Site icon Vistara News

Sugar Side Effects: ನಾವು ಒಂದು ದಿನದಲ್ಲಿ ಹೆಚ್ಚೆಂದರೆ ಎಷ್ಟು ಸಕ್ಕರೆ ಸೇವಿಸಬಹುದು?

Sugar Side Effects

ಫಿಟ್‌ನೆಸ್‌ ಪ್ರಿಯರು, ಆರೋಗ್ಯದ ಕಾಳಜಿ ವಹಿಸುವ ಮಂದಿ ಯಾವಾಗಲೂ ಎಲ್ಲಕ್ಕಿಂತ ಮೊದಲು ತಮ್ಮ ಸಕ್ಕರೆಯ ಸೇವನೆಯ ಬಗ್ಗೆ ಕಾಳಜಿ ವಹಿಸುತ್ತಾರೆ. ಆದಷ್ಟೂ ಸಕ್ಕರೆಯನ್ನು ಕಡಿಮೆ ಮಾಡಿ, ಸಿಹಿತಿಂಡಿಗಳ ಸಹವಾಸಕ್ಕೆ ಹೋಗದಿರುವ ಇವರು, ಸಕ್ಕರೆರಹಿತ ಆಹಾರದ ಬಗ್ಗೆ ಕಾಳಜಿ ಮಾಡುವ ಮೊದಲು ಹೆಚ್ಚು ಸಕ್ಕರೆ ತಿನ್ನುವುದರಿಂದ ಆಗುವ ಅಡ್ಡ ಪರಿಣಾಮಗಳನ್ನು (sugar side effects) ಮೊದಲು ನೋಡೋಣ.

ಸಕ್ಕರೆ ಹೆಚ್ಚು ತಿನ್ನುವುದರಿಂದ ನೀವು ಬಹುಬೇಗನೆ ಶಕ್ತಿಗುಂದುತ್ತೀರಿ. ಅಂದರೆ, ಸಕ್ಕರೆ, ಆ ಕ್ಷಣಕ್ಕೆ ನಿಮಗೆ ಶಕ್ತಿ ನೀಡಿದರೂ, ದೇಹದ ಒಟ್ಟು ವ್ಯವಸ್ಥೆಗೆ ಅದು ಶಕ್ತಿದಾಯಕ ಆಹಾರವಲ್ಲ.

ಹಾಗಾದರೆ ಎಷ್ಟು ಸೇವಿಸಬಹುದು?

ಹಾಗಾದರೆ ಒಂದು ದಿನಕ್ಕೆ ಎಷ್ಟು ಸಕ್ಕರೆ ತಿನ್ನಬಹುದು ಎಂಬ ಪ್ರಶ್ನೆ ಈಗ ನಿಮ್ಮಲ್ಲಿ ಖಂಡಿತ ಎದ್ದೇ ಎದ್ದಿರುತ್ತದೆ. ಬೆಳಗ್ಗೆ ಎದ್ದ ಕೂಡಲೇ ಸಕ್ಕರೆ ಹಾಕಿದ ಒಂದು ಚಹಾ, ಸಂಜೆ ಹೊತ್ತಿನಲ್ಲಿ ಮತ್ತೊಂದು ಚಹಾ ಬೇಕೆನಿಸುತ್ತದೆ, ಇವನ್ನೆಲ್ಲ ಬಿಡುವುದು ಹೇಗೆ ಎಂಬ ಆತಂಕ ನಿಮ್ಮಲ್ಲೀಗ ಮನೆ ಮಾಡಿರಬಹುದು. ಒಂದು ಅಧ್ಯಯನದ ಪ್ರಕಾರ,ಮಹಿಳೆಯರು ಒಂದು ದಿನಕ್ಕೆ 25 ಗ್ರಾಂಗಳಿಗಿಂತ ಹೆಚ್ಚು ಸಕ್ಕರೆ ಸೇವಿಸಬಾರದು. ಪುರುಷರು ಹೆಚ್ಚೆಂದರೆ ಪ್ರತಿ ದಿನ 38 ಗ್ರಾಂಗಳಷ್ಟು ಸಕ್ಕರೆ ಸೇವಿಸಬಹುದು. ಹೆಚ್ಚು ಒಳ್ಳೆಯದಲ್ಲ.

