Site icon Vistara News

Sugar Cane Juice Benefits: ರಸಭರಿತ ಕಬ್ಬಿನ ಹಾಲು, ಏನೇನಿವೆ ಇದರ ಲಾಭಗಳು?

Sugar Cane Juice

ಬೇಸಿಗೆಯಲ್ಲಿ ಬಾಯಾರಿಕೆ ತಣಿಸಿಕೊಳ್ಳುವುದಕ್ಕೆ ಒಳ್ಳೆಯ ಪೇಯಗಳ ಬಗ್ಗೆ ಹೇಳಿದರೂ ಬಾಯಾರಿಕೆ ಹೆಚ್ಚುತ್ತದೆ, ಅಂಥ ಬಿಸಿಲು ಹೊರಗೆ! ಅದರಲ್ಲೂ ಮನೆಯಿಂದ ಹೊರಗೆ ತಿರುಗಾಟದಲ್ಲಿದ್ದಾಗ, ಕೈಯಲ್ಲಿರುವ ನೀರೂ ಖಾಲಿಯಾದರೆ, ಬೇಸಿಗೆಯಲ್ಲಿ ಬೇರೆ ಶಾಪವೇ ಬೇಕಿಲ್ಲ. ದೇಹದ ನವರಂಧ್ರಗಳಿಂದ ಬೆವರಿಳಿಯುತ್ತಿರುವಾಗ ಯಾರಾದರೂ ಪುಣ್ಯಾತ್ಮರು ದೊಡ್ಡದೊಂದು ಗ್ಲಾಸ್‌ ತಂಪಾದ, ಸಿಹಿಯಾದ ಕಬ್ಬಿನ ಹಾಲು ತಂದುಕೊಟ್ಟರೆ…? ಅವರ ಜನ್ಮ ಸವೆದರೂ ಮುಗಿಯದಷ್ಟು ಹರಸುತ್ತೇವೆ ಅವರನ್ನು. ಆ ಹೊತ್ತಿನ ದಾಹ ತಣಿಸುವುದಂತೂ ಸರಿ, ಅದಲ್ಲದೆ ಇನ್ನೇನೇನು ಲಾಭಗಳಿವೆ ಕಬ್ಬಿನ ಹಾಲು (sugar cane juice benefits) ಕುಡಿಯುವುದರಿಂದ ಎಂಬುದನ್ನು ತಿಳಿಯಬಹುದಲ್ಲ.

ಪ್ರತಿರೋಧ ಶಕ್ತಿ ಹೆಚ್ಚಳ

ಹೆಚ್ಚೇನು ಫ್ಯಾನ್ಸಿ ಮಾಡದ ಶುದ್ಧ ಕಬ್ಬಿನ ಹಾಲು ಕೆಲವು ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ಆಗಬಲ್ಲದು. ದೇಹದ ರೋಗ ನಿರೋಧಕ ಶಕ್ತಿಯನ್ನು ಚುರುಕು ಮಾಡಿ, ಸೋಂಕುಗಳಿಂದ ಕಾಪಾಡಬಲ್ಲದು. ಅದರಲ್ಲೂ ಈ ರಸದಲ್ಲಿರುವ ಎಲೆಕ್ಟ್ರೋಲೈಟ್‌ಗಳಿಂದಾಗಿ ದಣಿದ, ಆಯಾಸಗೊಂಡ ದೇಹಕ್ಕೆ ಸಂಜೀವಿನಿ ಎನಿಸಬಲ್ಲದು. ಕಬ್ಬಿನ ರಸದಲ್ಲಿರುವ ಕಬ್ಬಿಣ, ಮೆಗ್ನೀಶಿಯಂ, ಕ್ಯಾಲ್ಶಿಯಂ ಮತ್ತು ಇತೆ ಸೂಕ್ಷ್ಮ ಪೋಷಕಾಂಶಗಳಿಂದಾಗಿ, ದೇಹದ ಪ್ರೊಟೀನ್‌ ಹೀರಿಕೊಳ್ಳುವ ಸಾಮರ್ಥ್ಯವೂ ಹೆಚ್ಚಿ, ಸಾಮಾನ್ಯ ಶೀತ-ಜ್ವರಗಳ ಬಾಧೆ ಕಡಿಮೆಯಾಗುತ್ತದೆ.

ಪಚನಕಾರಿ

ನಮ್ಮ ಜೀರ್ಣಾಂಗಗಳ ಹಿತ ಕಾಪಾಡುವಲ್ಲೂ ಕಬ್ಬಿನ ರಸದ್ದು ಶ್ಲಾಘನೀಯ ಕೆಲಸ. ಹೊಟ್ಟೆಯ ಪಿಎಚ್‌ ಮಟ್ಟವನ್ನು ಕಾಪಾಡಿಕೊಂಡು, ಆಹಾರ ಪಚನವಾಗುವುದಕ್ಕೆ ಬೇಕಾದ ಜೀರ್ಣ ರಸಗಳ ಬಿಡುಗಡೆಗೆ ನೆರವಾಗುತ್ತದೆ. ಇದರಿಂದಾಗಿ ಹೊಟ್ಟೆಯನ್ನು ಆಗಾಗ ಕಾಡುವ ಅಸಿಡಿಟಿ, ಹುಳಿತೇಗು ಮುಂತಾದ ಸಮಸ್ಯೆಗಳು ದೂರ ಉಳಿಯುತ್ತವೆ.

