ ಬೆಳಕಿನಲ್ಲಿ ಸರಿಯಾದ ಭಂಗಿಯಲ್ಲಿ ಹಿಡಿದು ಕುಳಿತುಕೊಳ್ಳಿ. ಮೇಮೇಲೆ ಇರಿಸುವುದಕ್ಕಿಂತ ಸರಿಯಾದ ಮೇಜು ಉಪಯೋಗಿಸಿ. ಇದರಿಂದ ಕಣ್ಣುಗಳು ಮಾತ್ರವಲ್ಲ, ತಲೆ, ಕುತ್ತಿಗೆ ಮತ್ತು ಬೆನ್ನಿನ ಮೇಲಿನ ಒತ್ತಡವನ್ನೂ ತಪ್ಪಿಸಬಹುದು.

20-20-20

ಅಂದರೆ ಪ್ರತಿ 20 ನಿಮಿಷಗಳಿಗೆ ಒಮ್ಮೆ ಕನಿಷ್ಠ 20 ಸೆಕೆಂಡುಗಳ ಕಾಲ 20 ಅಡಿ ದೂರದ ವಸ್ತುವನ್ನು ದಿಟ್ಟಿಸಿ ನೋಡಿ. ಇದರಿಂದ ಕಣ್ಣುಗಳಿಗೆ ಅಗತ್ಯವಾದ ವಿಶ್ರಾಂತಿ ಪದೇಪದೆ ನೀಡುತ್ತಿರಬಹುದು. ಇದು ಕಣ್ಣಿನ ಸ್ನಾಯುಗಳಿಗೆ ಸರಿಯಾದ ಬಿಡುವನ್ನೂ ನೀಡುತ್ತದೆ, ದೃಷ್ಟಿಯನ್ನು ಕಾಪಾಡುತ್ತದೆ.

ನೀರು

ದಿನಕ್ಕೆ ಮೂರು ಲೀ. ನೀರು ಕುಡಿಯುವುದನ್ನು ತಪ್ಪಿಸುವಂತಿಲ್ಲ. ಓದುವ ಭರದಲ್ಲಿ ಇದನ್ನು ತಪ್ಪಿಸಿದರೆ ಹಲವು ರೀತಿಯಲ್ಲಿ ಒದ್ದಾಡಬೇಕಾಗುತ್ತದೆ. ಆಗಾಗ ಕಣ್ಣು ಮಿಟುಕಿಸುತ್ತಿರಿ. ಇದರಿಂದ ಕಣ್ಣು ಶುಷ್ಕವಾಗದೆ ತೇವವನ್ನು ಕಾಪಾಡಬಹುದು. ಕಣ್ಣಿನ ಸ್ವಚ್ಛತೆಗೂ ಇದು ಅನುಕೂಲ. ಪರದೆಯನ್ನು ತದೇಕದೃಷ್ಟಿಯಿಂದ ನೋಡುತ್ತಿದ್ದರೆ ಕಣ್ಣು ಒಣಗುವುದು ಹೆಚ್ಚು. ಅಂಥ ಸಂದರ್ಭಗಳಲ್ಲಿ 20-20-20 ನಿಮಯವನ್ನು ಕಟ್ಟುನಿಟ್ಟಾಗಿ ಪಾಲಿಸಿ.

ನೀಲಿ ಫಿಲ್ಟರ್‌

ಬಹಳ ಹೊತ್ತು ಲ್ಯಾಪ್‌ಟಾಪ್‌ ಬಳಕೆ ಅನಿವಾರ್ಯ ಎಂದಾದರೆ, ಪರದೆಗಳಿಂದ ಸೂಸುವ ನೀಲಿ ಬೆಳಕನ್ನು ತಡೆಯುವಂಥ ಫಿಲ್ಟರ್‌ಗಳನ್ನು ಬಳಸಿ. ಕತ್ತಲೆಯಲ್ಲಂತೂ ಓದಲೇಬೇಡಿ. ಇದರಿಂದ ದೃಷ್ಟಿಗೆ ಆಪತ್ತು ಬರುವುದು ಖಂಡಿತ. ಓದುವ ಒತ್ತಡ ಎಷ್ಟೇ ಇದ್ದರೂ, ದಿನಕ್ಕೆ ಕನಿಷ್ಟ ಆರು ತಾಸಿನ ನಿದ್ದೆ ಬೇಕೆಬೇಕು. ಇದು ಕಣ್ಣಿಗಷ್ಟೇ ಅಲ್ಲ, ದೇಹ ಸ್ವಾಸ್ಥ್ಯಕ್ಕೆ ಹಿತ.

ಆಹಾರ

ಸತ್ವಯುತ ಆಹಾರವನ್ನೇ ಸೇವಿಸಿ. ಆಹಾರದಲ್ಲಿ ಸಾಕಷ್ಟು ಸಂಕೀರ್ಣ ಪಿಷ್ಟಗಳು, ನಾರು ಮತ್ತು ಪ್ರೊಟೀನ್‌ ಇರಲಿ. ವಿಟಮಿನ್‌ ಎ ಮತ್ತು ಡಿ ಹೆಚ್ಚಿರುವ ಆಹಾರಗಳು ಈಗ ಕಣ್ಣಿನ ಕ್ಷೇಮಕ್ಕಾಗಿ ಬೇಕು. ಖನಿಜಗಳಿಗಾಗಿ ಬೀಜಗಳು, ಹಸಿರು ಸೊಪ್ಪುಗಳು, ಹಾಲು, ಮೊಟ್ಟೆ ಮತ್ತು ಇಡೀ ಧಾನ್ಯಗಳನ್ನು ಬಳಸಿ. ಋತುಮಾನದ ಹಣ್ನುಗಳನ್ನು ತಿನ್ನಿ. ಇದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಇದನ್ನೂ ಓದಿ: Harmful Effects Of Cotton Candy: ಕಾಟನ್‌ ಕ್ಯಾಂಡಿಯ ಅಸಲಿ ಬಣ್ಣ ಭಯಾನಕ!

Exit mobile version