ಚಹಾದ ಸಕ್ಕರೆಯೂ ಲೆಕ್ಕಕ್ಕೆ ಬರುತ್ತದೆ

ನಾವು ಇಷ್ಟೆಲ್ಲ ಸಕ್ಕರೆ ತಿನ್ನುವುದಿಲ್ಲ ಎಂದು ನಿಮಗೆ ನೀವೇ ಅಂದುಕೊಳ್ಳಬೇಡಿ. ಇಲ್ಲಿ ಸಕ್ಕರೆ ಅಂದರೆ ಕೇವಲ ಡಬ್ಬದಿಂದ ನೀವು ಚಹಾಕ್ಕೆ ಹಾಕಿದ ಸಕ್ಕರೆ ಮಾತ್ರ ಲೆಕ್ಕಕ್ಕೆ ಬರುವುದಿಲ್ಲ. ನೀವು ದಿನವಿಡೀ, ಚಹಾ, ಕಾಫಿಯ ಹೊರತಾಗಿಯೂ ಬೇರೆ ಬೇರೆ ಆಹಾಋಗಳ ಮೂಲಕ ಸಕ್ಕರೆಯನ್ನು ಸೇವಿಸುತ್ತಿರುವುದೂ ಕೂಡಾ ಸೇರಿ ಈ ಲೆಕ್ಕಾಚಾರ ಹೇಳಲಾಗಿದೆ. ಅಂಧರೆ, ಬಿಡುವಿನ ಹೊತ್ತಿನಲ್ಲಿ ನಿಮ್ಮ ಬಾಯೊಳಗೆ ಹೋದ ಒಂದು ಚಾಕೋಲೇಟ್‌ ಬಾರ್‌, ಇನ್ಯಾರೋ ಅವರ ಹುಟ್ಟುಹಬ್ಬಕ್ಕೆಂದು ನಿಮ್ಮ ಬಾಯೊಳಗೆ ತುರುಕಿದ ಕೇಕ್‌, ಇನ್ಯಾರದೋ ಸಿಹಿಸುದ್ದಿಗೆ ನೀವು ತಿಂದ ಸಿಹಿತಿಂಡಿ, ಸಂಜೆ ನೀವು ತಿಂದ ಸಮೋಸಾಕ್ಕೆ ಸುರಿದುಕೊಂಡ ಕೆಚಪ್‌, ಸುಸ್ತಾದಾಗ ಕುಡಿದ ನಿಂಬೆಹಣ್ಣಿನ ಪಾನಕ ಎಲ್ಲವೂ ಕೂಡಾ ಇದೇ ಸಕ್ಕರೆಯಲ್ಲಿಯೇ ಬರುತ್ತದೆ ಎಂಬುದನ್ನು ನೆನಪಿಡಿ.

ಹಾಗಾದರೆ, ಈ ಸಕ್ಕರೆ ಸೇವನೆಯಿಂದ ಪಾರಾಗುವುದು ಹೇಗೆ ಎಂದು ನೀವು ಕೇಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಿತ್ಯವೂ ಏನು ತಿನ್ನುತ್ತಿದ್ದೇವೆ ಎಂಬುದರ ಮೇಲಿನ ಗಮನ ಇಟ್ಟಿರುವುದು ಬಹಳ ಮುಖ್ಯ. ತಿನ್ನಲೇಬೇಕೆನಿಸಿದಾಗ ಪಾರಮಾಣ ಕಡಿಮೆ ಮಾಡಿ. ಅಥವಾ, ಹಸಿವಾದಾಗ, ಆರೋಗ್ಯಕರ ಆಯ್ಕೆಗಳಿಗೆ ಹೋಗಿ. ಚಾಕೋಲೇಟ್‌ ತಿನ್ನಬೇಕೆನಿಸಿದಾಗ, ಸಾಮಾನ್ಯ ಚಾಕೋಲೇಟ್‌ ಬದಲಾಗಿ ಡಾರ್ಕ್‌ ಚಾಕೋಲೇಟ್‌ ಕೊಳ್ಳಬಹುದು. ಹಣ್ಣಿನ ಜ್ಯೂಸ್‌ ಕುಡಿವ ಬದಲಾಗಿ ಹಣ್ಣನ್ನೇ ಹಾಗೆಯೇ ತಿನ್ನಬಹುದು. ನಿಂಬೆಹಣ್ಣಿನ ಪಾನಕ ಮಾಡಿ ಸಕ್ಕರೆ ಸುರಿದ ಬದಲು, ಬರಿಯ ನಿಂಬೆಹಣ್ಣನ್ನು ನೀರಿಗೆ ಹಿಂಡಿ ಹಾಗೆಯೇ ಕುಡಿಯಬಹುದು. ಹೀಗೆ ನಮ್ಮ ಆಯ್ಕೆಗಳನ್ನು ನಾವು ಜಾಣತನದಿಂದ, ಯೋಚಿಸಿ ಮಾಡಿದರೆ, ದಿನಕ್ಕೆ ಅಗತ್ಯಕ್ಕಿಂತ ಹೆಚ್ಚು ಸಕ್ಕರೆ ನಮ್ಮ ಹೊಟ್ಟೆ ಸೇರದು. ಹೆಚ್ಚೇಗೆ, ಸಕ್ಕರೆಯನ್ನು ನಿಧಾನವಾಗಿ ಕಡಿಮೆ ಮಾಡಿಕೊಳ್ಳಲೂ ಕೂಡಾ ಈ ಇದೇ ಪ್ರಜ್ಞೆ ಸಾಕು.

Exit mobile version