ಮಧುಮೇಹ ನಿಯಂತ್ರಣ

ಹೌದೇಹೌದು! ಇಷ್ಟೊಂದು ಸಿಹಿಯಾದ ಪೇಯವನ್ನು ಮಧುಮೇಹಿಗಳು ಕುಡಿಯಬಹುದೇ, ಕುಡಿದರೆ ಆರೋಗ್ಯ ಏನಾದೀತು ಎಂಬ ಅನುಮಾನ ಬರುವುದು ಸಹಜವೇ. ಆದರೆ ಇದರ ಗ್ಲೈಸೆಮಿಕ್‌ ಇಂಡೆಕ್ಸ್‌ ಕಡಿಮೆಯೇ ಇದ್ದು, ರಕ್ತದಲ್ಲಿ ಸಕ್ಕರೆ ಅಂಶ ಏರುವಂತೆ ಮಾಡುವುದಿಲ್ಲ. ಹಾಗಾಗಿ ಮಧುಮೇಹಿಗಳೂ ಇದನ್ನು ಮಿತ ಪ್ರಮಾಣದಲ್ಲಿ ಕುಡಿಯಬಹುದು.

ಹಲ್ಲು ಮತ್ತು ಮೂಳೆಗಳ ಬಲವರ್ಧನೆ

ತನ್ನಲ್ಲಿ ವಿಫುಲವಾಗಿರುವ ಪ್ರೊಟೀನ್‌ ಸತ್ವದಿಂದಾಗಿ ಮೂಳೆಗಳನ್ನು ಸದೃಢ ಮಾಡುವ ಸಾಧ್ಯತೆ ಕಬ್ಬಿನ ಹಾಲಿಗಿದೆ. ಜೊತೆಗೆ, ಹಲ್ಲುಗಳು ಹುಳುಕಾಗದಂತೆ ಕಾಪಾಡುವುದರೊಂದಿಗೆ, ದಂತಗಳ ಬೇರನ್ನೂ ಬಲಗೊಳಿಸು ಸಾಮರ್ಥ್ಯ ಇದರಲ್ಲಿರುವ ಫಾಸ್ಫರಸ್‌ ಅಂಶಕ್ಕಿದೆ. ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರೆಯದೆ ಇದ್ದಾಗ ಉಂಟಾಗುವ ಬಾಯಿಯ ದುರ್ಗಂಧ ತಡೆಯಲೂ ಇದು ಸಹಕಾರಿ.

ನೋವು ಉಪಶಮನಕ್ಕೆ

ಕಬ್ಬಿನ ರಸವನ್ನು ಎಳನೀರು ಮತ್ತು ನಿಂಬೆ ರಸದೊಂದಿಗೆ ಬೆರೆಸಿ ಕುಡಿದಾಗ ಇನ್ನಷ್ಟು ಲಾಭಗಳು ದೇಹಕ್ಕೆ ದೊರೆಯುತ್ತವೆ. ಮೂತ್ರನಾಳದ ಸೋಂಕು, ಮೂತ್ರಪಿಂಡದಲ್ಲಿ ಕಲ್ಲು ಮುಂತಾದ ಹಲವಾರು ಸಮಸ್ಯೆಗಳಿಂದ ಕಾಡುವ ನೋವುಗಳ ನಿವಾರಣೆಗೆ ಈ ಮಿಶ್ರಣ ಉಪಯೋಗಿ ಎನಿಸಿದೆ. ದೇಹದಲ್ಲಿ ಉರಿಯೂತವನ್ನು ನಿವಾರಿಸುವ ಇದರ ಗುಣವೇ ಈ ನೋವು ಉಪಶಮನಕ್ಕೂ ಕಾರಣವಾಗಿದೆ.

ಸೌಂದರ್ಯವರ್ಧಕ

ತ್ವಚೆಯ ಮೇಲೆ ಕಾಣಿಸಿಕೊಳ್ಳುವ ಮೊಡವೆಯಂಥ ಸಮಸ್ಯೆಗಳಿಗೂ ಕಬ್ಬಿನ ರಸ ಮದ್ದಾಗಬಲ್ಲದು. ಇದರಲ್ಲಿರುವ ಗ್ಲೈಕೋಲಿಲಕ್‌ ಆಮ್ಲವು ತ್ವಚೆಯ ಮೇಲಿನ ನಿರ್ಜೀವ ಕೋಶಗಳನ್ನು ತೆಗೆದು, ಹೊಳಪು ಮೂಡಿಸಲು ಉಪಯುಕ್ತ. ಮುಲ್ತಾನಿ ಮಿಟ್ಟಿಯ ಜೊತೆಗೆ ಕಬ್ಬಿನ ರಸವನ್ನು ಮಿಶ್ರ ಮಾಡಿ, ಫೇಸ್‌ಪ್ಯಾಕ್‌ ಮಾಡುವುದರಿಂದ ಚರ್ಮದ ಹೊಳಪು, ನುಣುಪು ವೃದ್ಧಿಸುತ್ತದೆ.

ಇದನ್ನೂ ಓದಿ: Healthy Drink: ಹೋಳಿಯ ನಂತರ ಚರ್ಮ ಸರಿಯಾಗಬೇಕಾದರೆ ಕುಡಿಯಲೇ ಬೇಕಾದ ಪೇಯಗಳಿವು!

Exit mobile version